ದೇಹಸುಖದ ವಾಸನೆಯೇ ಜನ್ಮಕ್ಕೆ ಕಾರಣೀಭೂತವಾಗಿರುತ್ತದೆ…. ಜ್ಞಾನಿಪುರುಷರ ಪುಣ್ಯ-ಪಾಪ, ಅವರ ಹಿತಚಿಂತಕ ಮತ್ತು ದ್ವೇಷ ಮಾಡುವವರಿಂದ ನಷ್ಟವಾಗುತ್ತದೆ. ಈ ರೀತಿ ಜನನ-ಮರಣಕ್ಕೆ ಕಾರಣೀಭೂತವಾದ ಮೂರೂ ಕರ್ಮಗಳಿಂದ ಮುಕ್ತವಾಗಿ, ಈ ಜನನ-ಮರಣ ಚಕ್ರದಲ್ಲಿ ಅವರು ಮತ್ತೆ ಸಿಕ್ಕುವದಿಲ್ಲ ಎಂದು ಶ್ರುತಿಮಾತೆ ಹೇಳುತ್ತಾಳೆ.
(ಮಾತೋಶ್ರೀ ಜಾನಕೀದೇವಿಗೆ ಬರೆದ ಪತ್ರದ ಮೂರನೆಯ ಭಾಗ)
—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
ದೇಹಸುಖದ ವಾಸನೆಯೇ ಜನ್ಮಕ್ಕೆ ಕಾರಣೀಭೂತವಾಗಿರುತ್ತದೆ. ಆ ವಾಸನೆಯನ್ನು ಆತ್ಮಸುಖದ ಅನುಭವದಿಂದ ಕಳಚಿಕೊಳ್ಳಬಹುದು ಮತ್ತು ತಾನು ಆನಂದಬ್ರಹ್ಮ-ಸ್ವರೂಪದಲ್ಲಿ ವಿಲೀನನಾಗಿದ್ದರಿಂದ ಮುಂದಿನ ಅನೇಕ ಜನ್ಮಗಳಿಗೆ ಕಾರಣೀಭೂತವಾಗಿರುವ ಸಂಚಿತ, ಪ್ರಾರಬ್ಧ, ಆಗಾಮಿ ಮೊದಲಾದ ಕರ್ಮಗಳು ಜ್ಞಾನಿ ಪುರುಷರಿಗೆ ‘ನಾನು ನಿಶ್ಚಿತವಾಗಿಯೂ ಆನಂದರೂಪ ಬ್ರಹ್ಮನಿದ್ದೇನೆ’ ಎಂಬ ಅರಿವಿನಿಂದಾಗಿ ಸಂಪೂರ್ಣ ನಷ್ಟವಾಗಿ ಮತ್ತು ಅವರ ಜನ್ಮಗಳಿಗೆ ಕಾರಣೀಭೂತವಾಗಿರುವ ಪ್ರಾರಬ್ಧ ಅವರ ಆಯುಷ್ಯ ಮುಗಿಯುವರೆಗೆ ತಮ್ಮ ಫಲ ಕೊಟ್ಟು ತಾನೇ ತಾನಾಗಿ ನಷ್ಟವಾಗುತ್ತದೆ. ಜ್ಞಾನಿಪುರುಷರ ಪುಣ್ಯ-ಪಾಪ, ಅವರ ಹಿತಚಿಂತಕ ಮತ್ತು ದ್ವೇಷ ಮಾಡುವವರಿಂದ ನಷ್ಟವಾಗುತ್ತದೆ. ಈ ರೀತಿ ಜನನ-ಮರಣಕ್ಕೆ ಕಾರಣೀಭೂತವಾದ ಮೂರೂ ಕರ್ಮಗಳಿಂದ ಮುಕ್ತವಾಗಿ, ಈ ಜನನ-ಮರಣ ಚಕ್ರದಲ್ಲಿ ಅವರು ಮತ್ತೆ ಸಿಕ್ಕುವದಿಲ್ಲ ಎಂದು ಶ್ರುತಿಮಾತೆ ಹೇಳುತ್ತಾಳೆ.
ಸೂರ್ಯಕಿರಣದಂತೆ ಆನಂದರೂಪ ಸ್ವಯಂಪ್ರಕಾಶವಾಗಿರುವ ‘ನಾನು’ ಒಂದು ಪ್ರಕಾಶಕಿರಣವೇ ಆಗಿದೆ, ಎಂದು ಯಾರ ದೃಢ ಕಲ್ಪನೆಯಿದೆಯೋ ಅವರಿಗೆ ಉಳಿದ ಯಾವುದೇ ಕಲ್ಪನೆಗಳ ಬಾಧೆಯಾಗದೇ, ಯಾವ ರೀತಿ ಮಹಾಸಾಗರದ ಅಲೆ ಮಹಾಸಾಗರದಲ್ಲೇ ವಿಲೀನವಾಗುತ್ತವೆಯೋ, ಅದೇ ರೀತಿ, ಅವರ ಎಲ್ಲ ಕಲ್ಪನೆಗಳೂ ಆನಂದರೂಪದಲ್ಲೇ ವಿಲೀನವಾಗುತ್ತವೆ. ನೀರಿನ ಮೇಲೆ ಬರೆದ ಅಕ್ಷರದಂತೆ ಈ ಎಲ್ಲ ಕಲ್ಪನೆಗಳು ಆನಂದರೂಪದಲ್ಲೇ ಏಕರೂಪ ಹೊಂದುತ್ತವೆ. ‘ನಾನು ಅದ್ವಿತೀಯನಿದ್ದೇನೆ’ ಈ ಅರಿವು ಆನಂದರೂಪದ ಹೊರತು ಉಳಿದ ಯಾವುದಕ್ಕೂ ಇರಲಿಕ್ಕೆ ಶಕ್ಯವಿಲ್ಲ. ‘ನನ್ನ ಸ್ಥಳದಲ್ಲಿ ನನ್ನ ಹೊರತು ಮತ್ತಾರೂ ಇಲ್ಲ’ ಎಂಬುದಾಗಿ ನಿಶ್ಚಿತ ಜ್ಞಾನ ಸಾತತ್ಯವಾಗಿ ಇರುವದು ಅಥವಾ ಆ ಸ್ವರೂಪದ ಜ್ಞಾನವೆಂದರೆ ಪ್ರಕಾಶ. ಸಾಮಾನ್ಯ ಬಹಿರ್ಮುಖ ಜೀವಿಯಲ್ಲಿ, ಹೇಗೆ ದೇಹದಲ್ಲಿರುವ ಕಾಮ-ಕ್ರೋಧಾದಿ ವಿಕಾರಗಳ ಬಾಧೆಯಿಂದಾಗಿ ಮನಸ್ಸಿನಲ್ಲಿ ಕಲ್ಪನೆ ಉದ್ಭವಿಸುವದೋ, ಅದು, ಆ ಜ್ಞಾನಿಗಳಿಗೆ, ಆ ಪ್ರಕಾಶದಿಂದಾಗಿ, ಬಾಹ್ಯಪ್ರಪಂಚದ ದೃಶ್ಯದಿಂದಲೂ ಕೂಡ, ಬಹಿರ್ಮುಖವಾಗಿರಲು ಶಕ್ಯವಾಗುವದಿಲ್ಲ. ಅವರಿಗೆ ಮನಸ್ಸು ಕಾಣದಂತಾಗುತ್ತದೆ. ಆ ಪ್ರಕಾಶದಿಂದಾಗಿ ಜನ್ಮ-ಮರಣದ ಕಲ್ಪನೆಯೂ ನಷ್ಟವಾಗುವದು ಮತ್ತು ಅದಕ್ಕೇ ಮೋಕ್ಷವೆನ್ನುತ್ತಾರೆ.
|| ಇತಿ ಶಮ್ ||
ಶ್ರೀಧರ