muralidhar 2
ಪ್ರೀತಿ, ಮತ್ತು ದ್ವೇಷ ಎಂಬ ಎರಡು ಗುಣಗಳು ಮನುಷ್ಯನಲ್ಲಿರುವ ಗುಣಗಳು. ಪ್ರೀತಿ ಎಂಬ ಗುಣವು ಸ್ವಾಭಾವಿಕವಾಗಿ ಹುಟ್ಟಿನಿಂದ ಬಂದರೆ, ದ್ವೇಷ ಎಂಬ ಗುಣವು ಹುಟ್ಟಿದ ಮನೆಯ ವಾತಾವರಣ, ಬೆಳೆಯುವ ಪರಿಸರ, ಹವ್ಯಾಸದಿಂದ ಬರುವಂತಹ ಗುಣ. ಮಕ್ಕಳಲ್ಲಿ ಯಾವುದೇ ರೀತಿಯ ದ್ವೇಷ ಇರುವುದಿಲ್ಲ ಮಕ್ಕಳು ಯಾರನ್ನು ಕಂಡರೂ ಪ್ರೀತಿಯಿಂದ ನೋಡುತ್ತವೆ, ಹತ್ತಿರ ಬರುತ್ತವೆ. ಪ್ರೀತಿಯಿಂದ ಮಾತನಾಡಿಸಿದರೆ ಸಂತೋಷ ಪಡುತ್ತವೆ. ಪ್ರೀತಿ ತೋರಿಸುತ್ತಾರೆಂದು ತಿಳಿದರೆ, ಕರೆದ ತಕ್ಷಣ ಒಡೋಡಿ ಬರುತ್ತವೆ. ಆದರೆ ಒಂದು ಸಲ ಮಕ್ಕಳನ್ನು ಕೋಪದಿಂದ ಅಥವಾ ದ್ವೇಷದಿಂದ ನೋಡಿದರೆ ಆ ಮಕ್ಕಳು ಹತ್ತಿರ ಸುಳಿಯುವುದೇ ಇಲ್ಲ. ಅಂದರೆ, ಮನುಷ್ಯ ಹುಟ್ಟಿದಾಗಿನಿಂದ ಸಾಯುವವರೆಗೂ ಎಲ್ಲರಲ್ಲೂ ಪ್ರೀತಿಯನ್ನು ಬಯಸುತ್ತಾನೆ. ಪ್ರೀತಿಯನ್ನೂ ಸಹ ಮಾಡುತ್ತಾನೆ ವಿನಾಕಾರಣ ದ್ವೇಷ ಕಟ್ಟಿಕೊಳ್ಳಲು ಬಯಸುವುದಿಲ್ಲ. ಎಲ್ಲರಿಗೂ ಪ್ರೀತಿಯಿಂದ ಕೂಡಿರುವ ಪ್ರಪಂಚ ಬೇಕು. ಪ್ರೀತಿ ಎಲ್ಲಿದೆಯೋ ಅಲ್ಲಿ ಶಾಂತಿ, ಸಹನೆ, ಮನೆ ಮಾಡಿರುತ್ತದೆ. ಪ್ರೀತಿ ಎಂಬುದು ಮನುಷ್ಯನ ಹೃದಯಾಂತರಾಳದಿಂದ ಬರುವ ಅವ್ಯಕ್ತ ಭಾವನೆಯಾಗಿದೆ. “ಪ್ರೀತಿ ಮೂಡಲು ಕಾರಣವೇ ಬೇಕಿಲ್ಲ ಆದರೆ ಹೃದಯವಂತಿಕೆ ಬೇಕು, ಆದರೆ ದ್ವೇಷ ಮೂಡಲು ಯಾವುದಾದರೂ ಸಣ್ಣ ಕಾರಣವಾದರೂ ಬೇಕು ಆದರೆ ಹೃದಯವಂತಿಕೆ ಬೇಡ”.

ಪ್ರೀತಿ ಎಂಬುದು ಬಹು ವಿಶಾಲವಾದ ಮನಸ್ಸಿನ ಭಾವನೆ. ತಂದೆ ತಾಯಿಯ ಪ್ರೀತಿ, ಅಣ್ಣ ತಮ್ಮ, ಅಣ್ಣ ತಂಗಿ, ಅಕ್ಕ ತಂಗಿ, ಗಂಡ ಹೆಂಡತಿ, ಗೆಳೆಯರಲ್ಲಿ, ಮನುಷ್ಯ ತನ್ನ ಪ್ರೀತಿಯನ್ನು ವ್ಯಕ್ತಗೊಳಿಸುತ್ತಾನೆ. ಇದರಲ್ಲಿ ಎಲ್ಲಾ ರೀತಿಯ ಪ್ರೀತಿಯೂ ಪವಿತ್ರವಾದದ್ದು. ಪ್ರೀತಿಯೆಂಬುದು ಯಾರಲ್ಲಿ ಯಾವಾಗ ಬೇಕಾದರೂ ಮನೆ ಮಾಡಬಹುದು. ಹೆತ್ತವರು ಹಾಗೂ ಒಡಹುಟ್ಟಿದವರ ಪ್ರೀತಿ ಹುಟ್ಟಿನಿಂದ ಬಂದಿರುತ್ತದೆ. ಆದರೆ ಬೇರೆಯವರ ಒಡನಾಟದಿಂದಲೂ ಪ್ರೀತಿ ಎಂಬುದು ಮನೆ ಮಾಡುತ್ತದೆ. ಒಬ್ಬ ಹುಡುಗ ಮತ್ತು ಹುಡುಗಿ ಮೊದಲು ಸ್ನೇಹಿತರಾದರೆ, ನಂತರದ ದಿನಗಳಲ್ಲಿ, ಅವರಲ್ಲಿ ಅವರಿಗೆ ಅರಿವಿಲ್ಲದಂತೆ ಪ್ರೀತಿ ಮನೆಮಾಡುತ್ತದೆ. ಇದು ಕೇವಲ ಗಂಡು ಹೆಣ್ಣಿಗೆ ಮಾತ್ರ ಸಂಬಂಧಿಸಿದ್ದಲ್ಲ. ಹುಡುಗ ಇನ್ನೊಬ್ಬ ಹುಡುಗನಲ್ಲಿ ಅಥವಾ ಹುಡುಗಿಯು ಇನ್ನೊಬ್ಬಳು ಹುಡುಗಿಯಲ್ಲಿ ಸ್ನೇಹವಾದರೆ, ಅದು ಕೆಲವೊಮ್ಮೆ ಬಿಟ್ಟಿರಲಾರದಂತಹ ಸ್ನೇಹಕ್ಕೆ ತಿರುಗಿ, ಪ್ರಾಣ ಸ್ನೇಹಿತರಂತಾಗುತ್ತಾರೆ. ಇಬ್ಬರಲ್ಲೂ ಒಂದು ಕ್ಷಣ ಒಬ್ಬರೊನ್ನೊಬ್ಬರು ಬಿಟ್ಟಿರಲಾರದಂತ ನಂಟು ಬೆಳೆಯುತ್ತದೆ. ಇದು ಏಕೆ ಹೀಗಾಗುತ್ತದೆ ಎಂದರೆ ಇದಕ್ಕೆ ಕಾರಣವೇ ಇಲ್ಲ. ಪ್ರೀತಿ ಕುರುಡಾಗಿರುವುದರಿಂದ ಅದು ಎಲ್ಲಿ ಯಾವ ರೀತಿಯಲ್ಲಿ ಹುಟ್ಟುತ್ತದೆ ಎಂಬುದನ್ನು ತಿಳಿಯಲು ಸಾಧ್ಯವಿಲ್ಲ. ಮೊದಲು ಅಪರಿಚಿತರಾಗಿದ್ದು, ಯಾವುದೋ ಒಂದು ಸನ್ನಿವೇಶದಲ್ಲಿ ಭೇಟಿಯಾಗಿ ಅದು ಸ್ನೇಹಕ್ಕೆ ತಿರುಗಿ, ನಂತರ ಪ್ರೀತಿಯ ಭಾವನೆ ಉಂಟಾಗುತ್ತದೆ. ಜೀವಕ್ಕೆ ಜೀವ ಕೊಡುವ ಸ್ನೇಹಿತರು ಒದಗುವುದು ಪ್ರೀತಿಯ ಪ್ರಭಾವದಿಂದ. ದೂರವಾದಾಗ ಬೇಸರಗೊಳ್ಳುವುದು, ಯಾವ ಕೆಲಸಗಳನ್ನು ಮಾಡಲು ಮನಸ್ಸು ಬರದೇ ಇರುವುದು. ಇವೆಲ್ಲವೂ ತನ್ನ ಮನಸ್ಸಿನಲ್ಲಿ ಬಂದಿರುವ ಪ್ರೀತಿ ಎಂಬ ಭಾವನೆಯಿಂದ ಎಂದರೆ ತಪ್ಪಾಗಲಾರದು. ಕೆಲವು ಪ್ರಾಣಿಗಳನ್ನು ಅದರಲ್ಲೂ ಸಣ್ಣ ಸಣ್ಣ ಮರಿಗಳನ್ನು ನೋಡಿದರಂತೂ ಯಾವುದೋ ಒಂದು ಪ್ರೀತಿಯ ಭಾವನೆ ಬಂದು, ನೋಡಲು ಎಷ್ಟು ಮುದ್ದಾಗಿವೆ ಎಂದು ಅದನ್ನು ಹಿಡಿಯಲು ಹೋಗುತ್ತೇವೆ. ಅದಕ್ಕೆ ಪ್ರೀತಿ ಕುರುಡು ಎನ್ನಬಹುದು. ಬೇರೆಯವರನ್ನು ನೋಡಿದಾಕ್ಷಣ ಅವರಲ್ಲಿ ಏನೋ ಒಂದು ರೀತಿ ಆಕರ್ಷಣೆ ಉಂಟಾಗಿ ಪ್ರೀತಿ ತನಗರಿವಿಲ್ಲದಂತೆ ಮನಸ್ಸಿನಲ್ಲಿ ಮನೆ ಮಾಡುತ್ತದೆ. ಪ್ರೀತಿ ಮಾಡಲು ಕಾರಣವೇ ಬೇಕಿಲ್ಲ. ಕುರುಡಾದ ಪ್ರೀತಿ ಎಂಬ ಮಾಯೆಯಿಂದ ಪ್ರೀತಿಸಿ, ಮದುವೆಯಾಗಿ ನಂತರ ಸಣ್ಣ ಕಾರಣಕ್ಕೆ ವೈಮನಸ್ಯ ಬಂದು ದ್ವೇಷವು ಹುಟ್ಟಿ ಯಾರ ಮಾತೂ ಕಿವಿಗೆ ಕೇಳಿಸದಂತಾಗಿ, ಪ್ರೀತಿಸಿದವರನ್ನು ಹಿಂಸಿಸುವಂತಾಗಬಾರದು.

ಆದರೆ ಇದಕ್ಕೆ ವಿರುದ್ದವಾದ ಪದ ದ್ವೇಷ. ಮನಸ್ಸಿನಲ್ಲಿ ಪ್ರೀತಿ ಹುಟ್ಟಿದಂತೆ ದ್ವೇಷ ಹುಟ್ಟವುದಿಲ್ಲ. ಏಕೆಂದರೆ, ಕಾರಣವಿಲ್ಲದೆ ದ್ವೇಷವು ಮನಸ್ಸಿನಲ್ಲಿ ಮನೆ ಮಾಡುವುದಿಲ್ಲ. ಸುಮ್ಮ ಸುಮ್ಮನೆ ಯಾರನ್ನೂ ದ್ವೇಷಿಸಲು ಸಾಧ್ಯವಿಲ್ಲ. ದ್ವೇಷದ ಭಾವನೆ ಬರಲು ಅನೇಕ ಕಾರಣಗಳು ಉದ್ಭವವಾಗುತ್ತದೆ. ಮೊದಲು ಸಣ್ಣ ವೈಮನಸ್ಯ ಬಂದು ನಂತರದ ದಿನಗಳಲ್ಲಿ ಆ ವೈಮನಸ್ಯ ಬೆಳೆಯುತ್ತಾ ಹೋಗಿ, ಅದು ದ್ವೇಷಕ್ಕೆ ತಿರುಗಿ ಸೇಡಿಗೆ ಮೂಲವಾಗುತ್ತದೆ. ಕುಟುಂಬದಲ್ಲಿ ಅಸ್ತಿ ವಿಷಯಕ್ಕೆ ಜಗಳ ಬಂದು ಅದು ದ್ವೇಷಕ್ಕೆ ತಿರುಗುವ ಸಂಭವ ಇರುತ್ತದೆ. ಪರಸ್ಪರ ಸ್ನೇಹಿತರಾಗಿ ಅನ್ಯೋನ್ಯವಾಗಿದ್ದರೂ ಸಹ ಯಾವುದಾದರೂಂದು ವಿಷಯಕ್ಕೆ ವೈಮನಸ್ಯ ಬಂದಲ್ಲಿ, ಸ್ನೇಹ ಎಂಬುದು ಮರೆಯಾಗಿ ಶತೃ ಎಂಬ ಭಾವನೆ ಬರುತ್ತದೆ. ಸ್ನೇಹಿತರಾಗಿದ್ದಾಗ ಇದ್ದ ಪ್ರೀತಿ ಶತೃ ಅಂತ ಬಂದಾಗ ಆ ಪ್ರೀತಿ ಎಲ್ಲೋ ಮರೆಯಾಗಿ ಹೋಗುತ್ತದೆ. ಯಾರಾದರೂ ಮದ್ಯಸ್ಥಿಕೆ ವಹಿಸಿ ಪುನಃ ಅವರುಗಳನ್ನು ಒಂದು ಮಾಡಿದರೂ ಮೊದಲಿನಂತೆ ಪ್ರೀತಿ ಬರಲು ಸಾಧ್ಯವಿಲ್ಲ. ಇದು ಎಲ್ಲರಿಗೂ ಅನ್ವಯವಾಗುವ ಸಂಗತಿ, ತಂದೆ ತಾಯಿ, ಮಕ್ಕಳು, ಒಡಹುಟ್ಟಿದವರು ಹೀಗೆ ಎಲ್ಲರ ಭಾವನೆಯು ಬದಲಾಗುತ್ತದೆ. ಒಡೆದ ಹಾಲು ಮೊಸರು ಮಾಡಲು ಯಾವ ರೀತಿ ಬರುವುದಿಲ್ಲವೋ, ಒಡೆದ ಕನ್ನಡಿಯನ್ನು ಒಂದು ಮಾಡಲು ಯಾವ ರೀತಿಯಲ್ಲಿ ಸಾಧ್ಯವಿಲ್ಲವೋ ಅದೇರೀತಿಯಲ್ಲಿ, ಒಡೆದ ಮನಗಳನ್ನು ಎಂದಿಗೂ ಒಂದು ಮಾಡಲು ಸಾಧ್ಯವಿಲ್ಲ. ಹರಿದು ಹೋದ ಬಟ್ಟೆಗೆ ತೇಪೆ ಹಾಕಿದಂತೆ ಇಬ್ಬರನ್ನು ತಾತ್ಕಾಲಿಕವಾಗಿ ಒಂದು ಗೂಡಿಸಬಹುದು. ಆದರೆ ಆ ತೇಪೆ ಹಾಕಿರುವುದು ಬಹಳ ದಿನಗಳು ಬಾಳಿಕೆ ಬರುವುದಿಲ್ಲ. ಅದೇ ರೀತಿ ಒಂದು ಸಲ ಪ್ರೀತಿ ಬಿಟ್ಟು ಹೋದರೆ ಮೊದಲಿನಂತೆ ಪ್ರೀತಿ ಬರುವುದಿಲ್ಲ. ಬೇರೊಬ್ಬರ ಬಲವಂತಕ್ಕೆ ಮಾತಾಡಿಸುವಂತೆ ಆಗುತ್ತದೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಆದರೆ ಒಂದು ಸಲ ದ್ವೇಷ ಬಂದರೆ, ಅದು ಕಡೇವರೆವಿಗೂ ಇರುತ್ತದೆ. ಇಲ್ಲಿ ಯಾವ ಪ್ರೀತಿಗೂ ಸ್ಥಳ ಇರುವುದಿಲ್ಲ. ಒಬ್ಬರನ್ನೊಬ್ಬರು ಕಂಡರೆ ಆಗದಂತಹ ಮನಃಸ್ಥಿತಿ ನಿರ್ಮಾಣವಾಗುತ್ತದೆ. ಪ್ರೀತಿ ಹೊಮ್ಮಲು ಬಹಳ ಕಾಲ ತೆಗೆದುಕೊಳ್ಳುತ್ತದೆ. ಆದರೆ ದ್ವೇಷವು ಕ್ಷಣಾರ್ಧದಲ್ಲಿ ಹುಟ್ಟುತ್ತದೆ. ಚಿಕ್ಕ ಚಿಕ್ಕ ಘಟನೆಗಳಿಂದ ದ್ವೇಷ ಹುಟ್ಟಿ ನಂತರ ಅದು ಹೆಮ್ಮರವಾಗುವ ಅಪಾಯ ಎದುರಾಗುತ್ತದೆ. ಬೆಂಕಿಗೆ ತುಪ್ಪ ಸುರಿಯುವಂತೆ ಇನ್ನೊಬ್ಬರ ಮನಸ್ಸಿನಲ್ಲಿ ಬೇರೆಯವರು ದ್ವೇಷವನ್ನು ಅವರಲ್ಲಿ ವೃದ್ದಿಸಿ ಅನಾಹುತವಾಗಲು ಕಾರಣರಾಗುತ್ತಾರೆ. ಇದಕ್ಕೆ ಅವಕಾಶ ಕೊಡದಂತೆ ತನ್ನ ಮನಸ್ಸನ್ನು ಹತೋಟಿಯಲ್ಲಿಟ್ಟು ಮುನ್ನಡೆದಲ್ಲಿ ದ್ವೇಷಿಸುವ ಹೃದಯವೂ ಪ್ರೀತಿಯ ಕಡೆ ತಿರುಗಬಹುದು. ಆದರೆ ಇದನ್ನು ಕಾರ್ಯಗತಗೊಳಿಸುವುದು ಬಹಳ ಕಷ್ಟ. ಅನಿರೀಕ್ಷಿತ ಘಟನೆಗಳಿಂದಲೂ ವೇಗವಾಗಿ ದ್ವೇಷ ಹುಟ್ಟುತ್ತದೆ. ಈ ದ್ವೇಷ ಕಡಿಮೆ ಯಾಗುವುದೇ ಇಲ್ಲ ಎನ್ನಬಹುದು. ಉದಾಹರಣೆಗೆ ವಾಹನಗಳಲ್ಲಿ ಪ್ರಯಾಣಿಸುವಾಗ ಅಥವಾ ನಡೆದುಕೊಂಡು ಹೋಗುವಾಗ ಅಕಸ್ಮಾತ್ ಕೈ ಕಾಲು ತಗುಲಿದರೆ ಕ್ಷಮಿಸಿ ಎಂದು ಹೇಳಿ ಮುಂದಕ್ಕೆ ಹೋದರೆ ಯಾವುದೇ ಮನಸ್ತಾಪ ಬರುವುದಿಲ್ಲ. ಆದರೆ ಅದನ್ನೇ ಪ್ರತಿಷ್ಠೆಯಾಗಿ ಪರಿಗಣಿಸಿ ಜಗಳಕ್ಕೆ ನಿಂತರೆ ದ್ವೇಷವು ಬೆಳೆಯಲು ಸಾಧ್ಯವಾಗುತ್ತದೆ. ಕುಟುಂಬಗಳಲ್ಲಿ ವೈಮನಸ್ಯ ಬಂದರಂತೂ ಅದು ತಲ ತಲಾಂತರದವರೆಗೂ ನಿಲ್ಲುವ ಅಪಾಯ ಇರುತ್ತದೆ. ಕುಟುಂಬಗಳಲ್ಲಿ ಕೇವಲ ಊಟ ತಿಂಡಿಗೆ ಜಗಳವಾಗಿ ಎಷ್ಟೋ ಸಂಬಂಧಗಳು ಮುರಿದುಹೋಗಿರುವುದುಂಟು. ಸಣ್ಣ ವಿಷಯಕ್ಕೆ ಸಂಬಂಧ ಮುರಿದುಹೋದರೆ, ಇನ್ನು ದೊಡ್ಡ ದೊಡ್ಡ ವಿಷಯಗಳಲ್ಲಿ ಒಂದಾಗಲು ಸಾಧ್ಯವೇ? ಹಣಕಾಸಿನ ವಿಚಾರ ಇರಬಹುದು, ಆಸ್ತಿಯ ವಿಚಾರ ಇರಬಹುದು, ಹೀಗೆ ಅನೇಕ ವಿಚಾರಗಳು ಕುಟುಂಬಗಳಲ್ಲಿ ಒಡಹುಟ್ಟಿದವರ ಮನದಲ್ಲಿ ಬಿರುಕು ಮೂಡಿಸುತ್ತವೆ. ಬೀದಿಗಳಲ್ಲಿರುವ ನಲ್ಲಿಗಳಲ್ಲಿ ಬರುವ ನೀರನ್ನು ಹಿಡಿಯುವ ಮಾತಿನಿಂದು ಹಿಡಿದು, ಕಸ ಹಾಕುವ ಬಗ್ಗೆ, ಅಥವಾ ಯಾವುದಾದರೂ ಪ್ರಾಣಿ ಸಾಕಿದ್ದರೆ ಅದು ಏನಾದರೂ ಪಕ್ಕದ ಮನೆಯಲ್ಲಿ ಹೇಸಿಗೆ ಮಾಡಿದಾಗ ಆ ವಿಚಾರವು ವಿಕೋಪಕ್ಕೆ ತಿರುಗಿ ಎಲ್ಲಿಗೆ ಹೋಗಿ ಬೇಕಾದರೂ ಮುಟ್ಟಬಹುದು. ಕೆಲವೊಮ್ಮೆ ಮಕ್ಕಳ ಜಗಳ ಹಿರಿಯರಿಗೂ ತಲುಪಿ, ಎಷ್ಟೋ ವರ್ಷಗಳಿಂದ ಇದ್ದ ಸ್ನೇಹ ಅರೆಕ್ಷಣದಲ್ಲಿ ಮುರಿದು ಬೀಳಬಹುದು. ಕೋಪದಲ್ಲಿ ಏನು ಮಾಡುತ್ತಾರೆಂಬ ಅರಿವು ಇರುವುದಿಲ್ಲ. ದ್ವೇಷಾಗ್ನಿ ಮನಸ್ಸಿನಲ್ಲಿ ಸುಡುತ್ತಿದ್ದರೆ, ಯಾರು ಏನು ಹೇಳಿದರೂ ಕೇಳಿಸಿಕೊಳ್ಳುವ ವ್ಯವಧಾನ ಇರುವುದಿಲ್ಲ. ದ್ವೇಷದಿಂದ ಇನ್ನೊಬ್ಬರಿಗೆ ತೊಂದರೆ ಮಾಡಿ ತಾನೂ ತೊಂದರೆ ಅನುಭವಿಸುವ ಸಂಭವವೇ ಹೆಚ್ಚು. ಮಾತಿನಿಂದ ಬಂದ ದ್ವೇಷ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ, ಸೇಡು ತೀರಿಸಿಕೊಳ್ಳಲು ಏನು ಬೇಕಾದರೂ ಮಾಡಬಹುದು. ಕೋಪದಲ್ಲಿ ಕೊಯ್ದುಕೊಂಡ ಮೂಗು ಮತ್ತೆ ವಾಪಸ್ ಬರುವುದಿಲ್ಲ ಎಂಬುದನ್ನು ಅರಿಯುವುದೇ ಇಲ್ಲ. ದ್ವೇಷವನ್ನು ಸಾಧಿಸುವವರಿಗೆ ಕಿವಿ ಕಿವುಡಾಗಿರುತ್ತದೆ. ವ್ಯಕ್ತಿ ಶ್ರೀಮಂತನಾಗಿದ್ದಲ್ಲಿ ನಾನೇಕೆ ಬೇರೆಯವರ ಮುಂದೆ ಸೋಲಬೇಕು? ಎನ್ನುವ ಮನೋಭಾವ ಇದ್ದಲ್ಲಿ ಅಥವಾ ದೊಡ್ಡವರಾದರೆ ಚಿಕ್ಕವರ ಮುಂದೆ ನಾನೇಕೆ ಚಿಕ್ಕವರ ಮುಂದೆ ಸೋಲಬೇಕು ಎಂಬ ಒಣ ಪ್ರತಿಷ್ಠೆ ಬಂದು ದ್ವೇಷದಿಂದ ಸೇಡು ತೀರಿಸಿಕೊಳ್ಳುವ ಹಂತಕ್ಕೆ ಹೋಗಬಹುದು. ಹಣವಿದೆ ಅಧಿಕಾರವೂ ಇದೆ ಯಾರು ಏನೂ ಮಾಡಲು ಸಾಧ್ಯವಿಲ್ಲ ಎಂಬ ಅಹಂಕಾರ ಬಂದು, ಬೇರೆಯವರ ಮೇಲೆ ಹಗೆಯನ್ನು ಸಾಧಿಸಿ ಅವರಿಗೆ ತೊಂದರೆ ಕೊಟ್ಟರೆ ನಲುಗುವುದು ಮಾತ್ರ ಬಡಪಾಯಿ ಜೀವಗಳು ಮಾತ್ರ. ಒಂದು ಸಲ ಬಡವನಿಗೂ ಮತ್ತು ಶ್ರೀಮಂತನ ನಡುವೆ, ಅನಿರೀಕ್ಷಿತ ಘಟನೆ ನಡೆದು ಸ್ವಲ್ಪ ಮನಸ್ತಾಪ ಬಂದಲ್ಲಿ, ಬಡವನಾದವನು, ನನಗೇಕೆ ದೊಡ್ಡವರ ಸಹವಾಸ ಎಂದು ತನ್ನ ಪಾಡಿಗೆ ತಾನಿದ್ದರೂ, ಶ್ರೀಮಂತನಾದವನು ಒಂದು ಸಲ ಆದ ಘಟನೆಯನ್ನು ಮರೆಯದೆ ಅದನ್ನೇ ಹಿಡಿದು ಛಲ ಸಾದಿಸಿ ಬಡವನ ಜೀವನವನ್ನು ಹಾಳು ಮಾಡುವ ಪ್ರಸಂಗಗಳು ನಡೆಯುವುದುಂಟು. ಅದರೆ ಇಲ್ಲಿ ಕಷ್ಟವನ್ನು ಅನುಭವಿಸುವವರು ಬಡವರೇ ಆಗಿರುತ್ತಾರೆ.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ -

ದ್ವೇಷವು ಒಬ್ಬ ವ್ಯಕ್ತಿ ಅಥವಾ ಒಂದು ಪ್ರದೇಶಕ್ಕೆ ಸೀಮಿತವಾಗಿರುವುದಿಲ್ಲ. ಒಂದು ದೇಶದಿಂದ ಇನ್ನೊಂದು ದೇಶಕ್ಕೆ ದ್ವೇಷ ಎಂಬ ಕಿಚ್ಚು ಹರಡಿ ಯುದ್ದಗಳು ಸಂಭವಿಸಿರುವ ಉದಾಹರಣೆಗಳು ಸಾಕಷ್ಟಿವೆ. ಅನಾದಿ ಕಾಲದಿಂದಲೂ ಇಲ್ಲಿಯವರೆವಿಗೆ ಅನೇಕ ರಾಜ ಮಹಾರಾಜರುಗಳು ಒಬ್ಬರೊನ್ನೊಬ್ಬರು ದ್ವೇಷಿಸಿ ಆ ದ್ವೇಷಗಳಿಂದ ಹಲವಾರು ಯುದ್ದಗಳು ನಡೆದು ಅನೇಕ ರಾಜರ ಸಂತತಿಗಳೇ ನಾಶವಾಗಿವೆ. ಹಾಗೆಯೇ ಎಷ್ಟೋ ಕುಟುಂಬಗಳು ನಾಶವಾಗಿವೆ.

ದ್ವೇಷ ಮತ್ತು ಪ್ರೀತಿ ಎಂಬ ಭಾವನೆಗಳು ಪ್ರಾಣಿಗಳಲ್ಲಿಯೂ ಮನೆ ಮಾಡಿದೆ. ಅವುಗಳು ಸಹಮನುಷ್ಯರಂತೆ, ಪ್ರೀತಿಸಬಲ್ಲವು ಅಥವಾ ದ್ವೇಷವನ್ನು ಸಾಧಿಸಬಲ್ಲವು. ಯಾರಾದರೂ ಒಂದು ನಾಯಿಗೆ ಕಲ್ಲನ್ನು ಹೊಡೆದರೆ ಅದನ್ನು ಆ ನಾಯಿ ಮರೆಯುವುದೇ ಇಲ್ಲ. ಯಾವಾಗ ಕಂಡರೂ ಕಲ್ಲು ಹೊಡೆದವರನ್ನು ಕೆಕ್ಕರಿಸಿ ನೋಡುತ್ತಾ, ಬೊಗಳುತ್ತದೆ. ಒಂದು ಆನೆಯನ್ನು ಅಥವಾ ಇನ್ಯಾವುದೇ ಪ್ರಾಣಿಯನ್ನು ಕೆಣಕಿದಾಗ ಅದು ಸೇಡು ತೀರಿಸಿಕೊಳ್ಳುವವರೆಗೆ ಸುಮ್ಮನಿರುವುದೇ ಇಲ್ಲ. ಆದರೆ ಪ್ರಾಣಿಗಳಿಗೆ ದೈಹಿಕವಾಗಿ ತೊಂದರೆಯಾದರೆ ಮಾತ್ರ ಅವುಗಳು ಮೇಲೆ ಬೀಳಬಹುದು. ಆದರೆ ಮನುಷ್ಯನ ಮನಸ್ಸಿಗೆ ಅಥವಾ ದೈಹಿಕವಾಗಿ ಪೆಟ್ಟಾದಲ್ಲಿ ಅಂದರೆ, ಮಾತಿನ ವಿಚಾರದಲ್ಲಾಗಲೀ, ಅಥವಾ ನಡೆ ನುಡಿಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಹಗೆ ಎಂಬುದು ಮನಸ್ಸಿನಲ್ಲಿ ಉಳಿದು ಬಿಡುತ್ತದೆ. ಸಣ್ಣದಾಗಿದ್ದ ಮಾತುಗಳು ದೊಡ್ಡದಾಗಿ ನಂತರ ವಿಕೋಪಕ್ಕೆ ತಿರುಗಿ ಏನಾದರೂ ಅನಾಹುತ ಸಂಭವಿಸಬಹುದು. ಮನಸ್ಸಿನಲ್ಲಿ ದ್ವೇಷ ಭಾವನೆ ಬಿತ್ತಲು ಅವಕಾಶ ನೀಡದೆ ಯಾವಾಗಲೂ ಶಾಂತಿ ಸಂಯಮ, ಪ್ರೀತಿಗೆ ಜಾಗ ನೀಡಿದ್ದಲ್ಲಿ ಎಂತಹ ಅನಾಹುತವನ್ನಾದರೂ ತಪ್ಪಿಸಬಹುದು.

ಯಾರು ಏನು ತಪ್ಪು ಮಾಡಿದರೂ ಅವರನ್ನು ದ್ವೇಷಿಸಲು ಹೋಗದೆ, ಕ್ಷಮೆ ನೀಡುವ ಪ್ರವೃತ್ತಿ ಬೆಳೆಸಿಕೊಂಡಲ್ಲಿ ಅಂತಹ ಮನಸ್ಸಿನಲ್ಲಿ ದ್ವೇಷಕ್ಕೆ ಜಾಗವಿರುವುದಿಲ್ಲ. ಇಬ್ಬರೂ ಮೌನಿಯಾದಲ್ಲಿ ದ್ವೇಷ ಎಂಬುವುದು ಹತ್ತಿರ ಸುಳಿಯುವುದಿಲ್ಲ. ಒಬ್ಬರೇನೋ ಕ್ಷಮಿಸಬಹುದು ಆದರೆ ಎದುರಾಳಿಗೆ ಆ ಬುದ್ದಿ ಇಲ್ಲದಿದ್ದಲ್ಲಿ, ಈ ಕ್ಷಮೆ ಬೇರೆ ರೀತಿಯ ಪರಿಣಾಮ ಬೀರಬಹುದು. ದುರ್ಬಲ ಮನಸ್ಸಿನವನು ಇರಬೇಕು ಅದಕ್ಕೆ ಸುಮ್ಮನಿದ್ದಾನೆ. ಕ್ಷಮಿಸಿದ್ದೇನೆ ಎಂಬ ನಾಟಕವಾಡುತ್ತಿದ್ದಾನೆ ಎಂಬ ಮನೋಭಾವ ಬೇರೆಯವರಲ್ಲಿ ಬರಬಹುದು. ದೊಡ್ಡ ಮನಸ್ಸಿನವನು ಕ್ಷಮಿಸಿದ್ದಾನೆ ನಾವು ಅದೇ ರೀತಿ ಇರಬೇಕು ಎಂಬ ಮನೋಭಾವನೆ ಎದುರಾಳಿಗಳಲ್ಲಿ ಬಂದರೆ ಎಲ್ಲರೂ ಶಾಂತಿ ಸಮಾಧಾನದಿಂದಿರ ಬಹುದು. ಮನುಷ್ಯರಲ್ಲಿ ಕ್ಷಮೆ ಎಂಬ ಅಪರೂಪದ ಮನೋಭಾವನೆ ಇದ್ದರೆ ಸಮಾಜದ ವಾತಾವರಣವೇ ಬೇರೆ ರೀತಿ ಇರುತ್ತದೆಯಲ್ಲವೇ? ಯಾರ ಮನಸ್ಸಿನಲ್ಲಿಯೂ ಶಾಂತಿ ಕದಡುವ ಸನ್ನಿವೇಶವೇ ಬರುವುದಿಲ್ಲ. ಎಲ್ಲಾ ಕಡೆಯೂ ಶಾಂತಿ, ಸಹನೆ ಮತ್ತು ಅನ್ಯೋನ್ಯತೆ ಎಂಬುದು ಮನೆ ಮಾಡಿರುತ್ತದೆ. ಕ್ಷಮೆಯೇ ಶಾಂತಿಯ ಮೂಲ ಎನ್ನಬಹುದು.