ಈ ಮೇಲಿನ ಪದಗಳು ಮನುಷ್ಯನ ಹೃದಯಾಂತರಾಳದಿಂದ ಬರುವ ಭಾವನೆಗಳು. ಸಂದರ್ಭಕ್ಕೆ ತಕ್ಕಂತೆ ಈ ಭಾವನೆಗಳು ಮನುಷ್ಯನಲ್ಲಿ ವ್ಯಕ್ತವಾಗುತ್ತದೆ. ಇವುಗಳು ಅರ್ಥದಲ್ಲಿ ಬೇರೆಯಾದರೂ ಮನಸ್ಸಿಗೆ ನೀಡುವ ಅನುಭವ ಹಾಗೂ ಮನುಷ್ಯನ ಹೃದಯಕ್ಕೆ ಸಂಬಂಧಿಸಿದ್ದಾಗಿದೆ.
ಮನುಷ್ಯನಿಗೆ ಎಲ್ಲಿಯವರೆವಿಗೆ ಆಸೆ ಎಂಬುದು ಇರುತ್ತದೋ ಅಲ್ಲಿಯವರೆವಿಗೆ ಈ ಪದಗಳ ಪೂರ್ಣವಾದ ಅವ್ಯಕ್ತ ಭಾವನೆ ಬರುವುದೇ ಇಲ್ಲ. ಪ್ರತಿಯೊಬ್ಬರೂ ಯಾವುದಾದರೂ ಒಂದು ಆಸೆಯನ್ನು ಹೊಂದಿರುತ್ತಾರೆ. ಸನ್ಯಾಸಿಯಾದರೂ ಕೂಡ ಮೋಕ್ಷವನ್ನು ಪಡೆಯಬೇಕೆಂಬ ಆಸೆಯನ್ನು ಹೊಂದಿರುತ್ತಾನೆ. ಮನುಷ್ಯ ತನ್ನ ಜೀವನದಲ್ಲಿ, ತೃಪ್ತಿಯಿಂದ ನೆಮ್ಮದಿ ಹಾಗೂ ಸಮಾಧಾನದಿಂದ ಸಂತೋಷ ಪಡೆಯಬಹುದು.
ಮೊದಲಿಗೆ ತೃಪ್ತಿಯ ಬಗ್ಗೆ ಹೇಳುವುದಾದರೆ, ಮನುಷ್ಯನಿಗೆ ಯಾವುದರಲ್ಲೂ ತೃಪ್ತಿ ಎನ್ನುವುದು ಇರುವುದಿಲ್ಲ. ಪ್ರತಿಯೊಂದು ವಿಷಯದಲ್ಲಿಯೂ ಅಲ್ಪ ತೃಪ್ತನಾಗಿರುತ್ತಾನೆ. ಪೂರ್ಣ ತೃಪ್ತಿ ಎಂಬುದು ಬರುವುದೇ ಇಲ್ಲ. ಮನುಷ್ಯನಿಗೆ ಹೊಟ್ಟೆ ತುಂಬಾ ಊಟ ಹಾಕಿದರೆ ತೃಪ್ತಿ ಉಂಟಾಗುತ್ತದೆ ಮನುಷ್ಯನನ್ನು ತೃಪ್ತಿ ಪಡಿಸಲು ಅದೊಂದು ಮಾತ್ರ ಸಾಧ್ಯ ಎಂದು ಹೇಳಬಹುದು. ಆದರೆ ಅದರಲ್ಲೂ ಅಲ್ಪ ತೃಪ್ತಿ ಇರುತ್ತದೆ. ಒಳ್ಳೆಯ ಹಬ್ಬದ ಊಟ ಬಡಿಸಿ, ಹೊಟ್ಟೆ ತುಂಬಾ ಊಟ ಮಾಡಿದವರನ್ನು ಊಟ ತೃಪ್ತಿಯಾಯಿತೆ ಎಂದು ಕೇಳಿದರೆ, ಅವರು ಹೊಟ್ಟೆ ತುಂಬಿತಪ್ಪಾ ಸಾಕಾಗಿ ಹೋಯಿತು, ಆದರೂ ಒಬ್ಬಟ್ಟು ಬಹಳ ಚೆನ್ನಾಗಿತ್ತು, ಇನ್ನೊಂದು ಹಾಕಿಸಿಕೊಳ್ಳಬೇಕು ಅಂತ ಇದ್ದೆ ಆದರೆ ಹೊಟ್ಟೆ ಭರ್ತಿಯಾಗಿತ್ತು ಸೇರಲೇ ಇಲ್ಲ ಎಂದು ಹೇಳಬಹುದು, ಅಲ್ಲಿಯೂ ಸಹ ಅವರಿಗೆ ಊಟದಲ್ಲಿ ತೃಪ್ತಿ ಸಿಕ್ಕಂತೆ ಆಗುವುದಿಲ್ಲ ಅಲ್ಲವೇ? ಹೊಟ್ಟೆ ತುಂಬಿದ್ದರೂ ಸಹ ಒಬ್ಬಟ್ಟಿನ ಮೇಲೆ ಕಣ್ಣು ಇರುತ್ತದೆ.
ಇನ್ನೂ ಹೊಟ್ಟೆ ಹಿಡಿಸಿದ್ದರೆ ಇನ್ನೆರಡು ಒಬ್ಬಟ್ಟು ಹಾಕಿಸಿಕೊಳ್ಳಬಹುದಿತ್ತು ಎಂಬ ಭಾವನೆ ಬಂದಿರುತ್ತದೆ. ಹೀಗೆ ಮನುಷ್ಯನಿಗೆ ಪ್ರತಿಯೊಂದು ವಿಷಯದಲ್ಲಿಯೂ ಅಂದರೆ, ಆಸ್ತಿ ಹಣ, ಕೀರ್ತಿ ಎಷ್ಟು ಸಂಪಾದಿಸಿದರೂ ಇನ್ನೂ ಸಂಪಾದಿಸಬೇಕು ಇನ್ನೂ ದೊಡ್ಡ ಸಾಹುಕಾರನಾಗಬೇಕು, ಇನ್ನೂ ಎತ್ತರಕ್ಕೆ ಬೆಳೆಯಬೇಕು ಎಂಬ ಆಸೆಯು ಮನೆ ಮಾಡಿರುತ್ತದೆ. ಮನೆಯ ಮೇಲೆ ಮನೆಯ ಕಟ್ಟಿ, ತಾನು ತಿಂದು ತನ್ನ ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳು ಕೂತು ತಿಂದರೂ ಸವೆಯದಂತಹ ಆಸ್ತಿ ಮಾಡಿದ್ದರೂ ಸಹ ಇನ್ನೂ ಬೇಕು ಎಂದು ಹಲಬುವರು ಇದ್ದಾರೆ. ವಾಮ ಮಾರ್ಗದಿಂದ ಹಣ ಸಂಪಾದಿಸಿದ್ದರೂ ಹಣ ಸಂಪಾದನೆ ಯಾಗುತ್ತಿದ್ದರೆ ಅದನ್ನೇ ಮುಂದುವರೆಸಿಕೊಂಡು ಹೋಗುತ್ತಾರೆ. ಹೇರಳವಾಗಿ ಹಣ ಬರುತ್ತಿದೆಯಲ್ಲಾ ಇನ್ನೇಕೆ ಸುಮ್ಮನೆ ಇರಬೇಕು? ಬಂದಷ್ಟು ಬರಲಿ, ಎಂಬ ಮನೋಭಾವನೆ ಹೊಂದಿ ಹಣ ಆಸ್ತಿ ಸಂಪಾದನೆ ಮಾಡುತ್ತಾ ಹೋದರೆ ಅವರ ಆಸೆಗೆ ಕೊನೆ ಎಲ್ಲಿ ಇರುತ್ತದೆ. ಮನುಷ್ಯನ ಜೀವ ಅಶಾಶ್ವತವಾದದ್ದು, ಮನುಷ್ಯ ಬರುವಾಗ ಏನೂ ತರುವುದಿಲ್ಲ, ಹೋಗುವಾಗ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಈ ಮದ್ಯೆ ಜೀವನದ ದಿನಗಳಲ್ಲಿ ಮಾತ್ರ ಸಂಪಾದನೆ ಮಾಡಲು ಮಿತಿಯೇ ಇರುವುದಿಲ್ಲ. ಯಾರು ಎಷ್ಟೇ ಸಂಪಾದನೆ ಮಾಡಿದರೂ ಅವರಿಗೆ ಎಷ್ಟು ಋಣವೋ ಅಷ್ಟು ಮಾತ್ರ ಅವರ ಬಳಿ ಉಳಿಯುತ್ತದೆ. ಉಳಿದ ಹಣ ಹಾಗೂ ಆಸ್ತಿ ಬೇರೆಯವರ ಸ್ವತ್ತಾಗುತ್ತದೆ. ಇವನು ಜೀವಿಸುವವರೆಗೂ ಹಣ ಆಸ್ತಿಯನ್ನು ಜವಾಬ್ದಾರಿಯಿಂದ ನೋಡಿಕೊಳ್ಳಬಹುದು. ಅಥವಾ ಮಕ್ಕಳಿದ್ದಲ್ಲಿ ನೋಡಿಕೊಳ್ಳಬಹುದು. ನಂತರ ಇವನ ಮೊಮ್ಮಕ್ಕಳ ಮನಸ್ಸಿನಲ್ಲಿ ತನ್ನ ತಾತ ಅಥವಾ ಅಪ್ಪ ಸಂಪಾದಿಸಿದ ಆಸ್ತಿಯಲ್ಲವೇ? ಎಂಬ ಮನೋಭಾವನೆ ಬಂದು ನೀರಿನಂತೆ ದುಂದುವೆಚ್ಚ ಮಾಡಿ ಆಸ್ತಿಯನ್ನು ಕರಗಿಸಿ ಬಿಡಬಹುದು. ಅಥವಾ ಬೇರೊಬ್ಬರ ಪಾಲಾಗಬಹುದು. ಎಷ್ಟು ದುಡಿದರೂ ತನ್ನ ಋಣವಷ್ಟು ಮಾತ್ರ ಅನುಭವಿಸುತ್ತಾನೆ. ಉಳಿದ ಹಣ ಆಸ್ತಿ ಬೇರೊಬ್ಬರ ಪಾಲಾಗಬಹುದು. ಅನ್ಯಮಾರ್ಗದಿಂದ ಸಂಪಾದಿಸಿದ ಹಣ ಅನ್ಯಮಾರ್ಗವಾಗಿ ಬೇರೊಬ್ಬರ ಪಾಲಾಗುತ್ತದೆ. ಹೇರಳವಾಗಿ ಹಣ ಆಸ್ತಿ ಸಂಪಾದಿಸಿದ ವ್ಯಕ್ತಿಯು ಚುನಾವಣೆಯಲ್ಲಿ ಸ್ಪರ್ಧಿಸಿದ್ದಲ್ಲಿ, ತಾನೇ ಗೆಲ್ಲಬೇಕೆಂಬ ಹಠದಿಂದ ಹಣವನ್ನು ನೀರಿನಂತೆ ಚೆಲ್ಲಿ ಆಯ್ಕೆಯಾಗಬಹುದು. ಹಣ, ಮದ್ಯ ಇನ್ನಿತರೆ ವಸ್ತುಗಳನ್ನು ನೀಡಿ ಆಯ್ಕೆಯಾಗಬಹದು. ಆದರೆ ಹಣ ಮಾತ್ರ ವ್ಯರ್ಥವಾಗಿ ಖರ್ಚಾಗುತ್ತದೆ ವಿನಃ ಮಾನಸಿಕವಾಗಿ ಸಮಾಧಾನ ಇರುವುದಿಲ್ಲ.
ಚುನಾವಣೆಯಲ್ಲಿ ಖರ್ಚಾದ ಹಣವನ್ನು ಹೇಗಾದರೂ ಸಂಪಾದನೆ ಮಾಡಬೇಕೆಂಬ ಉದ್ದೇಶದಿಂದ ಅನ್ಯಮಾರ್ಗ ಹಿಡಿದು ಸಂಪಾದಿಸಿದಬಹುದು. ಹಣದ ಬಲದಿಂದ ಆಯ್ಕೆಯಾದ ಮನುಷ್ಯ ಎಂದಿಗೂ ಜನಪ್ರಿಯನಾಗಲಾರ. ಆದರೆ ಇರುವ ಹಣದಲ್ಲಿ ಜನಗಳಿಗೆ ಅನುಕೂಲವಾಗುವಂತಹ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಅದರಿಂದ ಜನಗಳಿಗೂ ಅನುಕೂಲವಾಗುತ್ತದೆ. ಜೊತೆಗೆ ಜನಪ್ರಿಯ ವ್ಯಕ್ತಿಯಾಗಬಹುದು. ಜನಪ್ರಿಯತೆಯನ್ನು ಯಾರಿಂದಲೂ ನಾಶಮಾಡಲು ಸಾಧ್ಯವಿಲ್ಲ. ಆದರೆ ಹಣವನ್ನು ಖರ್ಚುಮಾಡಿ ಆಯ್ಕೆಯಾದ ವ್ಯಕ್ತಿಯು ಮನಸ್ತಾಪ ಬಂದಲ್ಲಿ, ತನ್ನವರಿಂದಲೇ ಸೋಲುವಂತಹ ಸನ್ನಿವೇಶ ನಿರ್ಮಾಣವಾಗುತ್ತದೆ. ಆದ್ದರಿಂದಲೇ ನ್ಯಾಯ ಮಾರ್ಗದಿಂದ ತನಗೆ ಎಷ್ಟು ಬೇಕೋ ಅಷ್ಟು ಮಾತ್ರ ದುಡಿದು ಆಸ್ತಿಯನ್ನು ಸಂಪಾದಿಸಿದ್ದಲ್ಲಿ ಇರುವಷ್ಟು ಕಾಲ ಸಮಾಧಾನದಿಂದ ಇರಬಹುದು. ಹೆಚ್ಚಿಗೆ ಸಂಪಾದಿಸಿದ್ದಲ್ಲಿ, ಹಣ ಬೇರೆಯವರ ಪಾಲಾದರೆ ಅಥವಾ ಆದಾಯ ತೆರಿಗೆಯವರು ಬಂದು ಮುಟ್ಟುಗೋಲು ಹಾಕಿಕೊಂಡರೆ ಎರಡೂ ಕಡೆ ತೊಂದರೆಗೆ ಸಿಕ್ಕಿ ಬೀಳುವ ಸಾಧ್ಯತೆ ಇರುತ್ತದೆ. ಸಂಪಾದಿಸಿದ ಆಸ್ತಿ ಹೋಯಿತಲ್ಲಾ ಎಂಬ ದುಃಖ ಒಂದು ಕಡೆಯಾದರೆ ಶಿಕ್ಷೆ ಅನುಭವಿಸಬೇಕಲ್ಲಾ ಎಂಬ ಆತಂಕ ಭಯ ಎದುರಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಸನ್ನಿವೇಶ ಬಂದರೆ ಯಾರಿಗೂ ಸಮಾಧಾನ ಇರುವುದಿಲ್ಲ. ತೃಪ್ತಿ ಇದ್ದ ಕಡೆ ನೆಮ್ಮದಿ ಮನೆ ಮಾಡಿರುತ್ತದೆ. ಆದರೆ ಜೀವನದಲ್ಲಿ ಎಲ್ಲರಿಗೂ ಎಲ್ಲ ರೀತಿಯಿಂದಲೂ ತೃಪ್ತಿಯಾಗಲು ಸಾಧ್ಯವೇ ಇಲ್ಲ ಎನಿಸುತ್ತದೆ. ಯಾವುದಾದರೂ ಒಂದು ಲೋಪವು ಇದ್ದೇ ಇರುತ್ತದೆ.
ಮುಂದುವರೆಯುವುದು