Home State News ಮಾನವೀಯತೆ ಮೆರೆದಿರುವ ಪೊಲೀಸರು.

ಮಾನವೀಯತೆ ಮೆರೆದಿರುವ ಪೊಲೀಸರು.

ಮಂಗಳೂರು: ಮೃತ ವೃದ್ಧರೊಬ್ಬರ ಶವವನ್ನು ಮನೆಗೆ ಸ್ಥಳಾಂತರಿಸಲು ಕುಟುಂಬವೊಂದು ಹಿಂಜರಿದ ಸಂದರ್ಭದಲ್ಲಿ ಪೊಲೀಸರೇ ಹೆಗಲು ಕೊಟ್ಟು ಮಾನವೀಯತೆ ಮೆರೆದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಸಮೀಪದ ಕೊಯಿಲದ ಗುಡ್ಡದಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕರೆ ತಾಲೂಕಿನ ಜಂಬದಹಳ್ಳಿಯ 80 ವರ್ಷದ ಅಸಲಪ್ಪ ಎಂಬುವರು 20 ವರ್ಷಗಳಿಂದ ಕೊಯಿಲದ ಗುಲ್ಲೊಡಿಯಲ್ಲಿ ವಾಸವಾಗಿದ್ದರು. ಶನಿವಾರ ಮಧ್ಯಾಹ್ನ ಜಂಬದಹಳ್ಳಿಗೆ ಹೋಗಲು ಕಾಲುದಾರಿ ನಡೆದುಕೊಂಡು ಹೋಗುವಾಗ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದರು.
ಕೊಯಿಲದಲ್ಲಿ ಭಾನುವಾರದಿಂದ ದೈವದ ನೇಮ ಮತ್ತು ಜಾತ್ರೆ ಪ್ರಾರಂಭವಾಗಲಿದೆ. ಶವ ಮುಟ್ಟಿದರೆ ಮೈಲಿಗೆ ಆಗುತ್ತದೆ ಎಂಬ ನಂಬಿಕೆಯಲ್ಲಿ ಗ್ರಾಮದ ಯಾರೊಬ್ಬರೂ ಮೃತದೇಹ ಸಾಗಿಸಲು ನೆರವಿಗೆ ಬಂದಿರಲಿಲ್ಲ. ಇದರಿಂದ ಅಸಲಪ್ಪ ಅವರ ಮಗ ರವಿ ಚಿಂತಾಕ್ರಾಂತರಾಗಿದ್ದರು. ಸುದ್ದಿ ತಿಳಿದ ಕಡಬ ಪೊಲೀಸ್ ಠಾಣೆ ಸಬ್ ಇನ್ ಸ್ಪೆಕ್ಟಕ್ ಪ್ರಕಾಶ್ ದೇವಾಡಿಗ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ್ದರು.
ಮೃತದೇಹ ಇರುವ ಸ್ಥಳಕ್ಕೆ ಬರಲು ಗ್ರಾಮಸ್ಥರು ಒಪ್ಪಲಿಲ್ಲ. ಇದರಿಂದ ಮೃತ ವ್ಯಕ್ತಿಯ ಕುಟುಂಬ ತೀರಾ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಪೊಲೀಸರು ಅಧಿಕಾರಿಗಳು ಮೃತರ ಮಗನೊಂದಿಗೆ ಸೇರಿಕೊಂಡು ಶವ ಹೊರಲು ಹೆಗಲು ಕೊಟ್ಟರು. ಅರ್ಥ ಕಿ.ಮೀ ಹೊತ್ತು ಮೃತದೇಹವನ್ನು ಮನೆಗೆ ತಲುಪಿಸಿದರು.
ನಂತರ ಅಸಲಪ್ಪ ಅವರ ಜಮೀನಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮೃತದೇಹ ಹೊರಲು ನೆರವಾಗುವ ಮೂಲಕ ಶ್ಲಾಘನೀಯ ಕೆಲಸ ಮಾಡಿದ್ದಾರೆ ಎಂದು ದಕ್ಷಿಣ ಕನ್ನಡ ಎಸ್ ಪಿ ಡಾ.ಬಿ.ಆರ್. ರವಿಕಾಂತೇಗೌಡ ತಿಳಿಸಿದರು.