ನೀನೇ ನೋಡು, ಯಾರು ಭಕ್ತ ಮತ್ತು ಭಗವಂತ ಎಂಬ ದ್ವೈತ ಭಾವನೆಯಿಂದ ಉಪಾಸನೆ ಮಾಡುತ್ತಾರೋ ಮತ್ತು ಸೇವಾಭಾವದಲ್ಲಿ ಮಗ್ನರಿರುತ್ತಾರೋ, ಭೇದಭಕ್ತಿಯಲ್ಲಿ ಮುಳುಗಿರುತ್ತಾರೋ, ಅಂತಹ ಭಕ್ತರಿಗಾಗಿ, ಅವರ ಇಚ್ಛೆ ಪೂರ್ಣಗೊಳಿಸಲೆಂದೇ, ಭಗವಂತನಿಗೆ ವಿಧವಿಧದ ಲೋಕಗಳನ್ನು ಸೃಷ್ಟಿಸಬೇಕಾಗುತ್ತದೆ.
(ಮಾತೋಶ್ರೀ ಸಾವಿತ್ರಿ ಭಾಗವತ, ವಾರಣಾಸಿ, ಇವರಿಗೆ ಬರೆದ ಪತ್ರದ ಮುಂದುವರಿದ ಎರಡನೆಯ ಭಾಗ)
— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
ಮಗಳೇ!
ವೃತ್ತಿಶೂನ್ಯ ನಿರ್ವಿಕಲ್ಪವಾದ ನಮ್ಮ ಸ್ಥಿತಿಯಲ್ಲಿರದೇ ಕ್ಷುದ್ರ ಭಾವನೆ ಮಾಡುವದರಲ್ಲೇನು ಪ್ರಯೋಜನ? ನೀನೇ ನೋಡು, ಯಾರು ಭಕ್ತ ಮತ್ತು ಭಗವಂತ ಎಂಬ ದ್ವೈತ ಭಾವನೆಯಿಂದ ಉಪಾಸನೆ ಮಾಡುತ್ತಾರೋ ಮತ್ತು ಸೇವಾಭಾವದಲ್ಲಿ ಮಗ್ನರಿರುತ್ತಾರೋ, ಭೇದಭಕ್ತಿಯಲ್ಲಿ ಮುಳುಗಿರುತ್ತಾರೋ, ಅಂತಹ ಭಕ್ತರಿಗಾಗಿ, ಅವರ ಇಚ್ಛೆ ಪೂರ್ಣಗೊಳಿಸಲೆಂದೇ, ಭಗವಂತನಿಗೆ ವಿಧವಿಧದ ಲೋಕಗಳನ್ನು ಸೃಷ್ಟಿಸಬೇಕಾಗುತ್ತದೆ.
ಸದ್ಗುರು ಉಪಾಸನೆ ನಿರ್ಗುಣ, ನಿರಾಕಾರ, ನಿರ್ವಿಕಲ್ಪ ರೂಪದಿಂದಲೇ ಮಾಡಬೇಕಾಗುತ್ತದೆ. ನಾನೆಂಬ ಸ್ಫೂರ್ತಿಯಿಂದಲೂ ದೂರ, ಜ್ಞಾನರೂಪಿ ಸ್ವಸ್ವರೂಪದಲ್ಲಿ ವೃತ್ತಿಯ ಲಯ ಮಾಡುವದೇ ಗುರುವಿನ ಧ್ಯಾನ; ಇದನ್ನೇ ಬ್ರಹ್ಮೈಕ್ಯವೆನ್ನುತ್ತಾರೆ; ಇದೇ ಸ್ವರೂಪಸ್ಥಿತಿ. ಈ ರೀತಿಯ ಸ್ಥಿತಿಯಲ್ಲಿರುವದೇ ಗುರುವಿನ ಅಖಂಡ ಸೇವೆಯಾಗಿರುತ್ತದೆ.
ಮಗಳೇ!
ವೃತ್ತಿಗಳಿಂದಾಗಿಯೇ ಬ್ರಹ್ಮಾಂಡ-ಪಿಂಡಾಂಡ, ಅವುಗಳ ಅಭಿಮಾನಿ ಜೀವ-ಈಶ, ಮಾಯೆ-ಅವಿದ್ಯೆ ಇತ್ಯಾದಿ ಸರ್ವಭಾವಗಳು, ನಮ್ಮ ಹೃದಯದಲ್ಲಿಯ ‘ನಾನು’ ಸ್ವರೂಪಸ್ಥಿತಿಯನ್ನು ಆವರಿಸುತ್ತವೆ. ನಮ್ಮ ನಿಜಸ್ಥಿತಿಯಲ್ಲಿದ್ದು, ಅಖಂಡ ಆನಂದ ನಿರಂತರ ಸೂರೆಗೊಳ್ಳುವ ಇಚ್ಛೆ ಯಾರಿಗಿದೆಯೋ ಅವರು, ಜೀವೇಶ ಇತ್ಯಾದಿ ಎಲ್ಲ ಚಂಚಲ ಭಾವನೆ ದೂರಮಾಡಿ, ‘ನಾನು ಕೇವಲ ಸಚ್ಚಿದಾನಂದ ಬ್ರಹ್ಮಸ್ವರೂಪನಿದ್ದೇನೆ’, ಎಂಬ ಸ್ಮೃತಿಮಾತ್ರ ನಿರಂತರ ಸಾಕ್ಷೀರೂಪವಾಗಿದ್ದು, ನಮ್ಮಲ್ಲಿ ನಾವೇ ಸ್ವತಃ ‘ಸ್ವಯಮೇವ’ ಚಿನ್ಮಾತ್ರಸ್ವರೂಪದಲ್ಲಿರಬೇಕು.
ಇತಿಶಮ್
ನಿನ್ನದೇ ಆತ್ಮ
ಶ್ರೀಧರ