ಅಕ್ಷರರೂಪ : ಪ್ರಭಾ ಮತ್ತು ವೆಂಕಟರಮಣ ಭಟ್ಟ ಪುಣೆ.
ನನ್ನದೆಂಬ ಅರಿವು ತನ್ನ ಅನಂತಾನಂತ ಆನಂದಯುಕ್ತ ಆದ್ಯ ಪರಮಾತ್ಮರೂಪದಲ್ಲಿ ಕರಗಿಹೋದದ್ದನ್ನು ಅಂದರೆ ವಿಲೀನವಾದದ್ದನ್ನು ನೋಡುವದೇ ತನ್ನತನದ ಮರಣ. ಆತ್ಮಜ್ಞಾನದ ದೃಷ್ಟಿಯಿಂದ ಮರಣ ಅಂದರೆ ತನ್ನ ಚಂಚಲರೂಪಿ ಅರಿವು ಇಲ್ಲವಾಗುವದು… ಅಂತವನಿಗೆ ಆನಂತರ ಗರ್ಭವಾಸವಿಲ್ಲ ಮತ್ತು ಮೃತ್ಯುವೂ ಇಲ್ಲ.
(ಮಾತೋಶ್ರೀ ಜಾನಕೀದೇವಿಗೆ ಬರೆದ ಪತ್ರ)
—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
|| ಶ್ರೀರಾಮ ಸಮರ್ಥ ||
ಕು. ಜಾನಕಿಗೆ ಆಶೀರ್ವಾದ,
‘ನಾನು’ ಎಂಬ ಅರಿವು ಅಂದರೆ ದೇಹಸ್ಥಿತಿಯಿಲ್ಲದ ಸ್ವ-ಸ್ವರೂಪ ಆನಂದವೇ ಆಗಿದೆ. ಆ ಅಪಾರ ಆನಂದದ ಅನುಭವ ತೆಗೆದುಕೊಳ್ಳುತ್ತಾ ನಾನೆಂಬ ಅರಿವು ಮಾತ್ರ ಉಳಿದುಕೊಂಡಿತೋ ಅಂದರೆ ಅದಕ್ಕೆ ಆತ್ಮಸಾಕ್ಷಾತ್ಕಾರ ಅಥವಾ ಸ್ವಸ್ವರೂಪಸಾಕ್ಷಾತ್ಕಾರ ಆಯಿತು ಎಂದು ಹೇಳುತ್ತಾರೆ. ಈ ರೀತಿ ದುಃಖದ ಅರಿವು ಆಗದೇ ದೇಹಭಾವ ಇಲ್ಲದೇ ಯಾವುದೇ ಚಿಂತೆಯಿರದೇ ಕೇವಲ ಒಂದೇ ಒಂದು ಆನಂದದ ಅನುಭವ ಉಳಿಯಿತು ಅನ್ನುವದೇ ಜೀವನಮುಕ್ತಿ. ಇದನ್ನೇ ‘ಕೈವಲ್ಯ’ ಅಥವಾ ‘ಮೋಕ್ಷ’ ಹೀಗೂ ಹೇಳುತ್ತಾರೆ. ಇದು ಆತ್ಮಚಿಂತನೆಯ ಕೊನೆಯ ಸಿದ್ಧಿ. ಇದೇ ಆತ್ಮಜ್ಞಾನದಿಂದ ಪ್ರಾಪ್ತವಾಗುವ ಕೊನೆಯ ಫಲ. ಸಿಂಧುವಿನಲ್ಲಿ ಬಿದ್ದ ಬಿಂದು ಸಿಂಧುರೂಪವೇ ಆಗುತ್ತದೆ.
ಅದರಂತೆಯೇ ಸರ್ವವಿಷಯಸುಖದ ಅರಿವಿನ ರೂಪದ ಜೀವ ಅನಂತ-ಸುಖರೂಪದ ಪರಮಾತ್ಮನಲ್ಲಿ ಏಕರೂಪವಾಗಿ, ಅಂದರೆ ಸಾಯುಜ್ಯತೆ ಪಡೆದುಕೊಂಡು ತನ್ನ ಮೂಲಸ್ವರೂಪ ಪ್ರಾಪ್ತ ಮಾಡಿಕೊಳ್ಳುತ್ತದೆ ಅದನ್ನೇ ‘ಮೋಕ್ಷ’ ಎನ್ನುತ್ತಾರೆ. ಸುಖಕ್ಕಾಗಿ ಸಂಸಾರಕ್ಕೆ ಬಂದ ದೇಹ ಎಲ್ಲ ವಿಷಯಗಳ ಅಂಗಡಿ ತಿರುಗಿ, ಅಲ್ಲಿ ಸುಖಪ್ರಾಪ್ತಿ ಸಿಗದಿದ್ದರಿಂದ ಕೊನೆಗೆ ಪರಮಾತ್ಮನ ಮೇಲೆ ನಿಷ್ಠೆಯಿಟ್ಟು, ಅವನದೇ ಕೃಪೆಯಿಂದ, ಶ್ರೀಸದ್ಗುರು ಮುಖದಿಂದ ಆತ್ಮಜ್ಞಾನ ಪಡೆದುಕೊಂಡು, ಸಂಸಾರಸುಖದಿಂದ ಹೊರಬಂದು ತನ್ನ ಮೂಲಸ್ವರೂಪದಲ್ಲಿ ಅಂದರೆ ಪರಮಾತ್ಮನಲ್ಲಿ, ಕೇವಲ ಸುಖ-ಆನಂದರೂಪದಲ್ಲಿ ವಿಲೀನವಾಗುತ್ತಾನೆ ಅಂದರೆ ಅವನು ಸ್ವತಃ ಆನಂದವೇ ಆಗುತ್ತಾನೆ ಮತ್ತು ಇದನ್ನೇ ’ಮೋಕ್ಷ’ ಅನ್ನುತ್ತಾರೆ. ಅಜ್ಞಾನರೂಪಿ ಮಂಜು ಕರಗಿ ಆತ್ಮರೂಪದ ಪ್ರಕಾಶ ಎಲ್ಲೆಡೆ ಪರಿಪೂರ್ಣವಾಗಿರುವದಕ್ಕೇ ‘ಮೋಕ್ಷ’ ಎನ್ನುತ್ತಾರೆ. ಯಾವುದರಲ್ಲಿ ಯಾವುದೇ ದುಃಖವೆಂಬುದೇ ಇಲ್ಲದೇ ಕೇವಲ ಆನಂದವೇ ಇರುತ್ತದೆಯೋ ಅದನ್ನೇ ‘ಮೋಕ್ಷ’ ಎನ್ನುತ್ತಾರೆ. ಇದೇ ದೇಹದಲ್ಲಿ ಇದೇ ಕಣ್ಣು ತನ್ನದೇ ಸಾವು ಮತ್ತು ಜನ್ಮವನ್ನು ನೋಡಿ, ಅಲ್ಲಿ ಬೇರೇನೂ ಉಳಿಯದೇ, ನಾನಾಗಿ ಮಾತ್ರ ಉಳಿಯುವದೇ ಜೀವನಮುಕ್ತತೆ ಎನ್ನುತ್ತಾರೆ. ನನ್ನದೆಂಬ ಅರಿವು ತನ್ನ ಅನಂತಾನಂತ ಆನಂದಯುಕ್ತ ಆದ್ಯ ಪರಮಾತ್ಮರೂಪದಲ್ಲಿ ಕರಗಿಹೋದದ್ದನ್ನು ಅಂದರೆ ವಿಲೀನವಾದದ್ದನ್ನು ನೋಡುವದೇ ತನ್ನತನದ ಮರಣ. ಆತ್ಮಜ್ಞಾನದ ದೃಷ್ಟಿಯಿಂದ ಮರಣ ಅಂದರೆ ತನ್ನ ಚಂಚಲರೂಪಿ ಅರಿವು ಇಲ್ಲವಾಗುವದು. ನಿಶ್ಚಲ ಯಥಾರ್ಥ ಆನಂದರೂಪದಲ್ಲಿ ನಿತ್ಯ ನಿರ್ವಿಕಲ್ಪ ಇರುವದು. ಅಂದರೆ ದೇಹದ ದ್ವೈತ ಕಳಚಿ, ಅದ್ವೈತ ಸತ್ಯರೂಪ ಅಂದರೆ ಎಲ್ಲಿ ಬೇರೇನೂ ಇಲ್ಲವೋ ಮತ್ತು ಶುದ್ಧ ‘ನಾನು’ ಮಾತ್ರ ಉಳಿದುಕೊಳ್ಳುವದು. ಯಾವಾತನು ಮೋಕ್ಷಕ್ಕಾಗಿಯೆಂದೇ ಜನ್ಮಕ್ಕೆ ಬರುತ್ತಾನೋ ಮತ್ತು ಏನೋ ಒಂದು ಹೆಸರು ಧರಿಸಿದ ದೇಹವಿರುವಾಗಲೇ, ಈ ರೀತಿ ಮರಣ ಸ್ವೀಕಾರ ಮಾಡುವನೋ, ಅವನು ‘ತಾನೇ ತಾನಾಗಿ’ ಇರುವನು. ಅಂತವನಿಗೆ ಆನಂತರ ಗರ್ಭವಾಸವಿಲ್ಲ ಮತ್ತು ಮೃತ್ಯುವೂ ಇಲ್ಲ.
(ಈ ಪತ್ರದ ಎರಡನೆಯ ಭಾಗ ಮುಂದುವರಿಯುವದು)