ಹುಚ್ಚಾ! ಹನ್ನೆರಡು ಸಾವಿರ ರೂಪಾಯಿಯ ಬೆಲೆಯಾದರೂ ಏನು? ….. ಗೌರವದ, ಆನಂದರೂಪದ ಜೀವನ ನಡೆಸುವ ಭಾಗ್ಯ, ನೀನು ಈ ನಿನ್ನ ಆಚರಣೆಯಿಂದ ಕಳೆದುಕೊಳ್ಳುತ್ತಿದ್ದೀಯೆ. ಮೇಲಿನಿಂದ ಬೀಳುತ್ತಿರುವ ಮನುಷ್ಯನು ಮಧ್ಯದಲ್ಲೇ ಕೊಂಬೆ ಹಿಡಿದರೂ ಪ್ರಾಣ ಉಳಿಯುತ್ತದೆ. ಈಗಾದರೂ ನೀನು ನಿನ್ನನ್ನು ಉಳಿಸಿಕೋ.
(ಶ್ರೀ ಬಾಳಕೃಷ್ಣಬುವಾ ಅಷ್ಟೇಕರ, ಪುಣೆ, ಅವರಿಗೆ ಪತ್ರದ ಮೊದಲ ಭಾಗ)
— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
ಚಿ. ಅಷ್ಟೇಕರನಿಗೆ ಅನೇಕ ಆಶೀರ್ವಾದ,
ಹಣದ ಮೋಹದಿಂದ ಹುಚ್ಚಾಗಿ, ಸ್ವಹಿತ ಮರೆತು, ಸದ್ಗುರುವಿನ ಅವಜ್ಞೆ ಮಾಡುವ, ಅಷ್ಟೇಕರ ಎಂದು ಹೆಸರಿರುವಂತ, ಅಜ್ಞಾನಿ ಶಿಷ್ಯನಿಗೆ – ಹಣದ ಮೋಹರೂಪಿ ಗ್ರಹಣದಿಂದ ಮುಕ್ತತೆಯಾಗಲು – ನಷ್ಟವಾದ ಅವನ ಪಾರಮಾರ್ಥಿಕ ತೇಜಸ್ಸು ಪುನಃ ಲಭಿಸುವಂತಾಗಲು – ಶ್ರೀಸದ್ಗುರುವಿನ ಚರಣದಲ್ಲಿ ಕ್ಷಮೆ ಕೇಳಬೇಕೆಂದೆನಿಸಿ, ಈ ಪತ್ರ ಕೈಗೆ ಬಿದ್ದೊಡನೆ ಹೊರಡುವ ಬುದ್ಧಿಯಾಗಲಿ ಮತ್ತು ಅದರಿಂದ ಮುಂದಾಗುವ ಅಧೋಗತಿ ತಾನಾಗಿಯೇ ನಿಲ್ಲಲಿ, ಎಂಬ ಕಳಕಳಿಯಿಂದ, ಹಾರ್ದಿಕ ಆಶೀರ್ವಾದ.
ಅರೆರೇ, ಮಗಾ! ದುರ್ಬುದ್ಧಿಯು ನಿನ್ನನ್ನು ಭ್ರಷ್ಟನನ್ನಾಗಿ ಮಾಡಿಬಿಟ್ಟಿತು. ಸದ್ಗುರುವಿನಿಂದ ಅಗಲಿಬಿಟ್ಟೆ, ಉಪಾಸನೆಗೆ ಮುಖ ತಿರುಗಿಸಿಬಿಟ್ಟೆ, ಮೋಕ್ಷಮಾರ್ಗಕ್ಕೆ ಬೆನ್ನು ತೋರಿಸಿಬಿಟ್ಟೆ ಮತ್ತು ನಿನ್ನಲ್ಲಿ ಅಹಂಕಾರ ತುಂಬಿಸಿಕೊಂಡು, ಅಧೋಗತಿಗೆ ಅವಶ್ಯ ಕಾರಣವಾಗುವಂತೆ, ನೀನು ನಿನ್ನ ಮುಖ, ಧನವ್ಯಾಮೋಹದ ಕಡೆಗೆ ತಿರುಗಿಸಿದೆ. ಅಲ್ಲಿ ನಿನ್ನ ತುಂಬಾ ಅಪಕೀರ್ತಿಯಾಗಿದೆ ಎಂದು ನನಗೆ ಕೇಳಿಬಂತು. ಕೆಲವೆಡೆಯಂತೂ ನಿನಗೆ ಹೊಡೆಯಲೂ ತಯಾರಾಗಿದ್ದರಂತೆ! ಎರಡು ತಂತಿ ಸಂದೇಶ ಕಳಿಸಿಯೂ ನೋಡಿದೆ. ಆದರೆ ಇನ್ನೂ ನಿನಗೆ ನನ್ನ ಬಳಿ ಬರುವ ಬುದ್ಧಿ ಬರಲಿಲ್ಲ. ನನ್ನ ಬಳಿ ಬಂದಿದ್ದರೆ ನೀನು ಸುಖಿಯಾಗಿರುತ್ತಿದ್ದೆ ಮತ್ತು ನಿನ್ನ ಹಣಕ್ಕೂ ಯಾವುದೇ ಬಾಧೆ ಬರುತ್ತಿರಲಿಲ್ಲ. ನೀನು ಹೇಗೆ ಹೇಳುತ್ತೀಯೋ ಹಾಗೆ ಆ ಹಣದ ವಿನಿಯೋಗ ಮುಂದೆ ಮಾಡಬಹುದಾಗಿತ್ತು. ಸದ್ಯ ಒಂದು ಪೈಸೆಯ ಅಫರಾತಫರಾ ಆಗದೇ, ಆ ಎಲ್ಲ ಹಣ ಬೇಂಕಿನಲ್ಲಿ ಇಡಲಾಗುತ್ತಿತ್ತು.
ಹುಚ್ಚಾ! ಹನ್ನೆರಡು ಸಾವಿರ ರೂಪಾಯಿಯ ಬೆಲೆಯಾದರೂ ಏನು? ನಿನಗೆ ನಾನು ಮಠವನ್ನೇ ಕಟ್ಟಿ ಕೊಡುತ್ತೇನೆಂದು ಹೇಳಿದ್ದೆನಲ್ಲವೇ? ಪ್ರತಿದಿನ ಮಠದ್ದೇ ೨೫-೩೦ ಜನರು ಮತ್ತೆ ಮೇಲೆ ಬಂದು ಹೋಗುವವರು ಎಲ್ಲರನ್ನೂ ಸಾಲುಗಟ್ಟಿಸಿಕೊಂಡು, ‘ಮಹಾರಾಜ, ಮಹಾರಾಜ’ ಎಂದು ಕರೆಸಿಕೊಳ್ಳುತ್ತ, ಗೌರವದ, ಆನಂದರೂಪದ ಜೀವನ ನಡೆಸುವ ಭಾಗ್ಯ, ನೀನು ಈ ನಿನ್ನ ಆಚರಣೆಯಿಂದ ಕಳೆದುಕೊಳ್ಳುತ್ತಿದ್ದೀಯೆ. ಮೇಲಿನಿಂದ ಬೀಳುತ್ತಿರುವ ಮನುಷ್ಯನು ಮಧ್ಯದಲ್ಲೇ ಕೊಂಬೆ ಹಿಡಿದರೂ ಪ್ರಾಣ ಉಳಿಯುತ್ತದೆ. ಈಗಾದರೂ ನೀನು ನಿನ್ನನ್ನು ಉಳಿಸಿಕೋ.
(ಈ ಪತ್ರದ ಎರಡನೆಯ ಭಾಗ ಮುಂದುವರಿಯುವದು)