( ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರದ ಎರಡನೆಯ ಭಾಗ)
—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
ಕಳೆದ ೬ನೇ ಕ್ರಮಾಂಕದ ಮುಂದುವರಿದ ಭಾಗ :
ನನಗನಿಸುವಂತೆ ನೀನೀಗ ಮುಕ್ಕಾಲು ಅಥವಾ ಅರ್ಧ ಸೇರು ಹಾಲು ಕುಡಿಯುತ್ತಿರಬಹುದು. ಮತ್ತೂ ಹೆಚ್ಚು ಬೇಕೆನಿಸಿದರೆ ಅದನ್ನು ಶ್ರೀಧರ ಕುಟಿಯಿಂದ ತೆಗೆದುಕೊಂಡು ಹೋಗು. ಚಿ. ಲಕ್ಷ್ಮೀನಾರಾಯಣನಿಗೆ ಹೇಳಿಡುತ್ತೇನೆ. ಮೆಣಸು ಹೆಚ್ಚಾಗಿದ್ದರೆ ಆ ಪದಾರ್ಥ ರಾತ್ರಿ ತಿನ್ನಬೇಡ. ಅವಲಕ್ಕಿ ತಂದು ಇಟ್ಟಿಕೋ. ಅವಲಕ್ಕಿ ಹಾಲಿನಲ್ಲಿ ನೆನೆಸಿ ತಿನ್ನು. ಸಕ್ಕರೆ ಕೇಳಿದರೆ ಕೊಡುತ್ತಾರೆ. ಇಲ್ಲವಾದರೆ ಲಕ್ಷ್ಮೀನಾರಾಯಣನಿಂದ ಕೇಳಿ ತೆಗೆದುಕೊಂಡು ಹೋಗು. ಅವಲಕ್ಕಿ ಸಿಗದಿದ್ದರೆ ನಾನು ಹಣ ಕೊಟ್ಟು ತರಿಸಿ ಕೊಡುತ್ತೇನೆ. ತಿಳಿಸು. ಖರ್ಚಾಗುವದಕ್ಕಿಂತ ಮೊದಲೇ ತಿಳಿಸುತ್ತಿರು ಅಂದರೆ ಉಪವಾಸವಿರಬೇಕಾದ ಪ್ರಸಂಗ ಬರುವದಿಲ್ಲ. ಆಹಾರದಿಂದ ಆಲಸ್ಯ ಬರಬಾರದು, ಚುರುಕಿರಬೇಕು, ಅಷ್ಟೇ ಸೇವಿಸಬೇಕು. ತಿನ್ನುವ ವೇಳೆಗಿಂತ ೧-೨ ತಾಸು ಮೊದಲು ಅವಲಕ್ಕಿ ಹಾಲಿನಲ್ಲಿ ನೆನೆಸಿಡಬೇಕು. ಒಂದೆರಡು ದಿನ ಮೊದಲೇ ಹೇಳಿದರೆ ತಂದು ಕೊಡಲು ಅನುಕೂಲವಾಗುತ್ತದೆ; ಸೇವಾಮಂಡಲದಿಂದ ಸಿಕ್ಕಿದರೆ, ಇಲ್ಲೇ ಆದದ್ದರಿಂದ ಯಾವಾಗೂ ತರಬಹುದು. ಅದರಿಂದ ಗಂಜಿಯ ಜಂಜಾಟ ಇರುವದಿಲ್ಲ. ರಾತ್ರಿ ಬೇಗ, ೧೦ ಗಂಟೆಗೆ ಮಲಗಬಹುದು. ದೇಹಪ್ರಕೃತಿಗೆ ಅವಲಕ್ಕಿ ಒಗ್ಗುತ್ತದೋ ಇಲ್ಲವೋ ನೋಡಿಕೋ. ಯಾವುದು ಯೋಗ್ಯವೆನಿಸುತ್ತದೆಯೋ ಆ ಆಹಾರ ತೆಗೆದುಕೋ. ಸಾಧನೆಯ ದೃಷ್ಟಿಯಿಂದ, ಆಹಾರದಲ್ಲಿ ಹೆಚ್ಚು ಉಪ್ಪು-ಮೆಣಸು ಇರದಿರುವದೇ ಉತ್ತಮ. ರಾತ್ರಿ ೯|| ನಂತರ, ಬ್ರಹ್ಮಪಿಸೆಯ ಸ್ಥಳಕ್ಕೆ ಹೋಗಿ ಕುಳಿತು ಅದೆಷ್ಟು ವೇಳೆ ಅಭ್ಯಾಸ ಮಾಡಲಿಕ್ಕೆ ಶಕ್ಯ? ಇದ್ದ ಸ್ಥಳದಲ್ಲೇ ಅಭ್ಯಾಸ ಮಾಡು. ರಾತ್ರಿ ಮತ್ತು ಹಗಲಿನಲ್ಲಿ ಮಧ್ಯಾಹ್ನದ ನಂತರ, ಅನುಕೂಲತೆ ನೋಡಿಕೊಂಡು ಎಷ್ಟೇ ಹೊತ್ತು ಕುಳಿತರೂ ತೊಂದರೆಯಿಲ್ಲ. ದೀರ್ಘ ಪ್ರಣವದ ಅಭ್ಯಾಸವಾದಂತೆ ಅಷ್ಟಷ್ಟು ಹೆಚ್ಚಿಸುತ್ತ ಹೋಗು. ಸಾಯಂಕಾಲದ ಆಹ್ನಿಕ ಮುಗಿಸಿ ಬೆಳದಿಂಗಳ ರಾತ್ರಿಯಲ್ಲಿ ೯ ಗಂಟೆಯೊಳಗೆ ಸ್ವಲ್ಪ ಹೊತ್ತು ೧ – ೧|| -೨ ತಾಸು ಕುಳಿತು ಬಂದು ಬಿಡು. ಆದಷ್ಟು ಅತ್ಯಾಹಾರ ಅಥವಾ ಅಲ್ಪಾಹಾರ, ಅತಿಹೆಚ್ಚು ಅಥವಾ ತೀರಾಕಡಿಮೆ ನಿದ್ರೆ ಮಾಡಬಾರದು – ಪ್ರತಿಯೊಂದೂ ನಿಯಮಿತವಾಗಿರಬೇಕು. ಇನ್ನು ಹಸಿವೆ ಹೆಚ್ಚಿದ್ದರೆ ಆಹಾರ ಹೆಚ್ಚು ತೆಗೆದುಕೊಳ್ಳಬೇಕು. ಒಟ್ಟಿನಮೇಲೆ ಅಭ್ಯಾಸ ಹೆಚ್ಚೆಚ್ಚು ಬೆಳೆಸುತ್ತ ಹೋಗು. ಮನಸ್ಸು ಪ್ರಸನ್ನವಾಗಿರಬೇಕು. ಆರೋಗ್ಯ ಸರಿಯಾಗಿರಬೇಕೆಂಬುದನ್ನು ಲಕ್ಷದಲ್ಲಿಟ್ಟು ಮುಂದುವರಿಸಬೇಕು.
೭. ನಿರ್ಜಲ ಏಕಾದಶಿ ಮಾಡಬೇಡ. ಹಣ್ಣು, ಹಾಲು, ಸಾಬಕ್ಕಿ ಹೀಗೆ ಏನಾದರೂ ತೆಗೆದುಕೊಳ್ಳಬೇಕು. ಸಾಧಕರಿಗೆ ‘ನಿರಶನ ಮಾಡಬಾರದು’ ಎಂದು ಹೇಳಿದ್ದಾರೆ. ನಿರಶನ ಮತ್ತು ಹೆಚ್ಚಿನ ಕಾಯಕ್ಲೇಶ ಯೋಗಾಭ್ಯಾಸದ ಸಾಧಕರಿಗೆ ವರ್ಜ್ಯವಾಗಿದೆ. ನಿರಶನ ಅಂದರೆ ಏನೂ ತಿನ್ನದೇ ಇರುವದು. ಕಾಯಕ್ಲೇಶ ಅಂದರೆ ಹೆಚ್ಚಿನ ದೈಹಿಕ ಶ್ರಮ. ಈ ಎರಡರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಹಸಿವೆ ನಿರ್ಲಕ್ಷಿಸಬಾರದು.
ನೀನು ಕೇಳಿದ ಪ್ರಶ್ನೆಗಳಿಗೆ ಕ್ರಮವಾಗಿ ಉತ್ತರ ಕೊಟ್ಟಿದ್ದೇನೆ. ನನ್ನ ಕೃಪೆ ಇದೆ. ಸಾಧನೆ ಮಾಡು. ಆಹಾರ, ವಸ್ತ್ರಗಳ ವಿಷಯದಲ್ಲಿ ಸಂಕೋಚ ಮಾಡದೇ ಹೇಳು ಎಂದು ನನ್ನ ಆಗ್ರಹದ ಹೇಳಿಕೆ. ಸಾಧನೆ ತಾರುಣ್ಯಾವಸ್ಥೆಯಲ್ಲಿಯೇ ಮಾಡಲಿಕ್ಕೆ ಬರುತ್ತದೆ. ಮುಂದೆ ಆಗುವದಿಲ್ಲ ಎಂದು ಸಾಧಕರು ಉತ್ಸಾಹದಿಂದ ಸಾಧನೆ ಮಾಡಬೇಕು. ಅಲ್ಲಿ-ಇಲ್ಲಿ ಎಂದು ಒಂದು ನಿಮಿಷವೂ ಹಾಳುಮಾಡಬಾರದು. ನೀನು ಮೌನದಿಂದಿದ್ದೇಯೆ ಎಂದು ಕೇಳಿ ಆನಂದವಾಯಿತು. ಸಾಧಕರು ಮೌನವನ್ನು ಪಾಲಿಸಬೇಕು. ಹಾಗೇನಾದರು ಬೇಕಾದಲ್ಲಿ ಬರೆದು ತಿಳಿಸಬೇಕು. ಬೆಳಕಿಗೆ ಬ್ಯಾಟರಿ ಇಲ್ಲದೇ ಹೋದರೆ ತಿಳಿಸು.
ಪೂರ್ಣತ್ವ ಲಭಿಸಲಿ.
ಶ್ರೀಧರ