ಚಕ್ರದ ಪಯಣದಲ್ಲು…ಮರೆತು ಮಂಜಾದ ಹಳೆಯ ಹೊಳೆವ ನೆನಪುಗಳತ್ತ..ಹೊರಳಿ..ಮುಂಜಾವು ಕಳೆದ.. ಕಂಡುಂಡು ಸುಖಿಸಿದ ನನ್ನವರೇ..ಹ ಮತ್ತೆ ಬಂದಿರುವೆ…ಇತ್ತಬನ್ನಿ..

.. ಬೆಳಿ ಅಂಗಿ ಖಾಕಿವಾರು ಚಡ್ಡಿ..ಕಾಣುವುದು..ಅಗಷ್ಟ ಹದಿನೈದಕ್ಕೆ..ಪೇಪರ ಮೆಂಟನ ಪೊಟ್ಳೆ ತರುತ್ತಿದ್ದರು..ಆ ದಿನ ಮಾಸ್ತರ್ರ ಸ್ವಾಗತಕ್ಕೆ.. ಚನ್ನೆಗುಂದದ ವರೆಗೆ ಹೋಗುತ್ತಿದ್ದರು..ಎಲ್ಲರು ಮುಂಚೆ ಎದ್ದು ಮನೆದೇವರಿಗೂ ಹೂಗಿಡುತ್ತಿರಲಿಲ್ಲ.ತಿಂಗಳ ಹಿಂದೆಯೇ ಬರೆಯುವುದು..ಓದುವುದು ಬಂದ್..ಬಾಷಣ ಗಟ್ಟಾಕುವುದೇ..ಎಲ್ಲರ ಮನೆ ಮಕ್ಕಳೂ..ಬೆಳಗಾದರೆ..’ಮಾನ್ಯ ಅಧ್ಯಕ್ಷರೇ..ಪೂಜ್ಯಗುರುಗಳೇ..’..ಒಂದೇ ಗೌಜಿ.ತಲಖಣಿ ಸಾಯಬ್ರ ಮನೆವರೆಗೆ..ನಮ್ಮ ಪೇರಿ ಹೋಗುತ್ತಿತ್ತು..ಆದಿನ ಸಾಯಬ್ರ ಮನೆ ಕುನ್ನಿ ಬಿಡುತ್ತಿರಲಿಲ್ಲ..ಕೊಡಪಾನದಲ್ಲಿ ನೀರು..ಚಂಬಿನಲಿ ಬೆಲ್ಲ ಇಡುತ್ತಿದ್ದರು..ಅದಕ್ಕಾಗಿ ನಾವು ವರ್ಷ..ಕನಸು ಕಾಣುತ್ತಿದ್ದೆವು.. ಆಗ ಮಾಗೋಡಿಗೆ ..ಬಸ್ಸ ಇಲ್ಲ..ಮಣ್ಣಿಗೆ ವರೆಗೆ ಮಾತ್ರ..ಉಪ್ಪೋಣಿಗೆ ಹೋಗಿ ದಿನಕ್ಕೆರಡು ಬಸ್ಸು..ಸರ್ವೋತ್ತಮನ.. ವ್ಯಾನು ಇತ್ತು..ತಾಡಪತ್ರೆ ಹೊದ್ಕೆ..ಆಚೆ ಈಚೆ ಹಲಗೆ..ಮದ್ಯದಲ್ಲಿ ಹಿಡಿವಷ್ಟು ಜನ..ಆ ಹಲಗೆಯ ಮೇಲೆ ಕೂಡ್ರಲು..ಹರಸಾಹಸ..ಹಗ್ಗ ಹಿಡಿದು ಹತ್ತುವುದು..ಅಂತಂತ ದೊಡ್ಡ ಶ್ರೀಮಂತರಿಗೆ ಡ್ರೈವರ ಹತ್ತಿರ ಕೂಡ್ರುವ ಯೋಗ..ತಾರಿಬಾಗ್ಲಲ್ಲಿ..ದೋಣಿ ದಾಟಿ..ಉಪ್ಪೋಣಿಗೆ ಹೋಗುವುದು..ಎಂಕಪ್ಪ..ಜಟ್ಟಿ..ಇವರ ದೋಣಿ..ಅವರ ಹೊಟ್ಟ ಪಂಚಾಯ್ತಗೆ..ಕೇಳುತ್ತ ದಾಟುವುದು..ಎಂತ ಗಾಸಿನಲ್ಲೂ ದಾಟಿಸುತ್ತಿದ್ದರು.
ಇನ್ನು ಹೊನ್ನಾವರದಿಂದ ಗೇರಸೊಪ್ಪೆಗೆ ಲೋಂಚ ವ್ಯವಸ್ಥೆ ಇತ್ತು..ಬೆಳಿಗ್ಗೆ ಹೊನ್ನಾವರಕ್ಕೆ ಹೋಗಿ..ಸಂಜೆ ವಾಪಸ್ಸಾಗುತ್ತಿತ್ತು.ಮಾಗೋಡು..ಬೀನಗೋಡು..ಕೊಡಾಣಿ..ಬೇರಂಕಿ..ಮೂಡ್ಕಣಿ….ಕೊನೇಗೆ ಚಿಕಣಿಮುಲ್ಲೆ..ಎಲ್ಲಾ..ಬಂದರವೇ.. ಹೊಳೆಬದಿಯಲ್ಲಿ ಅಂಗಡಿ..ಆಗ ಲೋಂಚು ನಮಗೆ ಸ್ವರ್ಗ..”ಆಯ್ಮದ”..ಕೃಷ್ಣ.. ಎನ್ನುವ ಕಂಡಕ್ಟರ್ ಇದ್ದರು..ನಮಗೆ ಹನ್ನೆರಡು ವರ್ಷ ಆದರೂ..ಆಯಿ..ಕಡಿಮೆ ನೆತ್ತಿ ಮಾಣಿ ಹೇಳಿ..ಅರ್ಧ ಟಿಕೇಟ ತೆಗೆಯುತ್ತಿದ್ದರು..ಮುನ್ನಾದಿನದಿಂದಲೇ..ಮೂರ್ನೆತ್ತಿ ಹೇಳು ಎಂದು ನಮಗೆ ಗಟ್ಟಾಕಿಸುತ್ತಿದ್ದರು..ಅದರಿಂದ ಇಪ್ಪತ್ತು ಪೈಸೆ ಉಳಿಯುತ್ತಿತ್ತು..ಒಂದುಸಲ..ಹಟ ಮಾಡಿ ನಾನು ಹಿಡಿದುಕೊಂಡ ಎರಡು ರೂಪಾಯಿ ನೋಟು ಹೊಳೆಲಿ ಬಿತ್ತು.

RELATED ARTICLES  ವೃತ್ತಿಯ ಮೂಲ ಸ್ವರೂಪದ ಬಗ್ಗೆ ಶ್ರೀಧರ ಸಂದೇಶ

ಈಗಲೂ ಆಯಿ ನನ್ನ ಮಾಣಿಗೆ ಈ ಕಥೆ ಹೇಳುತ್ತಾರೆ .ಲೋಂಚಿಗೆ ಅಟ್ಟ ಇತ್ತು..ಅದರಮೇಲೆ ಶ್ರೀಮಂತರು ಮಾತ್ರ..ಕಂಡಕ್ಟರ್ ಆಕಡೆ ಹೋದಾಗ ಕದ್ದು ಏಣಿ ಹತ್ತಿ ಮೇಲೆ ಹೋಗಿ..ಬಯ್ಸಿಕೊಂಡಿದ್ದಿದೆ.ಲೋಂಚ ನಿಲ್ಲಲು..ಬಿಡಲು ಗಂಟೆಯಿತ್ತು..ಅದಕ್ಕೆ ಬಳ್ಳಿ..ಆ ಬಳ್ಳಿ ಜಗ್ಗಿ..ಬಯ್ಸಿಕೊಂಡ ಕೀರ್ತಿ ನನಗಿದೆ..ಲೋಂಚಿನ ಮೇಲೆ ಐಸಕೆಂಡಿ ಬರುತ್ತಿತ್ತು..ತೆಗೆಸಿಕೊಟ್ಟರೆ ಪುಣ್ಯ..ಹಟಮಾಡಿದರೆ ಆಯಿ ಪಾಕಿಟ ಪೂರ್ತಿ ತೋರಿಸಿ..ಕತೆಹೇಳಿ..ಸುಮ್ಮನಾಗಿಸಿದ್ದಿದೆ..ನಮಗೆ ಲೋಂಚಿನ ದಂಡಿಗೆಯ ಮೇಲೆ ನಿಂತು ನೋಡುವ ಆಸೆ..ಆದರೆ ಕೊಡುತ್ತಿರಲಿಲ್ಲ..ಉಚ್ಚಿ ಹೊಯ್ಯುವ ನೆವ ಮಾಡಿ ದಂಡಿಗೆ ಮೇಲೆ ನಿಲ್ಲುತ್ತಿದ್ದೆ..ಹೊನ್ನಾವರಕ್ಕೆ ಹೋಗುವರೆಗೆ..ನಾಲ್ಕೈದು ಸಲ..ಉಚ್ಚಿ ಬರುತ್ತಿತ್ತು..ಹೊನ್ನಾವರ ಬಂದಾಗ..ಬ್ರಿಜ್ ಅಡಿಗೆ ಲೋಂಚ ಕಳಿಯುವಾಗ..ಕದ್ದು ಅಟ್ಟಕ್ಕೆ ಹೋಗುತ್ತಿದ್ದೆವು..ಬ್ರಿಜ್ ತಲೆಮೇಲೆ ಇದ್ದ ಅನುಭವ..ಮರುದಿನ ಶಾಲೆಯಲ್ಲಿ ನಾವು ಬಿಟ್ಡಿದ್ದೇ ಪೊಕಳೆ..ನಮ್ಮ ಸುತ್ತಲೂ ಲೋಂಚೇ ಹತ್ತದ ಮಕ್ಕಳು.ಹೊನ್ನಾವರ ಬಂದರ..ನಮಗೆ ಬೆಂಗಳೂರು ಇದ್ದಹಾಗೆ.ಹೊಟೆಲ್ ಹೊಕ್ಕು ಆಸೆ..ಆದರೆ ಕಷ್ಟ..ಬಂದರನ ಕೋಮಲ ವಿಲಾಸ ಹೊಟೆಲ್ ಹೊಕ್ಕಿ..ನೀರಾದರೂ ಕುಡಿಯುತ್ತಿದ್ದೆವು..ಉಡುಪಿ ಬಟ್ಟರ ಹೊಟೆಲ್..ಅಲ್ಲಿ ಬನ್ಸು ತಿಂದು..ನೀರು ಕುಡಿದರೆ..ನಮ್ಮ ಜೀವನ ಸಾರ್ಥಕ..ಪೇಟೆ ಸುತ್ತುವುದು..ಇರುವುದೇ ಹತ್ತಾರು ಅಂಗಡಿ..ವಿ ಆರ್ ಕಾಮತರನ್ನು..ಆಯಿ ಮಾತಾಡಿಸದೇ ಹೋಗುತ್ತುರಲಿಲ್ಲ..’ಇವ ನಮ್ಮನೆ ದೊಡ್ಡಮಾಣಿ’..ಎಂದು ತೋರಿಸಿಯೇ ಹೋಗುತ್ತಿದ್ದಳು..ಅವರಿಗೂ ಖುಷಿ..ನಮ್ಮ ಮುಂದಿನ ಗಿರಾಕಿಯೆಂದು..ಅಲ್ಲೆ ಹತ್ತಿರ ಇರುವ ಪಡಸಾಲಿ..ವಿಠಲನ ಹತ್ತಿರ ಒಂದು ಸೀಟಿ..ಒಂದು ಪುಗ್ಗಿ ಕೊಡಿಸಿದ್ದು ನೆನಪಿದೆ….ಸಿನೆಮಾ ಥೇಟರ್ ರೋಡಿನಲ್ಲಿ ಹೋಗುವಾಗ..ಕಾಲು ಜಪ್ಪುತ್ತುತ್ತು..ಹೊರಗೆ ನೋಡಿದ್ದೇ..ವಿನಹ..ಸಿನೆಮಾ ನೋಡಲೇ ಇಲ್ಲ..ಸಿನೆಮಾ ಟಾಕೀಜನಲ್ಲಿ ರೀಲ ಬಿಡುವ ಮಂಜುನಾಥ..ನನ್ನ ಅಜ್ಜನ ಮನೆ ಚಿಮಣಿಮಿಷನ್..ರಿಪೇರಿ ಮಾಡುವವ. ಆದರೂ ಸಿನೆಮಾ ತೋರಿಸಲೇ ಇಲ್ಲ ಆಯಿ..ಕಾರಣ ದುಡ್ಡಿಲ್ಲ. ಅದರೆ…..

RELATED ARTICLES  ಪರಮಾತ್ಮನೇ ಶಕ್ತಿಯ ಮೂಲಾಧಾರ

ಇಂದು ದುಡ್ಡಿದೆ..ಸಿನೆಮಾ ಇದೆ..ಮೈಮರೆತು ನೋಡುವ ಸಮಯವಿಲ್ಲ..ಆಸೆ ಹಾಗೇ ಇದೆ..ಕನಸಾಗಿ ಕಾಡುತ್ತ..ಮತ್ತೆ ಬರಲಿ ಆ ಮೈಮರೆತು ಅನುಭವಿಸುವ ದಿನ..ಹಣಕೆ ಬೆಲೆ ಯಿರುವ ಸುದಿನ..
ಕಾಯುವಿರೇ ತಿಗಣೇಶನೊಡಗೂಡಿ…??