ಅಕ್ಷರರೂಪ: ಶ್ರೀಮತಿ ಪ್ರಭಾ ಮತ್ತು ವೆಂಕಟರಮಣ ಭಟ್ಟ ಪುಣೆ
. ಶೇಂಗಾ, ಕಡ್ಲೆಕಾಳು, ಹೆಸರುಕಾಳು, ಹಣ್ಣು-ಹಂಪಲ, ಹಾಲು, ತುಪ್ಪ-ಸಕ್ಕರೆ ಎಲ್ಲಾ ಸೇರಿ ಊಟದ ಸಂಭ್ರಮವೋ ಸಂಭ್ರಮ. ಉಪವಾಸವೆಂದು ಅರಿವಾಗುವದೇ ಇಲ್ಲ.
(ಇಸವಿ ಸನ ೧೯೫೦-೫೧ರ ಸುಮಾರಿಗೆ ಶ್ರೀ ದತ್ತಾಬುವಾ ರಾಮದಾಸಿಯವರಿಗೆ ಬರೆದ ಪತ್ರ)
||ಶ್ರೀರಾಮ ಸಮರ್ಥ||
ಚಿ. ದತ್ತನಿಗೆ ಆಶೀರ್ವಾದ,
‘ಪತ್ರವನ್ನು ಬರೆಯುವದಿಲ್ಲ; ಪತ್ರವ್ಯವಹಾರ ನಿಲ್ಲಿಸುತ್ತೇನೆ’ ಎಂದು ಹೇಳಿದ್ದು ನೆನಪಿದೆ. ಆದರೂ, ‘ಸ್ವಾಮೀಜಿಯವರದ್ದು ಹೇಗೆ ನಡೆದಿದೆಯೋ? ಪ್ರಕೃತಿ ಹೇಗಿದೆಯೋ ಏನೋ ಯಾರಿಗೆ ಗೊತ್ತು? ಅಲ್ಲಿಯ ಹವಾಮಾನ ಸರಿಬೀಳುವದೋ ಇಲ್ಲವೋ? ಅಲ್ಲಿಯ ಜನ ಸೇವೆ ಸರಿಯಾಗಿ ಮಾಡುತ್ತಾರೋ ಇಲ್ಲವೋ? ಸ್ವಾಮಿಗಳಿಗೆ ಎಷ್ಟು ಕಷ್ಟವಾಗುತ್ತಿದೆಯೋ ಏನೋ ಯಾರಿಗೆ ಗೊತ್ತು?’ ಇತ್ಯಾದಿ ಚಿಂತೆಗಳ ಕಲ್ಪನೆಯ ತರಂಗ ಆಗಾಗ ಮನಸ್ಸಿನಲ್ಲಿ ತಾನಾಗಿ ಏಳುತ್ತಿರುವದು ಸ್ವಾಭಾವಿಕವಾಗಿಯೇ ಮನೋಧರ್ಮದ ಒಂದು ಲಕ್ಷಣವೇ ಆಗಿರುವದರಿಂದ ಯೋಗಕ್ಷೇಮ ತಿಳಿಸಬೇಕೆಂದು ಈ ಪತ್ರ ಬರೆಯಲು ಕೈಗೆತ್ತಿಕೊಂಡೆ. ಬರೆಯುವಾಗ ಬರಹದ ಸಹಜ ಹರಿಯುವಿಕೆಯಲ್ಲಿ ಉಳಿದ ಏನಾದರೂ ತಿಳಿಸಬೇಕೆಂದರೆ ಅದರ ಸೂಚನೆಯನ್ನೂ ಕೊಡುತ್ತೇನೆ; ಆದರೆ ಅದೇನು ಮುಖ್ಯವಲ್ಲ. ಯೋಗಕ್ಷೇಮ ತಿಳಿಸಿ ನಿಮ್ಮ ಮನಸ್ಸಿನ ಆತಂಕ ದೂರ ಮಾಡಬೇಕೆಂಬುದೊಂದೇ ಈ ಪತ್ರದ ಮುಖ್ಯ ಉದ್ದೇಶ.
‘ಅತಿಸ್ನೇಹಃ ಪಾಪಶಂಕೀ’ ನನ್ನ ದೇಹಸ್ಥಿತಿ ಚೆನ್ನಾಗಿದೆ.
ನಮ್ಮ ಪ್ರತಿದಿನದ ಕಾರ್ಯಕ್ರಮವೆಂದರೆ …..
ದಿನವೂ ಬೆಳಿಗ್ಗೆ ನಾವಿಬ್ಬರೂ ಮೂರು ಗಂಟೆಗೆ ಏಳುತ್ತೇವೆ. ಹೆಗ್ಗೆರೆ ನಮ್ಮ ಕೋಣೆಯಲ್ಲಿದ್ದಾನೆ ಮತ್ತು ನಾನು ಗುಹೆಯಲ್ಲಿದ್ದೇನೆ. ಐದು ಗಂಟೆಯೊಳಗೆ ಸ್ನಾನಾನ್ಹಿಕ ಮೊದಲಾದವುಗಳನ್ನು ಮುಗಿಸಿ, ನಾನು ಅಲ್ಲೇ ಕೆಲ ಸಮಯ ಕುಳಿತು ಕೊಳ್ಳುತ್ತೇನೆ. ಹೆಗ್ಗೆರೆ ಕೂಡಲೇ ಕೋಣೆಗೆ ಬಂದು, ನಾನು ಕೋಣೆಗೆ ಬರುವದರರೊಳಗಾಗಿ ಕಹಿಬೇವಿನ ಎಲೆಗಳಿಂದ ವಸ್ತ್ರಗಾಳಿತ ರಸವನ್ನು ತಯಾರು ಮಾಡಿ ಇಡುತ್ತಾನೆ. ಸುಮಾರಾಗಿ ಒಂದೂವರೆ ಪಾವಶೇರು (೪೦೦ ಮಿಲಿಲಿಟರ) ಇಬ್ಬರೂ ತೆಗೆದು ಕೊಳ್ಳುತ್ತೇವೆ. ಇದನ್ನು ನಾವು ವರ್ಷಪ್ರತಿಪದೆಯಿಂದ ಪ್ರಾರಂಭ ಮಾಡಿದೆವು. ಇಬ್ಬರಿಗೂ ಈ ರಸ ಒಳ್ಳೆ ಹೊಂದಿಕೆಯಾಗಿದೆ. ಈ ಹವಾಮಾನಕ್ಕೆ ತುಂಬಾ ಒಳ್ಳೆಯದೆಂದು ಅದನ್ನು ಮೊದಲು ಪ್ರಾರಂಭ ಮಾಡಿದೆವು. ಇದರಿಂದ ಒಳ್ಳೇ ಪರಿಣಾಮ ಕಾಣಿಸಹತ್ತಿದೆ.
ಸುಮಾರು ಏಳು ಗಂಟೆ ಹೊಡೆಯುವದರೊಳಗೆ ನಾನು ಗುಹೆಗೆ ಬರುತ್ತೇನೆ. ಆ ಕಡೆ ಹೆಗ್ಗೇರೆಯೂ ಸಂಧ್ಯಾವಂದನೆ ಮೊದಲಾದವುಗಳನ್ನು ಮುಗಿಸಿ ಹತ್ತು ಗಂಟೆ ಸುಮಾರಿಗೆ ಗುರುಚರಿತ್ರೆ ಪಾರಾಯಣ ಮಾಡುತ್ತಾನೆ ಮತ್ತು ನಂತರ ಹಾಲು ಕಾಸಿ ಗುಹೆಗೆ ತರುತ್ತಾನೆ. ಪಾವಶೇರು (೨೫೦ ಮಿಲಿಲಿಟರ) ಹಾಲು ತೆಗೆದುಕೊಂಡು, ಸಾಧಾರಣ ೧೧|| – ೧೨ರ ಸುಮಾರಿಗೆ ಮಾಧ್ಯಾನ್ಹಸ್ನಾನಕ್ಕೆ ಹೋಗುತ್ತೇನೆ. ೧ – ೧|| ಗಂಟೆಯೊಳಗೆ ಸ್ನಾನ-ಮಾಧ್ಯಾಹ್ನಿಕ ಮುಗಿಸಿ ಗುಹೆಗೆ ಬರುತ್ತೇನೆ. ನಂತರ ಇಬ್ಬರೂ ಕೂಡಿ ನೆನೆಸಿಟ್ಟ ಧಾನ್ಯ, ಶೇಂಗಾ, ಹಣ್ಣು ಮೊದಲಾದವುಗಳನ್ನು ಹೊಟ್ಟೆತುಂಬುವವರೆಗೆ ಬೇಕಷ್ಟು ತಿನ್ನುತ್ತೇವೆ. ಹೊಟ್ಟೆಯೂ ತುಂಬಾ ಹಸಿದಿರುತ್ತದೆ. ತಿಂಡಿಯಾದ ಮೇಲೆ ಮತ್ತೆ ನಾನು ವಿಶ್ರಾಂತಿ ತೆಗೆದುಕೊಂಡವನು, ಐದು ಗಂಟೆ ಸುಮಾರಿಗೆ ಗುಹೆಯ ಹೊರಗೆ ಕೆಲ ಕಾಲ ಕುಳಿತು ೫|| – ೬ರ ಸುಮಾರಿಗೆ ಸಾಯಂಸ್ನಾನಕ್ಕೆ ಹೋಗುತ್ತೇನೆ. ೭|| – ೮ಗಂಟೆಗೆ ಸರಿಯಾಗಿ ಸಾಯಂಕಾಲದ ಆರತಿಗೆ ದೇವಸ್ಥಾನದ ಕಡೆಗೆ ಸಾಯಂಸ್ನಾನಾಹ್ನಿಕ ಮುಗಿಸಿ ಹೋಗುತ್ತೇನೆ. ಅಲ್ಲಿ ರಾತ್ರಿಯ ಶೆಜಾರತಿಯ ವರೆಗೆ ಇದ್ದು ಕೆಲ ಕಾಲ ಎಲ್ಲರೊಂದಿಗೆ ಕುಳಿತಿದ್ದು ೯ – ೯||ಗೆ ತಿರುಗಿ ಗುಹೆಗೆ ಬಂದು ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ಬರುವಾಗ ಬಿಸಿ ಹಾಲನ್ನು ಕೋಣೆಯಲ್ಲಿಯೇ ಕುಡಿದುಬರುತ್ತೇನೆ. ಶೇಂಗಾ, ಕಡ್ಲೆಕಾಳು, ಹೆಸರುಕಾಳು, ಹಣ್ಣು-ಹಂಪಲ, ಹಾಲು, ತುಪ್ಪ-ಸಕ್ಕರೆ ಎಲ್ಲಾ ಸೇರಿ ಊಟದ ಸಂಭ್ರಮವೋ ಸಂಭ್ರಮ. ಉಪವಾಸವೆಂದು ಅರಿವಾಗುವದೇ ಇಲ್ಲ. ಮಧ್ಹಾಹ್ನ ಹೊಟ್ಟೆತುಂಬಾ ಮಜ್ಜಿಗೆ ತೆಗೆದುಕೊಳ್ಳುತ್ತೇನೆ. ಒಟ್ಟಿನ ಮೇಲೆ ದಿನಗಳು ಅತ್ಯಂತ ಆನಂದದಿಂದ ಹೋಗುತ್ತಿವೆ. ಕೆಲಸವೂ ಏನೂ ಇಲ್ಲ. ಇದರ ಮುಂದೆ ರಾಜಯೋಗವಷ್ಟೇ ಏಕೆ ಮಹಾರಾಜಯೋಗವೂ ಏನೂ ಅಲ್ಲ!!
ಈ ಸ್ಥಳದ ಮುಖ್ಯತೆಯೆಂದರೆ ತಪಸ್ಸಿಗೆ ಅತ್ಯಂತ ಯೋಗ್ಯ ಸ್ಥಳ. ನದಿಯ ಮನೋಹರ ದೃಶ್ಯದೊಂದಿಗೆ, ನೈಸರ್ಗಿಕ ಗಿಡ-ಗಂಟಿಗಳಿಂದ ಮೇಲೆ ಉದ್ದಕ್ಕೆ ಪಸರಿಸಿದ ಬೈಲುಪ್ರದೇಶದಿಂದ ಈ ಸ್ಥಳದ ಸೌಂದರ್ಯ ಅಪೂರ್ವವಾಗಿದೆ. ಪರಾಂಗ್ಮುಖ ಮನಸ್ಸಿಗೆ ಅತೀಂದ್ರಿಯ ಸುಖದ ಸಿಹಿ ಸಮಾಚಾರ ಹೇಳಲು ಏಕಾಂತವಂತೂ ಎಲ್ಲೇ ಹೋದರೂ ಅಲ್ಲಲ್ಲಿ ತಯಾರಾಗಿಯೇ ಇರುತ್ತದೆ.
ನೀವೆಲ್ಲರೂ ಹಂಚಿಕೊಟ್ಟ ಕಾರ್ಯಗಳನ್ನು ವ್ಯವಸ್ಥಿತ ನಿಭಾಯಿಸುತ್ತ, ಒಗ್ಗಟ್ಟಿನಿಂದ ಮತ್ತು ಆಟ-ಕೂಟದ ತೆರದಲ್ಲಿ ಶ್ರೀಗುರುಸೇವೆಯಲ್ಲಿ ಅತ್ಯಂತ ಆನಂದದಿಂದ ಆಯುಷ್ಯದ ಕ್ಷಣಗಳನ್ನು ಕಳೆಯುತ್ತ ಜನ್ಮವನ್ನು ಸಾರ್ಥಕ ಮಾಡಿಕೊಳ್ಳುತ್ತಿರಬೇಕು.
ಶ್ರೀಧರ