ಹಗ್ಗ ತ್ರಿಕಾಲದಲ್ಲಿಯೂ ಹೇಗೆ ಸರ್ಪವಾಗಿಯೇ ಇಲ್ಲವೋ, ಅದೇ ರೀತಿ ಆನಂದಘನ ಸ್ವರೂಪದಲ್ಲಿ, ಭ್ರಮೆಯಿಂದ ಭಾಸವಾಗುವ ಅಂತರ್ಬಾಹ್ಯ ದೃಶ್ಯ ತ್ರಿಕಾಲದಲ್ಲಿಯೂ ಉತ್ಪನ್ನವಾಗಿಲ್ಲ.
(ಶ್ರೀ ಶಂಕರ ಪಂಡಿತ ಸಜ್ಜನಗಡ, ಅವರಿಗೆ ಬರೆದ ಪತ್ರ)
—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
||ಶ್ರೀರಾಮ ಸಮರ್ಥ||
ಚಿ. ಶಂಕರ ಪಂಡಿತನಿಗೆ ಆಶೀರ್ವಾದ,
ನೀನು ಅಭ್ಯಾಸ ಮಾಡು. ನಮ್ಮನ್ನೂ ಹಿಡಿದು ಈ ಅಖಿಲ ವಿಶ್ವ ನಿರ್ವಿಕಲ್ಪ ಆನಂದರೂಪವಾಗಿದೆ ಎಂಬುದನ್ನು ಅಖಂಡ ಧಾರಣೆ ಮಾಡು. ಆಯುಷ್ಯದ ಒಂದು ಕ್ಷಣವೂ ಸಾಧನೆಯಿಲ್ಲದೇ ಕಳೆಯಬೇಡ. ಯಾರದೋ ಗುಣ-ದೋಷ ನೋಡಲಿಕ್ಕಾಗಿ, ನಮ್ಮ ಆನಂದರೂಪದ ಹೊರತಾಗಿ, ಬೇರೆಯಾಗಿ ಏನೂ ಉಳಿಯಲಿಕ್ಕೇ ಕೊಡಬೇಡ. ಮಾತನಾಡುವ ಅಂದರೆ ಹಾವಭಾವ ಮಾಡಿ ನಮ್ಮ ಮನಸ್ಸಿನ ಭಾವನೆ ತೋರಿಸುವ ಪ್ರಸಂಗ ಬಿದ್ದರೆ, ನಮ್ಮ ವಿಶ್ವಪ್ರೇಮದ ಮತ್ತು ಆನಂದರೂಪದ ಅರಿವು ನಮ್ಮ ಮುದ್ರೆಯಲ್ಲಿ ಕೊಟ್ಟು ಆವಶ್ಯಕವಿದ್ದಷ್ಟೇ ತಿಳಿಸಬೇಕು. ನಮ್ಮಿಂದ ಎಲ್ಲರಿಗೂ ಆನಂದವೇ ಆಗಬೇಕು ಎಂಬಂತ ವರ್ತನೆ ಆ ಆ ಸಂದರ್ಭದಲ್ಲಿ ಅಲ್ಪಕಾಲಕಷ್ಟೇ ಇಟ್ಟುಕೊಂಡು, ಆದಷ್ಟು ಹೆಚ್ಚು ಹೊತ್ತು ಏಕಾಂತದಲ್ಲಿ ಅಭ್ಯಾಸದಲ್ಲೇ ಕಳೆಯಬೇಕು. ನಿವೃತ್ತಿ ಮಾರ್ಗದ ಸಿದ್ಧಾಂತವನ್ನು ಅನುಸರಿಸಬೇಕು. ಒಂದು ಹಗ್ಗದ ಮೇಲೆ ಕಾಣುವ ಸರ್ಪಾಭಾಸದಂತೆ ಒಂದು ಆನಂದಘನ ಸ್ವರೂಪದ ಮೇಲೆ ವಿವಿಧ ನಾಮರೂಪಾತ್ಮಕ ಬಾಹ್ಯದೃಶ್ಯ ಮತ್ತು ವಿವಿಧ ಕಲ್ಪನಾತ್ಮಕ ಆಂತರಿಕ ದೃಶ್ಯ ಕಾಣುತ್ತದೆ. ರಜ್ಜು-ಸರ್ಪ ಭಾವನೆಯಲ್ಲಿ ಒಂದು ಹಗ್ಗ ಮಾತ್ರವೇ ಹೇಗೆ ಸತ್ಯವೋ, ಅದೇ ರೀತಿ ಈ ಅಂತರ್ಬಾಹ್ಯ ಜಗತ್ತಿನಲ್ಲಿ ಒಂದು ಆನಂದಘನ ಸ್ವರೂಪವೇ ಸತ್ಯವಾಗಿದೆ. ಹಗ್ಗ ತ್ರಿಕಾಲದಲ್ಲಿಯೂ ಹೇಗೆ ಸರ್ಪವಾಗಿಯೇ ಇಲ್ಲವೋ, ಅದೇ ರೀತಿ ಆನಂದಘನ ಸ್ವರೂಪದಲ್ಲಿ, ಭ್ರಮೆಯಿಂದ ಭಾಸವಾಗುವ ಅಂತರ್ಬಾಹ್ಯ ದೃಶ್ಯ ತ್ರಿಕಾಲದಲ್ಲಿಯೂ ಉತ್ಪನ್ನವಾಗಿಲ್ಲ. ರಜ್ಜು-ಸರ್ಪ ಆಭಾಸದಲ್ಲಿ ಹೇಗೆ ತಿ್ರಕಾಲದಲ್ಲಿಯೂ ಒಂದು ಹಗ್ಗವೇ ಇರುವದೋ, ಹಗ್ಗದ ಹೊರತಾಗಿ ಇನ್ನಾವುದೂ ಇಲ್ಲವೋ, ಅದೇ ರೀತಿ, ತ್ರಿಕಾಲದಲ್ಲಿಯೂ ಆನಂದಘನಸ್ವರೂಪ ಒಂದೇ ಇದೆ, ಮತ್ತಾವುದೂ ಇಲ್ಲವೇ ಇಲ್ಲ ಎಂದು, ಆನಂದಘನಸ್ವರೂಪದಲ್ಲಿ ಸಮರಸವಾಗಿ ಇರುವದು ಅಂದರೆ, ಸ್ವರೂಪದಲ್ಲಿರುವದು, ‘ಅಹಂ ಬ್ರಹ್ಮಾಸ್ಮಿ’ ಈ ಮೂಲ ಮಾಯೆಯ ಸ್ಫುರಣದಿಂದ ಪ್ರಾರಂಭಿಸಿ, ಆ ದೇಹ ಇಂದ್ರಿಯ ಮಾನಸಿಕ ಕಲ್ಪನೆಯ ಸೃಷ್ಟಿಯವರೆಗೂ, ಅದಾವದೂ ಇಲ್ಲದೇ, ‘ನಾನು’ ಒಂದೇ ತನ್ನ ಆನಂದರೂಪದಲ್ಲಿ ಇದೆ – ಇದು ನಿವೃತ್ತಿಮಾರ್ಗದ ಸಿದ್ಧಾಂತ.
‘ಅಖಂಡ ವಿಶ್ರಾಂತಿಯ ಸ್ಥಳ| ಅದೊಂದು ಕೇವಲ ಸ್ವರೂಪಮಾತ್ರದಲ್ಲಿ|
ಸಕಲ ವಿಕಾರವಲ್ಲಿ| ನಿರ್ವಿಕಾರ ಆಗುವದು||’
ಇದರ ಮುಂದೆ ಒಂದು ನಿರ್ವಿಕಲ್ಪ ಆನಂದಮಾತ್ರ ಸ್ವರೂಪವಿದೆ ಮತ್ತು,
ಶ್ರೀಧರ
ಜಯ ಜಯ ರಘುವೀರ ಸಮರ್ಥ