“ಕಲ್ಲು ಹೊಡೆಯುವವರು ಹಣ್ಣಿರುವ ಮರಕ್ಕೇ ಕಲ್ಲನ್ನು ಹೊಡೆಯುತ್ತಾರೆ, ಯಾರು ಕಲ್ಲೆಸೆಯುತ್ತಾರೋ ಅವರಿಗೆ ಮರ ಕೊಡುವುದೂ ಹಣ್ಣನ್ನೇ” ಇದು ನಮ್ಮ ಜೀವನಕ್ಕೊಂದು ಒಳ್ಳೆಯ ಪಾಠ, ನಮ್ಮ ಜೀವನವೆಂಬ ಮರಕ್ಕೂ ಆಗಾಗ ಕಲ್ಲುಗಳು ಬೀಳುತ್ತಿರುತ್ತವೆ. ನಮ್ಮ ಏಳ್ಗೆಯನ್ನು ಸಹಿಸದವರು, ವಿಘ್ನ ಸಂತೋಷಿಗಳು ಆಗಾಗ ಅಂತಹ ಕಾರ್ಯವನ್ನು ಮಾಡುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ನಮಗೆ ಹಣ್ಣಿನ ಮರ ಆದರ್ಶವಾಗಬೇಕು. ನಮಗೆ ಕಷ್ಟಕೊಟ್ಟವರನ್ನು ದ್ವೇಷಿಸದೇ ಪ್ರೀತಿಯಿಂದ ನೋಡಬೇಕು. ಪ್ರೀತಿಯಿಂದ ಗೆಲ್ಲಲಾಗದುದು ಈ ಜಗತ್ತಿನಲ್ಲಿ ಯಾವುದೂ ಇಲ್ಲ. ಮಹಾತ್ಮಾಗಾಂಧೀಜಿಯವರು ಹೇಳಿದ್ದು ಇದನ್ನೇ “ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯನ್ನು ಕೊಡು” ಎಂದು ಇಂದು ಇದು ಅಪ್ರಸ್ತುತ ಎನ್ನಿಸಿದರೂ ಅಂತಿಮ ಸತ್ಯ ಅದೇ ಎಂಬುದನ್ನು ನಾವು ಒಪ್ಪಲೇಬೇಕು.
ಶಾಂತಿ, ಸೌಹಾರ್ಧತೆ, ನೆಮ್ಮದಿಯ ಬದುಕು ನಮ್ಮದಾಗಬೇಕಾದರೆ ಎಲ್ಲರನ್ನೂ ನಮ್ಮವರೆಂದು ಪ್ರೀತಿ, ವಿಶ್ವಾಸದಿಂದ ಕಾಣುವುದು ಅನಿವಾರ್ಯ. ಆ ಅನಿವಾರ್ಯತೆಯನ್ನು ಅರ್ಥೈಸಿಕೊಂಡು ಬದುಕನ್ನು ಅರ್ಥಪೂರ್ಣವನ್ನಾಗಿಸಿಕೊಳ್ಳೋಣ.
“ಜಗದೊಳಗೆ ಹೊಡೆದಾಡಿ ಏನೇನ ಗಳಿಸಿಹರೊ|
ನಗನಾಣ್ಯವೆಲ್ಲವನು ಒಂದು ಮಾಡಿದರೆ”
ಜಗದೊಡೆಯ ಎಮಗಿತ್ತ ಸಹಬಾಳ್ವೆ ಸುಖದೆದುರು |
ಅಗ್ಗವದು, ಶೂನ್ಯವದು-ನವ್ಯಜೀವಿ”
ಎನ್ನುವ ಕವಿವಾಣಿ ನಮ್ಮೆಲ್ಲರಿಗೆ ಆದರ್ಶವಾಗಲಿ.