ಅಕ್ಷರರೂಪ :ಪ್ರಭಾ ಮತ್ತು ವೆಂಕಟ್ರಮಣ ಭಟ್ಟ ಪುಣೆ
(ಇಸವಿ ಸನ ೧೯೬೨ರ ಸುಮಾರಿಗೆ ಶಿವಥರ ಘಳ ಸುಂದರ ಮಠ, ಮಹಾಡ ಸಂಸ್ಥೆಯ ಪ್ರಾರಂಭಕಾಲದಲ್ಲಿ ಜನರನ್ನುದ್ದೇಶಿಸಿ ಬರೆದ ಪತ್ರ)
||ಶ್ರೀರಾಮ ಸಮರ್ಥ||
ಶ್ರೀವರದಹಳ್ಳಿ ಕ್ಷೇತ್ರ
ಪೌಷ್ಯ ವ| ಸೋಮವಾರ ಏಕಾದಶಿ, ಶ|೧೮೮೪
ಜಯ ಜಯ ರಘುವೀರ ಸಮರ್ಥ
ರಾಷ್ಟ್ರಗುರು ಶ್ರೀಸಮರ್ಥರ ದಿವ್ಯ ಸೇವೆ ಮಾಡುವ ಒಂದು ಸುಸಂಧಿ ಪ್ರಾಪ್ತವಾಗಿದೆ. ಶ್ರೀಸಮರ್ಥ ಮಂಡಳದ ಒಂದು ಕಾರ್ಯಕಾರಿಣಿ ಉಪಸಮಿತಿ ‘ಶಿವಥರ ಶ್ರೀಸುಂದರ ಮಠ’ ಎಂಬ ಹೆಸರಿನ ಒಂದು ಸಂಸ್ಥೆ ಈಗಾಗಲೇ ಸುಮಾರು ೧-೧|| ವರ್ಷದ ಮೊದಲು ಸ್ಥಾಪನೆಯಾಗಿದೆ. ಇದರಲ್ಲಿರುವ ಎಲ್ಲರೂ ಏಕನಿಷ್ಠ ಶ್ರೀಸಮರ್ಥ ಭಕ್ತರಿದ್ದು, ವಿಶ್ವಸನೀಯರಾಗಿದ್ದಾರೆ. ಶ್ರೀಸಮರ್ಥಮಂಡಳದಂತೆಯೇ ಇವರದ್ದೂ ನಿತಾಂತ ಭಕ್ತಿ ಈ ನನ್ನ ಮೇಲೆ ಇದೆ. ಎರಡೂ ಕಡೆ ನನ್ನದೇ ಶಿಷ್ಯರಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ. ಈ ಉಪಸಮಿತಿಯ ಜನರು ಶ್ರೀಸಮರ್ಥ ಪ್ರೇರಣೆಯಿಂದ ತಾವಾಗಿಯೇ ಈ ಸುಂದರಮಠದ ಕಾರ್ಯಕ್ಕಾಗಿ ಕಟಿಬದ್ಧರಾಗಿದ್ದಾರೆ.
ಶ್ರೀಸಮರ್ಥರ ಈ ಶಿವಥರ ಘಳಿಯ ಮಹತ್ವ ಮಹಾರಾಷ್ಟ್ರಕ್ಕೆ ಸುವಿದಿತವೇ ಇದೆ. ಪುಣ್ಯಪಾವನ ಶ್ರೀ ಗ್ರಂಥರಾಜ ದಾಸಬೋಧದ ಸುಮಂಗಲ ನಿರ್ಮಿತಿ ಇದೇ ಕ್ಷೇತ್ರದಲ್ಲಾಯಿತು. ಸುಂದರಮಠದ ಪವಿತ್ರ ವಾತಾವರಣದಲ್ಲಿ ಲಭಿಸುವ ಪಾವನ ಏಕಾಂತದಲ್ಲಿ ‘ಆರಣ್ಯಕಗಳು’ ಹೇಗೆ ಸಂಪೂರ್ಣ ತುಟ್ಟತುದಿಗೆ ತಲುಪಿದ್ದಾವೋ ಅದೇ ರೀತಿ, ಈ ಸ್ಥಳದಲ್ಲಿ ಶ್ರೀ ದಾಸಬೋಧ ಉನ್ನತ ಶಿಖರ ತಲುಪಿತು. ಈ ವಿಶ್ವೋದ್ಧಾರಕ ಘಟನೆಗೆ ಅನುಸಾರವಾಗಿ ಈ ಪುಣ್ಯಕ್ಷೇತ್ರದಲ್ಲಿ ‘ಶ್ರೀ ಸಮರ್ಥ ಗುರುಕುಲ’ದ ಭವ್ಯ ಸ್ಥಾಪನೆಯಾಗಬೇಕು ಮತ್ತು ಅದರ ಆದರ್ಶಪೂರ್ಣ ಸಂಚಾಲನೆಯಾಗಿ ಅದರಿಂದ ಜಗತ್ತಿಗೆ ಪ್ರಕಾಶ ಬೀರುವ ಮಹಾನ ತೇಜಸ್ವಿ ಧರ್ಮಭಾಸ್ಕರರು ಜ್ಞಾನ-ವಿಜ್ಞಾನ ಸಂಪನ್ನರಾಗಿ ವಿಶ್ವಾಂಧಕಾರವನ್ನು ಕಳೆದುಹಾಕಲು ಜಗತ್ತಿನ ತುಂಬೆಲ್ಲಾ ಹರಡಬೇಕು; ಇದೊಂದು ಸನಾತನ ವೈದಿಕ ಆರ್ಯಧರ್ಮದ ಸುಂದರ ವಿದ್ಯಾಪೀಠವಾಗಬೇಕು. ಈ ಒಂದು ಚಿತ್ತವೇಧಕ ಉದ್ದೇಶದ ಚಿಗುರು ಈ ಸಮಿತಿಯ ಉಪಕ್ರಮದ ಮೂಲದಲ್ಲಿದೆ. ಕ್ಷಿತಿಜದಲ್ಲಿಯ ಅರುಣೋದಯದಂತೆ ಶ್ರೀಸಮರ್ಥ ಸೇವಾ ಮಂಡಳವು ಶ್ರೀಸಮರ್ಥರ ತ್ರಿಶತಕ ಜನ್ಮೋತ್ಸವದ ಪೂರ್ಣತೆಯ ಮಂಗಲಮಯ ಮಹೋತ್ಸವವನ್ನು ಇಲ್ಲಿ ನೆರವೇರಿಸಿ ಮತ್ತು ಸಿದ್ಧಾಶ್ರಮದ ಕಟ್ಟಡ ನಿರ್ಮಾಣಮಾಡಿ ಮುಂದಿನ ಭವ್ಯ ಕಾರ್ಯದ ಪ್ರಭಾವಿ ಪ್ರಾರಂಭ ಎರಡು-ಎರಡೂವರೆ ವರ್ಷದ ಹಿಂದಿನಿಂದಲೇ ನನ್ನ ಕೈಯಿಂದ ಮಾಡಿಸಿದ್ದಾರೆ.
‘ಬೆಳೆದು ಬೆಳೆಯುತ್ತ ಬೆಳೆಯುತ್ತ| ನಭೋಮಂಡಲವನ್ನು ಭೇದಿಸಿತು|’ … ಹೀಗೆ ಈ ಸಂಸ್ಥೆಯದೂ ಅನುಭವ ಸಮಾಜಕ್ಕೆ ಬರಲಿ.
ಮುಂದು ಮುಂದಿನ ಕಾರ್ಯ ಉತ್ತರೋತ್ತರ ಯಶಸ್ವೀರೀತಿಯಿಂದ ಕೈಗೇರಿಸುವ ಪಣ ಹೊತ್ತು ಸಿದ್ಧವಾಗಿರುವ ಈ ಸಮಿತಿಯ ಕಣ್ಮುಂದೆ ಸಧ್ಯ ಈ ಮುಂದಿನ ಕಾರ್ಯ ಇಡಲಾಗಿದೆ.
೧. ಇಲ್ಲಿಯ ಶ್ರೀ ವೀರ ಮಾರುತಿರಾಯನ ಮತ್ತು ಸಮರ್ಥ ಮತ್ತು ಕಲ್ಯಾಣಸ್ವಾಮಿಯ ನಿತ್ಯ ಪೂಜಾದಿ ವಿನಿಯೋಗಾರ್ಥ ಮತ್ತು ಅದರಂತೆ ಇಲ್ಲಿ ಉಳಿದುಕೊಳ್ಳುವ ಸಾಧಕರ ಯೋಗಕ್ಷೇಮಾರ್ಥ ಒಂದು ದೊಡ್ಡ ಸ್ಥಿರ ನಿಧಿಯನ್ನು ಎತ್ತಿ ಸಂಗ್ರಹಿಸುವದು.
೨. ಒಂದು ವಿಶಾಲ, ಸುಂದರ ಸಾಧಕಾಶ್ರಮದ ನಿರ್ಮಿತಿ
೩. ಯಾತ್ರಿಕರ ಸುಖ-ಸೌಲಭ್ಯಕ್ಕಾಗಿ ಒಂದು ದೊಡ್ಡ ಧರ್ಮಶಾಲೆ ಮತ್ತು ಅನ್ನಛತ್ರದ ನಿರ್ಮಾಣ
೪. ಸ್ನಾನಕ್ಕಾಗಿ ನೀರಿನ ಧಾರೆ ಮತ್ತು ಅಲ್ಲಲ್ಲಿ ನೀರಿನ ಉಪಯುಕ್ತ ಸೌಲಭ್ಯ
‘ಅಲ್ಪಾರಂಭಃ ಕ್ಷೇಮಕರಃ’ ಎಂದು ಮೊದಲು ಈ ಕೆಲವು ಕೈಗೆತ್ತಿಕೊಂಡ ಕಾರ್ಯಗಳನ್ನು ಆದಷ್ಟು ಬೇಗ ಮಂಡಳದವರು ಸುವ್ಯವಸ್ಥಿತವಾಗಿ ನಿರ್ವಹಿಸಿ, ಈ ರೀತಿಯ ಭವ್ಯ ಸೇವೆ ಎಲ್ಲರಿಂದಾಗಿ, ಶ್ರೀಸಮರ್ಥ ಕೃಪೆಯಿಂದ ಸಂಪೂರ್ಣ ರಾಷ್ಟ್ರ ಕೃತಕೃತ್ಯ ಮತ್ತು ಧನ್ಯವಾಗಲಿ ಎಂದು ನಾನು ಆಶೆ ಇಟ್ಟುಕೊಂಡಿದ್ದೇನೆ.
ತಮ್ಮ
ಶ್ರೀಧರ ಸ್ವಾಮಿ