Shubha Giranimane

ಸಮಯ ಕೊಲ್ಲುತ್ತ ಹೋದರೆ ನಮ್ಮ ಆಯುಷ್ಯ ಕೂಡ ಸಾಯುತ್ತ ಹೋಗುತ್ತದೆ. ಗಡಿಯಾರದ ಮುಳ್ಳು ತಿರುಗುತ್ತಲೇ ಇರುತ್ತದೆ. ಯಾರಿಗಾಗಿಯೂ ಕಾಯುವುದಿಲ್ಲ. ಯಾರನ್ನು ಓಲೈಸುವುದಿಲ್ಲ, ಯಾರ ಹುಟ್ಟು ಸಾವು ಅದಕ್ಕೆ ಸಂಬಂಧವಿಲ್ಲ. ಒಂದು ಸೆಕೆಂಡು ಅನ್ನುವುದು ಅದರ ಚಲನೆಯೇ ಹೊರತು ಅದು ನಿಲ್ಲುವುದಿಲ್ಲ. ಆದರೆ ನಾವು ಆ ಸೆಕೆಂಡು ಇರಲಿ ತಾಸು ದಿನವನ್ನು ಹಾಗೆ ಕಳೆದುಬಿಡುತ್ತೇವೆಯಲ್ಲ!? ಆಗೆಲ್ಲ ನಮ್ಮೊಳಗೆ ಏಳುವ ಪ್ರಶ್ನೆ ಇಂದು ನಾವೇನು ಮಾಡಿರುವುದು ಎನ್ನುವುದು. ಸಮಯ ಹಾಳು ಮಾಡದವನಿಗೆ ಯಶಸ್ಸು ಸಿಗುತ್ತದೆ ಎನ್ನವ ಮಾತೊಂದಿದೆ.

ಹೌದು, ಸಮಯವನ್ನು ಸದುಪಯೋಗಪಡಿಸಿಕೊಂಡು ಸತತ ಪ್ರಯತ್ನ ಪಟ್ಟು ನಮ್ಮ ಗುರಿಯತ್ತ ಸಾಗಿದರೆ ಗಡಿಯಾರದ ಮುಳ್ಳು ಹೇಗೆ ತಿರುಗುತ್ತದೋ ಹಾಗೆ ನಮ್ಮ ಕ್ರೀಯೆ ಕೂಡ ನಮಗೆ ಅರಿವಿಲ್ಲದೇ ಆ ಗುರಿಯನ್ನು ತಲುಪಲು ಸಹಾಯವಾಗುತ್ತದೆ. ಆದರೆ? ಈ ಆದರೆ ಎನ್ನುವುದರ ಹಿಂದೆ ಆಲ್ಯವಿದೆ. ಆಲ್ಯವೊಂದು ನಮ್ಮ ದಾರಿಗೆ ಅತೀ ದೊಡ್ಡ ಕಂದರವಾಗಿದೆ. ನಾವೀಗ ಹೇಗಾಗಿದ್ದೇವೆ ಅಂದರೆ ಪ್ರಯತ್ನಕ್ಕಿಂತ ಮೊದಲು ಫಲ ಸಿಕ್ಕಿಬಿಡಬೇಕು ಅನ್ನುವಷ್ಟು ಆಲಸ್ಯವನ್ನು ಹೊಂದಿರುವುದು. ಈ ಆಲಸ್ಯಕ್ಕೆ ಒಗ್ಗಿದ ಮನಸ್ಸು ಯೋಚಿಸುವುದನ್ನೆ ಮರೆತುಬಿಟ್ಟಿದೆ. ನಮ್ಮ ಎದುರಿಗೇ ಸಾಧನೆ ಎನ್ನುವ ಫಲವನ್ನು ಇಟ್ಟರು ತಿನ್ನಲು ತಿಳಿಯದಷ್ಟು ನಿದ್ರಿಸುತ್ತ ಇದ್ದೇವೆ. ಆಗ ಸಮಯ ನಮಗಾಗಿ ಎಲ್ಲಿ ಕಾಯುತ್ತದೆ. ಅದರ ಪಾಡಿಗೆ ಅದು ಚಲಿಸಿ ಮುಂದೆ ಹೋಗುತ್ತದೆ.

RELATED ARTICLES  ನಾಗರಪಂಚಮಿಯ ಮಹತ್ವ

ನಿರ್ಲಕ್ಷ, ಸೋಮಾರಿತನ, ಉಡಾಫೆ ಇವುಗಳು ನಮ್ಮ ಮುಂದಿನ ದಾರಿ ಕಾಣದಂತೆ ತಡೆಯೊಡ್ಡಿ ನಿಂತಿರುತ್ತದೆ. ಅದನ್ನು ಬದಿಗೊತ್ತಿ ನಡೆಯುವವ ತನ್ನ ಕನಸನ್ನು ನನಸಾಗಿಸಿಕೊಳ್ಳ ಬಲ್ಲ. ಆದರೆ ಹಾಗಾಗುತ್ತಿಲ್ಲ. ಹತಾಶೆಯೆಡೆಗೆ ಮನುಷ್ಯ ಹೋಗುತ್ತಿರುವುದು ದುರಂತವಾಗಿದೆ. ತನ್ನಿಂದ ಇದು ಆಗುವುದಿಲ್ಲ ಎಂದ ತಕ್ಷಣ ತಾನು ನಿಷ್ಪ್ರಯೋಜನ ಅಂದುಕೊಳ್ಳುತ್ತಿದ್ದಾರೆ.

ಕೆಲವು ಬಾರಿ ನಾವು ಅಂದುಕೊಳ್ಳುತ್ತೇವೆ ನಾಳೆಯಿಂದ ಇಂದಿನಂತೆ ಸಮಯ ಹಾಳು ಮಾಡಬಾರದು ಎಂದು. ಆಗ ಇಂತಿಂತ ಕೆಲಸಕ್ಕೆ ಇಷ್ಟು ಸಮಯ ಎಂದು ಭಾಗಿಸಿ ಪಟ್ಟಿ ಮಾಡಿಕೊಳ್ಳುತ್ತೇವೆ. ನಿಜವಾಗಿ ಆ ಸಮಯ ಭಾಗಾಕಾರ ಮಾಡಿದಾಗ ನಮಗೆ ಸಮಯದ ಪರಿಕಲ್ಪನೆಯೇ ತಿಳಿದಿಲ್ಲ ಎಂದುಕೊಳ್ಳಬಹುದು, ಸಮಯವನ್ನು ನಾವು ನಿರ್ವಹಿಸುವುದಲ್ಲ, ನಮ್ಮನ್ನು ನಾವು ನಿರ್ವಹಿಸಿವುದನ್ನು ಕಲಿಯಬೇಕಿದೆ. ಯಾವ ಸಮಯದಲ್ಲಿ ತಾನು ಏನು ಮಾಡಬೇಕು ಎನ್ನುವುದು ಅರಿಯಬೇಕಾಗಿರುವುದು ನಾವು.
ಒಂದು ಹಾವು ನಮ್ಮೆದುರು ಬಂದಾಗ ತತ್‍ಕ್ಷಣ ನಮ್ಮ ಕಾಲಿಗೆ ಬುದ್ಧಿ ಹೇಳಿ ದೂರ ಓಡಿ ಹೋಗಿ ನಿಲ್ಲುತ್ತೇವೆ. ಅಂದರೆ ಆ ಸಮಯವನ್ನು ಯಾವ ರೀತಿಯಲ್ಲಿ ನಿರ್ವಹಿಸುತ್ತೇವೆಯೋ ಅಂತ ನಮ್ಮ ಬದುಕಿನ ಸಮಯವನ್ನು ಬದಲಾಗುವ ಬದುಕಿನ ಗತಿಗೆ ತಕ್ಕಂತೆ ಕ್ಷಣದಲ್ಲಿ ತಿರುವು ನೀಡಬೇಕಿದೆ. ಅಂದರೆ ನಮ್ಮ ಮನಸ್ಸು ಕ್ರೀಯಾಶೀಲತೆಯಿಂದ ಇಟ್ಟುಕೊಂಡು ಅದನ್ನು ಕ್ರೀಯೆಯಲ್ಲಿ ತೊಡಗಿಸಿದಾಗ ನಮ್ಮ ಸಮಯ ನಮ್ಮದಾಗಿ ಉಳಿಯುತ್ತದೆ.

ಇಲ್ಲಿ ಕಳೆದು ಹೋದ ಸಮಯವವನ್ನು ನೆನೆಯುತ್ತ ಅದಕ್ಕೆ ನಮ್ಮನ್ನು ಹೊಂದಿಸಿಕೊಳ್ಳುವುದಲ್ಲ. ಮುಂಬರುವ ಸಮಯವನ್ನು ಕ್ಷಣಕ್ಷಣವೂ ಸದುಪಯೋಗಪಡಿಸಿಕೊಳ್ಳುತ್ತ ಹೋಗುವುದು ಜಾಣತನದ ಲಕ್ಷಣ. ಉದಾಹರಣೆಗೆ ಇಂದು ಹತ್ತುಗಂಟೆಗೆ ಸ್ನೇಹಿತೆಯೊಬ್ಬರನ್ನು ಭೇಟಿ ಮಾಡಬೇಕು ಎಂದುಕೊಂಡು ಸಮಯ ನಿಗದಿಮಾಡಿಕೊಂಡಿರುತ್ತೀರಿ. ಆದರೆ ಆ ಭೇಟಿಗೆ ಹತ್ತು ನಿಮಿಷ ಕಾಯಬೇಕಾಗುತ್ತದೆ. ಹಾಗಾದರೆ ಆ ಹತ್ತು ನಿಮಿಷ ನಿಗದಿತ ಸಮಯದಲ್ಲಿ ಬಂದಿರುವುದಿಲ್ಲ. ಆ ಸಮಯ ವೇಸ್ಟ್ ಆಗಿದಂತೆ ಅಲ್ಲವೇ. ಆ ಹತ್ತು ನಿಮಿಷವನ್ನು ಹೇಗೆ ಬಳಸುತ್ತೇವೆ ಎನ್ನುವುದೇ ಮುಖ್ಯವಾದುದು.

RELATED ARTICLES  ಶ್ರೀ ಗುರು ಸೇವಕ ವಿನಯ

ನಾವು ನಿತ್ಯ ಊಟ, ನಿದ್ರೆ, ಉಧ್ಯೋಗ ಮಾಡುತ್ತೇವೆ. ನಿತ್ಯಕರ್ಮವನ್ನು ಎಲ್ಲರೂ ಮಾಡುತ್ತಾರೆ. ಅದಕ್ಕೆ ಎಂದು ಒಂದಿಷ್ಟು ಸಮಯವನ್ನು ನೀಡಿರುತ್ತೇವೆ. ಅದನ್ನು ಮಾಡಿದ ನಂತರ ಉಳಿದ ಕೆಲವು ಗಂಟೆ ಅರ್ಧಗಂಟೆ ಕೂಡ ನಮ್ಮ ಯಶಸ್ಸಿನ ಮೆಟ್ಟಿಲಾಗುತ್ತದೆ. ಅದನ್ನು ಬಳಸಿಕೊಳ್ಳುವ ರೀತಿ ಮಾತ್ರ ನಮಗೆ ತಿಳೀದಿರಬೇಕಿದೆ.
ಹಾಗಾದರೆ ನಾವು ಸಮಯವನ್ನು ಯಾವ ರೀತಿ ಕಳೆಯುತ್ತಿದೇವೆ ಎಂದು ಒಮ್ಮೆ ಯೋಚಿಸಿದಾಗ ನಮ್ಮ ದಡ್ಡತನ ಅರ್ಧವಾಗುತ್ತದೆ. ಆ ದಡ್ಡತನವನ್ನು ಬಿಟ್ಟು ಗಡಿಯಾರದ ಮುಳ್ಳಿನ ಜೊತೆ ನಾವು ನಡೆಯುತ್ತಾ ಸಾಗಬೇಕು ಎನ್ನುವ ಅರಿವು ನಮ್ಮೊಳಗೆ ಮೂಡಬೇಕು. ಆಗ ಸಾವು ಎಂದಿಗೆ ಬರಲಿ ನಮ್ಮ ಸಮಯ ಈ ಜಗತ್ತಿಗೆ ಒಂದಿಷ್ಟು ಏನನ್ನೋ ನೀಡಿರುತ್ತದೆ. ಹಾಗಾಗಿಯೇ ಕೆಲವರು ಚಿಕ್ಕವರಿದ್ದಾಗಲೇ ಯಶಸ್ಸನ್ನು ಸಾಧಿಸುವುದು. ಸತತ ಪರಿಶ್ರಮ, ವಿಶ್ವಾಸದ ಜೊತೆ ಕಳೆಯುತ್ತಿರುವ ಸಮಯದ ಪರಿಕಲ್ಪನೆ ಇಟ್ಟುಕೊಂಡು ನಡೆಯುವುದು ಓಡುತ್ತಿರುವ ಜಗತ್ತಿನಲ್ಲಿ ಬಹು ಮುಖ್ಯವಾಗಿದೆ.