ಅನ್ನ ಬೆಂದಿದೆಯೇ ಎಂದು ನೋಡಲು ಪಾತ್ರೆಯ ಅನ್ನದ ಅಗುಳನ್ನೆಲ್ಲ ಮುಟ್ಟಿ ನೋಡುವ ಅವಶ್ಯಕಥೆ ಇರುವುದಿಲ್ಲ. ಒಂದು ಅಥವಾ ಎರಡು ಅಗುಳನ್ನು ಮುಟ್ಟಿ ಅಕ್ಕಿ ಸರಿಯಾಗಿ ಬೆಂದು ಅನ್ನವಾಗಿದೆಯೇ ಎಂದು ತಿಳಿಯಬಹುದು. ಯಾಕೆ ಈ ಮಾತನ್ನು ಹೇಳಿದೆಯೆಂದರೆ ಮಗುವೊಂದು ನಾಲ್ಕು ಜನರ ಮಧ್ಯ ಬಂದಾಗ ಹೇಗೆ ವರ್ತಿಸುತ್ತದೆ ಎಂದು ನೋಡಿದಾಗ ಆ ಮಗುವಿನ ಮನೆಯ ಪರಿಸರ ತಕ್ಕಮಟ್ಟಿಗೆ ಅರ್ಥವಾಗಿ ಹೋಗುತ್ತದೆ.
ಮೂರು ವರ್ಷದ ಹೆಣ್ಣು ಮಗುವೊಂದು ತನ್ನ ತಂದೆಯ ಜೊತೆಗೆ ಯಾರದೋ ಪರಿಚಯಸ್ಥರ ಮನೆಗೆ ಹೋಗಿತ್ತು. ಕುಶಲೋಪರಿ ಮಾತುಕಥೆಗಳು ಮುಗಿದು ಲಘು ಉಪಹಾರ ಸೇವಿಸಿ ಇನ್ನು ಹೊರಡಬೇಕು ಎನ್ನುವಾಗ ಆ ಮಗು ತಂದೆಯ ಕೈ ಬಿಡಿಸಿಕೊಂಡು ಆ ಮನೆಯ ಹಿರಿಯಳಾದ ಅಜ್ಜಿಯ ಹತ್ತಿರ ಹೋಗಿ ನಮಸ್ಕಾರ ಮಾಡಿ, ನಮ್ಮ ಮನೆಗೆ ಬನ್ನಿ’ ಎಂದು ಹೇಳಿತು. ಆ ಪುಟ್ಟ ಮಗುವಿಗೆ ಹುಟ್ಟಿನಿಂದ ಬಂದಿದ್ದೇನು ಅಲ್ಲ. ಅಥವಾ ಈಗ ಆಕೆಯ ತಂದೆ ಅಜ್ಜಿಗೆ ನಮಸ್ಕರಿಸು ಎಂದು ಕೂಡ ಹೇಳಲಿಲ್ಲ. ಇದನ್ನು ಕಂಡ ಆ ಅಜ್ಜಿ, ಯಾಕಮ್ಮ ನಂಗೆ ನಮಸ್ಕಾರ ಮಾಡ್ತಿಯಾ? ನೀನಿನ್ನು ಪುಟ್ಟ ಮಗು, ದೇವರ ಸಮಾನ’ ಎಂದಾಗ ಆಕೆಯ ಉತ್ತರ ಎಲ್ಲರೂ “ಅಜ್ಜಿ, ನಮ್ಮ ಮನೆಲಿ ಹಿರಿಯರು ಬಂದಾಗ ಅಮ್ಮ ಹೀಗೆ ನಮಸ್ಕಾರ ಮಾಡುತ್ತಾಳೆ. ನೆಂಟರ ಮನೆಗೆ ಹೋದಾಗಲೂ ವಯಸ್ಸಾದವರು ಇದ್ದರೆ ನಮಸ್ಕಾರ ಮಾಡುತ್ತಾಳೆ. ಅದಕ್ಕೆ ನಾನು ಈಗ ನಿಮಗೆ ನಮಸ್ಕಾರ ಮಾಡಿದೆ” ಎಂದು ಆ ಮಗು ಹೇಳಿತು.
ಅಂದಾಗ ಆಮನೆಯ ವಾತಾವರಣ ಮಗುವಿಗೆ ಯಾವ ರೀತಿಯ ಬೆಳವಣಿಗೆಯನ್ನು ನೀಡುತ್ತದೆ ಎನ್ನುವುದು ತಿಳಿಯುತ್ತದೆ. ಚಿಕ್ಕ ಮಕ್ಕಳಂತು ಹಿರಿಯರು ಏನು ಮಾಡುತ್ತಾರೋ ಅದನ್ನೆ ಅನುಕರಿಸುತ್ತಾರೆ ಮೊದಲು. ಆ ನಂತರದಲ್ಲಿ ಅದು ಅಭ್ಯಾಸ ಬಲ ಎನ್ನುವಷ್ಟರ ಮಟ್ಟಿಗೆ ತಮ್ಮ ಜೀವನದಲ್ಲಿ ಅಡವಳಿಸಿಕೊಳ್ಳುತ್ತಾ ಹೋಗುತ್ತಾರೆ. ಹಾಗಿದ್ದಾಗ ಹಿರಿಯರು ತಿಳಿಸಿದ ದಾರಿ ಕಷ್ಟ ಎನ್ನಿಸುವುದೇಇಲ್ಲ. ಅದೇ ದೊಡ್ಡವರಾದ ನಂತರ ನೀನು ಮಾಡುವುದು ತಪ್ಪು, ಎಂದು ಹೇಳಿದರೆ ಅದು ವಾದವಾಗಿ ಕೋಪತಾಪಗಳಿಗೂ ದಾರಿ ಮಾಡಿಕೊಡುತ್ತದೆ.
ಒಂದು ವ್ಯಕ್ತಿಯ ಹಾವ _ ಭಾವ, ವಿಚಾರಧಾರೆ, ನಡುವಳಿಕೆ, ಮಾತನಾಡುವ ರೀತಿ ಇವೆಲ್ಲವನ್ನು ಆ ಮನೆತನದ ಮಟ್ಟವನ್ನು ತಿಳೀಸಿಕೊಡುತ್ತದೆ. ಹೀಗೆ ಹೇಳುವಾಗ ಅಜ್ಜ ಅಜ್ಜಿಯರು ಹೇಳುತ್ತಿದ ಸಾಧು ಕಟುಕರ ಮನೆಯಲ್ಲಿ ಗಿಳಿಮರಿ ಬೆಳೆದ ಕಥೆಯು ನೆನಪಾಗುತ್ತದೆ. ಆ ಎರಡು ಗಿಳಿಗಳು ಒಂದೆ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ್ದವು. ಆದರೆ ಬೆಳೆದ ವಾತಾವರಣ ಅವೇರಡರ ಗುಣವನ್ನು ಬೇರೆಬೇರೆಯಾಗಿಸಿತ್ತು. ಸಾಧುವಿನ ಕುಠಿರದ ಗಿಳಿ “ಬನ್ನಿ, ಕುಳಿತುಕೊಳ್ಳಿ, ಹಣ್ಣು ಹಾಲು ತೆಗೆದುಕೊಳ್ಳುತ್ತಿರಾ” ಎಂದು ಉಪಚರಿಸಿದರೆ ಕಟುಕನ ಬಿಡಾರದಲ್ಲಿ ಬೆಳೆದ ಗಿಳಿ “ಯಾವನವನು ಬಂದವನು, ಹೊಡಿರಿ ಅವನಿಗೆ, ಕತ್ತಿ ತನ್ನಿ, ಕಡಿರಿ” ಎಂದು ಕೂಗಿತ್ತು.
ಹಾಗಾಗಿ ಬೆಳೆಯುವ ಮಕ್ಕಳಿಗೆ ಉತ್ತಮ ವಾತಾವರಣವನ್ನು ಕಲ್ಪಿಸಿಕೊಡುವುದು ಪಾಲಕರಾದ ನಮ್ಮ ಕರ್ತವ್ಯ. ಇವತ್ತಿನ ಮಕ್ಕಳು ನಾಳೆಯ ಪ್ರಜೆಗಳು. ಆ ಪ್ರಜೆಗೆ ನಾವು ಬದುಕುವ ಛಲ ಛಾತಿ ವಿಶ್ವಾಸ ಸ್ಪೂರ್ತಿ ಎಲ್ಲವೂ ಕೊಡುವುದರ ಜೊತೆ ವಿನಯತೆಯನ್ನು ಎಂದರೆನು ಎಂದು ತಿಳಿಸಿಕೊಡುವುದು ಬಹುಮುಖ್ಯವಾದುದು. ಇದು ಒಂದು ದಿನದ ಪಾಠವಲ್ಲ. ಮಕ್ಕಳು ತಮ್ಮ ಜೀವನದಲ್ಲಿ ಅಡವಳಿಸಿಕೊಳ್ಳುವಂತೆ ಮಾಡುವುದು ನಮ್ಮ ಸವಾಲಾಗಿದೆ. ಸಂಸ್ಕಾರವನ್ನು ನೀಡಿದಾಯ ಆ ಮಕ್ಕಳಿಗೆ ಉಳಿದ ಎಲ್ಲವೂ ವರದಂತೆ ಬರುತ್ತದೆ ಎನ್ನುವ ಮಾತಿದೆ. ಆ ಸಂಸ್ಕಾರವನ್ನು ನೀಡಿ, ಮುಕ್ತ ವಾತಾವರಣವನ್ನು ಮಾಡಿಕೊಟ್ಟಾಗ ಮಗುಮಾನಸಿಕ ಮತ್ತು ದೈಹಿಕ ಎರಡು ರೀತಿಯಲ್ಲಿ ಸದೃಢವಾಗಿ ಬೆಳೆಯುತ್ತದೆ.