ದುಡಿವ ದಡದಲಿ ಕುಳಿತು..
ತುಡಿವ ದಡದೆಡೆ ಎದುರು..
ಮರೆಮುಖದಿ ಮುದ್ದಿಸುವ..ಮುದ್ದು ಜೋಡಿ..
ಸಾಗರವು ಮುಂದಿಹುದು..
ಸಡಗರವು ಜೊತೆಗಿಹುದು..
ಹರಿವು..ಹರವನು ಮರೆತ ಹರೆಯ ಮೋಡಿ.
ಮೈಯೆಲ್ಲ ಕಣ್ಣಾಗಿ..
ಕಣ್ಣಲ್ಲೆ ಮೈಮಾಗಿ..
ಬೆರಳು ಬೆರಳನು ಹುಡುಕಿ..ಸರಿಯುತಿಹುದು..
ಕೊರಳು ಮರೆತಿಹ ಮಾತು..
ಕರುಳಲರಳಿದ ಮಾತು..
ಮಾತು ಮೌನಕೆ ಸೋತು..ಸುರಿಯುತಿಹುದು.
ನೀರಲದ್ದಿದ ಕಾಲು..
ಕದ್ದು ಗೆಜ್ಜೆಗೆ ತಾಗಿ..
ಏಳುಹೆಜ್ಜೆಗೆ ಸಜ್ಜು..ಸೂಚಿಸಿಹುದು..
ನೀರಲಾಡುವ..ಮೀನು..
ಜೋಡಿಲೊಬ್ಬಳು ನೀನು..
ಜೊತೆಗೆ ನಾನಿಹೆನೆಂಬ..ಸನ್ನೆಯಿಹುದು.
ಕೇಳಿದೆಯೆ ಅಪ್ಪನನು..
ಕೇಳಿದೆಯೆ ಅಮ್ಮನನು..
ಜಾತಿಯಂಚಿನ ಬೇಲಿಬೇಲಿಗಳನು..
ಆಚೆಈಚೆಯ ಮರೆತು..
ನಾಚಿನಾಚೆಗೆ ನಡೆದು..
ಬಾಚಿ ತಬ್ಬುವ ಬಾರೆ..ತೋಳೊಳಿಹೆನು..
ಸುತ್ತ ಸಂಜೆಯ ಬೆಳಕ
ನೀರಗಾಳಿಯ ಜಳಕ..
ಪುಳಕವಲ್ಲವೆ ಚಲುವೆ ಇತ್ತನೋಡು..
ಮತ್ತೆಲ್ಲ ಮರೆತುಬಿಡು..
ಮುತ್ತೊಂದನಿತ್ತುಬಿಡು..
ಮುಳುಗು ಸೂರ್ಯನೆ..ನಾಳೆ ಮೂಡಿನೋಡು.
ತಿಗಣೇಶ ಮಾಗೋಡ.(9343596619)