ಶಿಕ್ಷಣ ಎನ್ನುವುದು ಮನುಷ್ಯನಿಗೆ ಅತ್ಯವಶ್ಯ ಹಾಗೂ ಜೀವನದ ಆಧಾರ ಎನ್ನುವಷ್ಟು ಜೀವನದಲ್ಲಿ ಹಾಸುಹೊಕ್ಕಿದೆ. ವಿದ್ಯೆ ಇದ್ದವನು ಎಲ್ಲೂ ಬದುಕಬಲ್ಲನು ಎನ್ನುವ ಮಾತೊಂದಿದೆ. ಈಗ ವಿದ್ಯೆ ಇಲ್ಲದ ವ್ಯಕ್ತಿಗೆ ಗೌರವ ಸಿಗುವುದೇ ಕಡಿಮೆಯಾಗಿದೆ. ವಿದ್ಯೆ ಇಲ್ಲದಿದ್ದರೂ ಅವನು ಗೌರವಾನ್ವಿತ ವ್ಯಕ್ತಿಯಾಗಿ ಬದುಕಬಹುದು ಎಂದು ನಾವು ಹೇಳಿದರೂ ಸಹ ಈಗ ಶಿಕ್ಷಣಕ್ಕೆ ಇರುವ ಮಹತ್ವ ಈಗ ಜನಸಾಮಾನ್ಯರಿಗೆ ಗೊತ್ತಾಗಿದೆ. ಬಡವ, ಮಧ್ಯಮ, ಶ್ರೀಮಂತ ಎನ್ನದೇ ಶಿಕ್ಷಣವನ್ನು ಕಲಿಸುತ್ತಾರೆ.
ಶಿಕ್ಷಣವನ್ನು ಮಕ್ಕಳಿಗೆ ಕಲಿಸಲು ಪಾಲಕರು ಹೇಗೆ ಕಲಿಸಲು ಮುಂದಾಗುತ್ತಿದ್ದಾರೋ ಹಾಗೆ ಈಗಿನ ಮಕ್ಕಳು ಕೂಡ ಪರೀಕ್ಷೆಯನ್ನು ಎದುರಿಸಲು ಸಿದ್ಧರಾಗುತ್ತಾರೆ. ಒಂದು ಕಾಲದಲ್ಲಿ ಅರವತ್ತು ಪರ್ಸೆಂಟೇಜ್ ತೆಗೆದರೆ ಪಸ್ಟ್ ಕ್ಲಾಸ್ ತನ್ನ ಮಗ/ಳು ಎಂದು ಹೆಮ್ಮೆ ಪಟ್ಟು ಸ್ವೀಟ್ ಹಂಚುತ್ತಿದ್ದರು. ಆದರೆ ಈಗ ಶೇಕಡ ತೊಂಬತ್ತಕ್ಕಿಂತ ಹೆಚ್ಚಿಗೆ ಅಂಕ ಪಡೆದರೆ ಮಾತ್ರ ಒಂದು ಮಟ್ಟಿಗೆ ಉತ್ತಮ ಅಂಕ ಬಂದಿದೆ ಎನ್ನುವಷ್ಟರ ಮಟ್ಟಿಗೆ ಶಿಕ್ಷಣ ಮುಂದುವರೆದಿದೆ. ಉದ್ಯೋಗಕ್ಕಾಗಿ ವಿದ್ಯೆ ಎಂದು ಮನಸ್ಥಿತಿ ಬಂದಾಗಿನಿಂದ ಓದಿಗೆ ಹೆಚ್ಚಿನದಾಗಿ ಮಹತ್ವ ಬಂದಿದೆ. ಹಾಗಾಗಿ ಶಿಕ್ಷಣ ಎನ್ನುವುದು ಓದು ಮುಕ್ಕಾಲು ಎನ್ನುವ ಗಾದೆಗೆ ಸೆಡ್ಡು ಹೊಡೆದು ನಿಂತಿದೆ.
ಮಕ್ಕಳು ಹೆಚ್ಚಿನ ಅಂಕ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ. ಪರೀಕ್ಷೆಯ ದಿನಗಳು ಹತ್ತಿರವಾಗುತ್ತಿದ್ದಂತೆ ತಮ್ಮ ವಯಕ್ತಿಕ ಚಟುವಟಿಕೆಗಳನ್ನು ಕೂಡ ಬದಿಗೊತ್ತಿ ಓದುತ್ತಾರೆ. ಹಗಲು ರಾತ್ರೆ ಶ್ರಮವಹಿಸಿ ಓದನ್ನು ಮುಗಿಸಿ ಪರೀಕ್ಷೆಯನ್ನು ಎದುರಿಸುತ್ತಾರೆ. ಎಲ್ಲ ಮಕ್ಕಳು ಮತ್ತು ಪಾಲಕರದ್ದು ಒಂದೇ ಹಂಬಲ ತುಂಬಾ ಅಂಕಗಳನ್ನು ಪಡೆಯಬೇಕು ಉತ್ತಮವಾದ ನೌಕರಿಗೆ ಹೋಗಬೇಕು. ಅದಕ್ಕಾಗಿ ಓದಬೇಕು.
ಉನ್ನತವಾದ ಹುದ್ದೆಯ ಅವಶ್ಯಕಥೆ ಇದೆ. ಸಣ್ಣ ಸಣ್ಣ ನೌಕರಿಯನ್ನು ಮಾಡಿ ಬರುವ ಸಂಬಳ ಈಗಿನ ದುಬಾರಿ ಜೀವನ ಮಟ್ಟಕ್ಕೆ ಸಾಕಾಗುವುದಿಲ್ಲ. ಅದರಲ್ಲೂ ಮೊದಲಿನಂತ ಸಾಧಾರಣ ಜೀವನ ಈಗಿಲ್ಲ. ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎನ್ನುತ್ತ ಪ್ಯಾಶನ್ ಜಗತ್ತಿಗೂ ಒಡ್ಡಿರುವುದರಿಂದ ತಿಂದುಂಡು ಮಾಡುವುದಕ್ಕಿಂತ ಪ್ಯಾಶನ್ ಎನ್ನುವುದಕ್ಕೆ ಹೆಚ್ಚಿನ ಖರ್ಚು ವೆಚ್ಚವಾಗುತ್ತದೆ. ಅದಕ್ಕಾಗಿ ತಿಂಗಳಿಗೆ ಲಕ್ಷಕ್ಕೆ ಹತ್ತಿರವಾದ ಎಂಟಂಕಿಗಿಂತ ಹೆಚ್ಚಿಗೆ ಸಂಬಳವನ್ನು ತರಲೇ ಬೇಕು. ಇಲ್ಲವಾದಲ್ಲಿ ಬೇಕು ಬೇಕೆಂಬಂತೆ ಬದುಕಲು ಸಾಧ್ಯವಾಗುವುದಿಲ್ಲ. ಮತ್ತೆ ತಮ್ಮ ಮಕ್ಕಳಿಗೆ ಶಿಕ್ಷಣ ಕಲಿಸಬೇಕು ಎಂದರೆ ಅಲ್ಲಿಯೂ ದುಬಾರಿಯಾಗಿದೆ. ಡೊನೆಶನ್ ರೂಪದಲ್ಲಿ ಕೊಡಬೇಕಾದ ಹಣ ಹೆತ್ತವರಿಗೆ ಬರುವ ಆದಾಯಕ್ಕಿಂತ ಹೆಚ್ಚಿಗೆಯಾಗುತ್ತಿದೆ. ತಂದೆತಾಯಿಯ ಕನಸು ತಮ್ಮ ಮಗ/ಳು ಚೆನ್ನಾಗಿ ಓದಬೇಕು. ಒಳ್ಳೆಯ ಉದ್ಯೋಗಕ್ಕೆ ಸೇರಬೇಕು ಎಂದರೆ ಇವರು ಮಕ್ಕಳಾದಾಗ ಒಳ್ಳೆಯ ಶಿಕ್ಷಣವನ್ನು ಕಲಿತು ದೊಡ್ಡ ಉದ್ಯೋಗ ಅರಸಲೇ ಬೇಕು.
ಅಂದರೆ ಇದೊಂದು ತರ ನೀರಿನ ಚಕ್ರದಂತೆ ಮಳೆಯಾಗಿ ಭೂವಿಗಿಳಿದು ಸಾಗರದಲ್ಲಿ ಸೇರಿ ಆವಿಯಾಗಿ ಆಕಾಶದಲ್ಲಿ ಘನರೂಪತಾಳಿ ಮತ್ತೆ ಹನಿಯಾಗಿ ಭೂವಿಗಿಳಿದಂತೆ; ಅಪ್ಪ ಅಮ್ಮ ಓದಿ ಮಕ್ಕಳಿಗೆ ವಿದ್ಯೆ ಕಲಿಸಬೇಕು. ಮತ್ತೆ ತಮ್ಮ ಮಕ್ಕಳಿಗೆ ವಿದ್ಯೆ ಕಲಿಸಬೇಕು ಎಂದರೆ ತಾವು ಉನ್ನತ ಶಿಕ್ಷಣ ಪಡೆದಿರಬೇಕು. ಆಗ ಅಪ್ಪ, ಮಗ, ಮೊಮ್ಮಗ ಎನ್ನುವ ಸರಪಳಿ ಶಿಕ್ಷಣದಲ್ಲಿಯೂ ಸೇರಿದೆ.
ಕಾಲಮಾನಕ್ಕೆ ತಕ್ಕಂತೆ ಹೊಂದಿಕೊಂಡು ಹೋಗಬೇಕು ಎಂದರೆ ಶಿಕ್ಷಣ ಮನುಷ್ಯನಿಗೆ ಅತೀ ಅವಶ್ಯವಾಗಿದೆ. ಶಿಕ್ಷಣದಿಂದ ತಾನು ಅಂದುಕಂಡಿದ್ದು ಸಾಧಿಸಿಬಿಡುತ್ತಾನೆ ಎಂದಲ್ಲ. ಆದರೆ ಮುಂದಿನ ಬದುಕಿಗೆ ಬೇಕಾಗಿರುವುದು ಶಿಕ್ಷಣ. ಪ್ರತೀ ಕ್ಷೇತ್ರದಲ್ಲೂ ತಂತ್ರಜ್ಞಾನದ ಬಳಕೆಯ ಜೊತೆ ಶಿಕ್ಷಣವೂ ಬೇಕು.ಅದಕ್ಕಾಗಿ ಮಕ್ಕಳು ಪರೀಕ್ಷೆಯನ್ನು ಸಫಲವಾಗಿ ಎದುರಿಸಬೇಕು. ಅದಕ್ಕಾಗಿ ಪೂರ್ವತಯಾರಿಯಾದ ಓದುಬರಹ ಕಷ್ಟ ಎನ್ನಿಸಿದರೂ ಮಾಡಲೇಬೇಕು. ವಿದ್ಯೆಯಂತಹ ಆಸ್ತಿಯನ್ನು ವಿದ್ಯಾರ್ಥಿ ಗಳಿಸಿದರೆ ಉಳಿದೆಲ್ಲವೂ ಅವನ ಬಳಿ ತಾನಾಗಿಯೇ ಬರುತ್ತದೆ.