ಪ್ರಭಾ ಮತ್ತು ವೆಂಕಟ್ರಮಣ ಭಟ್ಟ ಪುಣೆ
೬೦. ಅದಲ್ಲದೇ ಈ ಹಣದ ಮೂಲಕ ಅನೇಕ ದೀನ-ದಲಿತರ, ಮುದುಕ-ತದುಕರ, ರೋಗಿ-ರುಜಿನಿಗಳ, ಅನ್ನ, ವಸ್ತ್ರ, ದಾರಿಖರ್ಚು, ಸಣ್ಣ-ಪುಟ್ಟ ಮದ್ದಿಗಾಗಿ ಸಹಾಯ ಮುಂತಾದವುಗಳನ್ನು ಒದಗಿಸಲೂ ಅನುಕೂಲವಾಯಿತು.
(ಇಸವಿ ಸನ ೧೯೬೫ರ ಸುಮಾರಿಗೆ ಶ್ರೀ ಅಣ್ಣಾ ಬುವಾ ರಾಮದಾಸಿ ಸಜ್ಜನಗಡ ಅವರಿಗೆ ಬರೆದ ಪತ್ರ)
||ಓಂ||
||ಶ್ರೀರಾಮ ಸಮರ್ಥ||
ಶ್ರೀ ಬದರಿಕಾಶ್ರಮ
ಭಾದ್ರಪದ ಶು| ೧೫
ಸ.ಭ. ಅಣ್ಣಾಬುವಾರಿಗೆ ಆಶೀರ್ವಾದ,
ಓಂ ನಮೋ ಭಗವತೇ ಶ್ರೀ ಸಮರ್ಥಾಯ|
ಇಂದು ಚಾತುರ್ಮಾಸ ಪೂರ್ಣಗೊಂಡ ದಿವಸ. ತಮ್ಮ ಪತ್ರ ತಲುಪಿ ೭-೮ ದಿನಗಳಾಗಿರಬೇಕು. ಚಾತುರ್ಮಾಸ ಮುಗಿದ ಮೇಲೆ ಉತ್ತರ ಕಳಿಸಬೇಕೆಂದು ಮನಸ್ಸಿಗೆ ಅನಿಸಿದ್ದರಿಂದ ತುಸು ತಡವಾಯಿತು.
ತಮ್ಮ ಮಾತಿನಂತೆ ಶ್ರೀಸಮರ್ಥರ ಕೃಪೆಯಿಂದ ಏನೂ ಕೊರತೆಯಾಗಲಿಲ್ಲ. ಈ ಎರಡು ತಿಂಗಳಲ್ಲಿ ಭಕ್ತಜನರಿಂದ ೧೨೭೫ ರೂಪಾಯಿ ತಂತಿಯಿಂದ ಬಂತು. ಅದರಲ್ಲಿ ನನ್ನ ಗುಹೆಯ ಹತ್ತಿರ ಇರುತ್ತಿರುವ ಸನ್ಯಾಸಿಗಳಿಗೆ ಸಂಪೂರ್ಣ ಒಂದು ತಿಂಗಳು ಭಿಕ್ಷೆಯ ಅನುಕೂಲ ಮಾಡಿಕೊಡಲಾಯಿತು.
ಇಲ್ಲಿಯ ಚಳಿಗೆ ಚಹಾ ಕುಡಿಯದಿದ್ದರೆ ಬೆಳಗಿನ ಶೌಚಾದಿ ಕಾರ್ಯಕ್ರಮಕ್ಕೆ ತೊಂದರೆಯಾಗುವದರಿಂದ ವಿಜಯದಶಮಿಯ ವರೆಗೆ ಅವರ ಚಹಾದ ಅನುಕೂಲತೆಯೂ ಇದರಲ್ಲೇ ಆಯಿತು. ಅದಲ್ಲದೇ ಈ ಹಣದ ಮೂಲಕ ಅನೇಕ ದೀನ-ದಲಿತರ, ಮುದುಕ-ತದುಕರ, ರೋಗಿ-ರುಜಿನಿಗಳ, ಅನ್ನ, ವಸ್ತ್ರ, ದಾರಿಖರ್ಚು, ಸಣ್ಣ-ಪುಟ್ಟ ಮದ್ದಿಗಾಗಿ ಸಹಾಯ ಮುಂತಾದವುಗಳನ್ನು ಒದಗಿಸಲೂ ಅನುಕೂಲವಾಯಿತು. ಬೆಲೆಯೇರಿಕೆ ಮಿತಿಮೀರಿದೆ. ಬರೇ ಒಂದು ಶೇರು ಹಿಟ್ಟಿಗೆ ಎರಡು ರೂಪಾಯಿ ಕೊಡಬೇಕಾಗುತ್ತದೆ.
ಶ್ರೀಸಮರ್ಥ ಕೃಪೆಯಿಂದ ನನ್ನ ಮೇಲೆ ಕೆಲವರ ಶ್ರದ್ಧೆಯಿದ್ದದ್ದರಿಂದ ನನಗೆ ಎಲ್ಲ ಸಾಮಾನು ಬಹಳ ಕಡಿಮೆ ಬೆಲೆಯಲ್ಲಿ ಸಿಕ್ಕಿತು. ಇಂದು ನಾಳೆನೇ ಹೊರಡುವವನಿದ್ದೆ. ಆದರೆ ವಿಜಯದಶಮಿಯವರೆಗೆ ಇರಬೇಕಾಗಿದೆ. ಭಿಕ್ಷೆಯ ಅನುಕೂಲ ಮಾಡಿರುವದರಿಂದ ನನಗೆ ಅಲ್ಲಿಯವರೆಗೆ ಇರಬೇಕಾಗಿದೆ. ಕೃಷ್ಣಾಷ್ಟಮಿ ಆದ ನಂತರ ಇಲ್ಲಿಯ ಎಲ್ಲ ಅನ್ನಛತ್ರಗಳು ಮುಚ್ಚಿಕೊಳ್ಳುತ್ತದೆ ಮತ್ತು ಸಾಧು-ಸನ್ಯಾಸಿ ಮೊದಲಾದ ವಿರಕ್ತರಿಗೆ ಭಿಕ್ಷೆಯ ದೃಷ್ಟಿಯಿಂದ ಬಹಳ ಕಷ್ಟವಾಗುತ್ತದೆಂದು ನಮ್ಮ ಛತ್ರ ಮುಚ್ಚದೇ ಮತ್ತೂ ೧೫ ದಿವಸ ಮುಂದುವರಿಸಿದ್ದೇವೆ.
ಆದರೆ ಅದಕ್ಕೂ ಹಿಟ್ಟು ಸಿಗುತ್ತಿಲ್ಲ ಎಂದು ಕೆಲವರು ಹೇಳುತ್ತಿದ್ದರು. ಹಾಗಾಗಿ ಅದರದ್ದೂ ಆಧಾರ ಈ ವರ್ಷ ಸಾಧುಸಂತರಿಗೆ ಇಲ್ಲವಾಗಿದೆ. ಶ್ರೀಸಮರ್ಥರ ಕೃಪೆ! ನನಗೆ ಮಾತ್ರ ಕಡಿಮೆ ದರದಲ್ಲೇ ಉತ್ತಮ ಗೋದಿಹಿಟ್ಟು ಸಿಕ್ಕಿತು. ಇನ್ನೂ ಇನ್ನೂರು-ಮುನ್ನೂರು ರೂಪಾಯಿ ಉಳಿದಿದೆ. ಈಗ ಸಾಧುಸಂತ ಜನರೂ ಹೆಚ್ಚಿಗೆ ಇಲ್ಲ. ಸಾಧಾರಣ ೧೫-೨೦ ಜನ ಮಾತ್ರ ಯಾವಾಗಲೂ ಇರುತ್ತಾರೆ. ಏನೇ ಇದ್ದರೂ ಇಷ್ಟು ಹಣ ಬೇಕಾದಂತೆ ಸಾಕಾಗುವಂತಿದೆ. ನಾರಾಯಣನ ಮನಸ್ಸಿನಲ್ಲಿ ಅವರ ಸೇವೆ ಈ ರೀತಿ ಮಾಡಬೇಕೆಂದಿದೆ. ಶ್ರೀಸಮರ್ಥರ ಕೃಪೆ!
(ಈ ಪತ್ರದ ಎರಡನೆಯ ಭಾಗ ಮುಂದುವರಿಯುವದು)