ಪಂಚಭೂತಗಳ ವಿಚಾರ ಅದಕ್ಕೆಲ್ಲಕ್ಕಿಂತಲೂ ಬಹಳ ಹಿಂದಿನ ಅಂದರೆ ಬಹಳ ಕೆಳಗಿನ ಸ್ಥರದ್ದಾಗಿದೆ. ಅದೇಕೀಗ? ಒಮ್ಮೆಲೇ ಮೂಲಕ್ಕೇ ಕೈಹಾಕುವದು ಒಳ್ಳೆಯದಲ್ಲವೇ?
(ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರದ ಎರಡನೆಯ ಭಾಗ)
—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
೪. ಹೆಗಲಿನಿಂದ ಉಗುರಿನ ಕೊನೆಯ ವರೆಗೆ ೧೨ ಸಲ ಮತ್ತು ನಂತರ ಮಣಿಕಟ್ಟಿನಿಂದ ಹೆಬ್ಬೆರಳಿನ ಉಗುರಿನ ಕೊನೆಯ ವರೆಗೆ ಶಕ್ಯವಿದ್ದಷ್ಟು ಸಲ ‘ನಮಃ ಶಾಂತಾಯ …’ ಮಂತ್ರದ ಉಚ್ಚಾರದಿಂದ ಪನಃ ಪುನಃ ಕೈಯಾಡಿಸುತ್ತಾ ಹೋಗು. ಭಸ್ಮವಿದ್ದರೆ ಅದನ್ನು ಕೈಗೆ ಹಚ್ಚಿಕೊಂಡು ಕೈಯಾಡಿಸು. ಬೇಗ ಗುಣವಾಗುವದು.
೫. ಶವಾಸನ ಮಾಡಿ ‘ವಾಯುಮಿಶ್ರಿತ ಅರಿವಿ’ನ ಅಂದರೆ ‘ಮೂಲ ಸ್ಫೂರ್ತಿರೂಪ ಮಾಯೆ’ಯ, ‘ಅಹಂ ಬ್ರಹ್ಮಾಸ್ಮಿ’ಯ ವಿಚಾರ ಮಾಡುತ್ತಿರುವೆಯೆಂಬುದು ಸರಿ. ವಾಯುವಿನ ಚಂಚಲತೆ ಅಂದರೆ ಸ್ಫುರಣೆಯ ಅಭಾವ. ಅದನ್ನು ತೆಗೆದೊಗೆದು, ಒಂದು ನಿಶ್ಚಯ ಅರಿವಿನ ರೂಪ ಆನಂದವೇ ಉಳಿಯಬೇಕು. ಆಗ ಮಾಯಾರಹಿತ ಪರಬ್ರಹ್ಮವೊಂದೇ ಉಳಿಯುತ್ತದೆ. ಪಂಚಭೂತಗಳ ವಿಚಾರ ಅದಕ್ಕೆಲ್ಲಕ್ಕಿಂತಲೂ ಬಹಳ ಹಿಂದಿನ ಅಂದರೆ ಬಹಳ ಕೆಳಗಿನ ಸ್ಥರದ್ದಾಗಿದೆ. ಅದೇಕೀಗ? ಒಮ್ಮೆಲೇ ಮೂಲಕ್ಕೇ ಕೈಹಾಕುವದು ಒಳ್ಳೆಯದಲ್ಲವೇ?
‘ಅಹಂ ಬ್ರಹ್ಮ ಅಸ್ಮಿ|’ ‘ನಾನು ಬ್ರಹ್ಮನಿದ್ದೇನೆ.’ ‘ಕೇವಲ ಆನಂದರೂಪನಿದ್ದೇನೆ.’ ಹೀಗೇ ಅನುಸಂಧಾನ ಮಾಡುವ ಬಗ್ಗೆ ಉಪನಿಷದ್ದು ಹೇಳುತ್ತದೆ.
‘ಅಹಂ ಬ್ರಹ್ಮಾಸ್ಮಿತ್ಯನುಸಂಧಾನ ಕುರ್ಯಾತ್’ ‘ಸೋಹಂ’
‘ಆತ್ಮಾಜ್ಞಾನಘನ| ಅಜನ್ಮಾ ತೋ ತೂಚಿ ಜಾಣ| ಹೇಂಚೀ ಸಾಧೂಚೇ ವಚನ| ದೃಢ ಧರಾವೇ|| ಹೀಗೆ ಶ್ರೀಸಮರ್ಥರ ಹೇಳಿಕೆಯೂ ಇದೆ.
೬. ಕುಟಿಯಲ್ಲಿ ತಾಮ್ರದ ಲೋಟ ಮೊದಲಾದವು ಏನಾದರೂ ಇದ್ದರೆ ಕಳಿಸುತ್ತೇನೆ. ಮಂಡಳದಲ್ಲೂ ನೋಡು. ಅಲ್ಲಿದ್ದರೆ ಅವರು ಕೊಡುತ್ತಾರೆ. ಇಲ್ಲದೇ ಹೋದರೆ ನನ್ನ ಖಾತೆಗೆ ಖರ್ಚು ಹಾಕಿ, ಒಂದು ತಂಬಿಗೆ ತಂದು ಕೊಡಲು ಹೇಳು. ತಂದು ಕೊಡುತ್ತಾರೆ. ಉಣ್ಣೆಯ ಬಟ್ಟೆಗಳಿದ್ದರೆ ಕಳಿಸುತ್ತೇನೆ. ಇಲ್ಲದೇ ಹೋದರೆ ಮಂಡಳದವರು ಉಣ್ಣೆಯ ಆಸನವಸ್ತ್ರಗಳನ್ನು ಹಂಚಿದ್ದಾರೆ. ಕಂಬಳಿಯ ಬದಲಾಗಿ ಇರುವ ಆ ಆಸನ ನಿನಗೆ ಸಿಕ್ಕದಿದ್ದಲ್ಲಿ ಕೇಳಿ ತೆಗೆದುಕೋ. ಅದು ರಾತ್ರಿ ಹೇಗಿದ್ದರೂ ಅಲ್ಲೇ ಬಿದ್ದಿರುತ್ತದೆ, ಅದನ್ನು ತಂಬಿಗೆಗೆ ಸುತ್ತಿದರೆ ಆಯ್ತು. ಒಂದು ಕೆಲಸ ಎರಡು ಗುರಿ.
೭. ಮೌನಾಚರಣೆಯಲ್ಲಿ (ಸಂಜ್ಞಾಸಂವಾದ) :
ಅವಲಕ್ಕಿ ಮುಗಿದರೆ ಆ ಖಾಲಿ ಡಬ್ಬಿ ಇಟ್ಟೆ ಅಂದರೆ ಅವಲಕ್ಕಿ ಮುಗಿದ ಸಂಜ್ಞೆ ಅರ್ಥವಾಗುತ್ತದೆ. ತಿಂಗಳು ಮುಗಿಯಿತು ಅಂದರೆ ರೊಕ್ಕದ ಸಂಜ್ಞೆ ಮಾಡಿ ತೋರಿಸಬೇಕು ಅಥವಾ ಲಕ್ಷ್ಮೀನಾರಾಯಣನ ಹತ್ತಿರ ಪ್ರತಿ ತಿಂಗಳು ಮುಗಿದ ಮೇಲೆ ಹಣ ಕೇಳಲು ಹೇಳಿ ಇಡಬೇಕು. ತಿಂಗಳ ಒಳಗೇ ತಿಂಗಳಾಯಿತೆಂದು ಹಣ ಪಡೆಯುವ ಆತುರತೆ ಇರಬಾರದು. ರಾಮಸ್ವಾಮಿಯ ತಿಂಗಳು ಮತ್ತು ನಿನ್ನ ತಿಂಗಳು ಒಂದೇ ಇರಬೇಕು ಅಂದರೆ ತಿಂಗಳು ಆಯಿತೋ ಇಲ್ಲವೋ ಇದರ ಬಗ್ಗೆ ವಿಚಾರ ಮಾಡಬೇಕಾಗಿ ಬರುವದಿಲ್ಲ.
(ಈ ಪತ್ರದ ಮೂರನೆಯ ಭಾಗ ಮುಂದುವರಿಯುವದು)