ಲೇಖನ- ಎಮ್.ಎಸ್.ಶೋಭಿತ್ ಮೂಡ್ಕಣಿ

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ , ತಸ್ಮೈ ಶ್ರೀ ಗುರುವೇ ನಮಃ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಗುರುವಿಗೆ ತ್ರಿಮೂರ್ತಿಗಳ ಪರಮ ಪವಿತ್ರ ಸ್ಥಾನವನ್ನು ಕೊಟ್ಟು ಗೌರವಿಸಿದ್ದೇವೆ. ಬಹು ಹಿಂದೆಯೇ ಗುರುವಿನ ಗುಲಾಮನಾಗುವ ತಂಕ ದೊರೆಯದಣ್ಣ ಮುಕುತಿ ಎಂದು ದಾಸರು ಹಾಡಿ ನಲಿದಿದ್ದಾರೆ. ಹಾಗೆಯೇ ಗುರುವಿದ್ದ ಕ್ಷೇತ್ರವೂ ಪವಿತ್ರವೆಂದು, ದೈವೀಶಕ್ತಿಯುಳ್ಳ ಪುಣ್ಯಕ್ಷೇತ್ರವೆಂದು ತಿಳಿಯಲ್ಪಟ್ಟಿರುವ ಕ್ಷೇತ್ರವೇ ವರದಾಪುರ ಶ್ರೀ ಶ್ರೀಧರಾಶ್ರಮ.

ಸಾಗರದಿಂದ ಕೇವಲ ೮ ಕಿಮಿ ದೂರದ ಸಹ್ಯಾದ್ರಿ ಪರ್ವತದ ಶ್ರೇಣಿಯ ಒಂದು ಭಾಗದ ಮೇಲಿರುವ ಈ ಕ್ಷೇತ್ರ ತನ್ನ ಹಲವು ವೈಶಿಷ್ಟ್ಯಗಳಿಂದ ಆಸ್ತಿಕರನ್ನು ಬರಸೆಳೆದುಕೊಳ್ಳುತ್ತಿದೆ. ಈ ಬೆಟ್ಟದ ಪರಿಸರವು ಹಿಂದೆ ಅಗಸ್ತ್ಯರು, ವ್ಯಾಸರು ಒಳಗೊಂದು ಎಷ್ಟೋ ಸಿದ್ಧಪುರುಷರ, ಜ್ಞಾನಿಗಳ ನೆಲೆವೀಡಾಗಿತ್ತು ಎಂಬುದು ಐತಿಹ್ಯ. ೧೯೦೮ ರಲ್ಲಿ ದತ್ತಾತ್ರೇಯರ ಕೃಪೆಯಿಂದ ಜನಿಸಿದ ಶ್ರೀಗಳು ಬಾಲ್ಯದಲ್ಲಿಯೇ ತಾಯಿ, ತಂದೆ ಹಾಗು ಅಕ್ಕನನ್ನು ಕಳೆದುಕೊಂಡು ನಶ್ವರ ಜಗತ್ತಿನಿಂದ ವಿಮುಖರಾಗಿ ಆಧ್ಯಾತ್ಮದತ್ತ ಒಲವನ್ನು ತೋರಿಸಲಾರಂಭಿಸಿದರು. ಭಾರತದಾದ್ಯಂತ ಸಂಚರಿಸಿದ ಶ್ರೀ ಶ್ರೀಧರರು ೧೯೫೧ ಇಸವಿಯಲ್ಲಿ ಈ ಪ್ರದೇಶಕ್ಕೆ ಬಂದರು. ಈ ನೆಲದ ಮಹತ್ವವನ್ನು ಅರಿತ ಸ್ವಾಮಿಗಳು ಹಾಲು ಬಿದ್ದಿದ್ದ ಕ್ಷೇತ್ರವನ್ನು ಊರ್ಜಿತಾವಸ್ಥೆಗೆ ತಂದು ೧೯೫೪ ರಲ್ಲಿ ಆಶ್ರಮವೊಂದನ್ನು ಸ್ಥಾಪಿಸಿದರು.

ಪರ್ವತ ಶ್ರೇಣಿಯ ಒಂದು ಭಾಗವಾದ ಶ್ರೀ ಕ್ಷೇತ್ರ ವರದಪುರ ಅಥವಾ ವದ್ದಳ್ಳಿ ನಯನ ಮನೋಹರ ತಾಣ. ಇದು ಆಧ್ಯಾತ್ಮಿಕ ಗುರು ಶ್ರೀಧರಸ್ವಾಮಿಗಳ ಕಾರ್ಯ ಭೂಮಿ. ಇಲ್ಲಿನ ಗುಡ್ಡದ ಮೇಲಿರುವ ಶ್ರೀಧರಾಶ್ರಮದಿಂದ ಸುತ್ತಲೂ ದೃಷ್ಟಿ ಹಾಯಿಸಿದರೆ ನಿಸರ್ಗ ಸೌಂದರ್ಯ ಮನಸೆಳೆಯುತ್ತದೆ. ಆಕಾಶಕ್ಕೆ ಕೈ ಚಾಚಿರುವ ಗುಡ್ಡಬೆಟ್ಟಗಳ ಸಾಲು ಸಾಲು, ಹಸಿರು ಹಂದರವಾಗಿ ಕಂಗೊಳಿಸುವ ಅಡಕೆ ತೋಟ, ತಂಪು ಸೂಸುವ ತಂಗಾಳಿ, ಕಣ್ಣಂಚಿನವರೆಗೂ ಕಾಣುವ ಹಸಿರು ವನಸಿರಿ ನಮ್ಮನ್ನು ಪುಳಕಗೊಳಿಸುತ್ತದೆ. ಇಡೀ ಪರಿಸರವು ಬೆಟ್ಟಗುಡ್ಡಗಳಿಂದ ಕೂಡಿದ್ದು ಅಡಿಕೆ, ತೆಂಗು, ಬಾಳೆಗಳ ಹಸಿರು ಬನದ ವಾತಾವರಣವನ್ನು ತಂಪಾಗಿಸಿದೆ.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ

ಶ್ರೀಧರ ತೀರ್ಥದ ಪಕ್ಕ ಸುಮಾರು ೧೫೦ ಮೆಟ್ಟಿಲುಗಳನ್ನು ಹತ್ತಿದ್ದಲ್ಲಿ ಗುಡ್ಡದ ತುದಿಯಲ್ಲಿರುವ ಶ್ರೀ ಶ್ರೀಧರ ಸ್ವಾಮಿಗಳ ಸಮಾಧಿಯನ್ನು, ಮತ್ತು ಅಲ್ಲಿ ನಿಲ್ಲಿಸಿರುವ ಪರಮೇಶ್ವರನ ದೇಗುಲವನ್ನು ಕಾಣಬಹುದು.ಈ ದೇಗುಲದ ಪ್ರಾಂಗಣವು ಭಜನೆಗಳಿಗೆ, ಸತ್ಸಂಗಗಳಿಗೆ ಮೀಸಲಿರಿಸಲಾಗಿದೆ. ಇಲ್ಲಿಂದ ಮುಂದೆ ಸುಮಾರು ೧ ಕಿಮಿ ದೂರದಲ್ಲಿ ಬೆಟ್ಟವೇರಿದ್ದಲ್ಲಿ ಸ್ವತಃ ಶ್ರೀಗಳೇ ಸ್ಥಾಪಿಸಿದ ೩೦ ಅಡಿಯ ಧರ್ಮಧ್ವಜವನ್ನು ಕಾಣಬಹುದು. ಇಲ್ಲಿಂದ ಕಾಣುವ ಸುತ್ತಣದ ಪರಿಸರ ವರ್ಣನಾತೀತ. ಎತ್ತ ನೋಡಿದರೂ ಮೈದುಂಬಿಕೊಂಡ ಅರಣ್ಯಪ್ರದೇಶ, ದೂರದ ಸಹ್ಯಾದ್ರಿ, ಕೊಡಚಾದ್ರ್ ಬೆಟ್ಟಗಳ ಸಾಲು,ಇವುಗಳ ಚೆಲುವಿಗೆ ಕಳಶವಿಟ್ಟಂತೆ ಕಂಗೊಳಿಸುವ ಶರಾವತಿ ಹಿನ್ನೀರಿನ ರಮ್ಯನೋಟ ನೋಡುಗರ ಮೈಮನಗಳಿಗೆ ಹೆಚ್ಚು ಮುದವನ್ನು ನೀಡುತ್ತದೆ. ಸದ್ಗುರು ಭಗವಾನ್ ಶ್ರೀಧರ ಸ್ವಾಮೀಜಿಯವರು ಲೋಕೋದ್ಧಾರ ಗೈಯುತ್ತ 1951ರಲ್ಲಿ ಈ ರಮಣೀಯ ಸ್ಥಳಕ್ಕೆ ಪಾದಾರ್ಪಣೆ ಮಾಡಿದರು.

ಇಲ್ಲಿ ಆಧ್ಯಾತ್ಮದ ಬೆಳಕು ಬೀರಿದರು. ಇಲ್ಲಿಯೇ ಭಗವಂತನ ಪಾದ ಸೇರಿದರು. ಈ ಸ್ಥಳದಲ್ಲಿಯೇ ಶ್ರೀಧರಾಶ್ರಮ ತಲೆ ಎತ್ತಿದೆ. ದೇಶಾದ್ಯಂತ ಜಾತಿ ಮತ, ಭೇದವಿಲ್ಲದೆ ಶ್ರೀಧರ ಸ್ವಾಮೀಜಿಯವರನ್ನು ಆರಾಧಿಸುವ ಭಕ್ತರಿದ್ದಾರೆ. ಮಲೆನಾಡು ಪ್ರಾಂತ್ಯದ್ಲ್ಲಲಿ ಅದರಲ್ಲೂ ಹವ್ಯಕರಲ್ಲಿ ಶ್ರೀಧರ ಸ್ವಾಮೀಜಿಯವರ ಭಾವಚಿತ್ರ ಇಲ್ಲದ ಮನೆಯೇ ಇಲ್ಲವೆನ್ನಬಹುದು. ಭಕ್ತರಿಂದ ಪಾದ ಕಾಣಿಕೆ ಸೇರಿದಂತೆ ಯಾವುದೇ ರೀತಿಯ ಕಾಣಿಕೆಯನ್ನು ಅವರು ಸ್ವೀಕರಿಸುತ್ತಿರಲಿಲ್ಲ. ಆದರೂ ಈ ಕ್ಷೇತ್ರಕ್ಕೆ ಬಂದ ಭಕ್ತರು ಹಸಿದು ಹಾಗೇ ಹಿಂದಿರುಗಬಾರದೆಂಬ ದೃಷ್ಟಿಯಿಂದ ಆಶ್ರಮದಲ್ಲಿ ಅನ್ನ ದಾಸೋಹ ಪ್ರಾರಂಭಿಸಿದ್ದರು. ಅದು ಈಗಲೂ ನಡೆದುಕೊಂಡು ಬಂದಿದೆ. ಸಾವಿರ ಭಕ್ತರು ಏಕಕಾಲಕ್ಕೆ ಊಟ ಮಾಡುವ ವ್ಯವಸ್ಥೆಯಿದೆ ಪ್ರಾಕೃತಿಕ ಚೆಲುವಿಗೆ ಏನು ಕೊರತೆಯಿಲ್ಲದಿದ್ದರೂ ನೀರಿನ ಅಭಾವವನ್ನರಿತ ಸ್ವಾಮಿಗಳು ಪರ್ವತದ ಮಧ್ಯ ಭಾಗದಲ್ಲಿ ಜಲನಿಧಿಯ ಇರುವಿಕೆಯನ್ನು ಕಂಡು ತಮ್ಮ ಬೊಗಸೆಯಿಂದಲೇ ಅದನ್ನು ಭೂಮಿಯಿಂದ ಹೊರತೆಗೆದರು

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ -

ಅದೇ ಇಂದಿನ ಪರಮ ಪವಿತ್ರ ಶ್ರೀಧರ ತೀರ್ಥ. ವರ್ಷದ ೩೬೫ ದಿನವೂ ಇಲ್ಲಿರುವ ಬಸವನ ಬಾಯಿಯಿಂದ ನೀರು ದುಮ್ಮಿಕ್ಕುತ್ತಲೇ ಇರುತ್ತದೆ. ಈ ತೀರ್ಥವನ್ನು ಸೇವಿಸಿದ್ದಲ್ಲಿ, ಸ್ನಾನ ಮಾಡಿದ್ದಲ್ಲಿ ಅನೇಕ ವ್ಯಾಧಿ, ಭಾದೆಗಳು ದೂರವಾಗುತ್ತದೆ ಎಂಬ ನಂಬಿಕೆಯನ್ನು ಹೊತ್ತು ಪ್ರತಿನಿತ್ಯ ಇಲ್ಲಿ ಸ್ನಾನಮಾಡಲು, ಸೇವಿಸಲು ಭಕ್ತಾಧಿಗಳು ಮುಗಿಬೀಳುವುದು ಸಾಮಾನ್ಯವಾಗಿದೆ. 1973ರಲ್ಲಿ ಶ್ರೀಧರ ಸ್ವಾಮಿಗಳು ತಮ್ಮ ಭೌತಿಕ ಶರೀರವನ್ನು ತ್ಯಜಿಸಿದರೂ ಸಹ ಅವರ ಕೃಪೆ, ಆಶೀರ್ವಾದ, ದೈವೀ ಶಕ್ತಿಯು ಇಲ್ಲಿ ಕೇಂದ್ರಿತವಾದುದರಿಂದ ಏಕಾಂತವನ್ನು ಬಯಸುವ, ಮನಃಶಾಂತಿಯನ್ನು ಅರಸಿ ಬರುವ ಸರ್ವರಿಗೂ ಇದು ಆಧ್ಯಾತ್ಮಿಕ ನೆಲೆಯಾಗಿ ಪರಿಣಮಿಸಿದೆ. ಬರುವ ಎಲ್ಲ ಭಕ್ತರಿಗೂ ಭೋಜನ ವ್ಯವಸ್ಥೆ, ತಂಗಲು ಕೊಠಡಿಗಳ ಸವಲತ್ತುಗಳಿವೆ.
ಶ್ರೀಧರಾಶ್ರಮದ ಸುವರ್ಣ ಮಹೋತ್ಸವದ ಅಂಗವಾಗಿ ಶ್ರೀಧರ ಆರೋಗ್ಯ ಘಟಕ, ಶ್ರೀಧರ ಸಂಜೀವಿನಿ, ಹಾಗು ಶ್ರೀಧರ ವಿದ್ಯಾನಿಕೇತನಗಳು ಈಗಾಗಲೇ ಆರಂಭಗೊಂಡಿವೆ. ಸುಸಜ್ಜಿತ ಭೋಜನಶಾಲೆ, ಧ್ಯಾನಮಂದಿರ, ಗೋಶಾಲೆ, ಜನ ವಸತಿ ಕಟ್ಟಡಗಳು ಇಲ್ಲಿವೆ. ಶಿವರಾತ್ರಿ, ನವರಾತ್ರಿ ಹಾಗು ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆ, ಯಜ್ಞ ಯಾಗಾದಿಗಳು ಇಲ್ಲಿ ನಡೆಯುತ್ತವೆ.. ಶ್ರೀಧರ ಆರೋಗ್ಯ ಘಟಕದಿಂದ ಆರೋಗ್ಯ ತಪಾಸಣಾ ಶಿಬಿರ ನಡೆಸಿ ಉಚಿತ ಔಷಧಿ ನೀಡಲಾಗುತ್ತಿದೆ. ಶ್ರೀಧರ ಸಂಜೀವಿನಿ ಯೋಜನೆಯಡಿ ಆರ್ಥಿಕವಾಗಿ ದುರ್ಬಲರಾದವರಿಗೆ ವೈದ್ಯಕೀಯ ಚಿಕಿತ್ಸೆ, ಫ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದೆ. ಇಂಥಹ ಒಂದು ಪುಣ್ಯ ಕ್ಷೇತ್ರಕ್ಕೆ ತಪ್ಪದೆ ಭೇಟಿ ನೀಡಿ.