ಎಲ್ಲರೂ ಓದಿಕೊಂಡಿರುವುದಿಲ್ಲ. ಅದರಲ್ಲೂ ಹಳ್ಳಿಗಳಿಂದ ಕೂಡಿದ ಭಾರತದಂತ ದೇಶದಲ್ಲಿ ಎಲ್ಲರೂ ಸಾಕ್ಷರರು ಎಂದು ಹೇಳಲು ಆಗುವುದಿಲ್ಲ. ಇತ್ತಿತ್ತಲಾಗೆ ಅನಕ್ಷರಸ್ತರ ಪ್ರಮಾಣ ಕಡಿಮೆಯಾಗಿದೆಯಾದರೂ ಸಂಪೂರ್ಣ ಸಾಕ್ಷರತೆ ಹೊಂದಿಲ್ಲ. ಹಿಂದಿನ ದಿನಗಳಲ್ಲಿ ಶಾಲಾ ಓದು ಇಲ್ಲದಿದ್ದರೂ ಅವರ ಜಾಣಾಕ್ಷತನ, ಬುದ್ಧಿಮತ್ತೆ ಏನು ಕಮ್ಮಿ ಇರಲಿಲ್ಲ. ಆಗ ದುಡಿಮೆ ಎಂದರೆನು ಎನ್ನುವುದೇ ಪಾಠವಾಗಿರುತಿತ್ತು. ತನ್ನದಾದ ಜಮೀನು ಸಾಗುವಳಿ ಮಾಡುವುದು ಕಲಿತರೆ ಆತನಿಗೆ ಉತ್ತಮವಾದ ಗೌರವ ಸಿಗುತಿತ್ತು. ಅಲ್ಲಿ ಎಷ್ಟು ಕಲ್ತಿದ್ದಾನೆ ಎನ್ನುವುದು ಇರುತ್ತಿರಲಿಲ್ಲ. ಎಲ್ಲೋ ಊರಿಗೆ ಒಬ್ಬರೋ ಇಬ್ಬರೋ ಶ್ರೀಮಂತರ ಮಕ್ಕಳು ಓದು ಕಲಿತು ಮತ್ತೆ ಅದೇ ಊರಿಗೆ ಕಲೆಕ್ಟರೋ, ಮಾಸ್ತರ್ರೋ, ಬ್ಯಾಂಕ್ ನೌಕರನೋ ಆಗಿ ಬರುತ್ತಿದ್ದ. ಅದರ ಹೊರತಾಗಿ ಇಡೀ ಊರಿನ ಜನರಿಗೆ ಕೃಷಿಯೇ ಹೆಚ್ಚಿನ ಬದುಕು.
ಆಗ ಹಳ್ಳಿಯಲ್ಲಿ ಓದಿನಲ್ಲಿ ಆಸಕ್ತಿ ಇದ್ದವನು ಓದುತ್ತೇನೆ ಎಂದು ಹೇಳಿದ್ದರೆ. ‘ಅಯ್ಯ, ಓದಿ ಏನ್ ಕಡದ್ ಕಟ್ಟೆ ಹಾಕುತ್ತಿಯಾ? ಪುಸ್ತಕದ ಬದ್ನೆಕಾಯಿ ತಿನ್ನೊಕೆ ಬರುತ್ಯೆ’ ಅಂತ ಕೇಳುತ್ತಿದ್ದರೂ. ಅಗತ್ಯಕ್ಕಿಂತ ಹೆಚ್ಚಿನ ಓದು ಬೇಡ. ಪತ್ರಿಕೆ ಓದಲು, ಮನೆಗೆ ಬಂದ ಪತ್ರ ಓದಲು, ಸಹಿ ಹಾಕಲು ಕಲಿತರೆ ಸಾಕು ಎನ್ನುವ ಮನಸ್ಥಿತಿಯವರಿದ್ದರು. ಮೇಲ್ಜಾತಿಯಲ್ಲಿ ಸ್ವಲ್ಪ ಮಟ್ಟಿಗೆ ಕಲಿಕೆಗೆ ಮಹತ್ವ ಕೊಡುತ್ತಿದ್ದರು ಎನ್ನಲಾಗುತ್ತದೆ.
ಆದರೆ ಕಾಲ ಬದಲಾಗಿದೆ. ಈಗ ಓದು ಇಲ್ಲದವನು ಭಿಕ್ಷೆ ಬೇಡಲು ನಾಲಾಯಕ್ಕಲ್ಲ ಎನ್ನುವಷ್ಟು ಬದಲಾಗಿದೆ. ವಿವಿಧ ತಂತ್ರಜ್ಞಾನಗಳು ನಮ್ಮ ನಿತ್ಯ ಬಳಕೆಯಲ್ಲಿ ಕ್ಷಣಕ್ಷಣಕ್ಕೂ ಬಳಕೆಯಾಗುತ್ತಿದೆ. ಆ ತಂತ್ರಜ್ಞಾನದ ಬಳಕೆಗೆ ಒಂದಿಷ್ಟು ಓದಿರಬೇಕು ಎಂದು ಹಳ್ಳಿ ಜನ ತಿಳಿದುಕೊಂಡಿದ್ದಾರೆ. ಅಲ್ಲದೆ ಕೃಷಿಯಲ್ಲಿ ಬದುಕು ಸಾಗುವುದಿಲ್ಲ. ಕಲಿಕೆಯಿಂದ ಸಿಗುವ ಉದ್ಯೋಗ ಅರಸಿ ಊರಿನಿಂದ ಪರವೂರಿಗೆ ಹೋಗಿ ದುಡಿದು ಜೀವನ ಕಟ್ಟಿಕೊಳ್ಳಬೇಕು. ವಿವಿಧ ರಂಗದಲ್ಲಿ ಸಾಧನೆ ಮಾಡಿ, ಅಲ್ಲಿಯೇ ಹೊಸದಾದ ಅವಿಷ್ಕಾರ ಮಾಡಿ, ಮತ್ತಷ್ಟು ಜನರಿಗೆ ಉದ್ಯೋಗ ನೀಡಬೇಕು. ಆ ಉದ್ಯೋಗ ಬೇಕು ಎಂದರೆ ಕಲಿಕೆಯ ಅಗತ್ಯ ಅವಶ್ಯ ಇದೆ.
ಈಗ ಮನುಷ್ಯ ತನ್ನ ಅನ್ನ ಸಂಪಾದನೆ ಮಾಡಬೇಕು ಎಂದರೆ ಉನ್ನತ ಶಿಕ್ಷಣ ಪಡೆಯಲೇ ಬೇಕು. ಉದ್ಯೋಗಕ್ಕಾಗಿ ಓದು ಎನ್ನವಂತಾಗಿದೆ. ಈ ರೀತಿಯ ಓದು ಜೀವನ ಪಾಠವನ್ನು ಕಲಿಸುತ್ತಿಲ್ಲ. ಜೀವನ ಕೃತ್ರಿಮವಾಗಿದೆ ಎನ್ನುವ ಆರೋಪ ಬರುತ್ತಿದೆ. ಆದರೂ ಈಗಿನ ಕಾಲಕ್ಕೆ ಪುಸ್ತಕದ ಬದನೆಕಾಯಿಯೇ ಜೀವನಕ್ಕೆ ಸಾರವಾಗುತ್ತದೆ. ಕೇವಲ ಓದು ಜೀನವಲ್ಲದಿದ್ದರೂ ಆ ಓದಿನಿಂದ ನಮಗೆ ಬೇಕಾದದ್ದನ್ನು ಪಡೆಯಲು ಕಲಿತುಕೊಳ್ಳುವ ಜಾಣತನ ನಮ್ಮದಾಗಿರಬೇಕು. ಆಗ ಆ ಪುಸ್ತಕದ ಬದನೆಕಾಯಿಯೇ ಮೇಲೊಗರವಾಗುತ್ತದೆ.