ಪ್ರಾರಂಭದಿಂದಲೇ ಬಹಳ ವೇಳೆ ಶೀರ್ಷಾಸನ ಮಾಡಬಾರದು. ನಂತರ ಹೆಚ್ಚಿಸುತ್ತಾ ಹೆಚ್ಚಿಸುತ್ತಾ ೧೫ ನಿಮಿಷ – ಅರ್ಧ ತಾಸಿನ ವರೆಗೆ ಮಾಡಬೇಕು.
(ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರ)
—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
|| ಶ್ರೀರಾಮ ಸಮರ್ಥ ||
ಚಿ. ಶಂಕರ ಪಂಡಿತನಿಗೆ ಆಶೀರ್ವಾದ,
ನಿನ್ನ ಪತ್ರ ಓದಿ ನೋಡಿದೆ. ಪತ್ರದ ವಿಷಯ ವಿಚಾರ ತಿಳಿಯಿತು.
೧. ಪ್ರಣವದ ದೀರ್ಘ ಉಚ್ಚಾರ ಮಾಡುತ್ತ ಅಂತರ್ಮುಖ ವೃತ್ತಿಯಾಗಿ ಏನೂ ತಿಳಿಯದ ಸ್ಥಿತಿ ಹೆಚ್ಚೆಚ್ಚು ವೇಳೆ ಕಳೆಯಹತ್ತಿದರೆ ಯಾವುದಾದರೂ ಇತರ ಕಾರ್ಯಕ್ರಮ ಉಳಿದುಕೊಂಡರೂ ನಡೆಯುತ್ತದೆ. ಅದರಿಂದ ದೋಷವಿಲ್ಲ. ನನ್ನ ಆಜ್ಞೆಯಾದ ನಂತರವಂತೂ ಸಂಶಯಕ್ಕೆ ಆಸ್ಪದವೇ ಇಲ್ಲ. ಎಲ್ಲವನ್ನು ಮಾಡುವದೂ ಅಂತರ್ಮುಖವೃತ್ತಿಯಾಗಲಿಕ್ಕೇ ಇರುವಾಗ ಆ ರೀತಿ ತಪ್ಪಿತಸ್ಥನಂತೆ ಬೆಚ್ಚಬೇಕಾಗಿಲ್ಲ.
೨. ತ್ರಿಕಾಲ ಸಂಧ್ಯೆ ಮಾಡುವದು ಸರಿಯೇ. ಅಂತರ್ಮುಖ ವೃತ್ತಿಯಲ್ಲಿ ಇರುವಾಗ ಸಮಯ ಕಳೆದು ಹೋದಾಗ, ಮೂರು ಸಂಧ್ಯೆಯಾಗದ ಪ್ರಾಯಶ್ಚಿತಕ್ಕೆಂದು ಒಂದು ನಾಲ್ಕನೆಯ ಅರ್ಘ ಕೊಟ್ಟರಾಯಿತು.
೩. ನಿನ್ನ ಮೇಲೆ ಕೃಪೆಯಿರುವದರಿಂದ ಗಾಯತ್ರಿಯ ಅಥವಾ ಇನ್ನಿತರ ದೇವತೆಗಳ ದರ್ಶನವಾಗುತ್ತಿದೆ. ಉಳಿದವರ ಕಲ್ಪನೆ ಮಾಡಿದರೂ ದರ್ಶನವಾಗುವದಿಲ್ಲವೆಂದಾಗ, ದರ್ಶನ ಕೃಪೆಯಿಂದಲೇ ಆಗುತ್ತದೆ ಹೊರತು ಕಲ್ಪನೆಯಿಂದಲ್ಲ.
೪. ಶಕ್ಯವಿದ್ದಲ್ಲಿ ಸ್ನಾನದ ತೀರ್ಥದ ಸ್ನಾನ ಮಾಡುತ್ತಿರು ಮತ್ತು ಸಮಯವಿದ್ದಾಗೆಲ್ಲ ‘ನಮಃಶಾಂತಾಯ …’ ಈ ಮಂತ್ರದೊಂದಿಗೆ ಹಸ್ತವನ್ನು ಉಜ್ಜುತ್ತಿರು. ಬಲಗೈಯಿಂದ ಬರೆಯಲು ಶಕ್ಯವಾಗುವದು.
೫. ಕೇಳಿದೆಯೆಂಬುವದರಿಂದ ಅದೇನು ಅವಿಧೇಯತೆಯೆಂದಲ್ಲ. ಸಾಧಕರಿಗೆ ಮಾರ್ಗದರ್ಶನ ಮಾಡುವದು ನನ್ನ ಕರ್ತವ್ಯವೆಂದು ತಿಳಿಯುತ್ತೇನೆ. ಜಪಗಳ, ನಮಸ್ಕಾರಗಳ ನಿಯಮ ಒಳ್ಳೆಯದೇ.
೬. ಶೀರ್ಷಾಸನ ಬೆಳಿಗ್ಗೆ ನಿದ್ದೆಯಿಂದ ಎದ್ದಾದ ಮೇಲೆ ಮಾಡಬೇಕು. ಮಲ-ಮೂತ್ರ ವಿಸರ್ಜನದ ಅನಿಸುವಿಕೆ ಇದ್ದರೆ ಅದನ್ನು ಮುಗಿಸಿ ನಂತರ ಶೀರ್ಷಾಸನ ಮಾಡಿದರೆ ಉತ್ತಮ. ನಿದ್ದೆಗೆ ಮೊದಲು ೫-೧೦ ನಿಮಿಷ ಶೀರ್ಷಾಸನ ಮಾಡಿ ನಂತರ ೫-೧೦ ನಿಮಿಷವಾದ ಮೇಲೆ ನಿದ್ದೆ ಮಾಡಲು ತೊಂದರೆ ಇಲ್ಲ. ಪ್ರಾರಂಭದಿಂದಲೇ ಬಹಳ ವೇಳೆ ಶೀರ್ಷಾಸನ ಮಾಡಬಾರದು. ನಂತರ ಹೆಚ್ಚಿಸುತ್ತಾ ಹೆಚ್ಚಿಸುತ್ತಾ ೧೫ ನಿಮಿಷ – ಅರ್ಧ ತಾಸಿನ ವರೆಗೆ ಮಾಡಬೇಕು. ಆಸನ ಮತ್ತು ಶೀರ್ಷಾಸನ ಮಾಡುವದರಿಂದ ಬಹಳ ಹಸಿವಾಗುತ್ತದೆ ಮತ್ತು ಹಾಗೇ ಆಹಾರ ತೆಗೆದುಕೊಳ್ಳದೇ ಹೋದರೆ ರಕ್ತ ಶೋಷಿಸಲ್ಪಡುತ್ತದೆ. ಆದ್ದರಿಂದ ಹಸಿವು ತಡೆದುಕೊಳ್ಳಬಾರದು.