ಮನುಷ್ಯನ ಜೀವನದ ಕಹಿ ಸತ್ಯ ಎಂದರೆ ನೋವಿನಿಂದ ಸಾವು ಸಾವಿನಿಂದ ನೋವು ಎನ್ನುವುದು. ನೋವಿನಿಂದ ಸಾವು ಎಂದರೆ ಮನುಷ್ಯ ಸೇರಿದಂತೆ ಪ್ರತಿಯೊಂದು ಜೀವಿಯು ತಾನು ಸಾಯುವಾಗ ನೋವನ್ನು ಅನುಭವಿಸಿಯೇ ಸಾಯುವುದು ಹಾಗೂ ಸಾಯುತ್ತಿರುವುದು ಇದು ಎಲ್ಲರೂ ತಿಳಿದ ವಿಷಯ.
ಮನುಷ್ಯನಿಗೆ ದೀರ್ಘಾವದಿ ಖಾಯಿಲೆ ಇದ್ದು ಅದರಿಂದ ನರಳಿ ನರಳಿ ಸತ್ತರೆ ಅವನು ಎಂಥಹ ನೋವನ್ನು ಅನುಭವಿಸಿರುತ್ತಾನೆ. ಅನುಭವಿಸುತ್ತಿರುವ ನೋವು ಅವನಿಗೆ ಮಾತ್ರ ತಿಳಿದಿರುತ್ತದೆ. ಕೆಲವರು ಬದುಕಿದ್ದಾಗ ಮಾರಕ ಕಾಯಿಲೆಯಿಂದ ನರಳುತ್ತಿರುವ ಸಂದರ್ಭದಲ್ಲಿ ಅವರ ಮನಸ್ಸಿನಲ್ಲಿ ಅಥವಾ ಬೇರೆಯವರ ಎದುರಿನಲ್ಲಿ ಯಾವ ಶತ್ರುವಿಗೂ ಬೇಡಪ್ಪಾ ಈ ರೀತಿಯ ನೋವು ಎಂದು ಉದ್ಗರಿಸಿರುವುದುಂಟು. ಇದು ಅನೇಕ ಸಂದರ್ಭಗಳಲ್ಲಿ ಕೆಲವರಿಗೆ ಅನುಭವವಾಗಿರಬಹುದು. ಇನ್ನೂ ಕೆಲವರು ಅನೇಕ ಕಾಯಿಲೆಗೆ ತುತ್ತಾಗಿ ಈ ಕಡೆ ಬದುಕಲಾರದೆ ಆ ಕಡೆ ಸಾಯಲಾರದೆ ಕೊರಗಿ ಕೊರಗಿ ಬೇರೊಬ್ಬರ ನಿಂದನೆಗೆ ಒಳಗಾಗಿ ಕಡೆಯಲ್ಲಿ ತಮ್ಮ ಪ್ರಾಣತ್ಯಾಗ ಮಾಡಬಹುದು.
ಮನುಷ್ಯ ಆತ್ಮಹತ್ಯೆಯಿಂದ ಸತ್ತರೂ ಅವನು ಸಾಯುವ ಘಳಿಗೆಯಲ್ಲಿ ಎಷ್ಟು ನೋವು ಅನುಭವಿಸು ತ್ತಾನೋ ಅನುಬವಿಸಿದವನಿಗೆ ಗೊತ್ತು. ಆತ್ಮಹತ್ಯೆ ಮಾಡಿಕೊಳ್ಳುವ ಮನುಷ್ಯನು ಜೀವನದಲ್ಲಿ ಎಷ್ಟು ನೋವು ಅನುಭವಿಸಿರುತ್ತಾನೆ. ಸುಲಭವಾಗಿ ಅಥವಾ ಸಣ್ಣ ಸಣ್ಣ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದಾನೆ ಎಂದರೆ ಅವನ ಜೀವನದಲ್ಲಿ ಎಷ್ಟು ಕಷ್ಟ ಮತ್ತು ನೋವು ಅನುಭವಿಸಿದ್ದಾನೆ ಎಂದು ಅವನು ಸತ್ತ ಮೇಲೆ ತಿಳಿಯುತ್ತದೆ. ನೋವುಗಳನ್ನು ಅನುಭವಿಸಿ ಸತ್ತಮೇಲೆ ಸತ್ತ ವ್ಯಕ್ತಿಗೆ ಏನೂ ತಿಳಿಯುವುದಿಲ್ಲ. ಸತ್ತ ವ್ಯಕ್ತಿಯನ್ನು ನೋಡಿದಾಗಲೂ ಸಹ ಮನುಷ್ಯನು ಹಾಸಿಗೆಯ ಮೇಲೆ ಕೊರಗುತ್ತಿದ್ದ ಕಷ್ಟ ತಿಳಿಯುವುದಿಲ್ಲ. ಅಪಘಾತವಾದಾಗ ಅನುಭವಿಸುವ ನೋವು ಎಲ್ಲರ ಕಣ್ಣಲ್ಲೂ ನೀರು ಬರಿಸುವಂತಹದ್ದು. ಅಪಘಾತವಾದ ತಕ್ಷಣ ಸತ್ತರೆ ಅರೆಕ್ಷಣ ಸ್ವಲ್ಪ ನೋವಿನಿಂದ ಪ್ರಾಣ ಪಕ್ಷಿ ಹಾರಿಹೋಗುತ್ತದೆ. ಗಂಭೀರ ಗಾಯಗಳಾಗಿ ರಸ್ತೆಗಳಲ್ಲಿ ಬಿದ್ದಾಗ ಅಮಾನವೀಯತೆಯಿಂದ ಯಾರೂ ಸಹಾಯಕ್ಕೆ ಬರದೆ ನರಳಿ ನರಳಿ ಸತ್ತರಂತೂ ಅವರು ಅನುಭವಿಸುವ ನೋವು ಯಾರಿಗೂ ಬೇಡ. ಅಸಹಾಯಕರಾಗಿ ಎಲ್ಲರಲ್ಲೂ ಸಹಾಯ ಮಾಡಿ ಎಂದು ಬೇಡಿಕೊಳ್ಳುವ ಪರಿಸ್ಥಿತಿ ನೋಡಿದರೆ ಮಾನವೀಯತೆ ಇರುವ ಎಂಥವರಿಗೂ ಕರುಳು ಕಿವುಚಿದಂತೆ ಆಗುತ್ತದೆ. ಅವರ ನೋವು ಎಷ್ಟರ ಮಟ್ಟಿಗೆ ಇರುತ್ತದೆ ಎಂದರೆ ಅವರು ಮನಸ್ಸಿನಲ್ಲಿ ಬೇಗ ಪ್ರಾಣ ಹೋಗಬಾರದೆ ಎಂದು ಹಲುಬುವಂತೆ ಆಗಿರುತ್ತದೆ. ನರಳದೇ ಕೊರಗದೇ ಒಂದೇ ಸಲ ಜೀವ ಹೋಗಬೇಕೆಂಬುದೇ ಎಲ್ಲರ ಅಸೆಯಾಗಿರುತ್ತದೆ. ಹಾಸಿಗೆಯ ಮೇಲೆ ಮಲಗಿ, ನರಳುತ್ತಾ ಬೇರೆಯವರಿಗೆ ತೊಂದರೆ ಕೊಟ್ಟುಕೊಂಡು ಇರುವುದಕ್ಕಿಂತ ಒಂದೇ ಸಲ ಸಾವು ಬಂದರೆ ಬಹಳ ಚೆನ್ನಾಗಿರುತ್ತದೆ ಎಂದು ಹೇಳುವವರೇ ಜಾಸ್ತಿ. ಕಡೇಗಾಲದಲ್ಲಿ ಕಾಯಿಲೆ ಬಂದು ಹಾಸಿಗೆಯ ಮೇಲೆ ಮಲಗಿ ಮೇಲೇಳಲಾರದೆ ಬೇರೊಬ್ಬರು ನೋಡಿಕೊಳ್ಳುವ ಪರಿಸ್ಥಿತಿ ಬಂದರೆ ಅವರಿಗೂ ಮನಸ್ಸಿನಲ್ಲಿ ಬೇಸರ ಉಂಟಾಗಿರುತ್ತದೆ. ಹೆತ್ತವರಾಗಿದ್ದರೆ ಅವರನ್ನು ಕೆಲವು ಮಕ್ಕಳು ಕಡೇವರೆವಿಗೂ ಪ್ರೀತಿಯಿಂದ ನೋಡಿಕೊಳ್ಳಬಹುದು. ಇಲ್ಲದಿದ್ದಲ್ಲಿ ಬೇಸರಪಟ್ಟುಕೊಂಡು ಸೇವೆ ಮಾಡುತ್ತಾ ಇದ್ದು ಆದಷ್ಟು ಬೇಗ ಹೋಗಬಾರದೆ ಎಂಬ ಭಾವನೆ ಬಂದಲ್ಲಿ ಅವರಿಂದ ಸೇವೆಯನ್ನು ಮಾಡಿಸಿಕೊಳ್ಳಲು ಆಗದ ಸನ್ನಿವೇಶ ಬಂದೊದಗುತ್ತದೆ.
ಮನುಷ್ಯನು ತನ್ನ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಅತೀವ ಆಸೆ ಇಟ್ಟುಕೊಂಡಿದ್ದು, ತನ್ನ ತಪ್ಪಿಲ್ಲದೆ ಬೇರೆಯವರಿಂದ ಅಪಘಾತವಾಗಿ ಹಾಸಿಗೆ ಹಿಡಿದರೆ, ಈ ಕಡೆ ಬದುಕಬೇಕೆಂಬ ಆಸೆ ಇರುತ್ತದೆ. ತನ್ನ ಗುರಿ ಮುಟ್ಟಲಿಲ್ಲವಲ್ಲ ಎಂಬ ಮನೋವ್ಯಥೆ ಬಂದಿರುತ್ತದೆ. ಆದರೆ ಆಗಿರುವ ಗಾಯಗಳಿಂದ ಆಗುತ್ತಿರುವ ನೋವು ಎರಡರಿಂದಲೂ ಅತೀವವಾಗಿ ನೋವು ಅನುಭವಿಸುತ್ತಾ ಜೊತೆಗೆ ಮಾನಸಿಕವಾಗಿ ಕೊರಗುತ್ತಾ ಕಡೆಗೆ ಕೊನೆಯುಸಿರೆಳುಯುತ್ತಾರೆ. ಯಾವುದೇ ರೀತಿಯಲ್ಲಿ ಸತ್ತರು ಮನುಷ್ಯನು ವಿಭಿನ್ನ ರೀತಿಯ ನೋವನ್ನು ಅನುಭವಿಸಿಯೇ ಸಾಯುವುದು ಇದನ್ನು ಯಾರೂ ಅಲ್ಲಗಳೆಯುವುದಿಲ್ಲ.
ಹೃದಯಾಘಾತವೇ ಆಗಿರಬಹುದು ಬೇರೆ ಯಾವರೀತಿಯ ಕಾಯಿಲೆಯಿಂದಲಾದರೂ ಸಾಯಬಹುದು, ಹೃದಯಾಘಾತವಾಗಿ ಸತ್ತ ವ್ಯಕ್ತಿಯನ್ನು ನೋಡಿ ಎಲ್ಲರೂ ಎಂತಹಾ ಪುಣ್ಯಾತ್ಮನಪ್ಪ ಕೊರಗಲಿಲ್ಲ ಅಥವಾ ಒಬ್ಬರಿಗೆ ತೊಂದರೆ ಕೊಡದೆ ತನ್ನ ಇಹಲೋಕ ತ್ಯಜಿಸಿದನಲ್ಲಾ ಎಂದು ಹೇಳಬಹುದು. ಆದರೆ ಹೃದಯಘಾತವಾಗಿ ಸತ್ತ ವ್ಯಕ್ತಿಯೂ ಸಹ ಅಲ್ಪ ಸ್ವಲ್ಪ ಸಾಯುವಾಗ ಸ್ವಲ್ಪ ನೋವು ಅನುಭವಿಸಿ ಸಾಯುತ್ತಾನೆ. ಹೃದಯಾಘಾತವಾದ ವ್ಯಕ್ತಿಗೆ ದೈಹಿಕವಾಗಿ ನೋವು ಅಷ್ಟಾಗಿ ಇಲ್ಲದಿದ್ದರೂ ಅವನು ಬದುಕಿರುವಾಗ ಅವನ ಜೀವನದಲ್ಲಿ ಮಾನಸಿಕವಾಗಿ ಎಷ್ಟು ನೋವು ಅನುಭವಿಸಿರುತ್ತಾನೆ, ಯಾವುದೋ ಚಿಂತೆ, ಯಾವುದೋ ರೀತಿಯ ಭಯ ಮನದಲ್ಲಿ ಆವರಿಸಿ, ಅದನ್ನು ತಡೆಯಲಾರದೆ ಹೃದಯಾಘಾತವಾಗಿ ಸಾವನ್ನಪ್ಪಬಹುದು. ಮನುಷ್ಯನಿಗೆ ಜೀವನದಲ್ಲಿ ಸಾವು ಮತ್ತು ನೋವು ಯಾವರೀತಿಯಲ್ಲಿ ಬರುತ್ತದೆ ಎಂದು ಹೇಳಲು ಬರುವುದಿಲ್ಲ. ಸಾಯುವ ಮುನ್ನ ಜೀವನದಲ್ಲಿ ದೈಹಿಕವಾಗಿ ಅಥವಾ ಮಾನಸಿಕವಾಗಿ ನೋವನ್ನು ಅನುಭವಿಸಿರುತ್ತಾನೆ. ಮನುಷ್ಯನಿಗೆ ಮನೋರೋಗ ಬಂದರೆ ಆಯಸ್ಸು ಇರುವವರೆಗೂ ಕೊರಗಿ ಕೊರಗಿ ಸಾಯಬೇಕಾಗುತ್ತದೆ. ಮನೋರೋಗಕ್ಕೆ ಮದ್ದಿಲ್ಲ ಎನ್ನುವಂತೆ ಮನೋರೋಗವು ಮನುಷ್ಯನನ್ನು ದಿನ ದಿನಕ್ಕೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕೃಶನನ್ನಾಗಿ ಮಾಡುತ್ತದೆ. ಕಡೆಗೆ ಆ ನೋವಿನಿಂದಲೇ ಪ್ರಾಣವೂ ಹೋಗುತ್ತದೆ. ಕೆಲವು ಸಂದರ್ಭಗಳಲ್ಲಿ ಮನುಷ್ಯ ಕಾಯಿಲೆಯಿಂದ ಅಥವಾ ಆಘಾತದಿಂದ ಕೋಮಾಗೆ ಹೋಗಬಹುದು. ಕೋಮಾಗೆ ಹೋದವರನ್ನು ನೋಡಿಕೊಳ್ಳವುದೇ ಒಂದು ದೊಡ್ಡ ಸಾಹಸದಂತೆ ಆಗಿರುತ್ತದೆ. ಪ್ರಾಣವೂ ಹೋಗುವುದಿಲ್ಲ. ಬದುಕುತ್ತಾನೆ ಎಂಬ ಆಸೆಯೂ ಇರುವುದಿಲ್ಲ. ಒಟ್ಟಿನಲ್ಲಿ ಮನುಷ್ಯ ಮಾತ್ರ ನೋವನ್ನು ಅನುಭವಿಸುತ್ತಾ ಇರುತ್ತಾನೆ. ಈ ರೀತಿಯ ಕಾಯಿಲೆಯಿಂದ ನೋಡಿಕೊಳ್ಳುವವರಿಗೂ ನೋವು ಕಾಡುತ್ತಾ ಇರುತ್ತದೆ.
ಮುಂದುವರೆಯುತ್ತದೆ….