ಸಾಧನೆ ಮಾಡುತ್ತಾ ಇರುವಾಗ ಸ್ಫುರಿಸಿದ ಕಾವ್ಯವೆಂದರೆ ಗುರುಕೃಪೆಯೆಂದೇ ತಿಳಿಯಬೇಕು … ಆದರೆ ಯಾವಾಗ ಸ್ಫೂರ್ತಿ ಇಲ್ಲದಿರುವದೋ ಆವಾಗ ಸುಮ್ಮನೇ ಶಬ್ದ ಕೂಡಿಸಿ ಕಾವ್ಯ ರಚನೆಯ ಪ್ರಯತ್ನ ಮಾಡಬಾರದು.

(ಇಸವಿ ಸನ ೧೯೬೭ರಲ್ಲಿ ಶ್ರೀ ಮಾರುತಿ ಬುವಾ ರಾಮದಾಸಿ, ಸಜ್ಜನಗಡ ಅವರಿಗೆ ಬರೆದ ಪತ್ರ)

||ಶ್ರೀರಾಮ ಸಮರ್ಥ||
ವರದಪುರ ಆಶ್ರಮ
೧೦-೧೧-೧೯೬೭
ಚಿ. ಮಾರುತಿಗೆ ಆಶೀರ್ವಾದ,

ನೀನು ಕಳುಹಿಸಿದ ಕಾವ್ಯ ಸಿಕ್ಕಿತು. ಓದಿ ಆನಂದವಾಯಿತು. ಕಾವ್ಯದಲ್ಲಿನ ಸಹಜವಾಗಿ ಸ್ಫುರಿಸಿದ ಶಬ್ದ ಸಾಲು ನಿರರ್ಗಳವಾಗಿದೆ. ಸಾಧನೆ ಮಾಡುತ್ತಾ ಇರುವಾಗ ಸ್ಫುರಿಸಿದ ಕಾವ್ಯವೆಂದರೆ ಗುರುಕೃಪೆಯೆಂದೇ ತಿಳಿಯಬೇಕು. ಏಕಾಂತದಲ್ಲಿ ಸ್ಫುರಿಸಿದ ಕಾವ್ಯ ಅವಶ್ಯ ಬರೆದಿಡಬೇಕು. ಆದರೆ ಯಾವಾಗ ಸ್ಫೂರ್ತಿ ಇಲ್ಲದಿರುವದೋ ಆವಾಗ ಸುಮ್ಮನೇ ಶಬ್ದ ಕೂಡಿಸಿ ಕಾವ್ಯ ರಚನೆಯ ಪ್ರಯತ್ನ ಮಾಡಬಾರದು. ಹಾಗೆ ಮಾಡಿದರೆ ಮನಸ್ಸಿನಲ್ಲಿ ಚಿಂತನೆ ಹೆಚ್ಚಾಗಿ ನಮ್ಮ ಸಾಧನೆಯಲ್ಲಿ ವ್ಯತ್ಯಯ ಬರುತ್ತದೆ.

RELATED ARTICLES  ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು "ವಿಶ್ವ ಯೋಗ ದಿನ"ದ ಕುರಿತಾಗಿ ನೀಡಿದ ಸಂದೇಶ

ಇಂದೇ ಚಿ. ದಿನಕರನ ಪತ್ರ ಬಂದಿದೆ. ಸಂಸ್ಥೆಯ ಸಭೆಯಲ್ಲಿ ಕೆಲವು ಮನಸ್ಸಿನ ವಿರುದ್ಧವಾಗಿ ನಡೆದದ್ದರಿಂದ ನೀನು ಇಲ್ಲಿಗೆ ಹೊರಟು ಬಂದೆಯೆಂದು ತಿಳಿದು ಬಂತು. ಎಲ್ಲವೂ ನಮ್ಮ ಮನಸ್ಸಿನಂತೆಯೇ ಹೇಗೆ ನಡೆಯಲು ಶಕ್ಯ? ವ್ಯಕ್ತಿ ಎಷ್ಟೋ ಅಷ್ಟೇ ತರದ ಪ್ರಕೃತಿಯೂ ಇರುತ್ತದೆ. ಸಂಸ್ಥೆ ಎಲ್ಲರ ವಿಚಾರಗಳಿಂದ ನಡೆಯುವದು. ಅದರಲ್ಲಿ ದಿನಕರನದೇನು ದೋಷ? ಚಿ. ದಿನಕರನಾಗಲೀ, ಚಿ. ಕುಲಕರ್ಣಿಯಾಗಲೀ ಇವರೆಲ್ಲರೂ ನಿನ್ನ ಹಿರಿಯ ಗುರುಬಂಧುಗಳೇ ಇದ್ದಾರೆ. ನಿಮ್ಮೆಲ್ಲರ ಕಾಳಜಿ ಅವರಿಗೆ ಇದೆ.

RELATED ARTICLES  ಧರ್ಮಕಾರ್ಯಕ್ಕಾಗಿ ಈಶ್ವರೀ ಆದೇಶ ಪಡೆಯುವ ಮಾರ್ಗದಲ್ಲಿ ಓಡುತ್ತಾ ಹೊರಟಿದ್ದೇನೆ. ಕಲಿಯ ಅಶ್ವಬಲವೇ ನನ್ನ ಬೆನ್ನಹಿಂದೆ ಬಿದ್ದಿದೆ.

ಶ್ರೀಸಮರ್ಥರ ಪ್ರಚಾರಯಾತ್ರೆ ಹೊರಡುವದಿದೆ. ನೀನು ತಕ್ಷಣ ಗಡಕ್ಕೆ ಹೋಗಿ ಅದರಲ್ಲಿ ಸೇರಿಕೋ. ಶ್ರೀಸಮರ್ಥರ ಸೇವೆ ಅತ್ಯಂತ ಮಹತ್ವದ್ದು. ನಿನ್ನ ಧ್ವನಿ ಮಧುರವಾಗಿರುವದರಿಂದ ನೀನು ಪ್ರಚಾರ ಕಾರ್ಯ ಚೆನ್ನಾಗಿ ಮಾಡುತ್ತೀಯೆಂದು ಚಿ. ದಿನಕರನ ಪತ್ರದಲ್ಲಿದೆ. ಪರಮೇಶ್ವರನು ಶರೀರಬಲ ಕೊಟ್ಟದ್ದಲ್ಲದೇ ಮಧುರ ಧ್ವನಿಯನ್ನೂ ಕೊಟ್ಟಿದ್ದಾನೆ. ಅದರ ಉಪಯೋಗ ಪ್ರಚಾರ ಕಾರ್ಯದಲ್ಲಿ ಮಾಡಿಕೊಂಡು ಸಮಾಧಾನಿಯಾಗು. ಕೆಳಗೆ ಆಶ್ರಮದಲ್ಲಿ ಊಟಮಾಡಿ ತ್ವರಿತ, ಶ್ರೀಸಮರ್ಥರ ಸೇವೆಗೆಂದು ಸಜ್ಜನಗಡಕ್ಕೆ ಹೋಗು. ಅಲ್ಲಿ ಮುಟ್ಟಿದ ಮೇಲೆ ಪತ್ರ ಬರೆ.

ಇತಿ ಶಮ್
ಶ್ರೀಧರ