ಗಾಳಿಯಿಂದಾಗಿ ಸಮುದ್ರದಲ್ಲಿ ಅನಂತ ಅಲೆಗಳೇಳುತ್ತವೆ. ಹಾಗೆಯೇ ಈ ಎಲ್ಲ ನಾಮರೂಪಾತ್ಮಕ ಅಸಂಖ್ಯ ದೇಹಧಾರಿ ಜೀವಿಗಳು ಮಾಯೆಯಿಂದಾಗಿ ಭಾಸವಾಗಿ, ಅಲೆಗಳ ಚಂಚಲತೆಯಂತೆಯೇ, ಜಗತ್ತಿನಲ್ಲಿ ಕಾರ್ಯರತರಾಗಿ ಕಂಡುಬರುತ್ತಾರೆ.
(ನಾಗಪುರದ ಒಬ್ಬ ಭಕ್ತರಿಗೆ ಬರೆದ ಪತ್ರ)
||ಶ್ರೀರಾಮ ಸಮರ್ಥ||
ಪ್ರತಿಯೊಂದು ಅಲೆಗಳಲ್ಲಿರುವ ನೀರು ನಿರ್ವಿಕಾರ ಅಂದರೆ ಏನೂ ಬದಲಾವಣೆಯಿಲ್ಲದೇ ಒಂದೇ ರೀತಿ ಇರುತ್ತದೆ. ಪ್ರತ್ಯೇಕ ಅಲೆಗಳು ಆಕಾರ ಮತ್ತು ಚಂಚಲತೆಯಿಂದಾಗಿ ಬೇರೆ ಬೇರೆಯಾಗಿ ಕಂಡರೂ ಅದೂ ನೀರೇ. ನೀರೆಂಬ ದೃಷ್ಟಿಯಿಂದ ನೋಡಿದಾಗ ಆಕಾರ ಮತ್ತು ಚಂಚಲತೆ ಏನೂ ಇಲ್ಲ, ಅಲೆಗಳ ಆಕಾರ ಮತ್ತು ಚಂಚಲತೆಯಲ್ಲಿಯೂ ಅದೇ ನೀರೇ ಇದೆ ಎಂದು ಅನಿಸಿದಾಗ, ಅಲೆಗಳ ಆಕಾರ ಮತ್ತು ಚಂಚಲತೆ ಅಳಿಸಿಹೋಗುತ್ತದೆ. ಸಾಧಕರು ಈ ದೃಷ್ಟಿಯನ್ನು ಇಟ್ಟುಕೊಳ್ಳಲೇ ಬೇಕು.
ಪರಮಾತ್ಮರೂಪ ಸಮುದ್ರೋಪಾಧಿಯಂತೆ ಕೇವಲ ಜ್ಞಾನಸ್ವರೂಪವಾಗಿದೆ. ಅದರಲ್ಲೇ ಈ ಎಲ್ಲ ಜೀವಿಗಳ ಜ್ಞಾನಾತ್ಮಕ ವ್ಯವಹಾರ ಘಟಿಸುತ್ತಿರುತ್ತದೆ. ಪ್ರತ್ಯೇಕ ಜೀವಿಯ ವ್ಯವಹಾರ ಅಲೆಗಳಂತೆ ನಾಮರೂಪಾತ್ಮಕವಾಗಿ ಆಗುತ್ತಿದ್ದಾಗ ಚಂಚಲವೆಂದು ತೋರಿದ್ದರೂ, ಹೇಗೆ ಅಲೆ ನೀರನ್ನು ಬಿಟ್ಟಿರದೇ ಇರುವದೋ, ಹಾಗೆಯೇ, ಈ ಜೀವರೂಪಿ ಅಲೆ ತನ್ನ ನಾಮರೂಪದಿಂದಾಗಿ ಅಥವಾ ಕಾರ್ಯಕಾರಣಗಳಿಂದಾಗಿ, ಪರಮಾತ್ಮನ ನಾಮರೂಪಗಳಿಂದ ಭಿನ್ನವಾಗಿರುವದಿಲ್ಲ. ನೀರಿನ ಹೊರತು ಹೇಗೆ ಅಲೆ ಭಾಸವಾಗುವದಿಲ್ಲವೋ, ಅದೇ ರೀತಿ ಪರಮಾತ್ಮನ ಹೊರತು ಯಾರ ‘ಅರಿವೂ’ ಇರಲಿಕ್ಕೆ ಶಕ್ಯವಿಲ್ಲ. ಅಲೆ ನೀರಿನ ಪ್ರಭುತ್ವದಿಂದ ಇದ್ದಂತೆ ಈ ಎಲ್ಲ ಜೀವಿಗಳೂ ಪರಮಾತ್ಮನ ಪ್ರಭುತ್ವದಿಂದ ಇವೆ.
ಗಾಳಿಯಿಂದಾಗಿ ಸಮುದ್ರದಲ್ಲಿ ಅನಂತ ಅಲೆಗಳೇಳುತ್ತವೆ. ಹಾಗೆಯೇ ಈ ಎಲ್ಲ ನಾಮರೂಪಾತ್ಮಕ ಅಸಂಖ್ಯ ದೇಹಧಾರಿ ಜೀವಿಗಳು ಮಾಯೆಯಿಂದಾಗಿ ಭಾಸವಾಗಿ, ಅಲೆಗಳ ಚಂಚಲತೆಯಂತೆಯೇ, ಜಗತ್ತಿನಲ್ಲಿ ಕಾರ್ಯರತರಾಗಿ ಕಂಡುಬರುತ್ತಾರೆ. ಗಾಳಿಯಿಂದಾಗಿ ಅಲೆ ಕಂಡುಬಂದರೂ ಪ್ರತ್ಯೇಕ ಅಲೆಯೂ ಸಹ ಅವಿಕಾರಿ ನೀರೇ ಇರುತ್ತದೆ. ‘ಅಲೆಗಳು ಸಹ ನೀರೇ’ ಎಂಬ ಅಂಶ ಗಾಳಿಯಿಂದಾಗಿ ಹೇಗೆ ನಾಶವಾಗುವದಿಲ್ಲವೋ, ಹಾಗೆಯೇ ಜೀವಿಯ ಪರಮಾತ್ಮಭಾವ ಎಂದೂ ನಾಶವಾಗುವದಿಲ್ಲ.
‘ಪರಮಾತ್ಮನ ಮಾಯೆಯಿಂದಾಗಿ ಹೇಗೆ ಈ ಅನೇಕ ಆಕಾರ ಭಾಸವಾಗುತ್ತದೆಯೋ, ಅದೇ ರೀತಿ, ಇದೂ ಒಂದು ಆಕಾರ ಭಾಸವಾಗುತ್ತಿದೆ’ ಎಂದಂದುಕೊಂಡು, ದೇಹಾಭಿಮಾನ ಮತ್ತು ಉಪಾಧಿಗಳ ಮಮತ್ವ ಕಳಚಿಕೊಳ್ಳಬೇಕು. ‘ಅವಿಕಾರಿ ಪರಮಾತ್ಮಜ್ಞಾನದಲ್ಲಿ, ಮಾಯೆಯಿಂದಾಗಿಯೇ, ಮನಸ್ಸಿನ ಚಂಚಲತೆ ಮತ್ತು ಅದರಿಂದಾಗಿ ಘಟಿಸುವ ಈ ಎಲ್ಲ ಪರಿಣಾಮಗಳು, ಯಾವುದು ಮಿಥ್ಯಾರೂಪವೋ, ಅದು ಕೇವಲ ಭಾಸವಾಗುತ್ತದೆ’ ಎಂದು ಅರಿತುಕೊಂಡು, ಅವುಗಳ ಅವಿಕಾರಿ, ಅದ್ವಿತೀಯ ಸ್ವರೂಪದ ಕಡೆಗೇ ಲಕ್ಷಕೊಟ್ಟು, ‘ನಾನು’ ಮತ್ತು ‘ನನ್ನದು’ ಎಂಬ ಭಾವನೆಗಳಿಂದಾಗಿ, ಪರಮಾತ್ಮ ಸ್ವರೂಪದಿಂದ ಭಿನ್ನವಾಗಿ ಇರದೇ ಇರಬೇಕು. ಈ ಸಂಸಾರದಲ್ಲಿ ಸಮಾಧಾನದಕ್ಕೆ ಇದೇ ಶ್ರೇಷ್ಟ ಕೀಲೀಕೈ!
ಶ್ರೀಧರ