ಕಳೆದವಾರ ನನ್ನನ್ನೋದಿ..ಓದಿರೆಂದು ಹೇಳಿ..ಅದಕೇಳಿ ಓದಲು ಮುಂದಾದವರಿದ್ದರೆ..ಎಲ್ಲರಿಗೂ ವಾರಕ್ಕಾಗುವಷ್ಟು ತಿಗಣೇಶ ವಂದಿಸುತ್ತೇನೆ..ಕಳೆದ ವಾರ ಪ್ರಕರಣ ನನ್ನ ತಮ್ಮನ ವರೆಗೆ ಬಂದಿತ್ತು..ನನ್ನ ಅಜ್ಜನಿಗೆ ಕಿರಿಯವ ನನ್ನಪ್ಪ..ಮಕ್ಕಳು ಮುಗಿಯಿತೆಂದು ಕಳಚಿಟ್ಟ ತೊಟ್ಟಿಲ ಬೆಣೆ..ಕಟ್ಟಿದ ನೇಣು ಲಡ್ಡಾದಮೇಲೆ ನನ್ನಪ್ಪ ಹುಟ್ಟಿದನಂತೆ..ಕೊನೆಯ ಕಾಯಿ ಜಿಕ್ಕಾದಂತೆ..ನಮ್ಮಪ್ಪನೂ ಆಳ್ತನದಲ್ಲಿ ಜಿಕ್ಕೇ.ಮಿದುಳೂ ಸಣ್ಣವೇ..ಬುದ್ದಿಯೂ ಅಷ್ಟೇ..ಹನ್ನೊಂದು ವರ್ಷದ ವರೆಗೆ ಕೀಬ್ಳಲ್ಲೇ ಉಚ್ಚಿಹೊಯ್ದವ.ಬಾಲಗ್ರಹವಾಗಿ ಇದ್ದ ಹನಿಬುದ್ದಿಯೂ ಹೋಯ್ತಂತೆ..ನನಗೆ ಎರಡು ದೊಡ್ಡಪ್ಪಂದಿರು..ಮೊದಲು ಪ್ರಾಯ ಕಂಡವರು..ಅಜ್ಜ ಮಾಗೋಡ ಗಣೇಶ ಹೆಗಡೆ ತಾಲೂಕಿನಲ್ಲಿ ದೊಡ್ಡ ಹೆಸರು..ಮಾಗೋಡ ಬೆಲ್ಲದ ಮೂಲ ನಮ್ಮನೆಯೇ..ತಾಲೂಕಿಗೆ ಮೊದಲು ಬ್ಯಾಟರಿ ತಂದವ ನನ್ನಜ್ಜ..ಅದನ್ನು ನೋಡಲು ದಿನಾ ಲೋಂಚಿನತುಂಬಾ ಜನ.ಅಡಿಗೆಗೆ ಜನನೇಮಿಸುವಷ್ಟು..ಆಸ್ತಿ ಬೇಕಾದಷ್ಟು ಇತ್ತು ರಾಮಚಂದ್ರಾಪುರ ಸವಾರಿ ಬಂದರೆ ನಾಲ್ಕು ತಿಂಗಳು ಉಳಿಯುತ್ತಿತ್ತು.

RELATED ARTICLES  ಸದ್ಗುರು ವಾಣಿ: ಲೋಕ ಮತ್ತು ಲೋಕಾಂತರ ಪ್ರಾಪ್ತಿ

ಜಿನ್ನೋಡಮ್ಮನ ಅಪ್ಪನ ಮನೆ..ನಮ್ಮನೆ.ಈಗಲೂ ಜಿನ್ನೋಡ ಪಾಲಕಿ ಬಂದರೆ ಹೋಗುವುದು ಕಷ್ಟ.ಮನೆಯ ದೊಡ್ಡೊಳದಲ್ಲಿ ದೊಡ್ಡ ಕಲಬಿ..ಅದರಲ್ಲಿ ಚಿನ್ನ ಬೆಳ್ಳಿ..ನಾವು ಆಗ ಶ್ರೀಮಂತರೇ.ದೊಡ್ಡಪ್ಪ ಮೊದಲು ಪ್ರಾಯ ಕಂಡವ..ಕೆಟ್ಟಬುದ್ದಿ ಬಂದದ್ದು ಮೊದಲು ಅವನಿಗೇ..ಕಲಬಿ ಬಿಟ್ಟು ಮಲಗಲೇ ಇಲ್ಲ..ಚಿಲಕವಿಲ್ಲದ ಕಲಬಿ ಹಗುರವಾಗುತ್ತ..ಅಜ್ಜ ಎಲ್ಲ ಅರಿತು..ಆಸೆಬಿಟ್ಟು ಮನಸ್ಸುನೊಂದು ಕೃಷನಾಗಿ ಕರಗಿಹೋದ..ಕಲಬಿ ಮಾಯ್ನಕುರಿ ಬೀಗ ಕಾಣುವ ಹೊತ್ತಿಗೆ ಖಾಲಿಯಾಗಿತ್ತು.. ಹೆಡ್ಡಬಾಬು ನನ್ನಪ್ಪನ ಕರೆದು ಕೊಂಡು ಸಂಸ್ಥಾನ ಆಳಿದ ಅಬ್ಬೆ..ಅಂದರೆ ನನ್ನಜ್ಜಿ ಬೇರೆ ಬೇಯಿಸಿದರು..ಹಂಡೆಕಂಡ ಒಲೆಯಲ್ಲಿ ಕುನ್ನಿ ಮಲಗಿತು..ಕುಂಬಾರ ಒಲೆಯಮೇಲೆ ಕುಡಿಕೆಗಳು ಯೆಸರು ಬೇಯಿಸಿದವು..ಅಪ್ಪನ ಪಾಲಿಗೆ ಬಂದದ್ದು ಕಸಕಡ್ಡಿಗಳೇ..ಅಡಿಕೆ ತೋಟ..ಸುಗ್ಗಿಕಾತ್ಗೆ ಆಗುವ ಗದ್ದೆ..ಗೋವೆಹಕ್ಲು..ಕಟ್ಟಕೆರೆಯ ಹರನೀರ ತೋಟ ಇವೆಲ್ಲ ದೊಡ್ಡಪ್ಪನ ದೊಡ್ಡಹೊಟ್ಟೆಗಿಳಿದವು..ವಗ್ಗಾರಿ ಬರುವ ತೋಟ..ಮಕ್ಕಿಗದ್ದೆ..ಹೊಡ್ಳ ಗದ್ದೆ..ಗೇಣಿಗದ್ದೆಗಳು ಹೆಡ್ಡ ತಮ್ಮನ ಪಾಲಾದವು..ಒಂದು ಸ್ಟೀಲಿನ ತಟ್ಟೆ..ಎರಡು ತಪ್ಪಲೆ..ಹಾಲುಕಾಸು ಹಂಚು..ಕಂಟ ಹಿಸಿದ ಕುಡಕೆ..ಕತ್ತದ ಸಿಕ್ಕ..ಬೊಮ್ಮನಕೇರಿಯ ಹಸೆ..ಸಪ್ಒನ ಕಂಬಳಿ..ಇವು ನನ್ನಪ್ಪನ ಪಾಲು..ದೇವರು ನಮ್ಮನೆ ದೊಡ್ಡೊಳ ಬಿಡಲೇ ಇಲ್ಲ.ಸಲಿಗ್ರಾಮ..ರಾಮ ಸೀತೆ..ಎಲ್ಲರಿಗೂ ಸ್ನಾನ ದೀಪದ ಯೋಗ ನನ್ನಪ್ಪನಿಗೇ ಬಂತು..ಅದಕೇ ಈಗ ನೆಮ್ಮದಿಯಿಂದ ಉಣ್ಣುತ್ತಿದ್ದಾನೆ..ಬಾಬು ತುಂಬು ಕುಟುಂಬದೊಂದಿಗೆ..

RELATED ARTICLES  ಜಿಲ್ಲೆಯ ಬಿಜೆಪಿಯಲ್ಲಿ ಹಲವು ಬಣ ಜಗಳಗಳು ಚಿಗುರೊಡೆಯುತ್ತಿವೆ.

(ಇಷ್ಟು ಸಾಕು..ಮುಂದಿನವಾರ ನಿಮ್ಮ ದಿನ ನೆನಪಿಸುವೆ)
ತಿಗಣೇಶ ಮಾಗೋಡ.