ಒಂದಲ್ಲ; ಎರಡಲ್ಲ, ಒಂಭತ್ತು ಜಿಲ್ಲೆಗಳ ಉತ್ಸಾಹದ ಚಿಲುಮೆಯಂತಿರುವ ಹದಿಹರೆಯದವರು, ಪ್ರೌಡಪಾರಂಗತರು, ಪರಿಪಕ್ವ ಪಂಡಿತರು, ಚಿಣ್ಣ-ಚಿನ್ನಿಗರು ಮುಂತಾದವರನ್ನು ಕರೆದು ಅವರಲ್ಲಿ ಹುದುಗಿದ್ದ ಕಲೆಯನ್ನು ವ್ಯಕ್ತಿಗತವಾಗಿ ಅಥವಾ ಮೇಳ ಸಮ್ಮೇಳಗಳೊಂದಿಗೆ ಅಭಿವ್ಯಕ್ತಪಡಿಸಿ ಸೇರುವ ಸಾವಿರಾರು ಪ್ರೇಕ್ಷಕರನ್ನು ತಣಿಸಿ ತಾವು ತಣಿದು ಬೆಳೆದು ಬೆಳೆಸುವುದಕ್ಕೆ ವೇದಿಕೆಯನ್ನು ಒದಗಿಸಿಕೊಡುವ ಉದ್ದೇಶದಿಂದಲೇ ಹಮ್ಮಿಕೊಂಡ ಸಾಂಸ್ಕೃತಿಕ ಹಬ್ಬ ಈ “ಮಲೆನಾಡ ಉತ್ಸವ”. ಈ ಹಬ್ಬವು 2006 ರಿಂದ ಇಲ್ಲಿಯವರೆಗೆ ಅವಿರತವಾಗಿ ಬೆಳೆದುಕೊಂಡು ಬರುತ್ತಾ ಇಂದು ” ಸಂಸ್ಕ್ರತಿ ಕುಂಭ” ಎಂಬ ಹೆಸರಿನಲ್ಲಿ ವಿಜೃಂಭಣೆಯ ಜಾನಪದ ಸಂಗಮವಾಗಿ ಹೊರಹೊಮ್ಮಿದೆ. ಒಂಭತ್ತು ಜಿಲ್ಲೆಗೆ ಸೀಮಿತವಾಗಿದ್ದ ನಮ್ಮ ಜಾನಪದ ಕಳಕಳಿ ಇಂದು ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ಹಬ್ಬಿದೆ. ಕರ್ನಾಟಕದಲ್ಲಿನ ಎಲ್ಲಾ ಜಿಲ್ಲೆಗಳ ಕಲಾಪ್ರದರ್ಶನದ ವೇದಿಕೆಯೇ ನಮ್ಮ “ಸಂಸ್ಕ್ರತಿ ಕುಂಭ – ಮಲೆನಾಡ ಉತ್ಸವ 2018”

ಧಾರ್ಮಿಕ ಕ್ಷೇತ್ರವಾಗಿದ್ದ ಬಂಗಾರಮಕ್ಕಿ ಇಂದು ಅನ್ನದಾನದ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರ, ಸಾಂಸ್ಕೃತಿಕ, ಸಾಹಿತ್ಯ, ಸಂಗೀತ, ಕಲೆ ಮುಂತಾದ ಬಹುಮುಖಿ ಸಮಾಜ ಸೇವಾ ಯೋಜನೆಗಳನ್ನು ಕಾರ್ಯರೂಪಕ್ಕೆ ಇಳಿಸಿ ಪ್ರಸಿದ್ಧಿ ಪಡೆದ ಶ್ರೀ ಕ್ಷೇತ್ರ ಬಂಗಾರಮಕ್ಕಿ ಎನ್ನಿಸಿದೆ.

ಹನುಮನ ಹುಟ್ಟೂರು ಎಂಬ ಸ್ಥಳ ಪುರಾಣವನ್ನೂ ಪಡೆದಿರುವ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವರಿಗೆ ಪ್ರತಿ ವರ್ಷವೂ ಹನುಮ ಜಯಂತಿ ಅಂದರೆ ಚೈತ್ರ ಶುದ್ಧ ಹುಣ್ಣಿಮೆ ದಿನದಂದು ರಥೋತ್ಸವ ನಡೆಯುತ್ತದೆ. ಅದೇ ಸಂದರ್ಭದಲ್ಲಿ ರಾಮ ನವಮಿಯಿಂದ ಹನುಮ ಜಯಂತಿಯವರೆಗೆ ಏಳು ದಿನಗಳ ತನಕ “ಸಂಸ್ಕ್ರತಿ ಕುಂಭ- ಮಲೆನಾಡ ಉತ್ಸವ” ನಡೆಯುತ್ತದೆ.

ಮುತ್ಸದ್ಧಿ, ಮಹತ್ವಾಕಾಂಕ್ಷಿ, ಅಸಾಧಾರಣ ಯೋಜಕ ಮಿಗಿಲಾದ ಮಾನವೀಯ ಕಳಕಳಿಯುಳ್ಳವರೂ ಆದ ಪ.ಪೂ. ಶ್ರೀ ಮಾರುತಿ ಗುರೂಜಿಯವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಅರ್ಥಪೂರ್ಣವಾದ ಯೋಜನೆಗಳಲ್ಲಿ ಪ್ರತಿ ವರ್ಷಗಳಿಗೊಮ್ಮೆ ಗೇರಸೊಪ್ಪೆಯಲ್ಲಿ ಹಮ್ಮಿಕೊಳ್ಳಲಾಗುವ ಈ ಜಾನಪದ ಮತ್ತು ಸಾಂಸ್ಕೃತಿಕ ಹಬ್ಬವು 2006 ರಲ್ಲಿ ಆರಂಭಗೊಂಡಿತು. ಕ್ರಮವಾಗಿ 2008,2010,2012 ಈ ಮೂರು ವರ್ಷ ಏಳು ದಿನಗಳ ಹಬ್ಬದಲ್ಲಿ ಮಲೆನಾಡಿನ ಮಕ್ಕಳು, ಯುವಕ, ಯುವತಿಯರು, ಪ್ರೌಢರು, ವೃದ್ಧ ವಿದ್ವಾಂಸರು ಈ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ಸಭಾಗೃಹದಲ್ಲಿ ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ತಮ್ಮ ಕಲೆ, ಕೌಶಲ್ಯ, ಪಾಂಡಿತ್ಯಗಳನ್ನು ಪ್ರದರ್ಶಿಸಿದ್ದಾರೆ.ತದನಂತರ ಈ ಕಾರ್ಯಕ್ರಮವು 2014, 2015, 2016 ರಲ್ಲಿ ಸಂಸ್ಕ್ರತಿ ಕುಂಭವಾಗಿ ರಾಜ್ಯದ ಅನೇಕ ಕಲಾವಿದರನ್ನು ಗುರುತಿಸಿ ಕಾರ್ಯಕ್ರಮ ನಡೆಸುತ್ತಾ ಬರುತ್ತಿದೆ.ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ವಾರ್ಷಿಕವಾಗಿ ನಡೆಸಲಾಗುತ್ತಿರುವ ರಥೋತ್ಸವದ ಸಂದರ್ಭದಲ್ಲಿ ಈ ವರ್ಷ ದಿನಾಂಕ 26-03-2018 ರಿಂದ 30-03-2018 ರವರೆಗೆ ಈ ಎಲ್ಲಾ ಜಿಲ್ಲೆಗಳ ಸಾಂಸ್ಕೃತಿಕ, ಸಾಹಿತ್ತಿಕ, ಶೈಕ್ಷಣಿಕ, ಜಾನಪದ ಪಳೆಯುಳಿಕೆಗಳ ಹಾಗೂ ಗ್ರಾಮೀಣ ಪ್ರತಿಭೆಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವುದೇ ಈ ಮಲೆನಾಡ ಉತ್ಸವದ ಹಿಂದಿರುವ ಉದ್ದೇಶ.ಪ್ರತಿ ವರ್ಷಕ್ಕೊಮ್ಮೆ ಶ್ರೀ ರಾಮನವಮಿಯಿಂದ ಹನುಮಾನ್ ಜಯಂತಿಯವರೆಗೆ ಸತತ 7 ದಿನಗಳು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರತಿ ದಿನವೂ ನಾಲ್ಕಾರು ಸಾವಿರ ಜನರು ಸೇರಲಿದ್ದು , ಎಲ್ಲರಿಗೂ ಉಚಿತ ಊಟೋಪಚಾರಗಳ ವ್ಯವಸ್ಥೆ ಇರುತ್ತದೆ. ರಾಜ್ಯ, ರಾಷ್ಟ್ರಮಟ್ಟದ ಗಣ್ಯ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ವೇದಿಕೆಗೆ ಆಹ್ವಾನಿಸಲಾಗುವುದು .ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ರಾಷ್ಟ್ರ ಮಟ್ಟದ ಒಬ್ಬರಿಗೆ ಶ್ರೀ ಕ್ಷೇತ್ರದಿಂದ ಶ್ರೀ ವೀರಾಂಜನೇಯ ಸು ಜ್ಞಾನಶ್ರೀ ಪ್ರಶಸ್ತಿ ನೀಡಲಾಗುವುದು. ಮತ್ತು 2ಜನ ರಾಜ್ಯಮಟ್ಟದ ವ್ಯಕ್ತಿಗಳಿಗೆ ಶ್ರೀ ವೀರಾಂಜನೇಯ ಸೃಜನಶ್ರೀ ಪ್ರಶಸ್ತಿ ಮತ್ತು 3 ಜನ ಮಹನೀಯರಿಗೆ ಶ್ರೀ ವೀರಾಂಜನೇಯ ಜಾನಪದಶ್ರೀ ಪ್ರಶಸ್ತಿಯನ್ನು ನೀಡಲಾಗುವುದು.

RELATED ARTICLES  ಬಲವಂತದ ಜೀವನ

ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಇದೇ ಮಾರ್ಚ್‌ 25 ರಿಂದ 31 ರವರೆಗೆ ಅಂದರೆ ಶ್ರೀ ರಾಮನವಮಿಯಿಂದ ಹನುಮ ಜಯಂತಿಯವರೆಗೆ ಶ್ರೀನಿವಾಸ ಕಲ್ಯಾಣೋತ್ಸವ, ಶರಾವತಿ ಕುಂಭ, ಸಂಸ್ಕ್ರತಿ ಕುಂಭ ಮಲೆನಾಡ ಉತ್ಸವ-2018 ಹಾಗೂ ಶ್ರೀ ವೀರಾಂಜನೇಯ ದೇವರ ಪುಷ್ಪರಥೋತ್ಸವ ಹಾಗೂ ಬೃಹ್ಮರಥೋತ್ಸವ ಮತ್ತು ವನವಾಸಿ ಶ್ರೀ ಸೀತಾರಾಮ ಲಕ್ಷ್ಮಣ ದೇವರ ವರ್ಧಂತಿ ಉತ್ಸವ ಜರುಗಲಿದೆ.

ದಿನಾಂಕ 26/03/2018 ಸೋಮವಾರ ಮುಂಜಾನೆ 05.45 ಕ್ಕೆ ಆರಂಭಗೊಳ್ಳುವ ಕುಂಭಮೇಳವು ದಿನಾಂಕ 29/03/2018 ರ ಮುಂಜಾನೆ 05.30 ಕ್ಕೆ ಮುಕ್ತಾಯಗೊಳ್ಳಲಿದ್ದು, ಈ ಶುಭಸಂದರ್ಭದಲ್ಲಿ ಸಾಧು-ಸಂತರು, ಗಣ್ಯರು, ಸಮಸ್ತ ಭಕ್ತರೂ ಶರಾವತಿಯ ಪವಿತ್ರ ಜಲದಲ್ಲಿ ಪುಣ್ಯಸ್ನಾನ ಮಾಡಲಿದ್ದಾರೆ.ಈ ಮೂರು ದಿನಗಳಕಾಲವೂ ಭಜನೆ ನಿರಂತರವಾಗಿರುತ್ತದೆ.ಇದರ ಜೊತೆಗೆ ತ್ರಿಕಾಲ ಪೂಜೆ ಹಾಗೂ ಹೋಮ ಹವನಾದಿಗಳು ಶರಾವತಿ ನದಿಯ ತಟದಲ್ಲಿ ನಡೆಯಲಿದೆ.ದಿನಾಂಕ 26/03/2018 ಸೋಮವಾರ ಮಧ್ಯಾಹ್ನ 05:00 ಗಂಟೆಗೆ ಸಂಸ್ಕ್ರತಿ ಕುಂಭ ಮಲೆನಾಡ ಉತ್ಸವ 2018 ನ್ನು ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ದಿವ್ಯ ಉಪಸ್ಥಿತಿಯಲ್ಲಿ ಹಾಗೂ ಅನೇಕ ಗಣ್ಯರ ಸಮ್ಮುಖದಲ್ಲಿ ಸಂಸ್ಕ್ರತಿ ಕುಂಭ ಮಲೆನಾಡ ಉತ್ಸವ 2018 ರ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ದೊರಕಲಿದೆ.

RELATED ARTICLES  ಚಿಂತನ -ಮಂಥನ 4 - ಆಹಾರ

ಜಾನಪದ ಸಂಗಮವಾದ ಈ ಸಂಸ್ಕ್ರತಿ ಕುಂಭ ಮಲೆನಾಡ ಉತ್ಸವದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹಿತ ಸಂಗೀತ, ನೃತ್ಯ, ಜಾನಪದ ಗೀತೆ ಗಾಯನ, ನರ್ತನ, ನಾಟಕ, ಯಕ್ಷಗಾನ, ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಳ್ಳಲಿವೆ.ವಿಶೇಷವಾಗಿ ಕರ್ನಾಟಕದ ವಿವಿಧ ಜಿಲ್ಲೆಗಳ ಜಾನಪದ ಕಲಾ ಪ್ರಕಾರಗಳ ಪ್ರದರ್ಶನ ಈ ಸಂದರ್ಭದಲ್ಲಿ ಜರುಗಲಿದೆ.

ಈ ಕಾರ್ಯಕ್ರಮದ ಅಂಗವಾಗಿ ದಿನಾಂಕ 26/03/2018 ರಿಂದ 30/03/2018 ರವರೆಗೆ ಪ್ರಸಿದ್ಧ ವೈಧ್ಯಾಧಿಕಾರಿಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.ಪ್ರತಿದಿನವೂ ಸಂಜೆ 05:00 ಗಂಟೆಯಿಂದ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರಿಂದ‌ ಸತ್ಸಂಗ ನಡೆಯಲಿದೆ. ಬಳಿಕ ವಿವಿಧ ಆಹ್ವಾನಿತ ಕಲಾ ತಂಡಗಳಿಂದ ಜನಪದ ಸಂಗಮ ನಡೆಯಲಿದೆ.ದಿನಾಂಕ 28/03/2018 ಬುಧವಾರದಂದು ಬೆಳಿಗ್ಗೆ 10:00 ಗಂಟೆಯಿಂದ ಕರ್ನಾಟಕ ಸರ್ಕಾರ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಉತ್ತರ ಕನ್ನಡ ಇವರ ಆಶ್ರಯದಲ್ಲಿ ಅಂಧರ ಸಮ್ಮೇಳನ ಹಾಗೂ ಗಾಯನ ಸ್ಪರ್ಧೆ ನಡೆಯಲಿದೆ.

ಉತ್ಸವದ ವಿಶೇಷ ಆಕರ್ಷಣೆಯಾಗಿ ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ (ರಿ.) ಹಾಗೂ ಅತಿಥಿ ಕಲಾವಿದರಿಂದ ದಿ:25/03/2018 ಶ್ರೀ ರಾಮನವಮಿಯಂದು “ಶನೀಶ್ವರ ಮಹಾತ್ಮೆ” ದಿ:31/03/2018 ಹನುಮ ಜಯಂತಿಯಂದು “ಸಮಗ್ರ ಕಂಸ” ಪ್ರದರ್ಶನಗೊಳ್ಳಲಿದೆ.

ವರದಿ:- ಎಮ್.ಎಸ್.ಶೋಭಿತ್ ಮೂಡ್ಕಣಿ