muralidhar 2

ಕೆಲವು ಸನ್ನಿವೇಶಗಳಲ್ಲಿ ಹುಡುಗ ಹುಡುಗಿ ಪ್ರೀತಿಸಿದ್ದು, ಮನೆಯವರು ಒಪ್ಪದಿದ್ದರೆ ದೂರ ಸರಿಯುವುದುಂಟು. ಇಂತಹ ಪ್ರಕರಣಗಳು ಬಹಳ ಅಪರೂಪ ಎಂದೇ ಹೇಳಬಹುದು. ಹೆತ್ತವರನ್ನು ದಿಕ್ಕರಿಸಿ ವಿವಾಹವಾಗಲು ಧೈರ್ಯವಿರದೆ ಆತ್ಮಹತ್ಯೆಯಂತಹ ಮಾರ್ಗ ಹುಡುಕಿ ಈ ಪ್ರಪಂಚದಿಂದಲೇ ದೂರ ಸರಿಯುತ್ತಾರೆ.

ವಿವಾಹವಾದನಂತರ ಗಂಡಾಗಲೀ ಅಥವಾ ಹೆಣ್ಣಾಗಲೀ ಸಂಸಾರದಲ್ಲಿ ಕಷ್ಟ ಇದೆ ಜೀವನ ಸಾಗಿಸಲು ಆಗುವುದಿಲ್ಲ ಎಂದು ಗಂಡ ಅಥವಾ ಹೆಂಡತಿಯಿಂದ ದೂರ ಸರಿದು ವಿವಾಹ ವಿಚ್ಛೇದನ ಬಯಸಿದರೆ ಅದರಿಂದ ಇಬ್ಬರಿಗೂ ನಷ್ಟವೇ ಆಗುತ್ತದೆ. ಎಲ್ಲರಂತೆ ಸಂಸಾರ ನಡೆಸಿಕೊಂಡು ಹೋಗುವುದರಲ್ಲಿ ವಿಫಲರಾದರೆಂಬ ಹಣೆಪಟ್ಟಿ ಅಂಟಿಸುತ್ತಾರೆ. ಜೀವನದಲ್ಲಿ ಎಲ್ಲರಿಗೂ ಸೋಲು ಗೆಲುವು, ಸಾವು ನೋವು, ಸುಖ ದುಃಖ ಪರಿಶ್ರಮ ಇದ್ದೇ ಇರುತ್ತದೆ. ಇದನ್ನು ಸಮರ್ಥವಾಗಿ ನಿಭಾಯಿಸುವ ಕಾರ್ಯ ಮಾಡಬೇಕು. ಮಿತಿ ಮೀರಿ ಗಂಡ ಅಥವಾ ಹೆಂಡತಿ ಯಾರಾದರೂ ಪರಸ್ಪರ ಹೊಂದಾಣಿಕೆ ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಬಂದಲ್ಲಿ ಮಾತ್ರ ವಿವಾಹದಿಂದ ದೂರ ಸರಿಯಬಹುದು. ಸಣ್ಣ ಪುಟ್ಟ ವಿಷಯಗಳಿಗೆಲ್ಲಾ ಸಂಸಾರದಲ್ಲಿ ಜಗಳವಾಡಿಕೊಂಡು ಸಂಸಾರ ನಿರ್ವಹಿಸಲು ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಬರಬಾರದು. ಇಬ್ಬರ ಜಗಳದಲ್ಲಿ ಮಕ್ಕಳು ಅನಾಥರಾಗುವ ಸಂಭವ ಇರುತ್ತದೆ. ಮಕ್ಕಳಿಗೆ ಅಪ್ಪ ಅಮ್ಮ ಇಬ್ಬರೂ ಬೇಕು ಇಬ್ಬರ ಪ್ರೀತಿ ವಿಶ್ವಾಸಕ್ಕೆ ಅವರ ಮನಸ್ಸು ಹಾತೊರೆಯುತ್ತಿರುತ್ತದೆ. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಸಂಸಾರ ನಡೆಸಿಕೊಂಡು ಹೋದರೆ ಎಲ್ಲರಿಗೂ ಅನುಕೂಲ. ಅಪ್ಪ ದೂರವಾಗಿ ಅಮ್ಮನ ಬಳಿ ಇದ್ದರೆ ಮಕ್ಕಳು ಅಪ್ಪನ ಪ್ರೀತಿಯಿಂದ ವಂಚಿತರಾಗುತ್ತಾರೆ. ಅದೇರೀತಿ ಅಪ್ಪನ ಬಳಿ ಮಕ್ಕಳು ಇದ್ದಲ್ಲಿ ಅಮ್ಮನ ಪ್ರೀತಿಯಿಂದ ವಂಚಿತರಾಗಿ ಮಾನಸಿಕವಾಗಿ ಕುಗ್ಗುವುದುಂಟು. ಈ ಎಲ್ಲಾ ಕಾರಣಗಳಿಂದ ಆದಷ್ಟೂ ಗಂಡನಾಗಲೀ ಹೆಂಡತಿಯಾಗಲೀ ಸಂಸಾರದಿಂದ ದೂರ ಸರಿಯಲು ಪ್ರಯತ್ನಿಸಬಾರದು. ಅನಿವಾರ್ಯ ಸನ್ನಿವೇಶಗಳಲ್ಲಿ ಮಾತ್ರ ಇಂತಹ ದೃಢ ನಿರ್ಧಾರ ಕೈಗೊಳ್ಳಬಹುದು.

RELATED ARTICLES  ಶ್ರೀ ಶ್ರೀಧರ ಗುರುಗಳ ಪುಣ್ಯ ಕ್ಷೇತ್ರ ವರದಪುರದ ಮಹಿಮೆ.

ಮಕ್ಕಳು ದೊಡ್ಡವರಾದ ಮೇಲೆ ಹೆತ್ತವರಿಗೆ ವಯಸ್ಸಾಗುತ್ತಾ ಬಂದಿದ್ದು, ಇವರನ್ನು ನೋಡಿಕೊಳ್ಳಲು ಕಷ್ಟವಾಗಿ ತಮ್ಮ ಕರ್ತವ್ಯದಿಂದ ಹಿಂದೆ ಸರಿದು ಅವರುಗಳನ್ನು ವೃದ್ದಾಶ್ರಮಕ್ಕೆ ಸೇರಿಸಿದರೆ ಆ ವೃದ್ದ ಜೀವಗಳು ಬಹಳವಾಗಿ ನೊಂದು ಕೊಳ್ಳುವುದುಂಟು. ಇಂಥಹ ಸನ್ನಿವೇಶಗಳಲ್ಲಿ ಮಕ್ಕಳು ಹೆತ್ತವರನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು.

ಮನುಷ್ಯ ಸತ್ತಾಗ ಅವನ ಮಕ್ಕಳು ಸಂಸ್ಕಾರ ಮಾಡುವ ಕರ್ತವ್ಯದಿಂದ ಯಾರೂ ಹಿಂದೆ ಸರಿಯುವುದಿಲ್ಲ. ಬದುಕಿದ್ದಾಗ ಸರಿಯಾಗಿ ನೋಡಿಕೊಳ್ಳದಿದ್ದರೂ ಸತ್ತ ನಂತರ ಅವರಿಗೆ ಸದ್ಗತಿ ದೊರಕಲಿ ಎಂದು ಅಂತಿಮ ಸಂಸ್ಕಾರವನ್ನು ಮಾಡುವುದುಂಟು. ಹೆತ್ತವರ ಸಂಸ್ಕಾರ ಮಾಡದೆ ಹಿಂದೆ ಸರಿದರೆ ನೋಡಿದ ಜನಗಳು ಇವರನ್ನು ಕುರಿತು ಬದುಕಿದ್ದಾಗ ಸರಿಯಾಗಿ ನೋಡಿಕೊಳ್ಳಲಿಲ್ಲ ಸತ್ತಮೇಲೂ ಸರಿಯಾಗಿ ತಿಥಿ ಕಾರ್ಯಗಳನ್ನು ಮಾಡಲಿಲ್ಲ ಇವರು ಎಂತಹ ಮಕ್ಕಳು ಎಂದು ಸಮಾಜದಲ್ಲಿ ಕರ್ತವ್ಯ ಭ್ರಷ್ಠ ಎಂಬ ಹಣೆಪಟ್ಟಿ ಕಟ್ಟುತ್ತಾರೆ.

RELATED ARTICLES  ಸಾವು ಬದುಕಿನ ಅಂತ್ಯವಲ್ಲ

ಯಾವ ವಿಷಯದಲ್ಲಾದರೂ ಪಕ್ಕಕ್ಕೆ ಅಥವಾ ದೂರ ಸರಿದರೂ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದರಿಂದ ಹಿಂದೆ ಸರಿದರೆ ಮಕ್ಕಳ ಸಂತೋಷದ ಜೊತೆಗೆ ಮಕ್ಕಳ ಭವಿಷ್ಯ ಹಾಳಾಗುವ ಸಂದರ್ಭ ಬಂದೊದಗುತ್ತದೆ. ತಂದೆ ತಾಯಿ ವೃದ್ದಾಪ್ಯದಲ್ಲಿರುವಾಗ ಅವರನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದ ಪಕ್ಕಕ್ಕೆ ಅಥವಾ ಹಿಂದಕ್ಕೆ ಸರಿಯಬಾರದು. ವಿದ್ಯೆ ಕಲಿತು ಬೇರೆಯವರಿಗೆ ಹೇಳಿಕೊಡುವಲ್ಲಿ ಹಿಂದೆ ಸರಿಯಬಾರದು ಹಾಗೂ ಬಡವರಿಗೆ ಸಹಾಯ ಮಾಡುವು ದರಲ್ಲಿಯೂ ಸಹ ಹಿಂದಕ್ಕೆ ಸರಿಯಬಾರದು. ಇವೆಲ್ಲಾ ಕರ್ತವ್ಯಗಳಿಂದ ಹಿಂದೆ ಸರಿದರೆ ಇದರಿಂದ ಜೀವನದ ಅರ್ಥವೇ ಇರುವುದಿಲ್ಲ.