ಆತ್ಮೀಯರೇ ಕಳೆದ ಒಂದುವರೆಯಿಂದ ಎರಡು ತಾಸಿನ ಒಳಗೆ ನನ್ನ ಮೊಬೈಲ್ ಗೆ ಹತ್ತಾರು ಕರೆಗಳು ಬಂದಿವೆ ನಾನದನ್ನು ಸ್ವೀಕರಿಸಿಲ್ಲ ಬಹುಶಃ ನನ್ನ ಲಕ್ಷಾಂತರ ವ್ಯವಹಾರ ಆಚೆಈಚೆ ಆಗಿರಬಹುದು ಚಿಂತೆಯಿಲ್ಲ ಯಾಕೆಂದರೆ ನಾನಿಲ್ಲಿ ಕೋಟ್ಯಾಂತರ ಕಳಿಸಿದ್ದೇನೆ.ಇತ್ತೀಚಿನ ದಿನಗಳಲ್ಲಿ ನಾನು ಕೇಳಿದ ಅತ್ಯುತ್ತಮ ಉಪನ್ಯಾಸಗಳಲ್ಲಿ ಇದೂ ಒಂದು.

ಕುಮಟಾದ ಖ್ಯಾತ ಗೇರುಉದ್ಯಮಿ,ಶಿಕ್ಷಣ ಪ್ರೇಮಿ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಗೌರವ ಕಾರ್ಯದರ್ಶಿಗಳಾಗಿರುವ ಮುರಳೀಧರ ಪ್ರಭುರವರು ಆಡಿದ ಮಾತಿದು.ಮೊನ್ನೆ ದಿನಾಂಕ ೨೩ ಜನವರಿ ೨೦೧೮ ರಂದು ಮಂಗಳವಾರ ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಭಾಭವನದಲ್ಲಿ ಕಾರವಾರ ಶೈಕ್ಷಣಿಕ ಜಿಲ್ಲೆಯ ಪ್ರೌಢಶಾಲಾ ಕನ್ನಡ ಶಿಕ್ಷಕರಿಗಾಗಿ ಏರ್ಪಡಿಸಿದ ಒಂದುದಿನದ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷರಾಗಿ ಮಾತನಾಡಿದ ಪ್ರಭುಗಳ ಬಾಯಿಂದ ಈ ಮೆಚ್ಚುಗೆಯ ಮಾತುಗಳು ಬಂದದ್ದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಪಿ ಕೆ ಪ್ರಕಾಶ ರವರನ್ನು ಕುರಿತು.

ಅಷ್ಟೇ ಅಲ್ಲ ಸೇರಿದ ಎಲ್ಲ ಶಿಕ್ಷರು ಎದ್ದು ನಿಂತು ಅವರನ್ನು ಅಭಿನಂದಿಸಲು ಅಧ್ಯಕ್ಷರು ಕೋರಿದಾಗ ಸಭಾಭವನದಲ್ಲಿ ಸೇರಿದ ಶಿಕ್ಷಕರು ಅಭಿಮಾನದಿಂದ ಎದ್ದುನಿಂತು ಮಾಡಿದ ಕರತಾಡನ ಕಿವಿಗಡಚುವಂತಿತ್ತು.

ಹೌದು, ಆದಿನ ಪ್ರಕಾಶರವರ ಉಪನ್ಯಾಸದಲ್ಲಿ ಅವರ ಮಾತಿನ ಓಘ,ನಿರರ್ಗಳತೆ ವಿಷಯದ ಆಳ ಅಗಲ ಭಾವ ಭಂಗಿಗಳು ಹೇಗೆ ಕ್ರಿಕೆಟ್ ಪಂದ್ಯದಲ್ಲಿ ಒಬ್ಬಬ್ಯಾಟ್ಸಮನ್ ಎಲ್ಲ ಚೆಂಡುಗಳನ್ನೂ ಸಮರ್ಥವಾಗಿ ಎದುರಿಸಿ ಶತಕ ಗಳಿಸಿದಾಗ ವಿಜೃಂಭಿಸುತ್ತಾನೋ ಹಾಗಿತ್ತು ಅಂದಿನ ವಾತಾವರಣ.
ಉಪನ್ಯಾಸದ ಆರಂಭದಲ್ಲಿ ಅವರು ಮಾನ್ಯರೇ ,ಇಂದಿನ ಕಾರ್ಯಾಗಾರದಲ್ಲಿ ನನ್ನ ಜಿಲ್ಲೆಯ ಸುಮಾರು ನೂರಾಎಂಬತ್ತು ಕನ್ನಡ ಶಿಕ್ಷಕರನ್ನು ನಿರೀಕ್ಷಿಸಿದ್ದೆ ಆದರೆ ಮೇಲಿನಿಂದ ಕಣ್ಣು ಹಾಯಿಸಿದರೆ ಸುಮಾರು ನೂರಾ ಇಪ್ಪತ್ತೈದು ಮಂದಿಮಾತ್ರ ಇದ್ದಾರೆ ಉಳಿದವರು ಬರಬೇಕಿತ್ತು ಯಾಕೆಬರಲಿಲ್ಲ ? ಅವರಿಗೆ ಏನೋ ಘನವಾದ ಕಾರ್ಯ ಇರಬೇಕು! ಇರಲಿ ಅದನ್ನು ಆಮೇಲೆ ವಿಚಾರಿಸುವ ಎಂದ ಅವರು ತನ್ನನ್ನು ಉತ್ತರಕನ್ನಡ ಜಿಲ್ಲೆಗೆ ವರ್ಗಮಾಡಿದಾಗ ಮನಸ್ಸಿನಲ್ಲೇ ನೊಂದು ಏನೂಮಾತನಾಡದೆ ನಾಲ್ಕುಜೊತೆ ಬಟ್ಟೆಯೊಂದಿಗೆ ಕಾರವಾರಕ್ಕೆ ಬಂದೆ. ಕಾರವಾರ ನನಗೆ ಅಪರಿಚಿತ ಪ್ರದೇಶವಾಗಿತ್ತು.ಆದರೆ ಇಂದು ಪ್ರಾಮಾಣಿಕವಾಗಿ ಹೇಳುತ್ತೇನೆ ನಾನು ಮೊದಲೇ ಈ ಜಿಲ್ಲೆಗೆ ಬರಬೇಕಿತ್ತು.ಇಲ್ಲಿಯ ಜನ ಪ್ರತಿಭಾವಂತರು ಎಂದು ಮಾತು ಆರಂಭಿಸಿ ಬಳಿಕ ನೇರವಾಗಿ ಕನ್ನಡ ಭಾಷೆಗೆ ನಾಡಿನ ಸಾಹಿತಿಗಳು ನೀಡಿದ ಕೊಡುಗೆಗಳ ಬಗ್ಗೆ ಸೂಕ್ತ ಉದಾಹರಣೆಗಳೊಂದಿಗೆ ವಿವರಣೆ ನೀಡುತ್ತಾಹೋದರು.
ಕನ್ನಡ ಭಾಷಾ ಶಿಕ್ಷಕರೆಂದರೆ ಶಾಲೆಯಲ್ಲಿ ಸಮನ್ವಯದ ಹರಿಕಾರರು.ಒಂದು ಶಾಲೆಯ ಸಾಂಸ್ಕೃತಿಕ, ಶೈಕ್ಷಣಿಕ ವಾತಾವರಣ ಉತ್ತಮವಾಗಿಸುವ ಸಾಧ್ಯತೆ ಇರುವುದು ಕನ್ನಡ ಶಿಕ್ಷಕರಿಗೆ ,ಉಳಿದ ಎಲ್ಲ ವಿಷಯಕ್ಕಿಂತಲೂ ವಿದ್ಯಾರ್ಥಿಗಳಿ ಹೆಚ್ಚಿನದ್ದನ್ನು ಹೇಳುವ ಅವಕಾಶ ಇರುವುದು ಕನ್ನಡ ಶಿಕ್ಷಕರಿಗೆ.ಹೆಚ್ಚಿನ ಜವಾಬ್ದಾರಿ ಇರುವುದೂ ನಮ್ಮ ಮೇಲೆ ಹಾಗಾಗಿ ನಾವು ಕೇವಲ ಪುಸ್ತಕ ವಿಚಾರವನ್ನಷ್ಟೇ ಮಕ್ಕಳಿಗೆ ಕೊಡುವುದಲ್ಲ ಅದನ್ನು ಅವರು ಎಲ್ಲಿಂದ ಬೇಕಾದರೂ ಪಡೆಯುತ್ತಾರೆ.ಅಥವಾ ಅವರೇ ಓದಿ ಕೊಳ್ಳುತ್ತಾರೆ.ನಾವು ಅದಕ್ಕಿಂತ ಹೆಚ್ಚಿನದನ್ನು ಒದಗಿಸಬೇಕು.ಹೇಗೆ ಗರುಡ ಆಕಾಶದಲ್ಲಿ ಎತ್ತರದಲ್ಲಿ ಇದ್ದರೂ ಭೂಮಿಮೇಲೆ ಅದರ ಆಹಾರ ಕಂಡಾಕ್ಷಣ ಎರಗಿ ಹಿಡಿಯುತ್ತದೆಯೋ ಹಾಗೆ ಭಾಷಾಶಿಕ್ಷಕರು ಜ್ಞಾನ ದಾಹಿಗಳಾಗಬೇಕು ಎಂದರು.

RELATED ARTICLES  WhatsApp ಪರಿಚಯಿಸಿದೆ ವಿಶೇಷ ಫೀಚರ್ : ತ್ವರಿತ ವೀಡಿಯೊ ಸಂದೇಶವನ್ನು ಕಳುಹಿಸುವುದು ಸರಳ : ಏನಿದರ ವಿಶೇಷತೆ?

ಹಳೆಗನ್ನಡ ಸಾಹಿತ್ಯದಿಂದ ಹಿಡಿದು ಹೊಸಗನ್ನಡದ ವರೆಗೆ ಸರಿಸುಮಾರು ಎಲ್ಲ ಸಾಹಿತಿಗಳಬಗ್ಗೆ ಅವರ ಕೃತಿಗಳಬಗ್ಗೆ ಸೂಕ್ತ ಉಲ್ಲೇಖ ನೀಡಿ ಓತಪ್ರೋತವಾಗಿ ಮಾತನಾಡಿದ ಅವರು ಪಂಪ,ರನ್ಮ ಜನ್ನ ಕುಮಾರವ್ಯಾಸ, ಅಕ್ಕಮಹಾದೇವಿ ಸಿದ್ದರಾಮ,ಕನಕದಾಸರು ಪುರಂದರದಾಸರು,ಡಿವಿಜಿ,ಬಿಎಂಶ್ರೀ, ರಾಜರತ್ನ, ಗೋವಿಂದ ಪೈ,ಪಂಜೆ, ಪುಟ್ಟಪ್ಪ ,ಬೇಂದ್ರೆ,ಪುತಿನ,ಬೈರಪ್ಪ ಸಿದ್ಧಲಿಂಗಯ್ಯ. ಹೀಗೆ ಎಲ್ಲರ ಶಕ್ತಿಯ ಅನಾವರಣ ಮಾಡಿದರು.ಶಿಕ್ಷಕರು ಒಬ್ಬ ಸಾಹಿತಿಯ ಒಂದು ಪಾಠವನ್ನೋ ಪದ್ಯವನ್ನೋ ಕಲಿಸುವ ಮೊದಲು ಅವರ ಇತರ ಕೃತಿಗಳನ್ನೂ ಅಭ್ಯಸಿಸಬೇಕು ಸಾಧ್ಯ ಇರುವಕಡೆ ಅದನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಬೇಕು.ಕನ್ನಡದ ಕೆಲಸ ಎಂದರೆ ಇದು ಕೇವಲ ಶಾಲುಹೊದ್ದು ಕಿರುಚಾಡುವುದರಿಂದ ಕನ್ನಡ ಉದ್ಧಾರ ಆಗುವುದಿಲ್ಲ .ಕನ್ನಡ ಭಾಷೆ ಉಳಿಸುವನಿಟ್ಟಿನಲ್ಲಿ ಕನ್ನಡ ಶಿಕ್ಷಕರು ಉಪಕ್ರಮಿಸಬೇಕು ಕನ್ನಡ ಭಾಷೆಗೆ ಇನ್ನೂ ನಾಲ್ಕು ಜ್ಞಾನಪೀಠ ದೊರೆಯಬೇಕಿತ್ತು .ಸಮರ್ಥ ನಾಲ್ವರಿಗೆ ಇದು ಇನ್ನೂ ದೊರೆತಿಲ್ಲ. ದಾರ್ಶನಿಕ ಕವಿ ಡಿ ವಿ ಗುಂಡಪ್ಪ ಅವರಿಗೆ ಮರಣೋತ್ತರವಾದರೂ ಈ ಪ್ರಶಸ್ತಿ ದೊರೆಯಬೇಕಿದೆ.ದೊರೆಯಬಹುದು ಎಂಬ ಆಶಾವಾದವನ್ನೂ ವ್ಯಕ್ತಪಡಿಸಿದರು.ಮಂಕುತಿಮ್ಮನ ಕಗ್ಗವಂತೂ ನೊಬೆಲ್ ಪಾರಿತೋಷಕಕ್ಕೆ ಯೋಗ್ಯವಾದದ್ದು.ತಾನು ಕನ್ನಡವಲ್ಲದೇ ಆಂಗ್ಲಭಾಷೆಯಲ್ಲಿಯೂ ಸಾಕಷ್ಟು ಅಧ್ಯಯನ ಮಾಡಿದ್ದೇನೆ .ಶಿಕ್ಷಕರು ಹೆಚ್ಚು ಭಾಷೆಗಳ ಅಧ್ಯಯನ ಮಾಡಬೇಕು ಎಂದರು.ವೇದಿಕೆಯ ಕಾರ್ಯಕ್ರಮದ ಬಳಿಕ ಶಿಕ್ಷಕಜೊತೆ ಸರಳವಾಗಿ ಬೆರೆತು ಎಲ್ಲರೊಂದಿಗೆ ಸರತಿಯಲ್ಲೇ ಊಟ ಸ್ವೀಕರಿಸಿ ಮೆಚ್ಚುಗೆಗೆ ಪಾತ್ರರಾದರು.ತಾನು ಶಾಲಾ ತಪಾಸಣೆಗೆ ಬಂದಾಗ ನಿಮ್ಮ ಆಫೀಸಿನಲ್ಲಿ ಕುಳಿತು ನಿಮ್ಮ ತಪಾಸಣೆ ಮಾಡುವುದಿಲ್ಲ .ನೇರವಾಗಿ ತರಗತಿಗೆ ತೆರಳುತ್ತೇನೆ.ಪಾಠವೀಕ್ಷಣೆಮಾಡಿ ನಂತರ ವಿದ್ಯಾರ್ಥಿಗಳಿಗೆ ಪ್ರಶ್ನೆಮಾಡುತ್ತೇನೆ ಬಳಿಕ ಶಿಕ್ಷಕರಿಗೆ ಪ್ರಶ್ನೆಮಾಡುತ್ತೇನೆ ಹಾಗಾಗಿ ಎಲ್ಲರೂ ಸದಾ ಅಧ್ಯನಶೀಲರಾಗಿ ವಿಷಯ ಜ್ಞಾನಗಳಿಸಿ ಎಂಬ ಕಿವಿಮಾತು ಹೇಳಿದರು.ಸರ್ ನಾವು ಅನುದಾನ ರಹಿತ ಖಾಸಗಿಶಾಲೆಯವರು ಕೆಲವೊಂದು ದಾಖಲಾತಿ ಬಗ್ಗೆ ಸಮಗ್ರ ಮಾಹಿತಿಯ ಕೊರತೆ ನಮಗಿದೆ ಎಂದು ನಾನು ಅವರಲ್ಲಿ ಕೇಳಿಕೊಂಡಾಗ ಏನೂ ಹೆದರ ಬೇಡಿ ಚೆನ್ನಾಗಿ ಪಾಠಮಾಡಿ ನಾನೇ ಸ್ವತಃ ಬಂದು ನಿಮಗೆ ದಾಖಲಾತಿ ನಿರ್ವಹಣೆಯ ಬಗ್ಗೆ ಮಾಹಿತಿನೀಡುವೆ ಸಮಯ ಸಿಕ್ಕರೆ ತೃತೀಯ ಭಾಷೆ ಕನ್ನಡ ಬೋಧನಾ ವಿಧಾನವನ್ನೂ ತಿಳಿಸುವೆ ಎಂಬ ಭರವಸೆ ನೀಡಿದರು.

RELATED ARTICLES  ‘ಕಷ್ಟದ ಹೊರತು ಫಲವಿಲ್ಲ’ ಹೀಗೆಂದರು ಶ್ರೀ‍ಧರರು

ಒಬ್ಬ ಶಿಕ್ಷಣ ಅಧಿಕಾರಿಗಳಾಗಿ ಅವರಿಗೆ ಇರುವ ವಿಷಯಜ್ಞಾನ ಎಲ್ಲರನ್ನೂ ಬೆರಗಾಗಿಸಿದ್ದು ಸತ್ಯ.
ಇನ್ನು ಕೆಲವೇ ತಿಂಗಳುಗಳಲ್ಲಿ ವೃತ್ತಿಯಿಂದ ನಿವೃತ್ತರಾಗಲಿರುವ ಅವರ ಮುಖದಲ್ಲಿ ಬೇಸರ ಉದಾಸೀನತೆಗಳ ಗೆರೆಕಾಣದು. ಅವರ ಲವಲವಿಕೆ ಅನುಸರಣೀಯ.ಅವರ ನಿವೃತ್ತಿಯ ನಂತರವೂ ಈ ಜಿಲ್ಲೆ ಅವರಂತ ಜ್ಞಾನ ಸಮೃದ್ಧ ಶಿಕ್ಷಣಾಧಿಕಾರಿಗಳನ್ನು ಪಡೆಯಲಿ ಎಂಬುದೇ ಎಲ್ಲರಬಯಕೆ. ಅಧಿಕಾರ ದರ್ಪ ಅಜ್ಞಾನದ ಪ್ರತೀಕ ಎಂಬುದನ್ನು ಕೊನೆಯಪಕ್ಷ ಶಿಕ್ಷಣ ಇಲಾಖೆಯಾದರೂ ಅರ್ಥ ಮಾಡಿಕೊಳ್ಳಬೇಕಾದ ಕಾಲ ಇದಾಗಿದೆ.ಕಾರ್ಯಾಗಾರದ ಕೊನೆಯ ಅವಧಿಯಲ್ಲಿ ಡಿಡಿಪಿಐ ಅವರ ಗೆಳಯರೂ ನನ್ನ ನೆಚ್ಚಿನ ಗುರುಗಳೂ ಆದ ಡಾ.ಜಿಎಲ್ ಹೆಗಡೆಯವರು ಪ್ರಥಮ ಭಾಷೆಕನ್ನಡ ಪಠ್ಯದ ಕೆಲವು ಹಳಗನ್ನಡ ಕಾವ್ಯ ವಾಚನ ಹಾಗೂ ಅದರ ಅರ್ಥವನ್ನು ಬೋಧಿಸಿದರು. ಕನ್ನಡ ಕಲಿಕೆ ಹೇಗೆ ಸುಲಭವಾಗುತ್ತದೆ ಎಂಬ ಬಗ್ಗೆ ತಮ್ಮ ಎಂದಿನ ಹಾಸ್ಯಮಿಶ್ರಿತ ಶೈಲಿಯಲ್ಲಿ ಬೋಧಿಸಿದರು.ಒಟ್ಟಿನಲ್ಲಿ ಜಿಲ್ಲೆಯಲ್ಲಿ ಮೊದಲಬಾರಿ ಜರುಗಿದ ಪ್ರೌಢಶಾಲಾ ಕನ್ನಡ ಶಿಕ್ಷಕರ ಕಾರ್ಯಾಗಾರ ಸಂಪೂರ್ಣ ಪ್ರಕಾಶಮಾನವಾಗಿತ್ತು ಎಂಬುದನ್ನೂ ಯಾರೂ ಅಲ್ಲಗಳೆಯುವಂತಿಲ್ಲ.ಇದಕ್ಕೂ ಮುನ್ನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಕನ್ನಡ ಮತ್ತು ಸಂಗೀತ ಗುರುಗಳಾದ ವಿದ್ವಾನ್ ಶಿವಾನಂದ ಭಟ್ಟ ಹಡಿನಬಾಳ ಇವರಿಂದ ಒಂದುತಾಸಿನ ಸಂಗೀತ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು.ತಬಲಾದಲ್ಲಿ ಎನ್ ಜಿ ಹೆಗಡೆ ಕಪ್ಪೆಕೆರೆ ಹಾರ್ಮೋನಿಯಂನಲ್ಲಿ ಹರಿಶ್ಚಂದ್ರ ನಾಯ್ಕ ಕೊಳಲುವಾದನದಲ್ಲಿ ಸುಧೀರ್ ಹೆಗಡೆ ಸಾಥ್ ನೀಡಿದರು. ಕನ್ನಡ ಶಿಕ್ಷರುಗಳಾದ ಎಂ ಬಿ ಭಟ್ಟ,ಗಣೇಶ್ ಭಟ್ಟ ಪಾಂಡುರಂಗ ವಾಗ್ರೇಕರ್ ಇವರುಗಳುಕಾರ್ಯಕ್ರಮವನ್ನು ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸಹಯೋಗದಲ್ಲಿ ಸಂಘಟಿಸಿದ್ದರು.ಒಟ್ಟಾರೆ ಇದೊಂದು ಉತ್ತಮ ಕಾರ್ಯಾಗಾರವಾಗಿ ಮೂಡಿ ಬಂದಿತು.
ಜ್ಞಾನಕ್ಕೆ ಶರಣು.
ಚಿದಾನಂದ ಎಚ್ ಭಂಡಾರಿ.
ಶಿಕ್ಷಕರು.
ಕೊಂಕಣ ಎಜ್ಯುಕೇಶನ್ ಟ್ರಸ್ಟ
೮೯೭೦೬೧೨೨೫೭