ತೃಪ್ತಿ- ನೆಮ್ಮದಿ ಸಂತೋಷ-ಸಮಾಧಾನಗಳು ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿರುವ ಬಗ್ಗೆ 4 ಭಾಗಗಳಲ್ಲಿ ತಿಳಿಸುವ ಪ್ರಯತ್ನ ಮಾಡಿದ್ದು, ಇದರಲ್ಲಿ ಮುಂದುವರೆದ ಭಾಗವನ್ನು ತಿಳಿಸಲಿಚ್ಛಿಸುತ್ತೇನೆ.
ಪೂರ್ಣವಾಗಿ ತೃಪ್ತಿ ನೆಮ್ಮದಿ ಇಲ್ಲದೆ ಇದ್ದರೂ ಸಹ, ಕಡೇಪಕ್ಷ ಇದ್ದುದ್ದರಲ್ಲಿ ಮನಸ್ಸಿಗೆ ಸ್ವಲ್ಪ ಸಮಾಧಾನ ಪಡೆದುಕೊಂಡು ಬದುಕಲೇ ಬೇಕಾಗಿರುತ್ತದೆ. ಜೀವನೋಪಾಯಕ್ಕಾಗಿ ಯಾವುದಾದರೂ ಕೆಲಸವನ್ನು ಮಾಡಬೇಕಾದ ಅನಿವಾರ್ಯ ಸನ್ನಿವೇಶ ಉದ್ಭವವಾಗುತ್ತದೆ. ಮನಸ್ಸಿಗೆ ಸಮಾಧಾನ ಇಲ್ಲದ ಯಾವುದೋ ಒಂದು ಕೆಲಸಕ್ಕೆ ಸೇರಿದ್ದರೆ ತೃಪ್ತಿಯೇ ಇರುವುದಿಲ್ಲ. ಎಷ್ಟೇ ಸಂಬಳ ಬಂದರೂ ಸಮಾಧಾನ ಇರುವುದಿಲ್ಲ. ಸಮಾಧಾನ ಇಲ್ಲದಿದ್ದಲ್ಲಿ ಸಂತೋಷ ಹೇಗೆ ಬರಲು ಸಾಧ್ಯ? ಅಲ್ಪ ತೃಪ್ತಿಯಿಂದ ಜೀವನ ನಡೆಸಬೇಕಾಗಿರುತ್ತದೆ. ಎಷ್ಟೇ ಸಾಧನೆ ಮಾಡಿದರೂ ಎಷ್ಟೇ ಕೀರ್ತಿಗಳಿಸಿದರೂ ಮನಸ್ಸಿನಲ್ಲಿ ಮರೆಯಲಾಗದ ದುಃಖ ಮನೆ ಮಾಡಿದ್ದರೆ, ಸಂತೋಷವಾಗಲೀ, ಸಮಾಧಾನವಾಗಲೀ ಅಥವಾ ತೃಪ್ತಿಯಾಗಲೀ ಇರುವುದೇ ಇಲ್ಲ. ಈಗ ಸ್ವಲ್ಪ ಸಮಾಧಾನವಾಯಿತು ಎಂದಷ್ಟೇ ಹೇಳಬಹದು. ಮನಸ್ಪೂರ್ತಿಯಾಗಿ ಸಮಾಧಾನವಾಯಿತು ಎಂದು ಹೇಳಲು ಬರುವುದಿಲ್ಲ. ಹೊರ ನೋಟಕ್ಕೆ ತೋರ್ಪಡೆಗಾಗಿ ಸಂತೋಷದಿಂದಿರುವಂತೆ ನಟಿಸಬಹುದಷ್ಟೇ. ಸಂತೋಷವೆಂಬುದು ಹೃದಯಾಂತರಾಳ ದಿಂದ ಬರುವುದೇ ಇಲ್ಲ. ಮೇಲ್ನೋಟಕ್ಕೆ ಸಂತಸವಾಗಿರುವಂತೆ ಕಾಣಬಹುದು. ಆದರೆ ಮನಸ್ಸಿನಲ್ಲಿ ನೋವು, ಚಿಂತೆ ಮನೆ ಮಾಡಿದ್ದರೆ ಅದನ್ನು ಸ್ವಲ್ಪ ಹೊತ್ತು ಮರೆಸಿ ಮೇಲ್ನೋಟಕ್ಕೆ ಸಂತೋಷ ವ್ಯಕ್ತಪಡಿಸಬಹುದಷ್ಟೇ. ಆದರೂ ಮನಸ್ಸಿನಲ್ಲಿ ತಳಮಳ ನಿರಾಸೆ ಮನೆ ಮಾಡಿರುತ್ತದೆ.
ಮನುಷ್ಯನು ತನ್ನವರನ್ನು ಕಳೆದುಕೊಂಡಾಗ ಎಷ್ಟು ಹಣ ಆಸ್ತಿ ಅಂತಸ್ತು ಸಂಪಾದಿಸಿದ್ದರೂ ಯಾವುದೂ ಸಹ ಅವನ ಮನಸ್ಸಿಗೆ ಸಂತೋಷ ಕೊಡುವುದಿಲ್ಲ. ಮನಸ್ಸಿನ ವ್ಯಥೆ ಅಥವಾ ನೋವುಗಳು ಸಾಧಿಸಿದ ಕಾರ್ಯದಿಂದ ಬರುವ ಸಂತೋಷ ಹಾಗೂ ಸಮಾಧಾನವನ್ನು ನುಂಗಿಬಿಡುತ್ತದೆ. ಅಂತಹ ಸನ್ನಿವೇಶದಲ್ಲಿ ಮನುಷ್ಯನಿಗೆ ಯಾವುದಾದರೂ ಕಾರ್ಯ ಕೈಗೂಡಿದಾಗ, ಸ್ವಲ್ಪ ಸಮಾಧಾನವಾಗಬಹುದೇ ವಿನಃ ಪೂರ್ಣ ಸಮಾಧಾನ ಎಂಬುದು ಇರುವುದಿಲ್ಲ. ಮನಸ್ಸಿನಲ್ಲಿರುವ ದುಃಖವು ಎಲ್ಲಾ ಸಂತೋಷ ಹಾಗೂ ಸಮಾಧಾನವನ್ನು ಹಾಳು ಮಾಡುತ್ತದೆ. ಸಂತೋಷವಾಗಿ ಜೀವನ ಕಳೆಯಲು ಸಾಧ್ಯವಾಗುವುದಿಲ್ಲ. ಮನಸ್ಸಿನಲ್ಲಿ ಚಿಂತೆ ಕಾಡುತ್ತಾ ಇರುತ್ತದೆ. ಮನಸ್ಸಿನಲ್ಲಿ ಚಿಂತೆ ಎಂಬುದು ಅವರಿಸಿದಾಗ ಸಂತೋಷ ಸಮಾಧಾನವು ಎಲ್ಲಿಂದ ಬರಲು ಸಾಧ್ಯ?
ತನ್ನ ಸುಖಕ್ಕಾಗಿ ಬೇರೊಬ್ಬರ ನೆಮ್ಮದಿಯನ್ನು ಬಲಿಕೊಟ್ಟು ತಾನೊಬ್ಬ ಸುಖದಿಂದ ಇರಲು ಸಾಧ್ಯವೇ ಇಲ್ಲ. ಯಾವಾಗಲೂ ಅಪರಾದದ ಪ್ರಜ್ಞೆ ಕಾಡುತ್ತಾ ಇರುತ್ತದೆ. ಆಸ್ತಿಗಾಗಿ ತನ್ನ ಒಡಹುಟ್ಟಿದವರಿಗೆ ತೊಂದರೆ ಕೊಟ್ಟು ತಾನೊಬ್ಬನೇ ಆಸ್ತಿ ಲಪಟಾಯಿಸಿದರೆ, ತನ್ನ ಆತ್ಮಸಾಕ್ಷಿ ಒಪ್ಪುವುದಿಲ್ಲ. ಅಕಸ್ಮಾತ್ ಒಂದು ವೇಳೆ ಬೇರೆಯವರಿಗೆ ಏನಾದರಾಗಲೀ ನನಗೇನು? ನಾನೊಬ್ಬ ಸುಖದಿಂದ ಇದ್ದರೆ ಸಾಕು ಎಂದು ನಿರ್ಧರಿಸಿ ಬೇರೊಬ್ಬರಿಗೆ ತೊಂದರೆ ಕೊಟ್ಟು ಸಂತೋಷ ಅನುಭವಿಸಿದರೆ ಅಂತಹವರನ್ನು ಮನುಷ್ಯ ಎನ್ನುವ ಬದಲು ರಾಕ್ಷಸ ಎಂದು ಪರಿಗಣಿಸಬಹುದು. ಇಬ್ಬರು ಅಥವಾ ಎಲ್ಲರೂ ಕೂಡಿ ಅನುಭವಿಸುವ ಸಂತೋಷ ಎಂಬ ಅವ್ಯಕ್ತ ಭಾವನೆಯು ಸದಾಕಾಲ ಎಲ್ಲರನ್ನು ಹಸನ್ಮುಖಿಯನ್ನಾಗಿರಿಸುತ್ತದೆ. ಇರುವುದರಲ್ಲಿ ಎಲ್ಲರೂ ಹಂಚಿಕೊಂಡು ಸಮಾಧಾನ ಚಿತ್ತದಿಂದ ಸಂಸಾರ ನಡೆಸಿದರೆ ಮಾನಸಿಕವಾಗಿ ಎಲ್ಲರಿಗೂ ಒಂದು ರೀತಿಯ ತೃಪ್ತಿ ಸಿಗುತ್ತದೆ. ಇದನ್ನು ಬಿಟ್ಟು ದುರಾಸೆಯಿಂದ ಎಲ್ಲರ ಆಸ್ತಿ ನನಗೇ ಸೇರಬೇಕು, ಯಾರಿಗೂ ಆಸ್ತಿ ಕೊಡಬಾರದು ಎಂದು ತೀರ್ಮಾನಿಸಿದರೆ, ಬೇರೆಯವರು ಆಸ್ತಿಯ ಹಕ್ಕಿಗಾಗಿ ಕೋರ್ಟ್ ಮೆಟ್ಟಿಲೇರುವ ಸನ್ನಿವೇಶ ಉಂಟಾಗಿ, ಇಬ್ಬರೂ ವ್ಯಥೆ ಪಡುವ ಪರಿಸ್ಥಿತಿ ನಿರ್ಮಾಣ ವಾಗುತ್ತದೆ. ಒಂದೇ ಕುಟುಂಬದವರು ಒಡಹುಟ್ಟಿದವರೆಂಬ ಭಾವನೆ ಇಟ್ಟುಕೊಂಡು ತಾನೂ ಬದುಕೋಣ ಇನ್ನೊಬ್ಬರೂ ನನ್ನಂತೆ ಬದುಕಲಿ ಎಂಬ ಮನೋಭಾವನೆ ಮೂಡಿ, ಬಂದಿದಷ್ಟೇ ಸಾಕು ಇರುವುದರಲ್ಲಿ ಎಲ್ಲರೂ ಸುಖವಾಗಿರೋಣ ಇನ್ನೂ ಹೆಚ್ಚಿಗೆ ಬೇಕಿದ್ದರೆ ಬೇರೆ ಕಡೆ ಕಷ್ಟಪಟ್ಟು ದುಡಿಯೋಣ ಎಂಬ ಭಾವನೆ ಬಂದಲ್ಲಿ ನಿಜಕ್ಕೂ ಅಂತಹ ಸಂಸಾರ ಒಳ್ಳೆಯ ಸುಖ ಸಂಸಾರವಾಗಿರುತ್ತದೆ. ಇಲ್ಲದಿದ್ದಲ್ಲಿ ಎಲ್ಲರೂ ಅನಿರೀಕ್ಷಿತ ಕಷ್ಟಕ್ಕೆ ಸಿಲುಕಬೇಕಾಗುತ್ತದೆ.
ಒಟ್ಟಿನಲ್ಲಿ ಹೇಳುವುದಾದರೆ, ಮನುಷ್ಯನು ಸುಖ, ಶಾಂತಿ, ನೆಮ್ಮದಿ, ತೃಪ್ತಿ ಸಮಾಧಾನ ಸಂತೋಷ ಎಲ್ಲವನ್ನು ಅನುಭವಿಸುವುದು ಅವನ ಕೈಯಲ್ಲಿ ಇದೆ. ಸ್ವಲ್ಪ ಅಜಾಗರೂಕನಾದರೂ ಅಪಾಯಕ್ಕೆ ಸಿಲುಕುವ ಸಂಭವ ಇದ್ದು, ಜೀವಮಾನ ಪೂರ್ತಿ ಪರಿತಪಿಸುವ ಸನ್ನಿವೇಶ ಬಂದೊದಗುತ್ತದೆ. ಮನುಷ್ಯ ಕೈಲಾದಷ್ಟು ಅನ್ಯ ಮಾರ್ಗ ಹಿಡಿಯದೆ ಸತ್ಯವಾದ ಮಾರ್ಗದಿಂದ ಆಸ್ತಿ ಸಂಪತ್ತು ಹಣ ಸಂಪಾದಿಸಿದರೆ ಯಾವತ್ತೂ ಭಯಪಡುವ ಸಂಭವ ಉದ್ಭವಿಸುವುದಿಲ್ಲ. ಶಾಂತಿ ಸಮಾಧಾನದಿಂದ ಜೀವನ ನಡೆಸಬಹುದು. ತಪ್ಪಿದ್ದಲ್ಲಿ “ಜೇಡ ಹೆಣೆದ ಬಲೆಯಲ್ಲಿ ಯಾವುದಾದರೂ ಕೀಟ ಸಿಕ್ಕಿಕೊಂಡಂತೆ” ಸಿಲುಕಿ ಒದ್ದಾಡಬೇಕಾಗುತ್ತದೆ. ಸಮಾಧಾನ ಚಿತ್ತದಿಂದ ವ್ಯವಹರಿಸಿ ಆಸ್ತಿ ಅಂತಸ್ತು ಸಂಪಾದಿಸಿದ್ದಲ್ಲಿ, ಮಾತ್ರ ಮನುಷ್ಯನು ತಕ್ಕ ಮಟ್ಟಿಗೆ ತೃಪ್ತಿಯ ಜೀವನ ನಡೆಸಬಹುದು. ಇಲ್ಲದಿದ್ದಲ್ಲಿ ಇದು ವಿರುದ್ದವಾಗುವ ಸಂಭವವೇ ಹೆಚ್ಚು.
ಮನುಷ್ಯನು ಒಂದಲ್ಲ ಒಂದು ರೀತಿಯಲ್ಲಿ ತೃಪ್ತಿ ಇಲ್ಲದ ಸಮಾಧಾನ ರಹಿತವಾದ ಜೀವನವನ್ನು ಸಾಗಿಸುತ್ತಾ ಇರುತ್ತಾನೆ. ಅನುಕೂಲಸ್ಥರ ಮಕ್ಕಳು ದೊಡ್ಡವರಾಗಿ ಜವಾಬ್ದಾರಿ ಹೆಗಲಿಗೆ ಬೀಳುವವರೆಗೂ ಮಾತ್ರ ಒಂದು ರೀತಿಯ ಸಂತೋಷ ಹಾಗೂ ಸಮಾಧಾನದಿಂದ ಇರಬಹುದು, ಅದರಲ್ಲೂ ಕೆಲವರಿಗೆ ಇದೂ ಕೂಡ ಮರೀಚಿಕೆಯಾಗಿರುತ್ತದೆ. ಬಡವರಾಗಿದ್ದಲ್ಲಿ ತನ್ನನ್ನು ಸಾಕಿ, ವಿದ್ಯಾವಂತರನ್ನಾಗಿ ಮಾಡಲು ಹೆತ್ತವರು ಪಡುವ ಕಷ್ಟವನ್ನು ನೋಡಿ ಮಕ್ಕಳ ಮನಸ್ಸಿಗೆ ಕೆಲವೊಮ್ಮೆ ನೋವುಂಟಾಗಬಹುದು. ತಾನು ದುಡಿದು, ಹೆತ್ತವರನ್ನು ಸರಿಯಾಗಿ ನೋಡಿಕೊಂಡರೆ ಆಗ ಮಾತ್ರ ಹೆತ್ತವರಿಗೆ ಜೀವನದಲ್ಲಿ ಸಮಾಧಾನವಾಗಿ ನಿಟ್ಟಿಸಿರು ಬಿಡಬಹುದು. ಮಕ್ಕಳು ಕೆಟ್ಟವರ ಸಹವಾಸ ಮಾಡಿ ದುಶ್ಚಟಗಳಿಗೆ ಬಲಿಯಾಗಿ ವಿದ್ಯೆಯನ್ನು ಸರಿಯಾಗಿ ಕಲಿಯದೆ, ಹೆತ್ತವರಿಗೆ ನೋವುಂಟು ಮಾಡಿ, ದೊಡ್ಡವರಾದ ಮೇಲೆ ಸರಿಯಾದ ಕೆಲಸ ಸಿಗದೆ, ಸಾಕಲಾಗದೆ ಹೆತ್ತವರನ್ನು ವೃದ್ದಾಶ್ರಮಕ್ಕೆ ಬಿಟ್ಟರೆ ಅಂತಹ ಸಂಸಾರದಲ್ಲಿ ಯಾರಿಗೂ ಮಾನಸಿಕವಾಗಿ ನೆಮ್ಮದಿ ಇರುವುದಿಲ್ಲ.
ಮುಂದುವರೆಯುತ್ತದೆ.