muralidhar 2

ಮನುಷ್ಯನ ಜೀವನವು ಒಂದಲ್ಲ ಒಂದು ರೀತಿಯ ಬಲವಂತದ ಬದುಕಾಗಿರುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಪ್ರಪಂಚದಲ್ಲಿ ಮನುಷ್ಯ ತಾನು ಹುಟ್ಟಿನಿಂದ ಸಾಯುವ ತನಕ ಒಂದಲ್ಲ ಒಂದು ರೀತಿಯಲ್ಲಿ ಬಲವಂತದ ಬದುಕನ್ನೇ ಸಾಗಿಸುತ್ತಾನೆ. ಕೆಲವರು ಇದಕ್ಕೆ ಅಪವಾದ ಇರಬಹುದು ಆದರೂ ಜೀವನದಲ್ಲಿ ಕೆಲವು ಬಾರಿ ಅವರೂ ಬಲವಂತಕ್ಕೆ ಸಿಲುಕಿಕೊಂಡಿರುತ್ತಾರೆ. ಸಂದರ್ಭ ಹಾಗೂ ಸನ್ನಿವೇಶಕ್ಕೆ ತಕ್ಕಂತೆ ಬಲವಂತದ ಬದುಕನ್ನು ಮನುಷ್ಯನು ಸಾಗಿಸುತ್ತಾ ಬಂದಿದ್ದಾನೆ.

ತಂದೆ ತಾಯಿಗೆ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂಬ ಹಂಬಲ ಇದ್ದು, ಆರ್ಥಿಕ ಮುಗ್ಗಟ್ಟಿನಿಂದ ಮನಸ್ಸಿನ ಆಸೆ ಕೈಗೂಡದಿದ್ದರೆ ಇರುವಷ್ಟರಲ್ಲಿಯೇ ಹೊಂದಿಕೊಂಡು ಹೋಗುವಂತಹ ಬಲವಂತವಾಗಿ ಜೀವನ ನಡೆಸುವ ಸನ್ನಿವೇಶ ಉಂಟಾಗುತ್ತದೆ. ಮನುಷ್ಯನ ಬುದ್ದಿ ಬೆಳೆಯುತ್ತಾ ಹೋದಂತೆ ಯಾವುದಾದರೂ ಗುರಿ ಸಾಧಿಸಬೇಕೆಂಬ ಹಂಬಲ ಮೂಡುವುದು ಸಹಜ. ಆದರೆ ಮನೆಯ ಆರ್ಥಿಕ ಸ್ಥಿತಿ ಅವನನ್ನು ಕಟ್ಟಿ ಹಾಕುತ್ತದೆ.

ತಾನೊಂದು ಬಗೆದರೆ ದೈವವೊಂದು ಬಗೆದಂತೆ ಎನ್ನುವ ಹಾಗೆ, ಹಲವಾರು ಘಟನೆಗಳು ನಡೆಯುವುದರಿಂದ ಮನುಷ್ಯನು ಹುಟ್ಟಿನಿಂದ ಸಾಯುವವರೆಗೂ ಒಂದಲ್ಲ ಒಂದು ರೀತಿಯಲ್ಲಿ ಬಲವಂತದ ಬದುಕು ಸಾಗಿಸುವಂತೆ ಆಗುತ್ತದೆ. ಹುಟ್ಟಿದ ಮಗು ಹಾಲು ಕುಡಿಯಲಿಲ್ಲವೆಂದು ಬಲವಂತದಿಂದ ಹಾಲು ಕುಡಿಸುವುದು. ಮಗು ಬೆಳೆಯುತ್ತಾ ಹೋದಂತೆ ಊಟ ಮಡುವುದಿಲ್ಲವೆಂದು ಬಲವಂತವಾಗಿ ಊಟ ಮಾಡಿಸುವುದು, ಶಾಲೆಗೆ ಹೋಗಲಿಲ್ಲವೆಂದು ಕೆಲವು ದಿನಗಳವರೆಗೆ ಸರಿ ಹೋಗುವ ತನಕ ಬಲವಂತದಿಂದ ಶಾಲೆಗೆ ಕಳುಹಿಸುವುದು ಇವೆಲ್ಲಾ ಬಾಲ್ಯದಲ್ಲಿ ಅನುಸರಿಸುವ ಬಲವಂತದ ಕ್ರಮಗಳು ಮಕ್ಕಳು ಬೆಳೆದು ದೊಡ್ಡವರಾದಂತೆ ಪಕ್ಕದ ಮನೆ ಹುಡುಗ ಅಥವಾ ಹುಡುಗಿ ಏನಾದರೂ ಹೆಚ್ಚು ಅಂಕ ಪಡೆದು ಇವರ ಮನೆಯಲ್ಲಿರುವ ಮಕ್ಕಳು ಕಡಿಮೆ ಅಂಕ ತೆಗೆಯದಿದ್ದರೆ ತಮ್ಮ ಮಕ್ಕಳಿಗೆ ಮಾಡುವ ಒತ್ತಡ ಹೇಳತೀರದು. ಏನಾದರೂ ಮಾಡಿ ತಮ್ಮ ಮಕ್ಕಳು ಹೆಚ್ಚಿಗೆ ಅಂಕ ತೆಗೆಯಬೇಕೆಂದು ಮಕ್ಕಳ ಮೇಲೆ ಒತ್ತಡ ಹೇರಿ ಬಲವಂತದಿಂದ ಓದಿಸಲು ಪ್ರಯತ್ನಿಸುತ್ತಾರೆ.

ಒಂಬತ್ತನೇ ತರಗತಿವರೆಗೆ ಇರುವ ವಿದ್ಯಾಭ್ಯಾಸ ಹತ್ತನೇ ತರಗತಿಗೆ ಬಂದ ನಂತರ ಬದಲಾಗುತ್ತಾ ಹೋಗುತ್ತದೆ. ಆಗಲೇ ಹೆತ್ತವರ ಒತ್ತಡ ಜಾಸ್ತಿಯಾಗುವುದು. ಕಡಿಮೆ ಅಂಕ ಬಂದರೆ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರವೇಶ ಸಿಗುವುದಿಲ್ಲವೆಂಬ ಅಂಜಿಕೆಯಿಂದ ಮಕ್ಕಳ ಮೇಲೆ ಒತ್ತಡ ಹೇರಿ ಹೆಚ್ಚಿಗೆ ಅಂಕ ಪಡೆಯಬೇಕೆಂದು ಬಲವಂತಪಡಿಸುತ್ತಾರೆ. ಪ್ರಪಂಚದಲ್ಲಿ ಶ್ರೀಮಂತರೂ ಬಡವರೂ ಮದ್ಯಮ ವರ್ಗದವರೂ ಇದ್ದು, ಮಕ್ಕಳಿಗೆ ಕಡಿಮೆ ಅಂಕ ಬಂದಲ್ಲಿ ಸರಿಯಾದ ಕಾಲೇಜಿಗೆ ಪ್ರವೇಶ ದೊರೆಯುವುದಿಲ್ಲವೆಂಬ ಸಂದೇಹ ಉಂಟಾಗಿರುತ್ತದೆ. ಪ್ರತಿಷ್ಠಿತ ಕಾಲೇಜಿಗೆ ಪ್ರವೇಶ ಕೊಡಿಸಲು ಅಷ್ಟೊಂದು ಹಣವನ್ನು ಹೊಂದಿಸಲು ಸಾಧ್ಯವಾಗದೆ ಮಕ್ಕಳು ಹೆಚ್ಚಿನ ಅಂಕ ಗಳಿಸಿದರೆ ಪ್ರತಿಭೆಯನ್ನು ಗುರುತಿಸಿ ಪ್ರವೇಶ ಸಿಗಬಹುದೆಂಬ ಆಕಾಂಕ್ಷೆಯಿಂದ ಮಕ್ಕಳಿಗೆ ಹೆಚ್ಚಿನ ಅಂಕ ಪಡೆಯಲು ಬಲವಂತ ಮಾಡುವುದುಂಟು. ಅಕಸ್ಮಾತ್ ಪರೀಕ್ಷೆಯಲ್ಲಿ ಫೇಲಾದರೆ ಹೆತ್ತವರು ಏನನ್ನುವರೋ ಎಂಬ ಅಂಜಿಕೆಯಿಂದ ಬಲವಂತವಾಗಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಕೆಲವರು ಅದೃಷ್ಟವಶಾತ್ ಉಳಿದರೆ ಇನ್ನೂ ಕೆಲವರು ಅಸುನೀಗುತ್ತಾರೆ.

RELATED ARTICLES  ದೇವರು ಇದ್ದಾನೆಯೇ?

10ನೇ ತರಗತಿ ಮುಗಿದ ನಂತರ ಕೆಲವರಿಗೆ ವಿಜ್ಞಾನ ಬೇಡ ಎನಿಸಿ, ಕಲೆ ಅಥವಾ ವಾಣಿಜ್ಯ ವಿಭಾಗಕ್ಕೆ ಸೇರುವ ಹಂಬಲ ಇದ್ದು, ಹೆತ್ತವರಿಗೆ ತಮ್ಮ ಮಕ್ಕಳು ಡಾಕ್ಟರ್ ಅಥವಾ ಇಂಜಿನಿಯರ್ ಮಾಡಿಸಬೇಕೆಂಬ ಅಕಾಂಕ್ಷೆ ಇದ್ದರೆ ಆಗ ಮಕ್ಕಳಿಗೆ ಬಲವಂತವಾಗಿ ವಿಜ್ಞಾನದ ವಿಷಯದ ಕಾಲೇಜಿಗೆ ಸೇರಿಸುತ್ತಾರೆ. ಇದರಲ್ಲಿ ಜಯಶೀಲರಾದರೆ ಪರವಾಗಿಲ್ಲ ಇಲ್ಲದಿದ್ದರೆ ಕೆಲವು ವರ್ಷಗಳ ಕಾಲ ವಿಜ್ಞಾನದಲ್ಲಿ ಅಭ್ಯಸಿಸಿ ನಂತರ ತಮ್ಮ ಹೆತ್ತವರಿಗೆ ಇಚ್ಛೆಗೆ ವಿರುದ್ದವಾಗಿ ಬಲವಂತದಿಂದ ತಮ್ಮ ಜೀವನೋಪಾಯಕ್ಕೆ ಬೇರೆ ವಿಷಯದ ಕಾಲೇಜಿಗೆ ಸೇರುತ್ತಾರೆ. ಇದರಿಂದ ಮಕ್ಕಳಿಗೆ ಎಷ್ಟೋ ವರ್ಷಗಳು ನಷ್ಟವಾಗುವ ಸಂಭವ ಇರುತ್ತದೆ.

ಓದು ಮುಗಿದ ನಂತರ ಕೆಲಸದ ಹುಡುಕಾಟ ಪ್ರಾರಂಭವಾಗುತ್ತದೆ. ತಮಗೆ ಇಷ್ಟವಾದ ಕಂಪೆನಿ ಕಛೇರಿಯಲ್ಲಿ ಕೆಲಸ ಸಿಗದಿದ್ದರೆ ತಂದೆ ತಾಯಿಯನ್ನು ನೋಡಿಕೊಳ್ಳಬೇಕಾಗಿರುವುದರಿಂದ ಬಲವಂತವಾಗಿ ಸಿಕ್ಕ ಕಂಪೆನಿಗೆ ಕೆಲಸಕ್ಕೆ ಸೇರಿ ಕೊಡುವಷ್ಟು ಸಂಬಳಕ್ಕೆ ಕೆಲಸವನ್ನು ಮಾಡಬೇಕಾಗುತ್ತದೆ. ಕೆಲಸದಲ್ಲಿ ಹುಮ್ಮಸ್ಸು ಇರುವುದೇ ಇಲ್ಲ. ಕಡಿಮೆ ಸಂಬಳ, ಅತಿಯಾದ ದುಡಿಮೆ, ಜೊತೆಗೆ ಇಷ್ಟವಿಲ್ಲದ ನೌಕರಿ ಇವೆಲ್ಲವೂ ಸೇರಿ ಬಲವಂತವಾಗಿ ಜೀವನ ನಡೆಸುವಂತೆ ಅಗಿರುತ್ತದೆ. ತಮಗೆ ಇಷ್ಟವಾದ ಒಳ್ಳೆ ಕಂಪೆನಿಯಲ್ಲಿ ಕೆಲಸ ಸಿಗುವವರೆಗೆ ಮನೆಯಲ್ಲಿ ಕುಳಿತಿರೋಣವೆಂದರೆ ಹೆತ್ತವರ ಯೋಚನೆ. ಹೆತ್ತವರು ಎಲ್ಲಿಯವರೆಗೆ ತಾನೇ ದುಡಿದು ಹಾಕಲು ಸಾಧ್ಯ? ಅವರಿಗೂ ವಯಸ್ಸಾದಂತೆ ಶಕ್ತಿ ಕುಂದಿ ಕೆಲಸ ಮಾಡದ ಪರಿಸ್ಥಿತಿ ಬಂದೊದಗಿದಾಗ ಮನೆಯಲ್ಲಿ ಕುಳಿತಿರುವ ಬದಲು ಯತ್ನವಿಲ್ಲದೆ ಬಲವಂತವಾಗಿ ಬೇರೆ ಕಡೆ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗುತ್ತದೆ. ವರ್ಷಗಳು ತುಂಬುತ್ತಾ ಇದ್ದರೆ ವಯೋಮಿತಿ ಮೀರಿದರೆ ಯಾವ ಕೆಲಸವೂ ದೊರೆಯುವುದಿಲ್ಲ ಎಂಬ ಭಯದಿಂದ ಸಿಕ್ಕ ಕೆಲಸವನ್ನು ಬಿಡದೆ ಬಲವಂತವಾಗಿ ದುಡಿಯುವುದುಂಟು.

ಕೆಲಸ ಸಿಕ್ಕಿದ ನಂತರ ವಿವಾಹದ ಮಾತಿಗೆ ಬಂದಾಗ ತಂದೆ ತಾಯಿ ತಾವು ನೋಡಿದ ವರ ಅಥವಾ ವಧುವನ್ನು ಮದುವೆ ಮಾಡಿಸುವ ಹಂಬಲ ಇರುತ್ತದೆ. ಆದರೆ ಮಕ್ಕಳು ಬೇರೆಯವರನ್ನು ಪ್ರೀತಿಸಿದ್ದರೆ ಬೇರೆ ದಾರಿ ಇಲ್ಲದೆ ಬಲವಂತದಿಂದ ಮಕ್ಕಳ ಇಚ್ಛೆಯಂತೆ ಒಪ್ಪಬೇಕಾಗುತ್ತದೆ. ಇದೊಂದು ರೀತಿಯಾದರೆ ಅಕಸ್ಮಾತ್ ಮಕ್ಕಳಿಗೆ ಹೆತ್ತವರು ನೋಡಿದ ಹುಡುಗ ಅಥವಾ ಹುಡುಗಿ ಇಷ್ಟವಿಲ್ಲದಿದ್ದರೂ ಇದೇ ಪರಿಸ್ಥಿತಿ ಬಂದೊದಗಿ ಮಕ್ಕಳು ಮನಸ್ಸಿಲ್ಲದಿದ್ದರೂ ಬಲವಂತದಿಂದ ಹೆತ್ತವರು ಸೂಚಿಸಿದ ವರ ಅಥವಾ ವಧುವನ್ನು ವಿವಾಹವಾಗಿರುವ ಅನೇಕ ಪ್ರಸಂಗಗಳು ಇವೆ.
ಮದುವೆಯಾದ ನಂತರ ಮಕ್ಕಳಿಗೆ ತನ್ನ ತಂದೆ ತಾಯಿ ಜೊತೆಯಲ್ಲಿ ಇದ್ದು, ತಾಯಿ ಮಾಡುವ ರುಚಿ ರುಚಿಯಾದ ಅಡುಗೆಯನ್ನು ಸವಿದು, ತಂದೆ ತಾಯಿಯನ್ನು ನೋಡಿಕೊಳ್ಳುವ ಹಂಬಲ ಇರುತ್ತದೆ. ಆದರೆ ಮನೆಗೆ ಬಂದ ತನ್ನ ಹೆಂಡತಿಗೆ ಸರಿ ಕಾಣದಿದ್ದರೆ ಅಲ್ಲಿ ಹೊಂದಿಕೊಳ್ಳದೆ ಬೇರೆ ಮನೆಯನ್ನು ಮಾಡಿ ಬೇರೆ ಸಂಸಾರ ಮಾಡಬೇಕೆಂಬ ಬೇಡಿಕೆಯನ್ನು ಇಟ್ಟಾಗ, ಈ ಕಡೆ ತಂದೆ ತಾಯಿಯನ್ನು ಬಿಡಲೂ ಆಗದೆ ಆ ಕಡೆ ಹೆಂಡತಿಯ ಜೊತೆಯಲ್ಲಿ ಬೇರೆ ಸಂಸಾರ ಮಾಡಲು ಆಗದೆ ಹೆತ್ತವರನ್ನು ಬಿಟ್ಟು ಬಲವಂತದಿಂದ ಬೇರೆ ಸಂಸಾರ ಮಾಡಬೇಕಾದ ಪ್ರಸಂಗಗಳು ಬರುತ್ತದೆ.

RELATED ARTICLES  ಜೀವನಕ್ಕೆ ಮಹದುದ್ದೇಶವಿದೆ

ಒಳ್ಳೆ ಮಕ್ಕಳನ್ನು ಹೊಂದಿರುವ ತಂದೆ ತಾಯಿಗಳ ಕಥೆ ಒಂದಾದರೆ, ಹೆಂಡತಿಯ ಮಾತನ್ನು ಕೇಳಿ ಬಲವಂತದಿಂದ ವೃದ್ದಾಶ್ರಮಕ್ಕೆ ತಂದೆ ತಾಯಿಯನ್ನು ಸೇರಿಸಿದರೆ, ಅವರ ಪಾಡು ಇನ್ನೂ ಭಯಾನಕವಾಗಿರುತ್ತದೆ. ಸ್ವಂತ ಮನೆಯಲ್ಲಿ ತನ್ನ ಮಕ್ಕಳ ಜೊತೆಗೆ ಇರದೆ ಯಾವುದೋ ವೃದ್ದಾಶ್ರಮದಲ್ಲಿ ಆಯಸ್ಸು ಇರುವವರೆಗೂ ಬದುಕಿರಬೇಕು ಎಂದರೆ ಎಂಥವರಿಗೂ ಈ ಜೀವನವೇ ಬೇಡ ಎನ್ನುವ ಪರಿಸ್ಥಿತಿ ಬಂದಿರುತ್ತದೆ ಆದರೆ ಏನೂ ಮಾಡಲು ಸಾಧ್ಯವಿಲ್ಲ ಜೀವ ಇರುವವರೆಗೂ ಬದುಕಿರಬೇಕು ಎಂಬಂತೆ ಬಲವಂತದಿಂದ ಜೀವನವನ್ನು ಸಾಗಿಸಬೇಕಾಗುತ್ತದೆ.

ಇದಕ್ಕಿಂತ ಭಿನ್ನವಾದ ಬಲವಂತದ ಜೀವನ ಎಂದರೆ, ವಯಸ್ಸಾಗುತ್ತಿದ್ದಂತೆ ಬಂದು ಕಾಡುವ ಖಾಯಿಲೆಗಳು. ಸಕ್ಕರೆ ಖಾಯಿಲೆ ರಕ್ತದ ಒತ್ತಡ ಹಾಗೂ ಅನೇಕ ಮಾರಣಾಂತಿಕ ಖಾಯಿಲೆಗಳು, ಇದು ಬಂದರೆ ಮುಕ್ತಿಯೇ ಇಲ್ಲದಂತೆ ಆಗಿರುತ್ತದೆ. ಬೇಗ ಹೋಗಲು ಆಯಸ್ಸು ಮುಗಿದಿರುವುದಿಲ್ಲ. ಬಲವಂತದಿಂದ ಬದುಕನ್ನು ಸಾಗಿಸುತ್ತಾ ಇರಬೇಕಾಗುತ್ತದೆ. ವೈದ್ಯರು ಹೇಳುವ ಪಥ್ಯದಲ್ಲಿ ಇದ್ದು, ದಿನವೂ ಬಲವಂತದಿಂದ ಮಾತ್ರೆ ನುಂಗಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗುತ್ತದೆ.

ಈಗಿನ ಕಾಲದಲ್ಲಿ ಒಬ್ಬ ಅಥವಾ ಇಬ್ಬರು ಮಕ್ಕಳಿದ್ದು, ದುಡಿಯುತ್ತಿರುವ ಮನೆಯ ಯಜಮಾನ ಅಥವಾ ಮಕ್ಕಳು ಅನಿರೀಕ್ಷಿತವಾಗಿ ಅಸುನೀಗಿದರೆ ಸಾಕುವವರು ಇಲ್ಲದೆ ಸಾಯಲೂ ಆಗದೆ ಬದುಕಲೂ ಆಗದೆ ಅನಾಥರಂತೆ ಬಲವಂತವಾಗಿ ಜೀವನ ಸಾಗಿಸುವ ಸನ್ನಿವೇಶ ಉಂಟಾಗುತ್ತದೆ.

ತಂದೆ ತಾಯಿಗೆ ಮಕ್ಕಳು ತಮ್ಮ ಕಣ್ಣೆದುರಿಗೆ ಇರಬೇಕೆಂಬ ಆಸೆ ಆದರೆ ಕಂಪೆನಿಯವರು ಇವರನ್ನು ವಿದೇಶಕ್ಕೆ ಕಳುಹಿಸಿದರೆ ತಂದೆ ತಾಯಿಗೆ ಇಷ್ಟವಿಲ್ಲದಿದ್ದರೂ ಮಕ್ಕಳ ಬಲವಂತಕ್ಕೆ ಅನುಮತಿ ನೀಡುತ್ತಾರೆ. ಹೆತ್ತವರು ಸ್ವದೇಶದಲ್ಲಿದ್ದರೆ ಮಕ್ಕಳು ವಿದೇಶದಲ್ಲಿ ಇರುವ ಸನ್ನಿವೇಶ ಉಂಟಾಗುತ್ತದೆ. ಎಷ್ಟೇ ಕಷ್ಟವಾದರೂ ಬಲವಂತದಿಂದಲಾದರೂ ತಾಯಿ ತಂದೆಯವರ ಸೇವೆ, ದೀನರ ಸೇವೆ ಜ್ಞಾನಾರ್ಜನೆಯನ್ನು ಮಾಡಬೇಕು. ವಯಸ್ಸಾಯಿತೆಂದು ಹೆತ್ತವರನ್ನು ವೃದ್ದಾಶ್ರಮಕ್ಕೆ ಸೇರಿಸದೆ ಕಡೆಯವರೆಗೂ ಪ್ರೀತಿ ವಿಶ್ವಾಸದಿಂದ ನೋಡಿಕೊಂಡರೆ ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಬಹುದು.

ಅನುಕೂಲವಂತರಾದರೆ ಅವರ ಮಕ್ಕಳು ಒಳ್ಳೆ ರೀತಿಯಲ್ಲಿ ಓದಿ ವಿದ್ಯಾವಂತರಾಗಿ ಅವರ ಇಚ್ಛೆಯಂತೆ ಕೆಲಸವೂ ಸಿಗಬಹುದು ಆದರೆ ಕೆಲವೊಮ್ಮೆ ಸಂಸಾರದಲ್ಲಿ ನೆಮ್ಮದಿ ಇಲ್ಲದೆ ಬಲವಂತವಾಗಿ ಬದುಕನ್ನು ಸಾಗಿಸುವ ಸಂದರ್ಭ ಒದಗಿ ಬರಬಹುದು. ಮನುಷ್ಯನಿಗೆ ಯಾವ ಕೆಲಸ ಮಾಡಲು ಇಷ್ಟವಿರುವುದಿಲ್ಲವೋ ಅದನ್ನು ಬೇರೆಯವರ ಬಲವಂತದಿಂದ ಹಾಗೂ ಒತ್ತಡದಿಂದ ಮಾಡುವುದೇ ಬಲವಂತದ ಬದುಕು. ಈ ಬಲವಂತದ ಬದುಕಿನಲ್ಲಿ ಜೀವನವನ್ನು ಸಾಗಿಸುವುದು ಅನಿವಾರ್ಯವಾಗಿದೆ. ಮೊದಲಿನಿಂದಲೂ ಅತಿ ಎಚ್ಚರಿಕೆಯಿಂದ ಜೀವನವನ್ನು ನಡೆಸುತ್ತಿದ್ದು, ಮುಂದೆ ಆಗುವ ಘಟನೆಗಳನ್ನು ಪರಾಮರ್ಶಿಸಿ ಜೀವನ ನಡೆಸಿಕೊಂಡು ಹೋಗಬಹುದು. ಆದರೂ ಮನುಷ್ಯ ಎಣಿಸಿದಂತೆ ಆಗುವುದಿಲ್ಲ. ಮನುಷ್ಯನ ಆಸೆಯೇ ಬೇರೆ ಇದ್ದರೆ ವಿಧಿಯ ಆಟವೇ ಬೇರೆ ಇರುತ್ತದೆ. ಇದನ್ನು ತಪ್ಪಿಸಲು ಸಾಧ್ಯವಿಲ್ಲ ಎನಿಸುತ್ತದೆ.