ಶ್ರೀಮತಿ ಪ್ರಭಾ ಮತ್ತು ವೆಂಕಟ್ರಮಣ ಭಟ್ಟ ಪುಣೆ.
ಕಳೆದ ವರ್ಷ ಈ ದಿನಗಳಲ್ಲಿ ಹಿಮಪಾತ ಪ್ರಾರಂಭವಾಗಿತ್ತೆಂದು ಎನ್ನುತ್ತಾರೆ. ಈ ವರ್ಷ ಇನ್ನೂ ಅಷ್ಟು ಚಳಿ ಬಿದ್ದಿಲ್ಲ. ಮಳೆಯೂ ತುಂಬಾ ಕಡಿಮೆ. ಚೆನ್ನಾಗಿ ಬಿಸಿಲು ಬೀಳುತ್ತಿದೆ. ಆದರೂ ಎಷ್ಟೆಂದರೂ ಹಿಮಾಲಯ!
(ಇಸವಿ ಸನ ೧೯೬೫ರ ಸುಮಾರಿಗೆ ಶ್ರೀ ಅಣ್ಣಾ ಬುವಾ ರಾಮದಾಸಿ ಸಜ್ಜನಗಡ ಅವರಿಗೆ ಬರೆದ ಪತ್ರದ ಎರಡನೆಯ ಭಾಗ)
ದಿನೇ ದಿನೇ ಚಳಿ ಹೆಚ್ಚಾಗುತ್ತಿದ್ದರೂ ನಮ್ಮ ಹತ್ತಿರ ಬೇಕಾದಷ್ಟು ಅರಿವೆ ಇರುವದರಿಂದ ಕನಿಷ್ಟ ಪಕ್ಷ ವಿಜಯದಶಮಿಯವರೆಗಾದರೂ ಚಳಿಯಿಂದೇನೂ ತೊಂದರೆ ಇಲ್ಲ. ಶ್ರೀಸಮರ್ಥ ಕೃಪೆಯಿಂದ ನಮ್ಮೆಲ್ಲರ ಪ್ರಕೃತಿ ಚೆನ್ನಾಗಿದೆ. ಕರಿಮೆಣಸು, ಜ್ಯೇಷ್ಟಮಧು, ಸುಂಠಿ ಇತ್ಯಾದಿಗಳನ್ನು ಸ್ವಚ್ಛ ನೀರಿನಲ್ಲಿ ಕುದಿಸಿ ನಾನು ಕುಡಿಯುತ್ತಿದ್ದೇನೆ. ಬಟಾಟೆ, ಜೀರ್ಣಕ್ಕೆ ಹಗುರವಾಗಿರುವ ಇಲ್ಲಿಯ ಅಲ್ಪೋಪಹಾರದ ಹಿಟ್ಟು, ಗೋಡಂಬಿ ಬೀಜ, ಒಣ ದ್ರಾಕ್ಷೆ, ಶೇಂಗದಾಣೆ ಮೊದಲಾದವುಗಳನ್ನು ಉಪಯೋಗಿಸುತ್ತಿರುವದರಿಂದ ಒಂದು ಶೇರು ಹಾಲು ಬೇಕಾದಷ್ಟಾಗುತ್ತದೆ.ಇಲ್ಲಿಯ ಅಳತೆ ಶೇರು ಅಲ್ಲಿಯದಕ್ಕಿಂತ ಸ್ವಲ್ಪ ಕಡಿಮೆಯಿರುತ್ತದೆ. ಗೋಡಂಬಿ ಮತ್ತು ದ್ರಾಕ್ಷೆಯ ಪಾರ್ಸೆಲ ಮಂಗಳೂರಿಂದ ಮತ್ತು ಶೇಂಗಾ ಪಾರ್ಸೆಲ ಸಾತಾರಾದಿಂದ ಬಂದಿದೆ. ಒಂದು ಶೇರು(ಸುಮಾರಾಗಿ ಒಂದು ಕಿಲೋ) ಶೇಂಗದಾಣೆಗೆ ಈಗ ಇಲ್ಲಿ ನಾಲ್ಕು ರೂಪಾಯಿಯಾಗುತ್ತದೆ.
ಇಲ್ಲೀಗ ಇನ್ನೂ ಬರೇ ಚಳಿಯಷ್ಟೇ ಇದೆ. ೧೫-೨೦ ದಿನಗಳಲ್ಲಿ ಹಿಮ ಬೀಳಹತ್ತಬಹುದು. ಹಿಮದ ಹವೆ ಒಮ್ಮೆ ಪ್ರಾರಂಭವಾಯಿತು ಅಂದರೆ ಕುಡಿಯಲಿಕ್ಕೆ ತಂದಿಟ್ಟ ನೀರೂ ಕೂಡ ಹಿಮಗಡ್ಡೆಯಾಗುತ್ತದೆ ಎನ್ನುತ್ತಾರೆ. ಆಶ್ವೀನದ ಕೊನೆಯ ದಿನಗಳಲ್ಲಿ ಹಿಮದಲ್ಲೇ ನಡೆದಾಡಬೇಕಾಗುತ್ತದೆ. ಆಗ ಹಿಮ ಬೀಳುವ ಪ್ರಮಾಣ ಬಹಳ ಹೆಚ್ಚಾಗಿರುವದರಿಂದ ಕೆಲಕಾಲ ಬಿಸಿಲು ಬಿದ್ದರೂ ಅದರಿಂದೇನೂ ಪರಿಣಾಮ ಕಂಡುಬರುವದಿಲ್ಲ. ಕಳೆದ ವರ್ಷ ಈ ದಿನಗಳಲ್ಲಿ ಹಿಮಪಾತ ಪ್ರಾರಂಭವಾಗಿತ್ತೆಂದು ಎನ್ನುತ್ತಾರೆ. ಈ ವರ್ಷ ಇನ್ನೂ ಅಷ್ಟು ಚಳಿ ಬಿದ್ದಿಲ್ಲ. ಮಳೆಯೂ ತುಂಬಾ ಕಡಿಮೆ. ಚೆನ್ನಾಗಿ ಬಿಸಿಲು ಬೀಳುತ್ತಿದೆ. ಆದರೂ ಎಷ್ಟೆಂದರೂ ಹಿಮಾಲಯ!
(ಈ ಪತ್ರದ ಮೂರನೆಯ ಭಾಗ ಮುಂದುವರಿಯುವದು)