muralidhar 2

ದಾರಿಯಾವುದಯ್ಯ ವೈಕುಂಠಕೆ ದಾರಿ ತೋರಿಸಯ್ಯಾ ಎಂದು ದಾಸಶ್ರೇಷ್ಠರಾದ ಶ್ರೀ ಪುರಂದರ ದಾಸರು ನಿಶ್ಚಲ ಭಕ್ತಿಯಿಂದ ಕೃತಿಯನ್ನು ರಚಿಸಿ ಹಾಡಿ ದೇವರಲ್ಲಿ ಪ್ರಾರ್ಥಿಸಿದಂತೆ ಮನುಷ್ಯನಿಗೆ ತನ್ನ ಗುರಿಯನ್ನು ಮುಟ್ಟಲು ಸರಿಯಾದ ದಾರಿ ಅವಶ್ಯಕವಾಗಿ ಬೇಕು. ದಾರಿ ತೋರಿಸಿ ಎಂದರೆ ಸಹಾಯ ಮಾಡಿ ಎಂದರ್ಥವಾಗುತ್ತದೆ. ಇನ್ನೊಂದು ಅರ್ಥದಲ್ಲಿ ವ್ಯವಸ್ಥೆ ಎಂದೂ ಹೇಳಬಹುದು. ಹೆತ್ತವರು ತಮಗೆ ಪರಿಚಯ ಇರುವವರಲ್ಲಿ ತಮ್ಮ ಮಕ್ಕಳಿಗೆ ಯಾವುದಾದರೂ ಕೆಲಸವನ್ನು ಕೊಡಿಸಿ ಅವನ ಜೀವನಕ್ಕೆ ದಾರಿ ಮಾಡಿಕೊಡಿ ಎಂದು ಕೇಳಬಹುದು ಅಥವಾ ವಿವಾಹಕ್ಕಾಗಿ ಸಹಾಯ ಕೇಳಬಹುದು. ಮನುಷ್ಯನಾದವನ ಜೀವಿತ ಅವಧಿಯಲ್ಲಿ ಬದುಕಲು ಅನೇಕ ದಾರಿಯನ್ನು ಅವಲಂಬಿಸಬೇಕಾಗಿರುತ್ತದೆ. ವಿದ್ಯೆ ಕಲಿಯಲು ಒಂದು ದಾರಿ, ಜೀವನಕ್ಕೊಂದು ದಾರಿ, ವಿವಾಹವಾಗಿ ಸಂಸಾರಿಯಾದರೆ ಜೀವನ ಪೂರ್ಣಗೊಳಿಸಲು ಒಂದು ದಾರಿಯಾದಂತೆ ಆಗುತ್ತದೆ. ಅದೇ ರೀತಿ ಮನುಷ್ಯನು ಜೀವನದಲ್ಲಿ ತನ್ನ ಜೀವಿತಾವಧಿಗಳಲ್ಲಿ ಅನೇಕ ದಾರಿಗಳಲ್ಲಿ ನಡೆದುಕೊಂಡು ಬಂದಿರುತ್ತಾನೆ. ಚಿಕ್ಕವಯಸ್ಸಿನಲ್ಲಿ ಶಾಲೆಗೆ, ಕಾಲೇಜಿಗೆ, ಆಸ್ಪತ್ರೆಗೆ, ಉದ್ಯೋಗಕ್ಕೆ ಹೋಗುವ ಕಛೇರಿಯ ದಾರಿ, ಹೀಗೇ ಜೀವನದಲ್ಲಿ ಪ್ರತಿಯೊಂದಕ್ಕೂ ದಾರಿ ಎಂಬ ಶಬ್ದವನ್ನು ಉಪಯೋಗಿಸುತ್ತೇವೆ. ಈ ಎಲ್ಲಾ ದಾರಿಗಳನ್ನು ದಿನಗಳು ಕಳೆದಂತೆ ಮರೆಯುತ್ತಾ ಬರುತ್ತೇವೆ. ಆದರೆ ಜೀವನದ ಕಡೆಯಲ್ಲಿ ಮನುಷ್ಯ ಸತ್ತ ಮೇಲೆ ಮಸಣಕ್ಕೆ ಹೋಗುವ ದಾರಿಯನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ. ಏಕೆಂದರೆ ಸಾವು ಯಾವ ರೀತಿ ಬರುತ್ತದೋ ಬಲ್ಲವರಾರು? ಯಾವ ಊರಿನಲ್ಲಿ ಮಣ್ಣು ಮಾಡುವರೋ ಅಥವಾ ದಹಿಸುವರೋ? ಆದರೆ ಸತ್ತಮೇಲೆ ಎಲ್ಲರಿಗೂ ಇರುವುದು ಒಂದೇ ದಾರಿ ಅದುವೇ ಮಸಣದ ದಾರಿ.

ಯಾವ ಕಷ್ಟವೇ ಎದುರಾದರೂ ಮೊದಲು ಪ್ರಾರ್ಥಿಸುವುದು ದೇವರನ್ನು, ದೇವರೇ ಕಷ್ಟದಲ್ಲಿರುವೆ ದಾರಿಯನ್ನು ತೋರಿಸು, ಎಂದು ಬೇಡುವುದು ಸಾಮಾನ್ಯವಾದ ಸಂಗತಿ. ಇದರ ಜೊತೆಗೆ ತಮ್ಮ ಕೈಲಾದಷ್ಟು ಪ್ರಯತ್ನವನ್ನೂ ಸಹ ಮಾಡಬೇಕು. ದೇವರನ್ನು ನಂಬಿದ್ದೇನೆ. ದೇವರು ಎದ್ದು ಬಂದು ಸಹಾಯ ಮಾಡುತ್ತಾನೆ ಎಂದು ಸುಮ್ಮನೆ ಕುಳಿತುಕೊಳ್ಳಬಾರದು. ನಮ್ಮ ಪ್ರಯತ್ನದ ಜೊತೆಗೆ ದೈವ ಸಹಾಯ ಸೇರಿದರೆ ಎಷ್ಟೇ ಕಷ್ಟ ಬಂದರೂ ಜೀವನದಲ್ಲಿ ಎದುರಿಸಿ ಬಾಳಬಹುದು. ನಂಬಿಕೆಯಿದ್ದರೆ ಜೀವನದಲ್ಲಿ ಯಾವುದೇ ಕೆಲಸವನ್ನಾದರೂ ಅರ್ಧ ಗೆದ್ದಂತೆ ಇನ್ನುಳಿದ ಅರ್ಧ ಗೆಲುವು ನಮ್ಮ ಪ್ರಯತ್ನದಿಂದಾಗುವಂತಹದ್ದು. ಆದರೆ ದೇವರೇ ಪ್ರತ್ಯಕ್ಷವಾಗಿ ಬಂದು ಸಹಾಯ ಮಾಡುವುದಿಲ್ಲ. ಬೇರೆಯವರ ರೂಪದಲ್ಲಿ ಬಂದು ಸಹಾಯ ಮಾಡಲೂಬಹುದು. ಸಮಯಕ್ಕೆ ಸರಿಯಾಗಿ ಬಂದು ಯಾರಾದರೂ ಸಹಾಯ ಮಾಡಿದರೆ ದೇವರೇ ನಮಗೆ ದಾರಿ ತೋರಿಸಿದ ಎಂದು ಉದ್ಗರಿಸುವುದುಂಟು. ಅಂದರೆ ನಾವು ದೇವರ ಕುರಿತು ಮಾಡಿರುವ ಪ್ರಾರ್ಥನೆಯು ಕೆಲವೊಮ್ಮೆ ಸ್ನೇಹಿತರಿಗೋ ಅಥವಾ ನೆಂಟರಿಗೋ ದೈವ ಪ್ರೇರಣೆಯಾದಂತೆ ಯಾವುದೋ ರೂಪದಲ್ಲಿ ತಲುಪಿ ಸಹಾಯಕ್ಕೆ ಧಾವಿಸಬಹುದು.

ಹಲವಾರು ಸಂಗತಿಗಳನ್ನು ನೋಡಿದ್ದೇವೆ, ಕೇಳಿದ್ದೇವೆ ಅಥವಾ ಅನುಭವಿಸಿಯೂ ಇದ್ದೇವೆ. ಯಾವ ರೀತಿ ಎಂದರೆ ಸಹಾಯ ಮಾಡಲು ಬಂದವರು ಹೇಳುತ್ತಾರೆ ನಾನು ಅಕಸ್ಮಾತ್ ಬಸ್ಸಿಗೆ ಕಾಯುತ್ತಿದ್ದೆ ಅಥವಾ ಪೇಟೆಗೆ ಬಂದಿದ್ದೆ ನಿಮ್ಮ ಪರಿಚಯದವರು ಬಂದು ನಿಮ್ಮ ವಿಷಯ ತಿಳಿಸಿದರು ಅದಕ್ಕೆ ಬಂದೆ ಎಂದು ಹೇಳಿರುವುದುಂಟು. ಅದು ದೈವ ಪ್ರೇರಣೆಯಾಗಿಯೋ ಅಥವಾ ಕಾಕ ತಾಳೀಯವೋ ಒಟ್ಟಿನಲ್ಲಿ ಸಹಾಯಕ್ಕೆ ಧಾವಿಸಿ ಬಂದಿರುವುದಂತು ಸತ್ಯ. ಅನೇಕ ಸಣ್ಣ ಪುಟ್ಟ ಘಟನೆಗಳು ನಡೆದಾಗ ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಮರೆತು ಬಿಡುತ್ತೇವೆ. ದೊಡ್ಡ ಕೆಲಸವಾದಾಗ ಮಾತ್ರ ದೇವರು ದಾರಿ ತೋರಿಸಿದ ಎಂದು ಹೇಳುವುದುಂಟು. ಇದೇ ಅಲ್ಲವೆ ದೈವ ಸಹಾಯ ಎನ್ನುವುದು. ಯಾವುದೇ ಒಬ್ಬ ವ್ಯಕ್ತಿ ಬಂದು ಸಹಾಯ ಮಾಡಿದರೂ ದೇವರಂತೆ ಬಂದು ಸಹಾಯ ಮಾಡಿದಿರಿ ಆ ದೇವರೇ ನಮಗೆ ದಾರಿ ತೋರಿಸಿದ ಎಂದು ಹೇಳುತ್ತೇವೆ. ಸಹಾಯ ಮಾಡಿರುವುದು ಮನುಷ್ಯರೇ ಆದರೂ ಅದರ ಹೊಗಳಿಕೆ ಮಾತ್ರ ದೇವರಿಗೆ ಹೋಗುತ್ತದೆ. ಅಂದರೆ ಯಾವುದೇ ಕಷ್ಟ ಪರಿಹಾರವಾದರೂ ದೇವರು ನಮಗೆ ಸರಿಯಾದ ಸಮಯಕ್ಕೆ ಬಂದು ದಾರಿ ತೋರಿಸಿದ ಎನ್ನುವವರೇ ಹೆಚ್ಚು.

RELATED ARTICLES  ಕಾವ್ಯಾವಲೋಕನ-೯

ವಿದ್ಯಾರ್ಥಿಗಳಿಗೆ ಪರೀಕ್ಷೆ ಹತ್ತಿರ ಬಂದಾಗ ದೇವರನ್ನು ನೆನೆದು ನಂತರ ಪರೀಕ್ಷೆಗೆ ಓದುವುದು ಸಾಮಾನ್ಯ ಸಂಗತಿ. ಇಲ್ಲಿ ದೇವರನ್ನು ನಂಬಿದ್ದಲ್ಲಿ ಅವರ ಮನಸ್ಸಿನಲ್ಲಿ ಯಾವುದೋ ಒಂದು ರೀತಿಯ ಆತ್ಮ ವಿಶ್ವಾಸ ಮನೆ ಮಾಡುತ್ತದೆ. ನಂತರ ತಾವುಗಳು ಓದಿದ ಪಾಠಗಳು ಮನಸ್ಸಿನಲ್ಲಿ ನಿಲ್ಲುತ್ತದೆ. ಪರೀಕ್ಷೆ ಎಂದಾಕ್ಷಣ ಹೆದರಿದರೆ ಎಷ್ಟೇ ಓದಿದರೂ ತಲೆಯಲ್ಲಿ ನಿಲ್ಲುವುದಿಲ್ಲ. ಒಂದು ರೀತಿಯ ಭಯ ಆವರಿಸಿ ಒದಿದ್ದೂ ಮರೆತು ಹೋಗುವ ಸಂಭವ ಉಂಟು. ಮೊದಲು ದೇವರಲ್ಲಿ ನಂಬಿಕೆ ಇಟ್ಟು ನಂತರ ಓದಲು ಪ್ರಾರಂಭಿಸಿದರೆ ಮನಸ್ಸಿನಲ್ಲಿ ಒಂದು ರೀತಿಯ ದೃಡ ವಿಶ್ವಾಸ ಬಂದಂತಾಗಿ ಒಂದು ಸಲ ಓದಿದರೂ ಮನಸ್ಸಿನಲ್ಲಿ ಉಳಿಯುವುದುಂಟು.

ಯಾವುದೇ ಕಷ್ಟಕರವಾದ ಕಾರ್ಯಗಳು ಯಾರಿಗಾದರೂ ಮೀರಿದ ಕಾರ್ಯವಾಗಿದ್ದಲ್ಲಿ ದೇವರಿಗೆ ಮೊರೆಹೋಗಿ ದಾರಿ ತೋರಿಸು ಎಂದು ಹೇಳುವುದು ಒಂದು ರೀತಿಯಾದರೆ ಜೀವನದಲ್ಲಿ ತಮ್ಮಮಕ್ಕಳ ಉದ್ಯೋಗಕ್ಕಾಗಲೀ ಅಥವಾ ವಿವಾಹಕ್ಕಾಗಲೀ ತಮ್ಮ ಪರಿಚಯ ಇರುವವರ ಹತ್ತಿರ ಬಂದು ನಮ್ಮ ಮಕ್ಕಳಗೆ ಉದ್ಯೋಗ ನೀಡಿ ಅವನ ಬದುಕಿಗೆ ದಾರಿ ತೋರಿಸಿ ಎಂದು ಕೇಳಿದಾಗ ಅದರಂತೆ ಅವರು ಸ್ಪಂದಿಸಿ ಕೆಲಸ ಮಾಡಿಕೊಟ್ಟರೆ ತಮ್ಮ ಮಕ್ಕಳ ಜೀವನಕ್ಕೆ ದಾರಿ ತೋರಿಸಿದರು ಎಂದು ಹೇಳುತ್ತಾರೆ. ಇದಕ್ಕೆ ವಿರುದ್ದವಾಗಿ ಸ್ಪಂದಿಸಿದರೆ ಆತ್ಮಸಾಕ್ಷಿಯೂ ಒಪ್ಪುವುದಿಲ್ಲ, ದೇವರೂ ಕ್ಷಮಿಸುವುದಿಲ್ಲ ಕೃತಜ್ಞನಾಗಬೇಕೇ ಹೊರತು ಕೃತಘ್ನನಾಗಬಾರದು. ಉಪಕರಿಸಿ ಜೀವನಕ್ಕೆ ಒಂದು ದಾರಿ ತೋರಿಸಿರುವವರನ್ನು ಸ್ಮರಿಸಿದರೆ ಜೀವನದಲ್ಲಿ ಇನ್ನೂ ಹೆಚ್ಚಿನದಾಗಿ ಬೆಳೆಯಬಹುದು.

ಹೆತ್ತವರೇ ತಮ್ಮ ಮಕ್ಕಳಿಗೆ ಉದ್ಯೋಗಕ್ಕೆ ಅಥವಾ ವಿವಾಹ ಮಾಡಿದರೆ ಅಥವಾ ಸ್ವಯಂ ಮಕ್ಕಳೇ ಜೀವನಕ್ಕೆ ಒಂದು ದಾರಿ ಮಾಡಿಕೊಂಡು ತನ್ನ ಕಾಲ ಮೇಲೆ ನಿಲ್ಲುವಂತಾದರೆ, ಹೆತ್ತವರು ತಮ್ಮ ಮಕ್ಕಳಿಗೊಂದು ಜೀವನಕ್ಕೆ ದಾರಿ ಮಾಡಿದ್ದಾಯಿತು ಎಂದು ಸಮಾಧಾನ ಪಟ್ಟುಕೊಳ್ಳಬಹುದು.

ಇವೆಲ್ಲವೂ ಜೀವನದಲ್ಲಿ ಬದುಕಲು ಕಂಡುಕೊಂಡ ದಾರಿಯಂತಾದರೆ, ನಿಜ ಜೀವನದಲ್ಲಿ ನಡೆದು ಬಂದ ದಾರಿಯನ್ನು ದೊಡ್ಡವರಾಗುತ್ತಾ ಮರೆತು ಬಿಡುತ್ತೇವೆ. ಚಿಕ್ಕಂದಿನಲ್ಲಿ ಶಾಲೆಗೆ ಹೋಗಿ ಬರುತ್ತಿದ್ದ ದಾರಿಗಳು, ಆಟ ಆಡಲು ಮೈದಾನಕ್ಕೆ ಹೋಗುತ್ತಿದ್ದ ದಾರಿಗಳು, ಹಿಂದಿನ ಕಾಲದಲ್ಲಿ ಮಾವಿನಕಾಯಿ, ನೇರಳೆಹಣ್ಣು ಮರದ ಹತ್ತಿರ ಹೋಗಿ ಕಲ್ಲು ಹೊಡೆದು ಉದುರಿಸಿ ತರುತ್ತಿದ್ದ ದಾರಿಗಳು, ಈಜು ಕಲಿಯಲು ಕೆರೆ ಅಥವಾ ಬಾವಿಗೆ ಹೋಗುತ್ತಿರುವ ದಾರಿಗಳು. ಮೊದಲು ಎಲ್ಲಾ ಊರಿನಲ್ಲಿಯೂ ಥಿಯೇಟರ್‍ಗಳು ಇರುತ್ತಿರಲಿಲ್ಲ, ಟೆಂಟ್‍ಗಳೇ ಜಾಸ್ತಿ ಇದ್ದು, ಟೆಂಟಿನ ಸಿನಿಮಾಕ್ಕೆ ಹೋಗುತ್ತಿದ್ದ ದಾರಿಗಳು ಇವೆಲ್ಲವೂ ಮರೆತೇ ಹೋಗಿರುತ್ತದೆ. ಒಂದೇ ಊರಿನಲ್ಲಿದ್ದು ದೇವಸ್ಥಾನಗಳಿಗೆ ಹೋಗುತ್ತಿದ್ದ ದಾರಿಗಳನ್ನು ಮರೆಯಲು ಆಗುವುದಿಲ್ಲ. ಚಿಕ್ಕವರಿಂದ ದೊಡ್ಡವರಾಗುವ ತನಕವೂ ಒಂದೇ ದಾರಿಯಲ್ಲಿ ದೇವಸ್ಥಾನಕ್ಕೆ ಹೋಗಿ ಬರುತ್ತಲಿರುತ್ತೇವೆ. ಆದರೆ ಅನಿವಾರ್ಯ ಕಾರಣದಿಂದ ಉದ್ಯೋಗಕ್ಕಾಗಿ ಊರು ಬಿಟ್ಟು ಹೋದಾಗ ಮಾತ್ರ ಎಲ್ಲಾ ದಾರಿಗಳನ್ನು ಮರೆತು ಬಿಡುತ್ತೇವೆ. ಹೊಸ ಊರಿನಲ್ಲಿ ಹೊಸ ದಾರಿಯಲ್ಲಿ ಸಾಗಬೇಕಾದ ಹಾಗೂ ಜೀವನಕ್ಕೆ ಹೊಸ ದಾರಿಯನ್ನು ಹೊಂದುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗುತ್ತದೆ.

RELATED ARTICLES  ಮನುಷ್ಯನ ವ್ಯಕ್ತಿತ್ವ ಗೋಪುರದಂತೆ ಕಂಗೊಳಿಸಿದರೆ? ಭಾಗ-1

ಅಜ್ಜಿ ತಾತನ ಮನೆಯ ದಾರಿಗಳು, ಈಗ ಇರುವುದೇ ಚಿಕ್ಕ ಚಿಕ್ಕ ಸಂಸಾರಗಳು, ಅದರಲ್ಲಿ ಅಜ್ಜಿ ತಾತನು ಒಂದೇ ಕುಟುಂಬಗಳಲ್ಲಿ ಇರಬಹುದು. ಮೊದಲಿಗೆ ಹಳ್ಳಿಯಲ್ಲಿ ಅಜ್ಜಿ ತಾತನು ಇದ್ದರೆ, ಬೇಸಿಗೆ ರಜೆ ಬಂದಾಗ ಅಜ್ಜಿ ತಾತನ ಮನೆಗೆ ಹೋಗಿ ಬರುತ್ತಿದ್ದ ಕಾಲವೂ ಇತ್ತು. ಅಜ್ಜಿ ತಾತನ ಊರಿನ ದಾರಿಗಳು ಅವರುಗಳು ಅಲ್ಲಿ ಇರುವವರೆಗೆ ಮಾತ್ರ ಜ್ಞಾಪಕಕ್ಕೆ ಬರುತ್ತದೆ. ನಂತರ ಮರೆತುಹೋಗುತ್ತದೆ. ವಿವಾಹವಾದ ನಂತರ ಪತ್ನಿಯ ಮನೆಯ ದಾರಿ ಪತ್ನಿ ಇರುವವರೆಗೆ ಮಾತ್ರ ಜ್ಞಾಪಕಕ್ಕೆ ಬರುತ್ತದೆ ಅಕಸ್ಮಾತ್ ಪತ್ನಿಯು ತೀರಿಹೋದ ಮೇಲೆ ಆ ದಾರಿಯೂ ಮರೆತು ಹೋಗುತ್ತದೆ.

ಮುಪ್ಪಾದ ಕಾಲದಲ್ಲಿ ಖಾಯಿಲೆ ಬಂದಾಗ ಆಸ್ಪತ್ರೆ ದಾರಿ ಹಿಡಿಯಲೇ ಬೇಕು. ಅಕಸ್ಮಾತ್ ಬದುಕಿ ಬಂದರೆ ಮಾತ್ರ ಹಳೆಯ ನೆನಪುಗಳನ್ನು ಮಾಡಿಕೊಳ್ಳಬಹುದು. ಓಡಾಡಲು ಶಕ್ತಿ ಇಲ್ಲದೆ ಇರುವ ತನಕ ಹೇಗೋ ಕಾಲ ಕಳೆದು ಕಣ್ಣು ಮುಚ್ಚಿದರೆ ಶಾಶ್ವತವಾದ ಒಂದೇ ದಾರಿಯಲ್ಲಿ ಹೋಗಬೇಕು. ನಾಲ್ಕು ಜನರು ಕೊಂಡೊಯ್ಯುವುದು ವಿಧಿ ನಿಯಮ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದೇ ಮನುಷ್ಯನ ಅಂತಿಮ ದಾರಿಯಾಗುತ್ತದೆ. ಇರುವವರೆಗೂ ಎಲ್ಲಾ ದಾರಿಗಳನ್ನು ಮರೆಯುತ್ತಾ ಕಡೆಗೆ ಎಲ್ಲಿ ಹೋಗುತ್ತಿರುವುವೆನೆಂಬ ಜ್ಞಾನವೇ ಮನುಷ್ಯನಿಗೆ ಇರುವುದಿಲ್ಲ. ಅಲ್ಲವೇ? ಸತ್ತ ನಂತರ ಮನೆಯವರು ವೈಕುಂಠಕ್ಕೆ ಕಳುಹಿಸಲು ಅನೇಕ ಕರ್ಮಗಳನ್ನು ಮಾಡಿ ವೈಕುಂಠ ಅಥವಾ ಕೈಲಾಸÀದ ದಾರಿ ತೋರಿಸಿದೆವು ಎಂದು ಹೇಳುವುದುಂಟು. ಇದು ಮಕ್ಕಳ ಕರ್ತವ್ಯ ಹಾಗೂ ನಮ್ಮಲ್ಲಿ ನಡೆದು ಬಂದಿರುವ ಪದ್ದತಿ. ಯಾವುದಾದರೂ ಹೊಸ ಊರಿಗೆ ಹೋಗುವಾಗ ವಿಳಾಸ ಗೊತ್ತಿಲ್ಲದಿದ್ದರೆ ಆ ಊರಿನಲ್ಲಿರು ವವರನ್ನು ಈ ದಾರಿ ಎಲ್ಲಿಗೆ ಹೋಗುತ್ತದೆ ಎಂದು ಕೇಳುವುದುಂಟು. ಇದಕ್ಕೆ ಕೆಲವರು ಈ ದಾರಿ ಎಲ್ಲೂ ಹೋಗುವುದಿಲ್ಲ ಇಲ್ಲೇ ಇರುತ್ತದೆ ಎಂದು ಹಾಸ್ಯ ಮಾಡುವುದುಂಟು.

ವೈಕುಂಠದ ಏಕಾದಶಿ ದಿನ ವೈಕುಂಠದ ಬಾಗಿಲು ತೆಗೆದಿರುತ್ತದೆ ಎಂದು ಅಂದು ಸ್ವಾಭಾವಿಕವಾಗಿ ಸತ್ತರೆ ನೇರವಾಗಿ ವೈಕುಂಠಕ್ಕೆ ಹೋಗುವರು ಎಂಬ ಪ್ರತೀತಿಯುಂಟು.
ಮನುಷ್ಯನಾದವನು ಬದುಕಿದ್ದಾಗ ಕೆಟ್ಟದಾರಿ ಹಿಡಿಯದೆ ಸರಿಯಾದ ದಾರಿಯಲ್ಲಿ ಸಾಗಿ ತನ್ನ ಜೀವನದ ಗುರಿಯನ್ನು ಮುಟ್ಟಬಹುದು. ಒಂದೇ ಗುರಿ ಅದಕ್ಕೆ ಒಂದೇ ದಾರಿಯಲ್ಲಿ ಸಾಗಿದರೆ ಮಾತ್ರ ಯಶಸ್ಸು ಲಭಿಸುವುದು. ಮನುಷ್ಯ ಬದುಕಲು ತನ್ನ ಬುದ್ದಿವಂತಿಕೆಗೆ ತಕ್ಕಂತೆ ನಾನಾದಾರಿ ಹುಡುಕಿ ಕೊಳ್ಳುತ್ತಾನೆ. ಅದರೆ ಹೋಗುತ್ತಿರುವ ದಾರಿ ಸರಿಯಾಗಿದೆಯೇ ಇಲ್ಲವೇ? ಎಂಬುದನ್ನು ವಿಮರ್ಶಿಸಿಕೊಂಡು ಮುನ್ನಡೆದರೆ ಒಳಿತು.