muralidhar 2

ಮನುಷ್ಯನು ಸಹ ಜೀವಿ ಹಾಗೂ ಸಂಘ ಜೀವಿಯೂ ಎಂದು, ಮೊದಲಿನಿಂದಲೂ ಸಹ ಜೀವನ ನಡೆಸಲು ಇಷ್ಟಪಡುತ್ತಾನೆ ಒಬ್ಬಂಟಿಯಾಗಿರಲು ಅವನ ಮನಸ್ಸು ಒಪ್ಪುವುದಿಲ್ಲ. ಎಂದು ಹಿಂದಿನ ಕಾಲದಲ್ಲಿ ಹೇಳಬಹುದಿತ್ತು. ಆದರೆ ಇಂದಿನ ದಿನಗಳಲ್ಲಿ ಎಲ್ಲವೂ ತಲೆಕೆಳಗಾಗಿ ಸಂಘಜೀವಿಯಾದ ಮನುಷ್ಯನು ಏಕಾಂಗಿಯಾಗಿ ತನ್ನ ಪಾಡಿಗೆ ತಾನು ಜೀವನ ನಡೆಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ತನ್ನ ಕೆಲಸಗಳಿಗೆ ಅಥವಾ ಅನಿವಾರ್ಯ ಸನ್ನಿವೇಶ ಬಂದೊದಗಿದ್ದಲ್ಲಿ ಮಾತ್ರ ಎಲ್ಲರನ್ನು ಆಮಂತ್ರಿಸಿ, ಬೆರೆತು ನಂತರ ಮರೆತು ಪುನಃ ಏಕಾಂಗಿಯಾಗಿ ಜೀವಿಸುತ್ತಿರುವುದು ಸಾಮಾನ್ಯವಾಗಿದೆ.

ಹಿಂದಿನ ಕಾಲದಲ್ಲಿ ಎಳೆಯರಾಗಿದ್ದಾಗ ಮಕ್ಕಳು ತಮ್ಮ ಅಕ್ಕಪಕ್ಕದ ಮನೆಯಲ್ಲಿರುವ ಮಕ್ಕಳನ್ನು ಸ್ನೇಹ ಮಾಡಿಕೊಂಡು ಗೋಲಿ, ಲಗೋರಿ, ಚಿನ್ನಿ ದಾಂಡ್ಲು, ಕಬ್ಬಡಿ, ಹೀಗೆ ನಾನಾ ತರಹದ ಆಟವನ್ನು ಆಡುತ್ತಾ ಗೆಳೆಯರೊಂದಿಗೆ ಕಾಲ ಕಳೆದು ಅಕಸ್ಮಾತ್ ಯಾರೂ ಇಲ್ಲದಿದ್ದ ಪಕ್ಷದಲ್ಲಿ ಅಪ್ಪ ಅಮ್ಮನ ಜೊತೆಯಲ್ಲಿ, ಅಣ್ಣ, ತಮ್ಮ ಮತ್ತು ತಂಗಿ, ಇವರೊಂದಿಗೆ ಆಟವಾಡಿ ನಲಿಯುತ್ತಾ ಆಟದ ಜೊತೆಗೆ ಪಾಠವನ್ನು ಕಲಿಯುತ್ತಾ ತನ್ನ ಬಾಲ್ಯದ ದಿನಗಳನ್ನು ಕಳೆಯುತ್ತಿದ್ದುದ್ದನ್ನು ನೋಡಿದ್ದೇವೆ. ದೊಡ್ಡವರಾದಂತೆ ಶಾಲೆ ಕಾಲೇಜಿಗೆ ಸೇರಿ ಅಲ್ಲಿಯ ಸಹಪಾಠಿಗಳ ಜೊತೆಗೆ ಆಟವಾಡಿ ಸಿನಿಮಾ ನಾಟಕದಂತಹ ಮನೋರಂಜನೆ ಪಡೆದು, ಓದು ಮುಗಿದ ನಂತರ ಕಾಲೇಜಿನ ಸಹಪಾಠಿಗಳು ಬೇರೆ ಬೇರೆ ಕೆಲಸಕ್ಕೆ ಸೇರಿದಾಗ ಯಾವ ಸ್ನೇಹಿತರೂ ಇಲ್ಲದೆ ಸ್ವಲ್ಪ ಸಮಯ ಬೇಸರವಾಗುವುದೆಂದು, ಹಳೆಯ ಸಹಪಾಠಿಗಳ ಒಡನಾಟವನ್ನು ಮರೆಯಲಾಗದೆ ತನ್ನ ಹಳೆಯ ಸ್ನೇಹಿತರಿಗೆ ದೂರವಾಣಿ ಮೂಲಕ ಸಂಪರ್ಕವನ್ನು ಇಟ್ಟುಕೊಳ್ಳಬಯಸುವವರು ಇರುವುದರಿಂದ ಕಾಲೇಜಿನ ಶಿಕ್ಷಣ ಮುಗಿಯುವವರೆಗೂ ಏಕಾಂಗಿಯಾಗಿರುವ ಅನುಭವವೇ ಇಲ್ಲದಂತೆ ಆಗಿರುತ್ತದೆ. ಆದರೆ ಈಗ ಕಾಲವು ಸಂಪೂರ್ಣ ಬದಲಾಗಿದೆ. ಶಾಲೆಯಲ್ಲಿರುವ ತನಕ ಆಟ ಪಾಠಗಳು, ಮನೆಗೆ ಬಂದ ತಕ್ಷಣ ಇದೆಲ್ಲವೂ ಮಾಯವಾಗುತ್ತದೆ. ತಂದೆ ತಾಯಿ ಕೆಲಸಕ್ಕೆ ಹೋದಲ್ಲಿ ಮಕ್ಕಳು ಪಕ್ಕದ ಮನೆಯಲ್ಲಿ ಇರುವ ಸನ್ನಿವೇಶ ಸೃಷ್ಠಿಯಾಗಿದೆ. ಆದರೆ ಇತ್ತೀಚೆಗೆ ಎಲ್ಲವೂ ತಲೆಕೆಳಗಾಗಿ, ಅನೇಕ ಕಡೆ ಕೆಲವು ಹುಡುಗರು ಮೂರು ಕಡ್ಡಿಗಳನ್ನು ಅಥವಾ ಕಲ್ಲುಗಳನ್ನು ತಮ್ಮ ಮನೆಯ ಮುಂದೆ ಇಟ್ಟುಕೊಂಡು ಕ್ರಿಕೆಟ್ ಆಟವನ್ನು ಮಾತ್ರ ಆಡುತ್ತಿದ್ದು, ಬೇಸರವಾದರೆ ಅದನ್ನು ಬಿಟ್ಟು ಮೊಬೈಲ್‍ಗಳಲ್ಲಿ ಆಟವಾಡುವುದು ಇತ್ತೀಚಿನ ಹವ್ಯಾಸವಾಗಿದೆ.

ಬೆಂಗಳೂರು ಮತ್ತು ಇತರೆ ನಗರಗಳಲ್ಲಿ ಅನೇಕ ಬಡಾವಣೆಗಳು ತಲೆ ಎತ್ತಿದ್ದು, ಎಲ್ಲಿಂದಲೋ ಜನಗಳು ಬಂದು ವಾಸಮಾಡುತ್ತಿರುವುದರಿಂದ ಇವರಿಗೆ ಪಕ್ಕದ ಮನೆಯ ಸಂಪರ್ಕ ಕೂಡ ಇರುವುದಿಲ್ಲ. ಹೊಸ ಜನಗಳು ಹೊಸ ಪ್ರದೇಶ ಯಾರು? ಹೇಗೋ? ಎಂಬ ಆತಂಕವು ಮನೆ ಮಾಡಿ ಯಾರ ಸಂಪರ್ಕವನ್ನು ಬೆಳೆಸಿಕೊಳ್ಳಲು ಹೋಗುವುದಿಲ್ಲ. ತಾವಾಯಿತು ತಮ್ಮ ಉದ್ಯೋಗವಾಯಿತು ಎಂಬಂತೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಒಬ್ಬರ ಸಂಪರ್ಕ ಇನ್ನೊಬ್ಬರಿಗೆ ಇಲ್ಲದಂತಾಗಿ ಎಲ್ಲರೂ ಏಕಾಂಗಿ ಬದುಕನ್ನು ಸಾಗಿಸುವಂತಹ ಸನ್ನಿವೇಶ ಬಲವಂತವಾಗಿ ಮನುಷ್ಯನ ಮೇಲೆ ಹೇರಿದಂತಾಗಿರುವುದು ಕಟು ಸತ್ಯ. ಹೊಸ ಬಡಾವಣೆಗಳಲ್ಲಿ ಪಕ್ಕದ ಮನೆಗಳಲ್ಲಿ ಏನಾದರೂ ಸಾವು ಸಂಭವಿಸಿದರೂ ಹೋಗಿ ನೋಡವುದೇ ಇಲ್ಲದಂತಾಗಿದ್ದು, ತಮ್ಮ ಮನೆಯ ಮಹಡಿ ಮೇಲೆ ನಿಂತು ಕಾರ್ಯಗಳನ್ನು ನೋಡುತ್ತಿರುವುದು ಕಂಡು ಬಂದಿರುವ ದೃಶ್ಯಗಳು. ದೂರದ ಊರಿನಿಂದ ಬಂದಿರುವ ನೆಂಟರು ಅಥವಾ ಸ್ನೇಹಿತರು ಬಂದು ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸುವಂತ ಪರಿಸ್ಥಿತಿ ಬಂದೊದಗಿರುವುದು ಮನುಷ್ಯನು ಏಕಾಂಗಿಯಾಗುತ್ತಿರುವುದಕ್ಕೆ ನಿದರ್ಶನವಾಗಿದೆ.

ಹಳೆಯ ಪಟ್ಟಣ ಹಳ್ಳಿಗಳಲ್ಲಿ ವಾಸಿಸುವವರು ಮಾತ್ರ ಇನ್ನೂ ಸ್ವಲ್ಪ ಭಿನ್ನವಾದ ರೀತಿಯ ಜೀವನ ಸಾಗಿಸುತ್ತಿರುವುದು ಕಂಡು ಬಂದಿದ್ದು, ಆದರೂ ಹಳ್ಳಿ ಹಾಗೂ ಸಣ್ಣ ಸಣ್ಣ ಪಟ್ಟಣದಲ್ಲಿರುವ ಯುವಕರು ಯುವತಿಯರು ಜೀವನೋಪಾಯಕ್ಕೆ ದೊಡ್ಡ ನಗರಗಳಲ್ಲಿ ಕೆಲಸಕ್ಕೆ ಸೇರಿಕೊಂಡು ಬೆಳಿಗ್ಗೆ ಪಟ್ಟಣಕ್ಕೆ ಬಂದರೆ ಮನೆಗೆ ವಾಪಸಾಗುವುದು ಸೂರ್ಯ ಮುಳುಗಿ ದೀಪ ಬೆಳಗಿದ ನಂತರವಷ್ಟೇ. ಹೀಗಿದ್ದಾಗ ಯಾರನ್ನೂ ಮಾತನಾಡಿಸದ ಸನ್ನಿವೇಶ ಬಂದಿದೆ. ಹಾಗಾಗಿ ಪರಿಚಯವಿದ್ದರೂ ಕೆಲಸದ ಒತ್ತಡದಿಂದ ಹೆಚ್ಚಿಗೆ ಒಟ್ಟಾಗಿ ಕಾಲ ಕಳೆಯಲು ಆಗುವುದಿಲ್ಲ. ಎಲ್ಲರಿಗೂ ಅವರದೇ ಆದ ಸಂಸಾರ ತಾಪತ್ರಯ, ವೈಯುಕ್ತಿಕ ದ್ವೇಷ ಹೀಗೆ ಹಲವಾರು ಕಾರಣಗಳಿಂದ ಒಬ್ಬರೊನ್ನೊಬ್ಬರು ಬೆರೆತು ಮಾತಾಡಿ ಕಾಲ ಕಳೆಯುವಂತಹ ದಿನಗಳು ನೋಡಲು ಎಲ್ಲೂ ಕಾಣ ಸಿಗುವುದಿಲ್ಲ. ಹಳ್ಳಿಗಳಲ್ಲಿ ಬೇಸಾಯದ ಕೆಲಸ ಮುಗಿದಿದ್ದರೆ ಬಿಡುವಿನ ವೇಳೆಯಲ್ಲಿ ಕೆಲವು ಸ್ನೇಹಿತರುಗಳು ಒಂದುಗೂಡಿ ಮಾತಾಡುತ್ತಾ ಕಾಲ ಕಳೆಯಬಹುದು.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ

ಕಾಲೇಜು ಓದು ಮುಗಿಸಿ ಕೆಲಸಕ್ಕೆ ಸೇರಿದ ನಂತರ ವಾತಾವರಣವೇ ಸಂಪೂರ್ಣ ಬದಲಾವಣೆಯಾಗಿದ್ದು, ಕೆಲಸ ಮಾಡುವ ಸ್ಥಳಗಳಲ್ಲಿ ದೊರೆಯುವ ಸ್ನೇಹಿತರ ಮನೋಭಾವವೇ ಬೇರೆ ರೀತಿಯದ್ದಾಗಿರುತ್ತದೆ. ಕಾಲೇಜಿನಲ್ಲಿ ಸ್ನೇಹಿತರೊಡನೆ ಆಟವಾಡಿದ್ದಂತೆ ಕೆಲಸದ ಜೊತೆಗಾರರೊಡನೆ ಆಟ ಆಡುವುದಕ್ಕೆ ಆಗುವುದಿಲ್ಲ. ಕಾಲೇಜಿನ ದಿನಗಳಲ್ಲಿ ಯಾವ ರೀತಿಯ ಯೋಚನೆ ಇಲ್ಲದೆ ಬಹಳ ಖುಷಿಯಿಂದ “ವಿದ್ಯಾರ್ಥಿ ಜೀವನವೇ ಚಿನ್ನದ ಜೀವನ ಇದ್ದಂತೆ” ಎಂದು ಎಲ್ಲರೊಡನೆ ಬೆರೆತು ಹಾಡಿ ಕುಣಿದು ಕುಪ್ಪಳಿಸಿ ಆಟವಾಡುವಂತಹ ಸನ್ನಿವೇಶ ಇಲ್ಲಿ ಬರುವುದೇ ಇಲ್ಲ. ಎಲ್ಲರಿಗೂ ಅವರದ್ದೇ ಆದ ಸಂಸಾರದ ಜವಾಬ್ದಾರಿಯು ಹೆಗಲೇರಿರುತ್ತದೆ. ಇದರ ಜೊತೆಗೆ ಕೆಲಸದ ಒತ್ತಡ, ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗುವ ತವಕ, ವಾಹನದ ದಟ್ಟಣೆ ಪ್ರದೇಶಗಳಲ್ಲಿ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹೋಗುವುದೇ ಒಂದು ದೊಡ್ಡ ಸಾಧನೆಯಾಗಿರುತ್ತದೆ. ಕೆಲಸದ ಸಮಯದಲ್ಲಿ ಸಿಗುವ ಬಿಡುವಿನ ವೇಳೆ ಎಂದರೆ ಊಟದ ಸಮಯ ಕೇವಲ 30 ರಿಂದ 45 ನಿಮಿಷಗಳು ಇರಬಹುದು. ಆದರೆ ಇಷ್ಟು ಕ್ಲುಪ್ತ ಸಮಯದಲ್ಲಿ ಊಟ ಮಾಡಿ ಹೋಗುವುದಕ್ಕೆ ಸಾಲುವುದಿಲ್ಲ. ಮನೆಯಿಂದ ಊಟದ ಡಬ್ಬಿ ತೆಗೆದುಕೊಂಡು ಹೋಗಿದ್ದರೆ ಮಾತ್ರ ಎಲ್ಲರ ಜೊತೆ ಬೆರೆತು ಮಾತಾಡುತ್ತಾ ಊಟ ಮಾಡಿ ಇರುವ ಸ್ವಲ್ಪ ಸಮಯದಲ್ಲಿ ವಿರಮಿಸಬಹುದು. ಊಟ ಮಾಡಲು ಹೋಟೆಲನ್ನು ಅವಲಂಬಿಸಿದ್ದರೆ ಸ್ವಲ್ಪ ವಿರಾಮವೂ ಸಿಗುವುದಿಲ್ಲ. ಬೆಳಿಗ್ಗೆ ಹೋದರೆ ವಾಪಸ್ ಬರುವುದೇ ರಾತ್ರಿಯಾಗಿರುತ್ತದೆ. ಇಂತಹ ಸನ್ನಿವೇಶಗಳಲ್ಲಿ ಆಟ ಹಾಡು ಎಲ್ಲವೂ ಮರೆತಂತೆ ಆಗಿರುತ್ತದೆ. ವಾರಕ್ಕೊಂದು ರಜೆ ಸಿಕ್ಕಿದರೆ ಅದನ್ನು ಮನೆಯಲ್ಲಿರುವ ಬೇರೆ ಕೆಲಸ ನಿರ್ವಹಿಸುವುದಕ್ಕೆ ಸಾಲುವುದಿಲ್ಲ.

ವಿವಾಹವಾಗಿದ್ದರೆ ಮಾತ್ರ ತನ್ನ ಪತ್ನಿಯೇ ಸ್ನೇಹಿತೆ ಅಥವಾ ಸಂಗಾತಿ ಎಂಬುದಾಗಿ ಜೊತೆಯಲ್ಲಿ ಕಾಲ ಕಳೆಯಬಹುದು. ಒಳ್ಳೆಯ ಮಡದಿ ದೊರೆತು ಎಲ್ಲರಲ್ಲೂ ಹೊಂದಿಕೊಂಡು ಹೋಗುವಂತಹ ಮನಸ್ಸುಳ್ಳವಳಾದರೆ ಮಾತ್ರ ತಾನು ಏಕಾಂಗಿ ಎಂಬುದನ್ನು ಮರೆತು ಸಂತೋಷದಿಂದ ಕಾಲ ಕಳೆಯಬಹುದು. ಇಲ್ಲದಿದ್ದರೆ ಮದುವೆಯಾದರೂ ಏಕಾಂಗಿಯಂತೆ ಬದುಕನ್ನು ಸಾಗಿಸಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಕಛೇರಿಯಲ್ಲಿ ಒಂದು ರೀತಿಯ ಕೆಲಸದ ಕಿರಿ ಕಿರಿಯಾಗಿ, ಮನೆಯಲ್ಲಿ ಮಡದಿಯ ಕಿರಿಕಿರಿ ಉಂಟಾದರೆ ಎಲ್ಲಿ ಹೋಗಿ ಬದುಕುವುದು ಎಂಬ ಆಲೋಚನೆ ಹಾಗೂ ಜೀವನದಲ್ಲಿಯೇ ಜಿಗುಪ್ಸೆ ಉಂಟಾಗುತ್ತದೆ. ಮಕ್ಕಳಿಗಾಗಿ ಎಲ್ಲವನ್ನೂ ಸಹಿಸಿಕೊಂಡು ಜೀವನವನ್ನು ದೂಡುವಂತ ಸನ್ನಿವೇಶ ನಿರ್ಮಾಣವಾದರೂ ಆಶ್ಚರ್ಯವಿಲ್ಲ. ಇದರ ಜೊತೆಗೆ ಹೆತ್ತವರ ಯೋಗಕ್ಷೇಮ, ಮಡದಿ ಮಕ್ಕಳ ಯೋಗಕ್ಷೇಮ ಇವೆಲ್ಲವನ್ನೂ ನೋಡಿ ಕೊಳ್ಳುವುದೇ ಒಂದು ಸಾಹಸದಂತೆ ಆಗಿರುತ್ತದೆ. ಕಛೇರಿಯಿಂದ ಬಂದೊಡನೇ ಶಾಪಿಂಗ್‍ಗೆ ಮಕ್ಕಳಿಗೆ ಮೈಯಲ್ಲಿ ಹುಷಾರಿಲ್ಲದಿದ್ದರೆ ವೈದ್ಯರನ್ನು ನೋಡಲು ಹೋಗಬೇಕಾದ ಪ್ರಸಂಗ ಬರಬಹುದು. ಇವೆಲ್ಲ ಕಾರ್ಯಗಳು ಮುಗಿಯುವ ಹೊತ್ತಿಗೆ ಸುಸ್ತಾಗಿ ಹಾಸಿಗೆ ಕಂಡರೆ ಸಾಕು ಎಂಬಂತೆ ಆಗಿದ್ದರೆ ಏನೂ ಕೇಳದೆ ಸೇರಿದ್ದನ್ನು ತಿಂದು ಹೋಗಿ ಮಲಗಿಬಿಡಬಹುದು. ಏನೂ ಕೆಲಸವಿಲ್ಲದಿದ್ದರೆ ಮನೋರಂಜನೆಗಾಗಿ ದೂರದರ್ಶನವನ್ನು ವೀಕ್ಷಿಸುತ್ತಾ ಕಾಲ ಕಳೆಯಬಹುದು. ಹೀಗಾಗಿ ಯಾರೊಬ್ಬರ ಒಡನಾಟವೂ ಸಿಗುವುದಿಲ್ಲ. ಸಿಕ್ಕಿದರೂ ಅಪರೂಪವಾಗಿರುತ್ತದೆ. ಸಾಲು ಸಾಲು ರಜೆ ಸಿಕ್ಕಿದರೆ ತನ್ನ ಸಂಸಾರದವರೊಡನೆ ದೂರ ಪ್ರವಾಸ ಕೈಗೊಂಡು, ತನ್ನ ಸಂಸಾರದ ಸದಸ್ಯರ ಜೊತೆ ಮಾತ್ರ ಸುತ್ತಾಡಿ ಬರಬಹುದು. ಆರ್ಥಿಕವಾಗಿ ಸದೃಡನಾಗಿದ್ದರೆ ರಜಾ ದಿನಗಳಲ್ಲಿ ಪ್ರವಾಸ ಕೈಗೊಳ್ಳ ಬಹುದು. ಬರುವ ಸಂಬಳದಲ್ಲಿ ಸಂಸಾರ ನಿರ್ವಹಣೆ ಮಾಡಬೇಕು, ಇದರ ಜೊತೆಗೆ ಮಕ್ಕಳ ವಿದ್ಯಾಭ್ಯಾಸದ ಖರ್ಚು, ಹಬ್ಬಗಳಲ್ಲಿ ಮಕ್ಕಳಿಗೆ ಹೊಸ ಬಟ್ಟೆ ಖರೀದಿಸಲು ಆಗುವ ಖರ್ಚು, ಮನೆಯವರಿಗೆ ಆರೋಗ್ಯ ಎರುಪೇರಾದರೆ ವೈದ್ಯಕೀಯ ವೆಚ್ಚ ಇವೆಲ್ಲವನ್ನೂ ಸರಿದೂಗಿಸಬೇಕಾದ ಪ್ರಸಂಗ ಇರುತ್ತದೆ. ಇವೆಲ್ಲದರ ನಡುವೆ ಪ್ರವಾಸದ ಖರ್ಚುನ್ನು ಹೊಂದಿಸಲು ಬಹಳ ಕಷ್ಟವಾಗಿ ಮನೆಯ ಸಂಸಾರದ ಖರ್ಚು ಸರಿದೂಗಿದರೆ ಸಾಕು ಎಂದು ಯಾವ ಪ್ರವಾಸವೂ ಬೇಡ ಎಂದು ಕೈಚೆಲ್ಲಬಹುದು.

RELATED ARTICLES  ಮನುಷ್ಯ ತನ್ನ ತಪ್ಪಿಗೆ ಯಾವಾಗ ಪಶ್ಚಾತ್ತಾಪ ಪಡುತ್ತಾನೆ? ಭಾಗ 1

ಈಗಿನ ಕಾಲದಲ್ಲಿ ವಿಜ್ಞಾನ ಮುಂದುವರೆದು ಮನೆ ಮನೆಯಲ್ಲಿಯೂ ಟಿ.ವಿ. ನೂರಾರು ಚಾನಲ್ ಗಳು ವಿಧ ವಿಧವಾದ ಕಾರ್ಯಕ್ರಮಗಳು ಪ್ರಸಾರವಾಗುತ್ತಿರುವುದರಿಂದ ಎಲ್ಲರೂ ಟಿ.ವಿಗೆ ದಾಸರಾಗಿರುವ ಸನ್ನಿವೇಶ ಸೃಷ್ಠಿಯಾಗಿದೆ. ಒಳ್ಳೆಯ ಕಾರ್ಯಕ್ರಮ ಪ್ರಸಾರವಾಗುತ್ತಾ ಇರುವ ಸಮಯದಲ್ಲಿ ಅಪರೂಪಕ್ಕೆ ಯಾರಾದರೂ ಸ್ನೇಹಿತರು ಅಥವಾ ನೆಂಟರೋ ಬಂದರೆ ಈ ಕಡೆ ಕಾರ್ಯಕ್ರಮ ನೋಡಲು ಆಸೆ ಸ್ನೇಹಿತರನ್ನು ಮಾತಾಡಿಸಬೇಕಾಗಿರುವ ಅನಿವಾರ್ಯ ಸನ್ನಿವೇಶ ಬಂದು ಏಕಪ್ಪಾ ಇವರು ಈ ಹೊತ್ತಿನಲ್ಲಿ ಬಂದರೂ ಎಂದು ಪಶ್ಚಾತ್ತಾಪ ಪಟ್ಟರೂ ಆಶ್ಚರ್ಯವಿಲ್ಲ. ಟಿ.ವಿಯ ಮುಂದೆ ಕುಳಿತರೆ ಯಾರೂ ಬೇಡ ಎಂಬ ಮನೋಭಾವ ಬಂದು ಬಿಟ್ಟಿರುತ್ತದೆ. ಪ್ರಪಂಚದ ಆಗುಹೋಗುಗಳು ಜೊತೆಗೆ ಮನರಂಜನೆ ಕಾರ್ಯಕ್ರಮಗಳು ಒಂದೇ ಸಮನೆ ಬಿತ್ತರವಾಗುತ್ತಿರುವಾಗ ಬೇರೆ ಜನಗಳ ಒಡನಾಟವೇಕೆ ಎಂಬ ಮನೋಭಾವ ಬಂದಿದೆ. ಇದೂ ಸಾಲದೆಂಬಂತೆ ಪ್ರತಿಯೊಬ್ಬರ ಬಳಿಯಲ್ಲೂ ಮೊಬೈಲ್ ಬಂದಿರುವುದರಿಂದ ಎಲ್ಲರೂ ತಮ್ಮದೇ ಆದ ಲೋಕದಲ್ಲಿ ಮೈಮರೆತಿರುತ್ತಾರೆ. ಬೆಳಿಗಿನಿಂದ ದಿನಪೂರ್ತಿ ದೂರದರ್ಶನದ ಕಾರ್ಯಕ್ರಮಗಳು, ಫೇಸ್ ಬುಕ್, ವಾಟ್ಸಾಪ್ ಹಾಗೂ ಇನ್ನಿತರೆ ಸಂದೇಶ ರವಾನಿಸುವ ಮಾದ್ಯಮಗಳು ಹಾಡು, ನೃತ್ಯ ಸಿನಿಮಾ ಕ್ರೀಡೆ ಹೀಗೆ ಅನೇಕ ಮನರಂಜನೆ ಕೈಯಲ್ಲೇ ನೋಡಬೇಕಾದರೆ ಬೇರೆಯವರ ಸಹವಾಸ ನಮಗೇಕೆ ಬೇಕು ಎನ್ನುವ ಮನೋಭಾವನೆ ಮನೆ ಮಾಡಿರುತ್ತದೆ. ಏಕಾಂಗಿ ಯಾಗಿ ಕಾರ್ಯಕ್ರಮ ವೀಕ್ಷಿಸುತ್ತಾ ಕುಳಿತು ಹೊತ್ತಿಗೆ ಸರಿಯಾಗಿ ಊಟ ತಿಂಡಿ ಕುಳಿತಲ್ಲಿಗೆ ಬರುವುದರಿಂದ ಬೇರೆ ಯೋಚನೆಯನ್ನು ಕನಸು ಮನಸ್ಸಿನಲ್ಲಿಯೂ ಮಾಡದಂತ ಸನ್ನಿವೇಶ ಬಂದಿದ್ದು, ಮನುಷ್ಯನು ಏಕಾಂಗಿಯಾಗಿ ತನ್ನದೇ ಆದ ಲೋಕದಲ್ಲಿ ವಿಹರಿಸುವಂತೆ ಆಗಿದೆ. ವಿದ್ಯಾರ್ಥಿಯ ರಾದಿಯಾಗಿ ಎಲ್ಲರೂ ಇದಕ್ಕೆ ಮಾರುಹೋಗಿದ್ದು, ಬೇರೆಯವರೊಡನೆ ಕಲೆತು ಆಟ ಆಡುವುದು ಅಪರೂಪವಾಗಿದೆ. ಮೊಬೈಲ್‍ನಲ್ಲಿಯೇ ಅಥವಾ ಕಂಪ್ಯೂಟರ್‍ನಲ್ಲಿ ಯಾವುದಾದರೂ ಗೇಮನ್ನು ಆಡುತ್ತಾ ಕಾಲ ಕಳೆಯುವ ಅದೆಷ್ಟೋ ಮಂದಿಗೆ ಏಕಾಂಗಿ ಬದುಕೇ ಹಿತವಾಗಿರುವಂತೆ ಗೋಚರಿಸುತ್ತಿದೆ.

ಒಟ್ಟಿನಲ್ಲಿ ಹೇಳುವುದಾದರೆ ವಿಜ್ಞಾನದ ಅವಿಷ್ಕಾರದಿಂದ ಪ್ರಪಂಚದ ಆಗುಹೋಗುಗಳನ್ನು ಎಲ್ಲರೂ ತಮ್ಮ ತಮ್ಮ ಅಂಗೈಯಲ್ಲಿರುವ ಮೊಬೈಲ್‍ನಲ್ಲಿ ನೋಡುವಂತಹ ಅವಕಾಶ ಒದಗಿಬಂದಿರುವುದರಿಂದ ಪ್ರಪಂಚವೇ ಕಿರಿದಾಗುತ್ತಾ ಇದೆಯೇನೋ ಎಂಬಂತೆ ಭಾಸವಾಗಿದ್ದು, ಅದಕ್ಕೆ ತಕ್ಕಂತೆ ಸಂಘ ಜೀವಿಯಾಗಿದ್ದ ಮನುಷ್ಯನು ಇತ್ತೀಚಿನ ದಿನಗಳಲ್ಲಿ ಏಕಾಂಗಿಯಾಗುತ್ತಿರುವುದು ನಿಜಕ್ಕೂ ವಿಷಾದನೀಯ ವಾದ ಸಂಗತಿಯಾಗಿದೆ.