ಎಲೆ-ಅಡಿಕೆ, ತಂಬಾಕು ಮೊದಲಾದ ಯಾವುದೇ ವ್ಯಸನವಿರಬಾರದು.
ಎಲ್ಲರೂ ಒಟ್ಟಾಗಿ ಇರಿ. ಶ್ರವಣ ಮೊದಲಾದವುಗಳನ್ನು ಮನಸ್ಸಿಟ್ಟು ಮಾಡಬೇಕು.
(ಇಸವಿ ಸನ ೧೯೪೮ರಲ್ಲಿ ಶ್ರೀ ಭಾಸ್ಕರ ಬುವಾ ರಾಮದಾಸಿ, ಸಜ್ಜನಗಡರವರಿಗೆ ಬರೆದ ಪತ್ರ)
||ಶ್ರೀರಾಮ ಸಮರ್ಥ||
೨೩-೦೪-೧೯೪೮
ಚಿ.ಭಾಸ್ಕರನಿಗೆ ಆಶೀರ್ವಾದ,
ನಿನ್ನ ಪತ್ರ ನನಗೆ ಸಿಗಲಿಲ್ಲ. ಜಪ, ಧ್ಯಾನ, ಪಾರಾಯಣ, ಸೇವೆ, ಶ್ರವಣ, ಮನನ, ನಿದಿಧ್ಯಾಸಾದಿ ಅಖಂಡ ಸಾಧನೆ ನಡೆಸುತ್ತಿರು. ರಾಣಪುರದಲ್ಲಿದ್ದಾಗ ಶ್ರೀಗುರುವಿನ ಧ್ಯಾನ ಹೇಗೆ ಮಾಡಬೇಕೆಂದು ಹೇಳಿದ್ದೆ. ಅದರಂತೆಯೇ ನಡೆಸುತ್ತಿರು. ಸಾಕ್ಷಾತ್ಕಾರವಾಗುತ್ತದೆ.
ಎಲೆ-ಅಡಿಕೆ, ತಂಬಾಕು ಮೊದಲಾದ ಯಾವುದೇ ವ್ಯಸನವಿರಬಾರದು.
ಎಲ್ಲರೂ ಒಟ್ಟಾಗಿ ಇರಿ. ಶ್ರವಣ ಮೊದಲಾದವುಗಳಲ್ಲಿ ಮನಸ್ಸು ಇರಬೇಕು. ಎಲ್ಲರೂ ಸುಖವಾಗಿರಿ.
ಶ್ರೀಧರ

೨. ನಿಯಮಬದ್ಧತೆಯೇ ತಪ. ಆದಷ್ಟು ಬೇಗ ಎದ್ದು ಸ್ನಾನದ ನಂತರ ಭಿಕ್ಷೆಯವರೆಗಿನ ಸಮಯ ಏಕಾಂತದಲ್ಲಿ ಕಳೆಯಬೇಕು. ಇದರಲ್ಲಿ ಧ್ಯಾನ ಅಥವಾ ಜಪದ ಹೊರತು ಮತ್ತೇನೂ ಇರಬಾರದು. ಆದರೆ ತನ್ಮಧ್ಯೆ ಸೇವಾಕಾರ್ಯ ಪಾಲಿಗೆ ಬಂದಾಗ ಮಾತ್ರ ಅದೊಂದು ವಿಘ್ನವೆಂದು ಪರಿಗಣಿಸಬಾರದು.
(ಇಸವಿ ಸನ ೧೯೪೮ರಲ್ಲಿ ಶ್ರೀ ಭಾಸ್ಕರ ಬುವಾ ರಾಮದಾಸಿ, ಸಜ್ಜನಗಡರವರಿಗೆ ಬರೆದ ಇನ್ನೊಂದು ಪತ್ರ)
||ಶ್ರೀರಾಮ ಸಮರ್ಥ||
೨೮-೦೬-೧೯೪೮
ಚಿ.ಭಾಸ್ಕರನಿಗೆ ಆಶೀರ್ವಾದ,
ನಿನ್ನ ಮತ್ತು ಅಯ್ಯಾನ ಪತ್ರ ಸಿಕ್ಕಿತು.
‘ನನ್ನ ಆಚರಣೆ ನಿಯಮಬದ್ಧ ಇರಬೇಕು ಮತ್ತು ನನ್ನಿಂದ ಉತ್ಕೃಷ್ಟ ತಪವಾಗಬೇಕು’ ಎಂದು ನಿನಗೇನು ಅನಿಸುತ್ತಿದೆಯೋ ಅದು ನಿನ್ನ ಪೂರ್ವಜನ್ಮದ ಇಚ್ಛೆಯ-ವಾಸನೆಯ ಮತ್ತು ಭಗವತ್ಕೃಪೆಯ ಒಂದು ದ್ಯೋತಕವಾಗಿದೆ. ಇರಲಿ.
ಮಗಾ! ನಿನ್ನ ಮೇಲೆ ಶ್ರೀರಾಮನ ಮತ್ತು ಶ್ರೀ ಸಮರ್ಥರ ಪೂರ್ಣ ಕೃಪೆಯಾಗಲಿ.
ನನ್ನನ್ನು ಮತ್ತೆ ಸಂಧಿಸುವವರೆಗೆ ನಿನಗೆ ಶ್ರೀದಾಸಬೋಧದ ಪಾರಾಯಣೆ ಮತ್ತು ಶ್ರೀತಾರಕಮಂತ್ರದ ಜಪ ಎಷ್ಟು ಹೆಚ್ಚು ಮಾಡಲು ಶಕ್ಯವಿದೆಯೋ ಅಷ್ಟು ಮನಸ್ಸಿಟ್ಟು ಮಾಡು. ಸಾಧನೆಯಲ್ಲಿ ಆಗಾಗ ಉತ್ಸಾಹ ಹೆಚ್ಚಿಸುತ್ತ ಇರಬೇಕು. ಮನಸ್ಸಿನಲ್ಲಿ ಹೆಚ್ಚಿನ ಸಮಾಧಾನವಿರಬೇಕು. ಹೃದಯದಲ್ಲಿ ಆನಂದದ ನೆರೆ ತುಂಬಿ ಹರಿಯಬೇಕು. ಆರೋಗ್ಯವೂ ಉತ್ತಮವಾಗಿರಬೇಕು. ನಿಯಮಬದ್ಧತೆಯೇ ತಪ. ಆದಷ್ಟು ಬೇಗ ಎದ್ದು ಸ್ನಾನದ ನಂತರ ಭಿಕ್ಷೆಯವರೆಗಿನ ಸಮಯ ಏಕಾಂತದಲ್ಲಿ ಕಳೆಯಬೇಕು. ಇದರಲ್ಲಿ ಧ್ಯಾನ ಅಥವಾ ಜಪದ ಹೊರತು ಮತ್ತೇನೂ ಇರಬಾರದು. ಆದರೆ ತನ್ಮಧ್ಯೆ ಸೇವಾಕಾರ್ಯ ಪಾಲಿಗೆ ಬಂದಾಗ ಮಾತ್ರ ಅದೊಂದು ವಿಘ್ನವೆಂದು ಪರಿಗಣಿಸಬಾರದು. ಧ್ಯಾನ-ಜಪದಷ್ಟೇ ಅದಕ್ಕೂ ಮಹತ್ವವಿದೆ. ಭೋಜನೋತ್ತರ ಕೆಲಕಾಲ ವಿಶ್ರಾಂತಿಯಲ್ಲಿ ಕಳೆಯಬೇಕು. ನಂತರ ಆಚಮನ ಮಾಡಿ ಶ್ರೀಗ್ರಂಥರಾಜದ ಪಾರಾಯಣೆ ಪ್ರಾರಂಭಿಸಬೇಕು. ಆಧ್ಯಾತ್ಮ ರಾಮಾಯಣವೂ ಬಾಯಿಪಾಠ ಇದ್ದರೆ ಒಳ್ಳೆಯದು. ಪದ್ಧತಿ ಮತ್ತು ಅನುಕೂಲತೆಯಂತೆ ಸಂಧ್ಯಾಕಾಲದ ನಂತರ ಅಥವಾ ಮೊದಲು ಅಷ್ಟಕ ಹೇಳಬೇಕು. ಇದರ ನಂತರ ಭಜನೆ ಅಥವಾ ಪ್ರದಕ್ಷಿಣೆ ಮಾಡಿ ಆರತಿಯ ವೇಳೆ ಹಾಜರಿರಬೇಕು. ಶೆಜಾರತಿಯ(ರಾತ್ರಿಯ ಪೂಜೆ) ನಂತರ ಆತ್ಮವಿಚಾರ ಮತ್ತು ಜಪದಲ್ಲಿ ಕೆಲ ಸಮಯ ಕಳೆದು ವಿಶ್ರಾಂತಿ ತೆಗೆದುಕೊಳ್ಳಬೇಕು. ಆಹಾರದ ನಿಯಮವನ್ನು ಆರೋಗ್ಯಕ್ಕನುಗುಣವಾಗಿ ಸಾತ್ವಿಕ ಮತ್ತು ನಮ್ಮ ನಿಯಮಗಳಿಗೆ ಬಾಧಕವಾಗದಂತೆ ಇಟ್ಟುಕೊಳ್ಳಬೇಕು. ನಿನ್ನ ‘ಅಹಂಸ್ಫೂರ್ತಿಯಲ್ಲೇ ಶ್ರೀಗುರುಪರಮಾತ್ಮನ ನಿತ್ಯ-ನಿರಾಕಾರ ಸಚ್ಚಿದಾನಂದರೂಪ ಅಖಂಡ ಅದ್ವಿತೀಯವಾಗಿ ಯಾವಾಗಲೂ ಬೆಳಗುತ್ತಿದೆ’ ಎಂಬ ದೃಢ ನಿಶ್ಚಯವನ್ನು ಮಾತ್ರ ಶ್ವಾಸೋಚ್ಛ್ವಾಸದಂತೆ ಅವಿರತವಾಗಿಡು. ಪ್ರಸಂಗಕ್ಕನುಗುಣವಾಗಿ ಸಮಯಪ್ರಜ್ಞೆ ಇರಬೇಕು.
ಶ್ರೀಸಮರ್ಥ ಸಂಪ್ರದಾಯರೂಪಿ ಪದಕಕ್ಕೆ ಶೋಭೆ ತರುವ ನೀವೆಲ್ಲರೂ ಅಮೂಲ್ಯ ರತ್ನಗಳೆಂದೇ ನಿರ್ಣಯವಾಗುವಂತಾಗಲಿ. ಎಲ್ಲರಿಗೂ ನನ್ನ ಆಶೀರ್ವಾದ.
||ಸರ್ವೇ ಜನಾಃ ಸುಖಿನೋ ಭವಂತು||
ಶ್ರೀಸಮರ್ಥಚರಣರಜ
ಶ್ರೀಧರ

RELATED ARTICLES  ಅರಿವು…..