ಒಂದು ಹೆಣ್ಣು ಮಗು ಹುಟ್ಟಿತೆಂದರೆ ಅದು ಹೆತ್ತವರಿಗೆ ತವರು ಮನೆಗೆ ಭಾರ ಎನ್ನುವ ಭಾವನೆ ಹೊಂದುವ ಕಾಲ ಒಂದು ಕಾಲದಲ್ಲಿತ್ತು. ಆಗ ಹೆಣ್ಣು ಮಕ್ಕಳನ್ನು ಮದುವೆ ಮಾಡಬೇಕು ಎಂದರೆ ವರದಕ್ಷಿಣೆ ಎನ್ನುವ ಭೂತ ಬೆನ್ನ ಮೇಲೆ ಕೂತಿರುತಿತ್ತು. ಕಾಲ ಚಕ್ರ ತಿರುಗಿದೆ. ಈಗ ಹೆಣ್ಣು ಮಕ್ಕಳ ಜೀವನ ಮೊದಲಿನಂತೆ ಇಲ್ಲ. ವಿದ್ಯೆ, ಉದ್ಯೋಗ ಸ್ವಂತಿಕೆ ಸ್ವಾತಂತ್ರ್ಯ ಹೀಗೆ ಎಲ್ಲವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಅವಳಲ್ಲಿ ಹೇಳಲಾರದ ಅಳುಕೊಂದು ಇವತ್ತಿಗೂ ಇದೆ. ಅಲ್ಲಿ ಇಲ್ಲಿ ಒಂದೊಂದು ಹೆಣ್ಣು ಮಗು ಗಂಡಿನಷ್ಟೆ ಬಲಿಷ್ಟತೆಯನ್ನು ಪ್ರದರ್ಶಿಸಬಹುದು. ಆದರೆ ಹೆಣ್ಣಿಗೆ ಪುರುಷ ಚೌಕಟ್ಟು ಸಡಿಲವಾಗಿದ್ದರೂ ಸಹ ತನಗೆ ತಾನೊಂದು ಚೌಕಟ್ಟನ್ನು ತನಗಾಗಿ ಹಾಕಿಕೊಳ್ಳಲೇ ಬೇಕಿದೆ.
ಸಮಾಜ ಎಷ್ಟು ಮುಂದೋಡುತ್ತಿದೆಯೋ ಅಷ್ಟೆ ನ್ಯಾಯ ಎನ್ನುವುದು ಕೆಳಗಿಳಿಯುತ್ತಿದೆ. ಹಾಗಾಗಿ ಸ್ತ್ರೀ ಮನೆಯಿಂದ ಹೊರಗೆ ಕಾಲಿಟ್ಟ ಕ್ಷಣದಿಂದ ತಾನು ಮೊದಲಿನಂತೆ ಇದ್ದು ಮನೆಗೆ ಸೇರುತ್ತೇನೆ ಎನ್ನುವ ಯಾವ ಭರವಸೆಯನ್ನು ಇಟ್ಟು ಕೊಳ್ಳಲಾಗದ ಪರಿಸ್ಥಿತಿ ಎದುರಾಗುತ್ತಿದೆ. ಇದೆಲ್ಲವು ವಿಕೃತ ಮನಸ್ಸಿನ ಕೈಯ್ಯೊಳಗೆ ಸಿಕ್ಕಿ ಹಾಕಿಕೊಂಡಾಗಿನ ಆ ಹೆಣ್ಣಿನ ಸ್ಥಿತಿಗಳು ನೋವು ಹೇಳಲು ಸಾಧ್ಯವಾಗದು ಬಿಡಿ. ಆದರೆ ಮನೆಯ ಒಳಗಡೆ ಏನು ನಡೆಯುತ್ತದೆ ಎಂದು ಹೊರ ಜಗತ್ತಿಗೆ ಸಾಧಾರಣವಾಗಿ ಯಾರಿಗೂ ತಿಳಿಯುವುದಿಲ್ಲ.
ಹೆತ್ತವರೆ ಮಕ್ಕಳನ್ನು ಕೀಳಾಗಿ ದಂಢಿಸುವುದು ಕಂಡಾಗ ನಿಜಕ್ಕೂ ಭಯವಾಗುತ್ತದೆ. ಮೊನ್ನೆಯೊಂದು ವಿಡಿಯೋ ವಾಟ್ಸಾಪಿನಲ್ಲಿ ಬಂದಿತ್ತು. ತನ್ನ ಮಗುವನ್ನು ಮನ ಬಂದಂತೆ ಥಳಿಸುತ್ತಿರುವುದು. ಅದನ್ನು ನೋಡಿದರೆ ಕರುಳು ಹಿಂಡುತ್ತದೆ. ಕೇವಲ ಹೆಣ್ಣು ಮಗುವೆಂದು ಇನ್ನು ಮಾತು ಬರದ ಆ ಮಗುವಿಗೆ ಹಾಗೆ ದಂಢಿಸುವುದು ನ್ಯಾಯವೇ. ಅದರಲ್ಲೂ ಹೆತ್ತವರೇ ತನ್ನ ಮಗುವಿಗೆ ಆ ರೀತಿಯಲ್ಲಿ ಹೊಡೆಯುವುದು ಒದೆಯುವುದು ಮಾಡಿದಾಗ ಆ ಮಗು ಯಾರಲ್ಲಿ ತನ್ನ ಅಳಲನ್ನು ಹೇಳಿಕೊಳ್ಳುವುದು. ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಗಾದೆಯಂತೆ ಆ ಮಕ್ಕಳ ಪರಿಸ್ಥಿತಿ.
ಯಾಕೆ ಹಾಗಾಗುತ್ತಿದೆ ಪ್ರಪಂಚ? ಹಿಂದಿನ ಕಾಲದಲ್ಲಿ ಬಡತನವಿದ್ದು ಆರು ಏಳು ಎಂಟು ಎಂದು ಸಾಲಾಗಿ ಹುಟ್ಟುವ ಮಕ್ಕಳಲ್ಲಿ ಹೆಣ್ಣು ಮಕ್ಕಳ ಪ್ರಮಾಣವೂ ಇರುತಿತ್ತು. ಆದರೂ ಆ ಹೆಣ್ಣು ಮಕ್ಕಳಿಗೆ ತಂದೆ ತಾಯಿಯಿಂದ ಈ ರೀತಿಯಾದ ವಿಕೃತ ಶಿಕ್ಷೆ ಕೊಡುತ್ತಿರಲಿಲ್ಲ ಎನ್ನಿಸುತ್ತದೆ. ಈಗಿನಷ್ಟು ಶಿಕ್ಷಣ ಆ ಹೆಣ್ಣು ಮಕ್ಕಳಿಗೆ ಇಲ್ಲವಾಗಿತ್ತು. ವರದಕ್ಷಿಣೆಯಂತಹವು ಎದುರಾದರೂ ಅದನ್ನು ಹೆತ್ತವರು ಎದುರಿಸುತ್ತಿದ್ದರೂ ಅಥವಾ ಮದುವೆ ವಯಸ್ಸಿಗೆ ಬರುವಲ್ಲಿಗೆ ಆ ಹೆಣ್ಣು ಮಕ್ಕಳಿಗೂ ಪರಿಸ್ಥಿತಿಯ ಅನುಭವವಾಗಿರುತಿತ್ತು. ಆದರೆ ಈ ಪುಟ್ಟ ಪುಟ್ಟ ಮಕ್ಕಳಿಗೆ ದಂಢಿಸುವುದು ಯಾವ ಪುರುಷಾರ್ಥಕ್ಕಾಗಿ?
ಅಮ್ಮ ಅಪ್ಪನ ಮಡಿಲಲ್ಲಿ ತನ್ನ ಬೆರಳನ್ನು ಬಾಯಲ್ಲಿ ಹಾಕಿ ಚೀಪುತ್ತಾ ಆಡುತ್ತಾ ನಲಿಯುವ ಕಾಲವದು. ಜಗತ್ತನ್ನು ಕಣ್ತೆರೆದು ಈಗತಾನೆ ನೋಡಬೇಕು ಎನ್ನುವಾಗ ಹೆತ್ತವರ ಹೊಡೆತ ಅವರನ್ನು ಯಾವ ರೀತಿಯಲ್ಲಿ ಬಾಧಿಸಬಹುದು ಎಂದು ಒಮ್ಮೆ ಕಲ್ಪಿಸಿದರೆ ನನಗಂತೂ ಬರೆಯುತ್ತಿರುವ ಈಗಲೂ ಮೈ ಜುಂ ಎನ್ನುತ್ತದೆ.
ಅದರಲ್ಲೂ ಈಗೀಗ ಅಪ್ಪ, ಅಣ್ಣ, ಸೋದರ ಮಾವ ಇಂತವರ ದೃಷ್ಟಿಯೇ ಹೆಣ್ಣು ಮಗುವಿಗೆ ಭಯ ಹುಟ್ಟಿಸುತ್ತಿದೆ. ಎಲ್ಲ ಪುರುಷರು ಕೆಟ್ಟವರು, ವಿಕೃತರು ಎಂದು ಹೇಳುವುದು ಸರಿಯಲ್ಲ. ಆದರೆ ಸಾವಿರದಲ್ಲಿ ನಾಲ್ಕು ಜನ ಹಾಗೆ ವಿಕೃತ ಮನಸ್ಸಿನವರಿದ್ದರೆ ಪುರುಷ ಸಮಾಜಕ್ಕೆ ಕಪ್ಪು ಚುಕ್ಕಿಯಾಗಿದೆ. ಇಡೀ ಸಮಾಜವೂ ಈ ವಿಚಾರದಲ್ಲಿ ತಲೆ ತಗ್ಗಿಸುವಂತಾಗಿದೆ.
ಹಾಗಾದರೆ ಇದೇಕೆ ಹಾಗಾಗುತ್ತಿದೆ. ಹೆತ್ತವರಿಗೆ ತನ್ನ ಮಗು, ತನ್ನ ರಕ್ತದ ಜೀವ ಎನ್ನುವ ಸಣ್ಣ ಪಾಶವೂ ಇರುವುದಿಲ್ಲವೇ? ಯಾವುದೋ ದೇಶದಲ್ಲಿ ಯಾರದೋ ಮಗುಗೆ ಖಾಯಿಲೆಯೋ, ಅಪಘಾತವೋ ಆಗಿರುವುದು ದೃಶ್ಯ ಮಾಧ್ಯಮದಲ್ಲಿ ನೋಡಿದಾಗ ನಮ್ಮ ಜೀವ ಮರುಗುತ್ತದೆ. ಅಂತಹದ್ದರಲ್ಲಿ ಈ ವಿಕೃತ ಮನಸ್ಸಿನ ಹೆತ್ತವರಿಗೆ ಒಂದಿಂಚು ತನ್ನ ಮಗು ಎನ್ನುವ ಕರುಣೆ ಕೂಡ ಇರುವುದಿಲ್ಲ ಎನ್ನುವುದು ನಿಜವಾಗಿ ದುಃಖಕರ ಸಂಗತಿ.
ಮಕ್ಕಳು ತಪ್ಪು ಮಾಡಿದಾಗ ತಿಳುವಳಿಕೆಗಾಗಿ ಚಿಕ್ಕದಾಗಿ ಒಂದೆರಡು ಪೆಟ್ಟು ಕೊಡುವುದು ಸಹಜವಾಗಿದೆ. ಆದರೆ ಜೀವವೇ ಹೋಗುವಂತೆ ಹೊಡೆಯುವುದು ಅಂದರೆ ಸಹಿಸುವುದು ಕಷ್ಟ. ಕಾನೂನು ಇದಕ್ಕೆ ಯಾವ ರೀತಿಯಲ್ಲಿ ತನ್ನ ಉತ್ತರ ನೀಡುತ್ತಿದೆ ತಿಳಿದಿಲ್ಲ. ಆದರೆ ಸಮರ್ಪಕ ಕಾನೂನು ಇಲ್ಲ ಎನ್ನುವುದು ನಿಜ. ತಮ್ಮದೇ ಮಕ್ಕಳಾದರೂ ಅಮಾನುಷವಾಗಿ ದಂಢಿಸುವ ಹೆತ್ತವರಿಗೆ ಆ ನೋವಿನ ಒಂದಂಶವಾದರೂ ಗೊತ್ತಾಗಬೇಕಿತ್ತು. ಆ ರೀತಿಯ ಕಾನೂನು ತರಬೇಕಿತ್ತು.
ಹೆತ್ತ ಮಗುವನ್ನು ಸಾಕಲಾಗದಿದ್ದರೆ ಎಲ್ಲಿಯಾದರೂ ಸಾಕಲು ಕೊಡಿ, ಇಲ್ಲವೇ ಬೀದಿಯಲ್ಲಾದರೂ ಬಿಟ್ಟುಬಿಡಿ. ವಿಕೃತವಾಗಿ ಅಮಾನುಷವಾಗಿ ದಂಢಿಸಬೇಡಿ ಎಂದು ಹೇಳಿಬಿಡಬೇಕು ಎನ್ನಿಸುತ್ತದೆ. ಆದರೆ ಆ ಮಾತನ್ನು ಆಡಿದಷ್ಟು ಜಿರ್ಣಿಸಿಕೊಳ್ಳುವುದು ಸುಲಭವಲ್ಲ ಎಂದು ಎಲ್ಲ ನಾಗರಿಕರಿಗೂ ಗೊತ್ತು. ಹಾಗಾಗಿ ನಾಗರಿಕ ಸಮಾಜ ಕಣ್ಣಿದ್ದೂ ಜಾಣ ಕುರುಡರಾಗುವಂತಾಗಿದೆ. ಬಾಲ ಜೀವಿಗಳ ಕಣ್ಣೀರು ಕೇವಲ ದಂಢಿಸುವವರಿಗೆ ಮಾತ್ರವಲ್ಲ ಇಡೀ ಮಾನವ ಕುಲಕ್ಕೆ ಒಂದು ಶಾಪವಾಗುತ್ತಿದೆ ಅನ್ನಿಸುತ್ತಿಲ್ಲವೇ? ಅವರಿಗೂ ಜೀವವಿದೆ. ಆ ಪುಟ್ಟ ಕಂದಮ್ಮಗಳನ್ನು ಅರಳಲು ಬಿಡಿ ಎನ್ನುವುದು ನನ್ನ ಪಾರ್ಥನೆಯಾಗಿದೆ.