ಶ್ರೀಗುರು ನಿಮ್ಮ ಹೃದಯದಲ್ಲಿ ಕೇವಲ ಆನಂದರೂಪದಲ್ಲಿ ಪ್ರಕಾಶಿಸುತ್ತಿದ್ದಾನೆ ಎಂಬುದನ್ನು ಯಾವಾಗಲೂ ಲಕ್ಷದಲ್ಲಿಟ್ಟುಕೊಂಡು, ಅವರ ದರ್ಶನ ಪಡೆಯುತ್ತಿರಬೇಕು.
(ಇಸವಿ ಸನ ೧೯೬೨ರಲ್ಲಿ ಶ್ರೀ ಗು. ಬಂ. ರಾಮಚಂದ್ರ ಸಾಗರರವರ ಮಾತೋಶ್ರೀ ಮೂಕಾಂಬಿಕಾ ಮತ್ತು ತಂಗಿ ಗೌರಿ ಸಾಗರ ಅವರಿಗೆ ಬರೆದ ಪತ್ರ)
||ಶ್ರೀರಾಮ ಸಮರ್ಥ||
ಬೆಂಗಳೂರು
೨೭-೦೬-೧೯೬೨
ಚಿ. ಮುಕಾಂಬಿಕೆಗೆ ಮತ್ತು ಚಿ. ಗೌರಿಗೆ ಆಶೀರ್ವಾದಗಳು,
ಮಕ್ಕಳೇ!
ದರ್ಶನವಾಗಿ ಬಹಳ ದಿನಗಳು ಕಳೆದವೆಂದು ನಿಮ್ಮ ಮನಸ್ಸು ತುಂಬಾ ಅಸ್ವಸ್ಥವಾಗಿರಬಹುದು. ಆದರೆ ಶ್ರೀಗುರು ನಿಮ್ಮ ಹೃದಯದಲ್ಲಿ ಕೇವಲ ಆನಂದರೂಪದಲ್ಲಿ ಪ್ರಕಾಶಿಸುತ್ತಿದ್ದಾನೆ ಎಂಬುದನ್ನು ಯಾವಾಗಲೂ ಲಕ್ಷದಲ್ಲಿಟ್ಟುಕೊಂಡು, ಅವರ ದರ್ಶನ ಪಡೆಯುತ್ತಿರಬೇಕು.
ಅವನು ಚರಾಚರ ವಿಶ್ವದ ಸತ್ಯಸ್ವರೂಪನಾಗಿದ್ದಾನೆ. ಶ್ರೀಗುರುಭಕ್ತಿಯಿಂದ ಪ್ರಾಪ್ತವಾಗುವ ಫಲವೆಂದರೆ ಆತ್ಮಸಾಕ್ಷಾತ್ಕಾರ. ಶ್ರೀಗುರುಕೃಪೆಯಿಂದ ಆ ಭಾಗ್ಯ ಪ್ರಾಪ್ತವಾಗಲಿ ಎಂಬುದೇ ನನ್ನ ಆಶೀರ್ವಾದ. ಚಿ. ಮೀನಾಕ್ಷಿಗೂ ಆಶೀರ್ವಾದ.
||ಸರ್ವೇ ಜನಾಃ ಸುಖಿನೋ ಭವಂತು||
ಶ್ರೀಧರ

RELATED ARTICLES  ಬದುಕಿಗೆ ಬಣ್ಣ ತುಂಬಿದವರು

೨. ಶ್ರೀ ತಿಮ್ಮಣ್ಣ ಶಾಸ್ತ್ರಿಗಳಿಗೆ ಪತ್ರ ತಲುಪಿದ ಸಮಾಚಾರ ತಿಳಿಸುವ ಪತ್ರ
ಚಿಕ್ಕಮಗಳೂರು
ಚಿ.ತಿಮ್ಮಣ್ಣನಿಗೆ ಆಶೀರ್ವಾದ,
ನಿನ್ನ ಪತ್ರ ತಲುಪಿತು. ಚಿ. ವೆಂಕಟರಮಣನಿಗೆ ಬರೆದ ಪತ್ರದಲ್ಲಿ ಎಲ್ಲ ಬಿಡಿಸಿ ಹೇಳಿದ್ದೇನೆ. ನಾನು ಸುಖರೂಪ ಇದ್ದೇನೆ.
ನಿಮ್ಮೆಲ್ಲರ ಹಿತಚಿಂತಕ
ಶ್ರೀಧರ

೩. ಅಲ್ಲಿಯ ಎಲ್ಲ ವ್ಯವಹಾರದ ಜವಾಬುದಾರಿ ನಿನ್ನ ಮೇಲಿದೆ.
(ಇಸವಿ ಸನ ೧೯೬೬ರಲ್ಲಿ ಶ್ರೀ ಮಾರುತಿಬುವಾ ರಾಮದಾಸಿ ಸಜ್ಜನಗಡ, ಅವರಿಗೆ ಬರೆದ ಪತ್ರ)
||ಶ್ರೀರಾಮ ಸಮರ್ಥ||
ಹೋಶಂಗಾಬಾದ – ಕೋರಿಘಾಟ
೭ – ೧೦ – ೧೯೬೬
ಚಿ. ಮಾರುತಿಗೆ ಆಶೀರ್ವಾದ,
ನಾವೆಲ್ಲರೂ ನರ್ಮದಾ ತೀರದಲ್ಲಿ ಬಹಳಷ್ಟು ಕಾಲ ಉಳಿದುಕೊಳ್ಳುವವರಿದ್ದೇವೆ. ಈ ದೃಷ್ಟಿಯಿಂದ ನಿನ್ನ ಪ್ರಯತ್ನವಿರಬೇಕು. ಚಿ.ಗೋಡಸೆ ಇಲ್ಲದಿರುವದರಿಂದ ಅಲ್ಲಿಯ ಎಲ್ಲ ವ್ಯವಹಾರದ ಜವಾಬುದಾರಿ ನಿನ್ನ ಮೇಲಿದೆ. ಶ್ರೀಮಂತ ಅಣ್ಣಾ ಹರಣೆ, ಚಿ. ಮುಕುಂದ ಕೊರಾನ್ನೆ, ಚಿ. ದಾದಾ ಶಿರಪುರಕರ, ಚಿ. ಆರ. ತಿವಾರಿಜೀ ಈ ಎಲ್ಲ ಜನರೊಂದಿಗೆ ಕೂಡಿ ಸಮರಸವಾಗಿ ಇರಬೇಕು. ಹೊರ ವ್ಯವಹಾರದಲ್ಲಿ ಏನಾದರೂ ಅಡಚಣಿ ಬಂದರೆ ಅವರಿಗೆ ಹೇಳಿದಾಗ ಅವರು ಮಾರ್ಗದರ್ಶನ ಮಾಡುತ್ತಾರೆ. ನಿನಗೆ ಪ್ರತಿದಿನ ಬೆಳಿಗ್ಗೆ ಮಾರ್ಕೆಟಿಗೆ ಹೋಗಬೇಕಾಗುತ್ತದೆ. ಕಾಯಿಪಲ್ಲೆ, ಹಾಲು, ಧಾನ್ಯ ಮೊದಲಾದ ಹೊರ ವ್ಯವಹಾರವೆಲ್ಲ ನಿನ್ನ ಮೇಲಿದೆ. ಹೊರೆ ಹೊರಲು ಒಂದು ಸಾಯಕಲ ಇಟ್ಟುಕೊಳ್ಳಬೇಕು.
ವ್ಯವಹಾರ ಕುಶಲತೆಯಿಂದ ಮಾಡಲನುಕೂಲವಾಗಲು ನೀನು ಹಿಂದಿಯನ್ನು ಕಲಿತುಕೊಳ್ಳಬೇಕು. ಶಠಾಣಿ ಘಾಟಿನಲ್ಲಿ ಹಿಂದಿಯಲ್ಲಿ ಸತ್ಸಂಗ ನಡೆಯುವಲ್ಲಿ ಹೋಗಬೇಕು. ಅದೇ ರೀತಿ ಟಿಳಕ ಹಾಲಿನಲ್ಲಿ ಹಿಂದಿ ಕ್ಲಾಸು ನಡೆಯುವಲ್ಲಿ ಶುಲ್ಕ ತುಂಬಿ ಹಿಂದಿ ಭಾಷೆಯನ್ನು ಅವಗತಮಾಡಿಕೊಳ್ಳಬೇಕು. ಭಾಷೆಯಲ್ಲಿ ಪ್ರಾವೀಣ್ಯತೆಯಿಲ್ಲವೆಂದು ತಿಳಿದರೆ ಕೆಲ ಅನ್ಯಧರ್ಮದ ಜನರು ವ್ಯವಹಾರದಲ್ಲಿ ಮೋಸ ಮಾಡುತ್ತಾರೆ. ಪ್ರಯತ್ನಮಾಡಿ ಹಿಂದಿಯ ಅಭ್ಯಾಸ ಮಾಡು.
ಇತಿ ಶಮ್|
ಶ್ರೀಧರ

RELATED ARTICLES  ಪ್ರಕೃತಿಯ ಸಂದೇಶ