ನಮ್ಮ ಮುಂದೆ ಶ್ರೀಗುರುಮೂರ್ತಿ ಬಂದು ನಿಂತರೂ ನಮ್ಮ ಚಿತ್ತ ಅವರೆಡೆ ಇಲ್ಲವಾದರೆ ನಮಗೆ ಆ ಭಾವನೆಯೂ ಆಗುವದಿಲ್ಲ ಮತ್ತು ಶ್ರೀಗುರುವಿನ ಪ್ರತ್ಯಕ್ಷ ದರ್ಶನವೂ ಆಗುವದಿಲ್ಲ. ಚಿತ್ತ ಅಂದರೆ ನಮ್ಮ ಒಂದು ರೀತಿಯ ಸಂಕಲ್ಪವೇ. ವಿಚಾರ ಮಾಡಿ ನೋಡಿದರೆ ನಾವು ಮತ್ತು ನಮ್ಮ ಸಂಕಲ್ಪ ಇದನ್ನು ಬಿಟ್ಟು ಬೇರೇನೂ ಇರುವದಿಲ್ಲ.
(ಮಾತೋಶ್ರೀ ಸಾವಿತ್ರಿ ಭಾಗವತ, ವಾರಣಾಸಿ, ಇವರಿಗೆ ಬರೆದ ಪತ್ರ)
— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
|| ಶ್ರೀರಾಮ ಸಮರ್ಥ ||
ಮಗುವೇ!
ಈ ಸಂಪೂರ್ಣ ಸೃಷ್ಟಿ ಚಿತ್ತದ ವಿಲಾಸವಾಗಿದೆ. ಚಿತ್ತ ಯಾವುದೇ ಒಂದು ವಸ್ತುವಿನ ಕಡೆಗಿದ್ದರೆ ಎರಡನೆಯ ಯಾವುದೇ ವಸ್ತುವಿನ ಭಾವನೆಯಾಗುವದಿಲ್ಲ. ನಮ್ಮ ಮುಂದೆ ಶ್ರೀಗುರುಮೂರ್ತಿ ಬಂದು ನಿಂತರೂ ನಮ್ಮ ಚಿತ್ತ ಅವರೆಡೆ ಇಲ್ಲವಾದರೆ ನಮಗೆ ಆ ಭಾವನೆಯೂ ಆಗುವದಿಲ್ಲ ಮತ್ತು ಶ್ರೀಗುರುವಿನ ಪ್ರತ್ಯಕ್ಷ ದರ್ಶನವೂ ಆಗುವದಿಲ್ಲ. ಚಿತ್ತ ಅಂದರೆ ನಮ್ಮ ಒಂದು ರೀತಿಯ ಸಂಕಲ್ಪವೇ. ವಿಚಾರ ಮಾಡಿ ನೋಡಿದರೆ ನಾವು ಮತ್ತು ನಮ್ಮ ಸಂಕಲ್ಪ ಇದನ್ನು ಬಿಟ್ಟು ಬೇರೇನೂ ಇರುವದಿಲ್ಲ. ನಮ್ಮ ಕಲ್ಪನೆಯಲ್ಲಿ ಯಾವ ವಿಜಾತೀಯ ಸಂಸ್ಕಾರವಿದೆಯೋ ಅದನ್ನು ಬದಿಗೆ ಸರಿಸಿ, ನಾವು ಯಾವಾಗಲೂ ಅಖಂಡ ಸ್ವರೂಪದಲ್ಲಿದ್ದು, ನಮ್ಮ ಕಲ್ಪನೆಯ — ಹಾಗೇ ಅದರಿಂದಾಗುವ ಪಿಂಡ-ಬ್ರಹ್ಮಾಂಡ, ಜೀವ-ಈಶ, ಮಾಯೆ-ಅವಿದ್ಯೆ ಇತ್ಯಾದಿ ಸಂಪೂರ್ಣ ಭಿನ್ನ-ಭಿನ್ನ ವೃತ್ತಿಗಳ ಲಯ ಮಾಡಿ — ‘ನಾನು ಶುದ್ಧ ಬ್ರಹ್ಮನಿದ್ದೇನೆ’ ಈ ಸ್ಮೃತಿಯಿಂದಲೂ ಬಿಡುಗಡೆ ಹೊಂದಿ — ಕೇವಲ ಮೂಲ ಅಸ್ತಿತ್ವದಲ್ಲಿರುವದೇ ನಿಜಸ್ಥಿತಿಯು.
ಮಗುವೇ! ಈ ರೀತಿಯ ಸ್ಥಿತಿ ಪ್ರಾಪ್ತ ಮಾಡಿಕೊಳ್ಳುವದೇ ತತ್ವ ಸಾಕ್ಷಾತ್ಕಾರ ಅಥವಾ ಆತ್ಮಸ್ವರೂಪಪ್ರಾಪ್ತಿಯು. ಈ ಸ್ವರೂಪಸ್ಥಿತಿಯ ದರ್ಶಕ – ಯಾರು ಆ ದಯಾವಂತ ಸದ್ಗುರುವಿದ್ದಾನೋ – ಅವರೂ ಕೂಡಾ ನಿಸ್ಫೂರ್ತಿಕವಾಗಿರುವ ನಮ್ಮ ಸ್ವಸ್ವರೂಪದ ಬ್ರಹ್ಮವೇ ಇರುತ್ತಾರೆ. ನಮ್ಮ ಹೃದಯದಲ್ಲಿ ಚಂಚಲತೆಗೆ ಸ್ವಲ್ಪವೂ ಸ್ಥಳ ಕೊಡದೇ, ‘ದೇಹೋಹಂ’ ಎಂಬ ಭಾವನೆಯಿಂದ, ಆ ‘ಅಹಂ ಬ್ರಹ್ಮಾಸ್ಮಿ’ ಯನ್ನು ಪಡೆಯುವ ಯಾವ ಸ್ಫೂರ್ತಿಯಿದೆಯೋ, ಅದೆಲ್ಲವನ್ನೂ ನಮ್ಮ ಸ್ವರೂಪದಲ್ಲಿ ವಿಲೀನಮಾಡಿ, ಆ ಅನಂತಾನಂದದಲ್ಲಿ ತದ್ರೂಪವಾಗುವದೇ ಆತ್ಮನಿಷ್ಠೆ. ಇದೇ ಗುರುದೇವರ ರಹಸ್ಯಮಯ ಉಪದೇಶವಾಗಿದೆ. ಗುರೂಪದೇಶದ ಈ ಗೂಢ ರಹಸ್ಯದ ಮರ್ಮವನ್ನರಿತುಕೊಂಡು, ಏಕಾಗ್ರಮನಸ್ಸಿನಿಂದ ಬಹಿರ್ಮುಖವೃತ್ತಿಯನ್ನು ನಷ್ಟಮಾಡಿ, ಅಂತರ್ಮುಖವೃತ್ತಿ ಹೆಚ್ಚಿಸುತ್ತಾ ಹೋಗಬೇಕು.
ಮಗುವೇ! ಇದೇ ಗುರುದೇವರಸೇವೆ. ಗುರುದೇವರ ಪ್ರಸನ್ನತೆ ಪಡೆಯಲು ಇದೇ ನಿಷ್ಠೆ ಹೆಚ್ಚಿಸಬೇಕು. ಪೂಜಾ-ಪಾಠ, ಜಪ-ತಪ, ನೇಮ-ವ್ರತ ಇತ್ಯಾದಿ ಅಭ್ಯಾಸಗಳಿಂದ ನಮ್ಮ ಸ್ವರೂಪಸ್ಥಿತಿಯಲ್ಲಿ ಇರುವದೆಂದರೇ ಶ್ರೀಗುರುದೇವರ ಅತ್ಯಂತ ಸಾಮಿಪ್ಯ ಪ್ರಾಪ್ತಿಮಾಡಿಕೊಳ್ಳುವದು. ಮಗುವೇ! ಮನಸ್ಸಿನ ಎಲ್ಲ ದೌರ್ಬಲ್ಯ ತೆಗೆದಿರಿಸಿ, ಮತ್ತು ಬಾಹ್ಯ ಸಾಧನೆಗಳಿಂದ ಕ್ಷೀಣಿಸಿ, ಯಾವರೀತಿ ನೀರಿನಲ್ಲಿ ನೀರು ಸೇರಿಸಿದಾಗ ಅದು ಏಕರೂಪವಾಗುತ್ತದೆಯೋ, ಅದೇ ರೀತಿ, ಗುರುರೂಪ ಪರಬ್ರಹ್ಮದಲ್ಲಿ ತದ್ರೂಪವಾಗಿ ಸ್ವರೂಪಸ್ಥಿತಿಯಲ್ಲಿ ಇರಬೇಕು.
ಇತಿಶಮ್
ನಿನ್ನದೇ ಆತ್ಮ
ಶ್ರೀಧರ