ಸಾಧಕನು ಯಾರ ಮೇಲೂ ಪ್ರೇಮ ಇಡಬಾರದು ಮತ್ತು ಯಾರನ್ನೂ ದ್ವೇಷ ಮಾಡಬಾರದು. ಪ್ರೇಮ ಮತ್ತು ದ್ವೇಷದಿಂದ ಅದೇ ಮೂರ್ತಿ ಕಣ್ಮುಂದೆ ನಿಲ್ಲಹತ್ತುತ್ತದೆ ಮತ್ತು ಧ್ಯಾನಧಾರಣೆ ಕಡಿಮೆಯಾಗಹತ್ತುತ್ತದೆ.
(ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರದ ಮೂರನೆಯ ಮತ್ತು
ಕೊನೆಯ ಭಾಗ)
—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
ಪ್ರಾರಂಭದಲ್ಲಿ ಎರಡು ತಿಂಗಳು ಮೌನವೃತದ ಸಂಕಲ್ಪ ಮಾಡಬೇಕು. ತೊಂದರೆಯಾಗದಿದ್ದಲ್ಲಿ ಮುಂದೆ ಮತ್ತೆ ಎರಡು ತಿಂಗಳು ಮುಂದುವರಿಸಬೇಕು. ಮೌನದ ಮಹತ್ವವನ್ನು ಬಹಳ ಬಣ್ಣಿಸಿದ್ದಾರೆ. ಯಾರಿಗೂ ನಿಷ್ಠುರವಾಗಿ ಇರಬಾರದೆಂಬ ನಿನ್ನ ಧೋರಣೆ ಸಾಧಕನಿಗೆ ಯೋಗ್ಯವಾದದ್ದೇ. ಅದರಿಂದ ಯಾರಿಗೂ ತೊಂದರೆಯಾಗುವದಿಲ್ಲ. ಸಹಾಯವೇ ಆಗುತ್ತದೆ.
‘ಜನಕೃಪಾನೈಷ್ಠುರ್ಯಮುತ್ಸೃಜ್ಯತಾಮ್|’
ನಿಷ್ಠುರನೂ ಆಗಬಾರದು ಮತ್ತು ಜನರ ಓಲೈಕೆಯ ಪ್ರಯತ್ನವನ್ನೂ ಮಾಡಬಾರದು. ಯಾವುದಾದರೂ ಅತಿ ವರ್ಜ್ಯವಾಗಿರುವದು. ಲೋಕದ ಜನರ ಮನಸ್ಸಮಾಧಾನದ ಕಡೆಗೆ ಲಕ್ಷ ಕೊಡದೇ ಹೋದರೂ ನಮ್ಮ ಅಭ್ಯಾಸಕ್ಕೆ ಅಡಚಣಿ ಬರಬಹುದು. ಜನರ ಒಲವು ಸಂಪಾದಿಸುವ ಕೆಲಸವೂ ತುಂಬಾ ಜಟಿಲ ಕಾರ್ಯ. ಆದರೆ, ಸಾಧಕರು ಯಾರ ಹತ್ತಿರವೂ ನಿಷ್ಠುರವಾಗಿರದೇ ಮೌನದಿಂದ ಅಥವಾ ಮಿತಭಾಷಣದಿಂದ ಮಧುರವಾಗಿ ನಡೆದುಕೊಳ್ಳುತ್ತ, ತನ್ನ ಅಭ್ಯಾಸದಲ್ಲಿಯೇ ಇದ್ದರೆ ಜನರು ಆದರದಿಂದ ಬೇಕಾದ ವ್ಯವಸ್ಥೆ ಮಾಡಿಕೊಡುತ್ತಾರೆ. ಅತಿ ಹರಟೆಮಾತು ಮತ್ತು ಅತಿಸಲಿಗೆ ಯಾರ ಸಂಗಡವೂ ಇರಬಾರದು. ಸಾಧಕನು ಯಾರ ಮೇಲೂ ಪ್ರೇಮ ಇಡಬಾರದು ಮತ್ತು ಯಾರನ್ನೂ ದ್ವೇಷ ಮಾಡಬಾರದು. ಪ್ರೇಮ ಮತ್ತು ದ್ವೇಷದಿಂದ ಅವರದೇ ಮೂರ್ತಿ ಕಣ್ಮುಂದೆ ನಿಲ್ಲಹತ್ತುತ್ತದೆ ಮತ್ತು ಧ್ಯಾನಧಾರಣೆ ಕಡಿಮೆಯಾಗಹತ್ತುತ್ತದೆ.
೮. ಧ್ಯಾನದಲ್ಲಿ ದೇಹದ ವಿಸ್ಮರಣೆಯಾಗಿ ನಿದ್ರಾಸ್ಥಿತಿಯಂತೆ ವಿಶ್ರಾಂತಿ ಸಿಗಹತ್ತಿತು ಅಂದರೆ ಆಗ ದೇಹಾರೋಗ್ಯಕ್ಕೆ ನಿದ್ದೆಯ ಆವಶ್ಯಕತೆ ಇರುವದಿಲ್ಲ. ಎಲ್ಲಿಯವರೆಗೆ ಈ ಸ್ಥಿತಿ ಸಾಧಿಸಿಲ್ಲವೋ ಅಲ್ಲಿಯವರೆಗೆ ತರುಣ ಸಾಧಕನಿಗೆ ೪-೫ ತಾಸು ವಿಶ್ರಾಂತಿ ಬೇಕೇಬೇಕು. ಅನಿದ್ರೆಯಿಂದ ಉಷ್ಣತೆ ಹೆಚ್ಚಾಗಿ ತಲೆಯ ಮೇಲೆ ಅಂದರೆ ಮಿದುಳಿನ ಮೇಲೆ ಪರಿಣಾಮವಾಗುತ್ತದೆ. ೧೦ ಗಂಟೆಗೆ ನಿದ್ದೆ ಮಾಡಿ ೨|| – ೩ಕ್ಕೆ ಏಳಬೇಕು.
೯. ಮನೋಲಯ ಎಲ್ಲಕ್ಕಿಂತಲೂ ಶ್ರೇಷ್ಠ ಸಾಧನವಾಗಿದೆ. ಜಪ ಕಡಿಮೆಯಾದರೂ ತೊಂದರೆಯಿಲ್ಲ. ಉಳಿದ ಯಾವುದೇ ಕಾರ್ಯಕ್ರಮ ಉಳಿದು ಹೋದರೂ ತೊಂದರೆಯಿಲ್ಲ.
ಈ ಪತ್ರ ಕಾಳಜಿಯಿಂದ ಇಟ್ಟಿಕೋ.
ಶ್ರೀಧರ