ನೋವಿನಿಂದ ಸಾವು – ಸಾವಿನಿಂದ ನೋವು ಮುಂದುವರೆಸುತ್ತಾ:
ಮನುಷ್ಯ ಹುಟ್ಟಿವಾಗ ಬೇರೊಬ್ಬರಿಗೆ ನೋವು ಕೊಟ್ಟು, ತಾನು ಜೀವನದಲ್ಲಿ ಅನೇಕ ನೋವುಗಳನ್ನು ಅನುಭವಿಸಿ, ಕಡೆಗೆ ಸಾಯುವಾಗಲೂ ನೋವನ್ನು ಅನುಭವಿಸುತ್ತಾ ಸಾಯುವ ಈ ಮುನುಷ್ಯನ ನೋವಿನಿಂದ ಸಾವು ಎಂದರೆ ಒಪ್ಪಬಹುದು ಆದರೆ ಸಾವಿನಿಂದ ನೋವು ಎಂದರೆ ಹೇಗೆ? ಸತ್ತವನು ಪುನಃ ಜನಿಸಿ ಬಂದು ನೋವು ಪಡಲು ಹೇಗೆ ಸಾಧ್ಯ ಎನ್ನಬಹುದು. ಆದರೆ ನೋವಿನಿಂದ ಸಾಯುವವನು ಒಬ್ಬನಾದರೆ ಅವನ ಸಾವಿನಿಂದ ನೋವು ಅನುಭವಿಸುವವರು ಅವನ ಸಂಬಂಧಿಕರು, ಅಭಿಮಾನಿಗಳು ಹಾಗೂ ಅನುಯಾಯಿ ಗಳು.
ಮನೆಗೆ ಯಜಮಾನನಾಗಿ ದುಡಿಯುತ್ತಿದ್ದು ಮನೆಯ ಆಗುಹೋಗುಗಳನ್ನೆಲ್ಲಾ ನೋಡಿಕೊಳ್ಳುತ್ತಾ, ಮನೆಯಲ್ಲಿರುವ ಹೆಂಡತಿ ಮತ್ತು ಮಕ್ಕಳಿಗೆ ಸಂಸಾರದ ವಿಚಾರವಾಗಿ ಯಾವುದೇ ಯೋಚನೆ ನೀಡದೆ, ತನ್ನ ಸಂಸಾರವನ್ನು ಅತಿ ಪ್ರೀತಿಯಿಂದ ನೋಡಿಕೊಂಡು ಹೋಗುತ್ತಿದ್ದ ವ್ಯಕ್ತಿ ತಕ್ಷಣ ಹೃದಯಾಘಾತವಾಗಿ ಅಸುನೀಗಿದರೆ, ಅವನ ಹೆಂಡತಿ ಮಕ್ಕಳ ಪಾಡು ಹೇಳತೀರದು. ಮನೆಯ ಯಜಮಾನ ದುಡಿಯುತ್ತಿದ್ದಾಗ ಬರುತ್ತಿದ್ದ ಸಂಬಳದಿಂದ ಯಾವುದೇ ಯೋಚನೆ ಇಲ್ಲದೆ, ಬೇರೆ ಯಾವುದೇ ಕೆಟ್ಟ ಚಟವಿಲ್ಲದೆ ಕುಟುಂಬವನ್ನು ನಡೆಸಿಕೊಂಡು ಹೋಗುತ್ತಿದ್ದ ಪಕ್ಷದಲ್ಲಿ ಅಲ್ಪ ಸ್ವಲ್ಪ ಹಣ ಇಟ್ಟಿರಬಹುದು ಅಥವಾ ಎಣ್ಣೆ ಬತ್ತಿ ನೇರ ಎಂಬಂತೆ ಜೀವನ ಸಾಗಿಸುತ್ತಿರಬಹುದು. ಮಕ್ಕಳು ದೊಡ್ಡವರಾಗಿ ದುಡಿಯುತ್ತಿದ್ದರೆ ಅಂತಹ ಕಷ್ಟವೇನೂ ಆಗುವುದಿಲ್ಲ. ಆದರೆ ಮಕ್ಕಳು ಇನ್ನೂ ಚಿಕ್ಕವರಿದ್ದರೆ ಇವನ ಅಕಸ್ಮಿಕ ನಿಧನದಿಂದ ಮನೆಯವರಿಗೆ ದೊಡ್ಡ ಹೊಡೆತ ಬಿದ್ದಂತಾಗಿ ಹೆಂಡತಿಯ ಮೇಲೆ ಮನೆಯ ಸಂಪೂರ್ಣ ಜವಾಬ್ದಾರಿ ಬಂದೊದಗುತ್ತದೆ. ಇದರಿಂದ ಎಷ್ಟು ನೋವು ಅನುಭವಿಸಬೇಕಾಗುತ್ತದೆ. ತಕ್ಷಣ ಮನೆಯ ಸಂಸಾರಕ್ಕೆ ಎಲ್ಲಿಂದ ಹಣವನ್ನು ಹೊಂದಿಸಬೇಕು? ಎಂಬ ಚಿಂತೆ ಮನೆ ಮಾಡುತ್ತದೆ. ತಕ್ಷಣ ಕೆಲಸ ಸಿಕ್ಕರೆ ಪರವಾಗಿಲ್ಲ. ಅನಕ್ಷರಸ್ತಳಾಗಿದ್ದರೆ ಇವಳ ದುಃಖ ಇನ್ನೂ ಹೇಳ ತೀರದಂತಾಗಿರುತ್ತದೆ. ಬೇರೆಯವರ ಸಹಾಯದ ಮೇಲೆ ಅವಲಂಬಿತವಾಗಿರಬೇಕಾಗುತ್ತದೆ. ಮೊದಲಿಗೆ ಅವರ ತವರು ಮನೆಯವರ ಸಹಾಯದಿಂದ ಜೀವನ ನಿರ್ವಹಣೆ ಮಾಡಬೇಕಾಗುತ್ತದೆ. ತವರು ಮನೆಯವರು ಸುಸ್ಥಿತಿಯಲ್ಲಿದ್ದರೆ ಯಾವ ತೊಂದರೆಯೂ ಇರುವುದಿಲ್ಲ. ಇಲ್ಲದಿದ್ದರೆ ಇವಳ ಸಂಸಾರವನ್ನು ನಡೆಸಿಕೊಂಡು ಹೋಗಲು ಬಹಳ ಕಷ್ಟಪಡಬೇಕಾಗುತ್ತದೆ.
ದೀರ್ಘವಾದ ಕ್ಯಾನ್ಸರ್ ಅಥವಾ ಬೇರೆಯಾದ ಮಾರಕ ಖಾಯಿಲೆ ಬಂದು, ಆಸ್ಪತ್ರೆಗೆ ಸೇರಿ ತಿಂಗಳುಗಟ್ಟಲೆ ಕೊರಗಿ ಮೃತನಾದರೆ ಈ ಸನ್ನಿವೇಶದಲ್ಲಿಯೂ ಕಷ್ಟವಾಗುವುದು ತನ್ನ ಹೆಂಡತಿ ಮಕ್ಕಳಿಗೆ. ಇವತ್ತಲ್ಲ ನಾಳೆ ಬಂದಿರುವ ಕಾಯಿಲೆ ವಾಸಿಯಾಗುತ್ತದೆ, ಮುಂದೆ ಬದುಕಿ ಬರುತ್ತಾನೆ ಎಂಬ ಆಸೆಯಿಂದ, ಆಸ್ಪತ್ರೆ ಖರ್ಚು ಒದಗಿಸಲು ಸಾಲ ಮಾಡಬೇಕಾದ ಸಂದರ್ಭ ಒದಗಿಬರುತ್ತದೆ. ಎಲ್ಲಾ ಕಡೆಯೂ ಸಾಲಮಾಡಿದ ನಂತರ ದುರಾದೃಷ್ಟದಿಂದ ಬದುಕುಳಿಯದಿದ್ದರೆ ಇವನು ಸತ್ತ ನಂತರ ತಿಥಿ ಕಾರ್ಯಗಳಿಗೂ ಹಣವನ್ನು ಹೊಂದಿಸಬೇಕಾದ ಅನಿವಾರ್ಯ ಉಂಟಾಗುತ್ತದೆ. ಇವೆಲ್ಲ ಖರ್ಚುಗಳಿಗೆ ಮಾಡುವ ಸಾಲ ಬದುಕಿರುವವರನ್ನು ಬೆಂಬಿಡದೆ ಕಾಡುತ್ತದೆ. ಇದನ್ನು ತೀರಿಸಲಾಗದೆ ಸ್ವಂತ ಮನೆಯಿದ್ದಲ್ಲಿ ಅದನ್ನು ಮಾರಿಯಾದರೂ ಸಾಲವನ್ನು ತೀರಿಸಬೇಕಾದ ಪ್ರಸಂಗಗಳು ಬಂದೊದಗುತ್ತವೆ. ಬದುಕಿದ್ದಾಗ ತಾನು ಕಷ್ಟ ನೋವು ಅನುಭವಿಸಿ ಸತ್ತಮೇಲೆ ತನ್ನ ಮನೆಯವರಿಗೆ ಕಷ್ಟವನ್ನು ನೀಡುವಂತಾಗುತ್ತದೆ. ಇದರಿಂದ ಮನುಷ್ಯ ನೋವಿನಿಂದ ಮೃತಪಟ್ಟಿದ್ದು, ನಂತರ ಈ ಮನುಷ್ಯ ಸತ್ತಮೇಲೆ ಇವರ ಮನೆಯವರು ನೋವನ್ನು ಅನುಭವಿಸಬೇಕಾಗುತ್ತದೆ.
ಪೂರ್ವಾಪರ ತಿಳಿಯದೆ ಪ್ರೀತಿ ಮಾಡಿ, ನಂತರ ತಪ್ಪಿನ ಅರಿವಾಗಿ, ಪ್ರೇಮವೈಫಲ್ಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಂಡು ತಮ್ಮ ಅಮೂಲ್ಯವಾದ ಜೀವನವನ್ನೇ ಹಾಳು ಮಾಡಿಕೊಂಡರೆ ಅಥವಾ ಬೇರೆ ಯಾವುದೇ ಕಾರಣದಿಂದಲಾದರೂ ಅಂದರೆ ಮಾಡಿರುವ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡರೆ, ಇದರಿಂದ ಇವರನ್ನು ನಂಬಿರುವ ಮನೆಯವರಿಗೆ ಮಾತ್ರ ಕಷ್ಟ ನೋವು ಎದುರಾಗುತ್ತದೆ.
ಅಪಘಾತವಾದಲ್ಲಿ ಆಸ್ಪತ್ರೆ ಖರ್ಚು ಹೊಂದಿಸಬೇಕಾಗುತ್ತದೆ. ಅನುಕೂಲವಿದ್ದರೆ ಪರವಾಗಿಲ್ಲ, ಇಲ್ಲದಿದ್ದಲ್ಲಿ ಸಾಲ ಮಾಡಬೇಕಾದ ಪರಿಸ್ಥಿತಿ ಬರಬಹುದು. ಸಾಲ ಮಾಡಿ ಜೀವ ಉಳಿದು ಅಂಗ ವೈಕಲ್ಯವಾದರೆ, ಇನ್ನೊಂದು ರೀತಿಯ ಕಷ್ಟ ಆವರಿಸಬಹುದು. ಸರಿ ಹೋಗುವವರೆಗೂ ಕಷ್ಟ ತಪ್ಪಿದ್ದಲ್ಲ. ಮಾನಸಿಕ ಹಿಂಸೆಯ ಜೊತೆಗೆ ಭವಿಷ್ಯದ ಚಿಂತೆಯು ಎದುರಾಗುತ್ತದೆ.
ಬೇರೆಯವರಿಂದ ಹಿಂಸೆಗೆ ಒಳಗಾಗಿ ಸತ್ತರೆ, ಆರ್ಥಿಕವಾಗಿ ನಷ್ಟದ ಜೊತೆಗೆ ಒಂದು ರೀತಿಯ ದ್ವೇಷ ಮನೋಭಾವ ಉಂಟಾಗುತ್ತದೆ. ಕೋರ್ಟಿಗೆ ಅಲೆಯುವ ಪ್ರಸಂಗ ಬರಬಹುದು. ಹಿಂಸೆ ನೀಡಿದವನು ಅಕಸ್ಮಾತ್ ನಿರಪರಾಧಿಯಾದರೆ, ಶಿಕ್ಷೆ ಕೊಡಿಸಲೇ ಬೇಕೆಂಬ ಹಠದಿಂದ ಬೇರೆ ಕೋರ್ಟಿಗೆ ಹೋಗುವ ಪ್ರಸಂಗ ಬರಬಹುದು. ಇದರಿಂದ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಕುಗ್ಗಬಹುದು. ಒಂದು ಕಡೆ ಮನೆಯವರನ್ನು ಕಳೆದುಕೊಂಡಿರುವ ಸಂಕಟ, ಮತ್ತೊಂದೆಡೆ ಕೋರ್ಟಿನ ಅಲೆದಾಟ, ದ್ವೇಷ ಹೆಚ್ಚಾಗಿ ಮಾನಸಿಕ ನೆಮ್ಮದಿ ಹಾಳಾಗುವ ಸಂಭವವೂ ಇರುತ್ತದೆ.
ಇದನ್ನೆಲ್ಲಾ ನೋಡಿದರೆ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಎಂದು ಭಾಸವಾಗುತ್ತದೆ. ಖಂಡಿತಾ ಕೆಲವೊಂದು ಪ್ರಸಂಗಗಳಲ್ಲಿ ಮಾತ್ರ ತಪ್ಪಿಸಿಕೊಳ್ಳಬಹುದು ಎನಿಸುತ್ತದೆ. ಮಾನಸಿಕ ಒತ್ತಡ ಹೊಂದದೆ ಎಚ್ಚರಿಕೆಯಿಂದ ಜೀವನ ನಡೆಸುವುದು, ಯಾರಲ್ಲೂ ದ್ವೇಷ ಕಟ್ಟಿಕೊಳ್ಳದೆ ಯಾರಿಗೂ ಮೋಸ, ವಂಚನೆ ಮಾಡದೆ ಸ್ನೇಹದಿಂದ ಅಜಾತಶತೃವಿನಂತೆ ಜೀವನ ನಡೆಸುವುದು, ಹಾಸಿಗೆ ಇದ್ದಷ್ಟು ಕಾಲುಚಾಚು ಎಂಬಂತೆ ಇರುವ ಸಂಪಾದನೆಯಲ್ಲಿಯೇ ಹೆಚ್ಚಿನ ಸಾಲ ಮಾಡದೆ ಹಿತಮಿತವಾಗಿ ಸಂಸಾರವನ್ನು ತೂಗಿಸಿಕೊಂಡು ಹೋಗುವುದು. ರಸ್ತೆಗಳಲ್ಲಿ ಜಾಗರೂಕತೆಯಿಂದ ನಡೆಯುವುದು ಅಥವಾ ತಾವೇ ವಾಹನಗಳನ್ನು ಚಾಲನೆ ಮಾಡುತ್ತಿರುವಾಗ ಅತಿಯಾದ ವೇಗದಿಂದ ಹೋಗದೆ, ಮನೆಯಲ್ಲಿ ಹೆಂಡತಿ ಮಕ್ಕಳು ತಂದೆ ತಾಯಿ ನಮ್ಮನ್ನು ಕಾಯುತ್ತಿರುತ್ತಾರೆಂದು ತಿಳಿದು ಅತಿ ಜಾಗರೂಕತೆಯಿಂದ ಹುಷಾರಾಗಿ ವಾಹನ ಚಾಲನೆ ಮಾಡಿಕೊಂಡು ಹೋಗುವುದು ಬುದ್ದಿವಂತರ ಲಕ್ಷಣ. ಪೂರ್ವಾಪರ ತಿಳಿಯದೆ ಪ್ರೀತಿ ಮಾಡುವುದರ ಬದಲು ಮನೆಯವರ ಸಲಹೆಯಂತೆ ನಡೆಯುವುದು ಒಳಿತು. ದೇವರಲ್ಲಿ ಭಕ್ತಿ ಇಟ್ಟು ಗುರುಹಿರಿಯರನ್ನು ಗೌರವದಿಂದ ನೋಡಿದ್ದಲ್ಲಿ, ಕೆಲವೊಮ್ಮೆ ದೈವಸಹಾಯದಿಂದ ಎಂಥಹ ಕಷ್ಟದಿಂದ ಬೇಕಾದರೂ ಪಾರಾಗಬಹುದು. ಅದೇ ರೀತಿ ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿ ಒಳ್ಳೆಯ ವ್ಯಕ್ತಿಯಾಗಲು ಪ್ರಯತ್ನಿಸಿದರೆ ಸಮಾಜಕ್ಕೆ ಒಳ್ಳೆಯ ಕೊಡುಗೆಯಾಗುತ್ತದೆ ಹಾಗೂ ತಮ್ಮ ಅಮೂಲ್ಯವಾದ ಜೀವವನ್ನು ಕಾಪಾಡಿಕೊಳ್ಳಬಹುದು ಎನಿಸುತ್ತದೆ.