ಹತ್ತಿರದವರ ಮರೆತು..
ಎತ್ತರದ ಮನೆಕಟ್ಟಿ..
ಮುತ್ತಿನಾ ತುತ್ತುಣಲು..ಸಿರಿಗನೇನು..?
ಸುತ್ತಿರುವ ಬಳಗಕ್ಕೆ..
ತುತ್ತುಚೂರನು ಹಂಚಿ..
ಸೊತ್ತಿರದಿರೆ ನೀನು ಬಡವನೇನು?
ಮೋಸದಾ ಕಲ್ಲಿನಲಿ..
ವಾಸದಾ ಮನೆಕಟ್ಟಿ..
ಶ್ವಾಸವಾಡದ ಕಿಟಕಿ..ಶ್ವಾನಕಟ್ಟಿ..
ವಿಶ್ವಾಸದಾ..ಮಣ್ಣು..
ನಿಸ್ವಾರ್ಥದಾ ಮನೆಯು..
ದೇವ ಬರುವನು ನಿಮ್ಮ ಕದವ ತಟ್ಟಿ..
ಮನೆಕಟ್ಟುವಾ ಮೊದಲು..
ಮನಮನವನು ಕಟ್ಟು..
ಸಂಗ..ಸಂಗತಿ ಸ್ವರ್ಗ ಮೂರುಮೆಟ್ಟು..
ಮನೆ ತೆರೆದು ಮನಮುಚ್ಚಿ..
ಚರ್ಮಭಾವವ ಮೆಚ್ಚಿ..
ಮರ್ಮ ವರ್ಮದ ಬದುಕ ಮೂಟೆಕಟ್ಟು..
ಅಂಕಣಂಕಣ ಮನೆಯು..
ಬಿಂಕದಂಕೆಯ ಮಣೆಯು..
ಭುಮಿಬಾನಿನ ನಡುವೆ..ಸುಂಕ ಮನೆಯು..
ಅಪ್ಪನಿಲ್ಲದ ಹೊಳ್ಳಿ..
ಅಮ್ಮನಿಲ್ಲದ ಬಳ್ಳಿ..
ಬಂಧುವಿಲ್ಲದ ಮನೆಗೆ ಕ್ಷಣವು ಕೊನೆಯು..

RELATED ARTICLES  ಕಳೆದುಹೋಗುವ ಭಾವನೆಗಳು: ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು(ಭಾಗ - 2).

ತಿಗಣೇಶ ಮಾಗೋಡು.