FB IMG 1518785950515

ಲೇಖನ : ವಿನಾಯಕ ಬ್ರಹ್ಮೂರು.

ಚಪ್ಪಲಿ ಸವೆದಿದೆ, ಕಾಲ ಬದಲಾಗಿದೆ. ಮನೆ, ಕಚೇರಿ ಕೆಲಸ, ತೋಟ-ಗದ್ದೆ, ಹಬ್ಬ, ಸಡಗರ, ಸಂಭ್ರಮದಲ್ಲಿ ಬೆಳೆದ ಜೀವ ಕಳೆಗುಂದಿದೆ. ಪೆಟ್ರೋಲ್ ಖಾಲಿಯಾದ್ರೆ ಹಾಕಿಸ್ಬೋದು. ಪೆಟ್ರೋಲ್ ಪಂಪೇ ತೂತಾಗಿದ್ರೆ ಏನ್ಮಾಡೋದು ಅಲ್ವಾ?

ಮುಪ್ಪಿನ ಶೋಕವೇ? ಖಂಡಿತಾ ಅಲ್ಲ. ವಯಸ್ಸು ಅನ್ನೋದು ಗಡಿಯಾರದ ಮುಳ್ಳಿದ್ದಂಗೆ ಸ್ವಾಮಿ ಅಂತ ಭೋದಿಸಿದ ಮನುಷ್ಯ ನಾನು. ಅಂತಹುದ್ರಲ್ಲಿ ಮುಪ್ಪಾಯ್ತು ಎಂದು ಕೊರಗಿದರೆ ಇತರರಿಗಿಂತ ಮೊದಲು ನಾನೇ ನನ್ನನ್ನ ನೋಡ್ಕೊಂಡು ನಗೋ ಪ್ರಸಂಗ ಬರ‍್ಬೋದು. ಸಿಮೆಂಟ್ ಹಾಕಿ ಕಟ್ಟಿದ ಮನೆಗೇ ಫುಲ್‌ಟೈಮ್ ವೆಲಿಡಿಟಿ ಇರಲ್ಲ, ಭವಿಷ್ಯ ಹೇಳೋ ಜ್ಯೋತಿಷಿಗೇ ತನ್ನ ಆಯುಷ್ಯ ಗೊತ್ತಿರಲ್ಲ, ವೈದ್ಯೋ ನಾರಾಯಣೋ ಹರಿ: ಅಂತಾರಲ್ಲ.

ಅದೇ ಜೀವ ಉಳಿಸೋ ಡಾಕ್ಟ್ರು..ಅವ್ರಿಗೇ ತಮ್ಮ ಉಸಿರಾಟಕ್ಕೆ ಪೂರ್ಣವಿರಾಮ ಯಾವಾಗ ಬೀಳುತ್ತೆ ಅನ್ನೋದು ಗೊತ್ತಿರಲ್ಲ, ಈ ಪ್ರಪಂಚದಲ್ಲಿ ಯಾವುದಕ್ಕೂ ಫುಲ್‌ಟೈಮ್ ವ್ಯಾಲಿಡಿಟಿನೇ ಇಲ್ಲ. ನಾವು ಬದ್ಕಿರೋತನಕ ನಮ್ ಜೊತೆಗಿರೋದು ಕೇವಲ ನಂಬಿಕೆ, ವಿಶ್ವಾಸ, ಪ್ರೀತಿ ಮಾತ್ರ ಅಂತ ಹೇಳ್ತಾರೆ. ಆದ್ರೆ ನನ್ನ ಮೀಸೆ ಚಿಗುರುವ ಕಾಲದಲ್ಲಿದ್ದ ಮಾನವೀಯ ಸಂಬಂಧಗಳು, ಮೌಲ್ಯಗಳು, ಈಗ್ಯಾಕೆ ಏದುಸಿರು ಬಿಡ್ತಿವೆ?
ಯಸ್.. ಕಾಲ ಬದಲಾಗಿದೆ, ಮನುಷ್ಯ ಬದಲಾಗಿದ್ದಾನೆ, ಜೀವನಶೈಲಿ ಬದಲಾಗಿದೆ, ಆದ್ರೆ ಯಾವುದೂ ಹೊಸತನ ಎನಿಸುತ್ತಿಲ್ಲ. ಆ ಬದಲಾವಣೆ ಉತ್ತಮ ರೀತಿಯದ್ದಾಗಿದ್ರೆ ಹೊಸತನವೆಂದೆನಿಸುತ್ತಿತ್ತು. ಆದ್ರೆ ಇಲ್ಲಿ ನಮ್ಮತನವೆನ್ನುವುದನ್ನೇ ಎಲ್ಲರೂ ಮರೆತಂತಿದೆ. ಸಂಪ್ರದಾಯಗಳು ಮೂಲೆಗೆ ಬಿದ್ದಿವೆ. ಬದುಕಿನ ಗುಟ್ಟಿಗೆ ಬೇಕಾದ ಒಗ್ಗಟ್ಟು ರಟ್ಟಾಗಿ ಬೆಂಕಿ ಹತ್ತಿಕೊಂಡಿದೆ. ರಕ್ತ ಸಂಬಂಧಕ್ಕೆ ಮೈಲೇಜ್ ಕಡಿಮೆ.. ಸಂಸಾರದಲ್ಲಿ ಸಾರವೇ ಇಲ್ದೇ ’ಸಂ’ಥಿಂಗ್ ರಾಂಗ್ ಆಗಿದೆ.

RELATED ARTICLES  ತೃಣಕ್ಕೆ ಸಮಾನ ನೀ ಮನುಜ

ಮಹಾಕಾವ್ಯದಂತಿದ್ದ ಕುಟುಂಬಗಳು ಈಗ ಚುಟುಕು ಚುಟುಕುಗಳಾಗಿ ಪರಸ್ಪರ ಕುಟುಕಿಕೊಳ್ಳುತ್ತಾ ಬಾಂಧವ್ಯದ ಕೊಂಡಿಯೇ ಕಳಚಿ ಬೀಳ್ತಿವೆ. ಯಾಕೆ ಹೀಗೆ?
ನನ್ನಂತೆ ಅರವತ್ತು ದಾಟಿದವರೆಲ್ಲರ ಮನಸ್ಸಿನ ಮೂಲೆಯಲ್ಲಿಯೂ ಇಂತಹುದ್ದೊಂದು ಪ್ರಶ್ನೆ ಹರಿದಾಡ್ತಾ ಇರಬಹುದಾ? ಗೊತ್ತಿಲ್ಲ. ನಾನು ಇರುವ ಸ್ಥಿತಿಯನ್ನೇ ಅವರೆಲ್ಲರೂ ಅನುಭವಿಸ್ತಾ ಇದ್ದಾರಾ? ಗೊತ್ತಿಲ್ಲ.
ಆದ್ರೆ ನನ್ನ ಮಕ್ಕಳಿಗೇಕೆ ನಾನೆಂದರೆ ಈಗ ಮುಜುಗರ? ಮೊದಲೆಲ್ಲಾ ಹೆಗಲ ಮೇಲೆ ಹೊತ್ತು ಸಾಗುವಾಗ ಪಪ್ಪಾ ಪಪ್ಪಾ ಅಂತ ಮುದ್ದು ಮುದ್ದಾಗಿ ಕೂಗ್ತಾ ತರಲೆ ಪ್ರಶ್ನೆಗಳನ್ನ ಕೇಳ್ತಿದ್ದ ಮಗು ಈಗೇಕೆ ನನ್ನ ದೂರ ತಳ್ತಾ ಇದೆ? ಜಾತ್ರೆಯಲಿ ಬಲೂನು ತೆಗೆಸಿಕೊಟ್ಟಾಗ ಜಾತ್ರೆಪೇಟೆಯಲ್ಲೇ ದೀಪಾವಳಿ ಆಚರಿಸುತ್ತಿದ್ದ ಮಕ್ಕಳು ಈಗ ನನ್ನನ್ನೇ ಬಲೂನಿನಂತೆ ಆಚೆ ಈಚೆ ಹಾರಿಸ್ತಿದ್ದಾರೆ. ಮಾತು ಮಾತಿಗೂ ಯಾಕೆ ಅಷ್ಟೊಂದು ಮುನಿಸು? ಏನೇ ಕೇಳಿದ್ರೂ ’ನಿಂಗೇನ್ ಗೊತ್ತಾಗತ್ತೆ? ಸುಮ್ನೆ ಸೈಡಲಿರಪ್ಪ’ ಅಂತ ಚಕ್ಕಂತ ಹೇಳಿಬಿಡ್ತಾರಲ್ಲ.. ನಾನು ತಾತ ಆಗಿದ್ದೇ ದೊಡ್ಡ ತಪ್ಪಾಯ್ತಾ? ಮುಪ್ಪಲ್ಲಿ ಪಾಯಸನೂ ಉಪ್ಪುಪ್ಪು ಅಂತ ಅನಿಸಿದ್ರೆ ಬಹುಶ: ಅದು ತನ್ನ ಕುಟುಂಬದ ಪ್ರೀತಿ ಸಿಗದ ಸಂದರ್ಭದಲ್ಲಿ ಮಾತ್ರ.

RELATED ARTICLES  ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಮಕ್ಕಳಿಗೆ ಪರಿಸರ ಅಧ್ಯಯನ ಶಿಬಿರ

ಅಲ್ರಪ್ಪ.. ನೀವೆಲ್ಲಾ ನನಗಿಂತ ತುಂಬಾ ಜಾಸ್ತಿ ಓದಿದ್ದೀರಾ. ಈಗಿನ ಜನರೇಶನ್‌ಗೆ ತಕ್ಕಂತೆ ಬದುಕ್ತಿದ್ದೀರಾ.. ಚಿಕ್ಕ ಚೊಕ್ಕ ಕುಟುಂಬ ಸಾಕು ಅಂದ್ಕೋತೀರಾ, ಮನಸ್ಸಿಗೆ ಬಂದ ಕಡೆ ಹೋಗ್ತೀರಾ, ಹೊತ್ತಲ್ಲದ ಹೊತ್ತಲ್ಲಿ ಮನೆಗೆ ಬರ್ತೀರಾ, ಆಚರಣೆ ಮರಿತೀರಾ, ನಿಮ್ಮಿಷ್ಟದಂತೆ ನೀವಿರ್ತೀರಾ.. ಇರ್ರಯ್ಯ ಇರಿ.. ಹಂಗೇನೆ ಇರಿ. ನಂಗೂನು ವಯಸ್ಸಾಯ್ತು, ಈ ಹಿರಿ ಜೀವ ಕಿರಿಕಿರಿ ಅನಿಸೋದು ನಿಮ್ಮ ತಪ್ಪಲ್ಲ. ಮುದುಕನಾದೆನಲ್ಲ ನನ್ನ ತಪ್ಪದು. ಅಲ್ರಯ್ಯ, ನಂಗೆ ನೀವ್ ನನ್ನನ್ನ ಬೈತೀರಾ ಅನ್ನೋ ವಿಷಾದಕ್ಕಿಂತ ಮುಂದೊಮ್ಮೆ ನೀವು ನನ್ನ ಸ್ಥಾನದಲ್ಲಿದ್ದಾಗ ನಿಮ್ಮ ಮಕ್ಕಳು ನಿಮ್ಮನ್ನ ಇದೇ ಥರ ಟ್ರೀಟ್ ಮಾಡಿದ್ರೆ ನೀವೇಗೆ ಆ ಸಂಕಟವನ್ನ ಸಹಿಸಿಕೊಳ್ತೀರಾ ಅನ್ನೋದೇ ನನ್ನನ್ನ ಹೆಚ್ಚು ಕಾಡ್ತಿದೆ.

ನನ್ನೆಲ್ಲಾ ಮಕ್ಕಳು ತಮ್ಮ ಸ್ವಂತ ಕಾಲಿನಲ್ಲಿ ನಿಂತಿದ್ದಾರೆ ನಿಜ, ಆದರೆ ನಡುಗುತಿರುವ ನನ್ನ ದೇಹಕ್ಕೆ ಹೆಗಲಾಗಲು ಅವರಿಗೇಕೆ ಮನಸ್ಸು ಬರ‍್ತಿಲ್ಲ? ಬೆಂದ ಜೀವದ ಬಲ ಇಂಗಿ ಹೋಗಿದೆ ಕಣ್ರಯ್ಯ. ಹಸಿ ಹಸಿ ಭರವಸೆ ಹುಸಿ ಗಾಳದಲ್ಲಿ ಸಿಲುಕಿ ಹಸಿದೊಡಲ ಸುಡುತ್ತಿದೆ..! ನಿಮ್ಮಿಂದ ಬೇರೇನೂ ಬಯಸಲ್ಲ. ಮಣ್ಣಲ್ಲಿ ಮಣ್ಣಾಗುವತನಕ ಒಂದು ಹಿಡಿಯಷ್ಟು ಪ್ರೀತಿ ಕೊಡ್ರಯ್ಯ.

ಹ್ಮ್ಂ.. ಬದುಕಿನ ಮೊದಲಾರ್ಧವನ್ನ ಜಂಜಾಟಗಳು ನುಂಗಿಬಿಡ್ತು. ಧ್ವಿತಿಯಾರ್ಧದಲ್ಲಿ ಚಿಂತೆಯೇ ಹಾಸಿಗೆಯಾಗ್ತಿದೆ. ಜೀವನದುದ್ದಕ್ಕೂ ಶ್ರಮಿಸಿದ್ದೇನು ಎನ್ನುವ ಪ್ರಶ್ನೆಗೆ ಉತ್ತರಗಳಿವೆ. ಆದರೆ ಗಳಿಸಿದ್ದೇನು ಎನ್ನುವ ಪ್ರಶ್ನೆಗೆ ಉತ್ತರವೇಕಿಲ್ಲ?