ನಿನಗೆ ಅನಿಸುತ್ತಿರಬೇಕು ‘ಸ್ವಾಮಿಯೇನು? ನನಗೆ ದತ್ತನಿದ್ದಾನೆ.’ ನಿನಗೆ ಅದೆಷ್ಟು ಸಲವಾದರೂ ಶ್ರೀದತ್ತನೇ, ‘ಶ್ರೀಧರ ಮತ್ತು ನಾನು ಬೇರೆಯಲ್ಲ’ ಎಂದು ಹೇಳಿಲ್ಲವೇ?
(ಶ್ರೀ ಬಾಳಕೃಷ್ಣಬುವಾ ಅಷ್ಟೇಕರ, ಪುಣೆ, ಅವರಿಗೆ ಪತ್ರದ ಮೂರನೆಯ ಭಾಗ)
— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
ನಿನಗೆ ಅನಿಸುತ್ತಿರಬೇಕು ‘ಸ್ವಾಮಿಯೇನು? ನನಗೆ ದತ್ತನಿದ್ದಾನೆ.’ ನಿನಗೆ ಅದೆಷ್ಟು ಸಲವಾದರೂ ಶ್ರೀದತ್ತನೇ, ‘ಶ್ರೀಧರ ಮತ್ತು ನಾನು ಬೇರೆಯಲ್ಲ’ ಎಂದು ಹೇಳಿಲ್ಲವೇ? ನೀನು ನನ್ನ ಆಜ್ಞೆ ಪಾಲಿಸಿ ಇಲ್ಲಿಗೆ ಬರದಿದ್ದರೆ ಸದ್ಗುರುವಿನ ಅವಜ್ಞೆಯಾದದ್ದರಿಂದ ಗುರು-ಶಿಷ್ಯ ಸಂಬಂಧ ಶೂನ್ಯವಾಗುತ್ತದೆ. ನನ್ನ ಪಾದುಕೆ ಮತ್ತು ಫೋಟೋ ನಿನ್ನ ಹತ್ತಿರ ನನ್ನ ಇತರ ಶಿಷ್ಯರು ಇಡಗೊಡುವದಿಲ್ಲ, ಕಸಿದುಕೊಳ್ಳುತ್ತಾರೆ. ಅದಕ್ಕೆ ಉತ್ತರ ನಿನ್ನ ಹತ್ತಿರ ಇಲ್ಲ.
‘ಸದ್ಗುರುವಿನ ವಚನ ಪಾಲನೆ| ಇದೇ ಶಿಷ್ಯನ ಲಕ್ಷಣ||’
ಶ್ರೀದತ್ತನೂ ಕೋಪಿಷ್ಟನಾಗಿ ಇನ್ನು ಮುಂದೆ ನಿನಗೆ ದರ್ಶನ ಕೊಡುವದಿಲ್ಲ. ಅವರ ಪಾದುಕೆಯೂ ಅದೃಶ್ಯವಾಗುತ್ತದೆ ಮತ್ತು ನಿನ್ನ ಸಾಮರ್ಥ್ಯವೂ ಅದರೊಂದಿಗೇ ಬಿಟ್ಟು ಹೋಗುತ್ತದೆ. ನಂತರ ಬೊಬ್ಬೆ ಹೊಡೆಯುತ್ತ ಕುಳಿತುಕೊಳ್ಳಬೇಕಾದೀತು!!
‘ಎತ್ತು ಹೊರಟು ಹೋದಮೇಲೆ ಕೊಟ್ಟಿಗೆ ಕಟ್ಟಿದ’ ಎಂಬಂತೆ ನಂತರ ಪಶ್ಚಾತ್ತಾಪ ಆದರೂ ಏನು ಪ್ರಯೋಜನ?
ದುರ್ಧರ ಪ್ರಸಂಗ ಪ್ರಯತ್ನದಿಂದ ತಡೆಯಬೇಕು. ವಿಷ ತೆಗೆದುಕೊಳ್ಳುವ ಮೊದಲೇ ವಿಚಾರ ಮಾಡಬೇಕು.
ಬೇಡ! ಬೇಡ! ನನ್ನ ಮಾತು ಕೇಳು. ನೀನು ಸಾಡೇಸಾತಿಯ ಸುಳಿಯಲ್ಲಿ ಸಿಕ್ಕುಬಿದ್ದಿರುವೆ. ನನ್ನ ಸಾನಿಧ್ಯದಲ್ಲಿ ತಪಸ್ಸು ಮಾಡುತ್ತಿದ್ದೆಯೆಂದರೆ ನಿನಗೆ ಸಾಡೇಸಾತಿ ಬಾಧಿಸುವದಿಲ್ಲ. ಅಲ್ಲದಿದ್ದರೆ ಮುಂದೆ ಏನೇನಿದೆ ಅದು ಸಾಡೇಸಾತಿಗೇ ಗೊತ್ತು!!
ನಿನ್ನ ಹಣ ನನಗೆ ಬೇಡ. ಆ ಪಾಪಿ ದ್ರವ್ಯದಿಂದ ಶ್ರೀಧರಕುಟಿಯಲ್ಲಿ ಏನಾದರೂ ಕಟ್ಟಿದರೂ ಅದರ ಕೆಳಗೆ ಕುಳಿತವರಿಗೂ, ಯಾರಿಗೆ ಗೊತ್ತು ನಿನ್ನಂತೆಯೇ ಬುದ್ಧಿಯಾಗುತ್ತದೆಯೋ ಏನೋ ಎಂದುಕೊಂಡು, ನಿನ್ನ ಬಳ್ಳಿಯ ಚೂರನ್ನೂ ಸಹ ಇಟ್ಟುಕೊಳ್ಳದೇ, ಎಲ್ಲವನ್ನೂ ನಿನಗೆ ಕೊಟ್ಟು ಬಿಡಲು ನಾನು ಹೇಳಿದ್ದೇನೆ. ಹಣದ ಮೋಹದಿಂದ ನಾನು ನಿನಗೆ ಇದೇನೋ ಬರೆಯುತ್ತಿದ್ದೇನೆ ಎಂದು ಅನಿಸಿಕೊಳ್ಳಬೇಡ. ಶ್ರೀಗಡಕ್ಕೆ ಮೂರು ಸಾವಿರ ರೂಪಾಯಿ ಕಳುಹಿಸಿದೆ ಎಂದು ಸುಮ್ಮನೇ ಸುಳ್ಳು ಮಾತು ಜನರ ಮುಂದೆ ಹೇಳುತ್ತಿದ್ದೀಯಂತೆ! ಶ್ರೀಸಜ್ಜನಗಡದ ಸೇವೆಗೆಂದು ಜನರಿಗೆ ಕಿರುಕುಳ ಕೊಟ್ಟು ನೀನು ಬಹಳಿಷ್ಟು ಹಣ ಒಟ್ಟು ಮಾಡಿರುವೆಯೆಂದೂ ನನ್ನ ಕಿವಿಗೆ ಬಂತು. ಒಳ್ಳೇ ಜನರು ಇದಕ್ಕೆಲ್ಲಾ ಏನೆನ್ನಬೇಕು?
(ಈ ಪತ್ರದ ನಾಲ್ಕನೆಯ ಭಾಗ ಮುಂದುವರಿಯುವದು)