ಕಳೆದವಾರ ಕಳೆದುಹೋಗಿದ್ದೆ..
ಮತ್ತೆ ಎಳೆಯಿತು ನೆನಪು..ಹಾಗೆ ಬಂದೆ…ತಿಗಣೇಶ ವಂದಿಸುತ್ತಿದ್ದಾನೆ ಒಪ್ಪಿಸಿಕೊಳ್ಳಿ.

ನಾನು ಅಜ್ಜನನ್ನು ಕಂಡಿಲ್ಲ..ನಾನು ಹುಟ್ಟುವವರೆಗೇ ಅಜ್ಜ ಸತ್ತು ಹೋಗಿದ್ದ..ತಾನೇ ಕುಟುಂಬದ ಅಂತ್ಯಕ್ರಿಯೆಗಾಗಿ..ಪತ್ರೆಕಾನ ಜಟಗನಮನೆ ಹತ್ತಿರ ಐದು ಗುಂಟೆ ಜಾಗ ಬಿಟ್ಟಿದ್ದನಂತೆ..ಆ ಜಾಗದ ಉದ್ಘಾಟನೆ ಅವನ ದಹನದಿಂದಾಯ್ತಂತೆ.. ನವರಾತ್ರಿ ನಮ್ಮನೆಯ ದೊಡ್ಡ ಹಬ್ಬ. ಹತ್ತೂ ದಿನ ಅವಲಕ್ಕಿ ಕಮ್ಮಯ್ಯ..ಇಲ್ಲಾ ಅಗಳಕಾಯಿಸಿ ಹಾಕಿದ ಅವಲಕ್ಕಿ..ನಾವು ದಿನಾ ದೋಸೆ ತಿಂದವರಲ್ಲ..ಮುಸುರೆಮಾಡುತ್ತಿರಲಿಲ್ಲ..ಅದಕ್ಕಾಗಿ ಅವಲಕ್ಕಿ ನಮ್ಮನೆಯ ಮುಖ್ಯ ಅಹಾರ.
ಗಂಗಷ್ಟಮಿ ಮುಂಚಿನ ದಿನ ನಮ್ಮನೆ ಅಜ್ಜನ ತಿಥಿ.ಮಾಗೋಡ ಗಣೇಶ ಹೆಗಡೆ ಅಕಾಲದಲ್ಲಿ ಪಟೇಲ ಆದವ..ಬ್ರಿಟೀಷರು ಕೊಟ್ಟ ಸೊಟ್ಟ..ಕೋವಿ..ಖಡ್ಗ..ಈಗಲೂ ಇದೆ.ಅಜ್ಜನ ತಿಥಿಗೆ ಲಾಡು.

ತಿಥಿದಿನ ಊಟಕ್ಕೆ ಮೂರುಗಂಟೆ..ನಮ್ಮನೆಯಲ್ಲಿ ಮಾತ್ರ ಗಡಿಯಾರವಿತ್ತು..ಬಹುತೇಕ ಅದೇ ಊರಿಗೆಲ್ಲ ಸಮಯ ಹೇಳಿದ ಮೊದಲ
ಗಡಿಯಾರ.ಕೀಲಿಕೊಡುವ..ಲೋಲಕ ತೂಗುವ ಗಡಿಯಾರ.
ಹನ್ನೆರಡಾದರೂ ಬಟ್ಟರು ಬರುತ್ತಿರಲಿಲ್ಲ.ನಮಗೆಲ್ಲ ಅಡಿಗೆ ಒಳಗೆ ಬರದಂತೆ ಮೊದಲೇ ಹೆದರಿಸಿ ಇಡುತ್ತಿದ್ದರು..”ಹೊಟ್ಟಬಡ್ಕ ಮಕ್ಕ..ಒಳಗ್ ಬರಡಿ” ಎಂದು ಗೌರವದ ನುಡಿ ಬೇರೆ.ದೂರಿಂದ ಬಂದವರು ಮಕ್ಕಳಿದ್ದಾರೆಂದು ಪೇಪರಮೆಂಟ ತರುತ್ತಿದ್ದರು..ಆಗ ಚಾಕಲೇಟ ಇಲ್ಲ.ಶುಂಠಿ ಪೇಪರಮೆಂಟ..ಪಾರ್ಲೆ ಜಿ..ಬಿಸ್ಕೀಟ ನಮಗೆ ವಿಶೇಷ.ನಾವು ಅಂಥ ನೆಂಟರನ್ನು ಕಾಯುತ್ತಿದ್ದೆವು..ಅವರೂ ಮನೆ ಒಳಗೇ ಚೀಲ ತೆಗೆದು ಆಯಿಯ ಹತ್ತಿರ ಕೊಡುತ್ತಿದ್ದರು.. ಇಂದು ಅಂಗಡಿ ತಿಂಡಿ ಬೇಡ ಎಂದು ಕರಡಿಗೆಯಲ್ಲಿಟ್ಟು ಎತ್ತರದ ನಾಗಂತ್ಗೆ ಮೇಲೆ ಇಡುತ್ತಿದ್ದರು..ಅಲ್ಲಿಗೆ ನಮ್ಮ ಕಾದ ಶ್ರಮ ವ್ಯರ್ಥ.ಅವರಿಗೆ ಮಾಡಿದ ಪಾನಕದಲ್ಲಿ ನಮಗೆ ಹನಿ ಕೊಡುತ್ತಿದ್ದರು..ಅದೇ ನಮಗೆ ಹಬ್ಬ.ತಿಂಡಿ ತರದ ನೆಂಟರಿಗೆ ಮನಸಲ್ಲೇ ಬೈಯ್ಯುತ್ತಿದ್ದೆವು..ಅವರನ್ನು ಕಳಿಸಲು ಹೋಗುತ್ತಿರಲಿಲ್ಲ.ಆದಿನ ಮಾಸ್ತರು ಮದ್ಯಾನ್ಹ ಶಾಲೆ ಮಾಡುತ್ತಿರಲಿಲ್ಲ.ಶಾಲೆ ರಜಾ..ನಮ್ಮನೆಗೆ ಊಟಕ್ಕೆ ಬರುತ್ತಿದ್ದರು.ಅವರು ಬರುವವರೆಗೆ ನಮ್ಮ ಹಾರಾಟ.ಮಾಸ್ತರ್ರು ಬಂದಮೇಲೆ..ನಾವು ಜಗಲಿವೊಳ ಸೇರುತ್ತಿದ್ದೆವು.ಅಂಗಳದಲ್ಲಿ ಇಸ್ಪೀಟಾಟ ನಡೆಯುತ್ತಿತ್ತು.ಮಾಸ್ತರ್ರು ಆಡುವವರೇ..ಅವರಿಗೆ ನೀರು..ಕವಳಚ್ಚಿಗೆ ನಾವು ಓಡೋಡಿ ತಂದುಕೊಡುತ್ತಿದ್ದೆವು.
ಬಟ್ಟರು ಬಹಳ ಸಾವಕಾಶ ಉಣ್ಣುತ್ತಿದ್ದರು..ನಮಗೆ ಹಸಿವಾಗಿ ರಗಳೆ ಶುರುವಾಗುತ್ತಿತ್ತು.ನೆಂಟರಿಗೆ ಮಾಡಿದ ಪಾನಕ ನೇಟುತ್ತಿದ್ದೆವು.

RELATED ARTICLES  ಮಕ್ಕಳ ಜೀವನದಲ್ಲಿ ಸ್ನೇಹ ಪ್ರೀತಿ

ಮಕ್ಕಳ ಪಂಕ್ತಿ ಕೆಳಗಿನ ಹೊಳ್ಳಿಯ ಮೇಲೆ.ಅಲ್ಲಿ ಶಿಗ್ತೆಬಾಳೆ..ಪಲ್ಯ ಹಾಕುತ್ತಿರಲಿಲ್ಲ..ನೀರು ಕುಡಿಯಲು ತಟ್ಟೆ ಇಡುತ್ತಿರಲಿಲ್ಲ.

ಎರಡನೇ ಸಲ ಲಾಡು ಕೇಳುತ್ತಿರಲಿಲ್ಲ..ಕೇಳಿದರೆ ನಾವೆಲ್ಲ ಎಡಗೈ ಒಡ್ಡಿ ಲಾಡು ಬೇಡಿ ತೆಗೆದುಕೊಳ್ಳುತ್ತಿದ್ದೆವು.
ಕಟ್ಣೆ ಕುಡಿಯಲು ದೊನ್ನೆ ಇಡುತ್ತಿರಲಿಲ್ಲ.ಅಗೆಲ್ಲ ಬೇಕಾದಷ್ಟು ತಟ್ಟೆಯಿಲ್ಲ..ಬಾಳೆಬಾಡಿಸಿ ದೊನ್ನೆ ಶಡುತ್ತಿದ್ದರು..ಅದೇ ತಟ್ಟೆ. ಹಾಯಿ ಕರೆಯುವಾಗ ಎಡೆಯನ್ನು ಕುನ್ನಿ ಮುಟ್ಟದಂತೆ ಕಾಯುವವರು ನಾವು..ಕಾಕೆ ಯಾವುದನ್ನು ಕಚ್ಚಿಕೊಂಡು ಹೋಯಿತೋ..ಅಜ್ಜನಿಗೆ ಅದು ಪ್ರೀತಿ ಎಂದು ಕೂಗುತ್ತಿದ್ದೆವು..ಅಲ್ಲಿಯೇ ವಡ್ಡ ನಡೆಯುತ್ತಿತ್ತು..ಪಿಂಡ ಬಿಡಲು ಕೆರಯವರೆಗೆ ಅತ್ತೆ ಜೊತೆಗೆ ಹೋದವರಿಗೆ ಅತ್ತೆಒಂದು ಲಾಡು ಉಗ್ಗಿಸಿ ಕೊಡುತ್ತಿದ್ದರು..ಎಲ್ಲರು ಹೋಗುವ ಹಟಮಾಡಿ ಆ ಪದ್ದತಿಯೂ ರದ್ದಾಯಿತು.
ಹಠ ಮಾಡಿ ತಟ್ಟೆಗಟ್ಳೆ ಕಟ್ಣೆ ಕುಡಿದು ಉರುಚ್ಚಿಯಾಗಿ ಬೈಸಿಕೊಂಡಿದ್ದೂ ನೆನಪಿದೆ.ನೆಂಟರು ಹೋಗುವಾಗ ಪೊಟ್ಳೆ ಕೊಡುವ ಪದ್ದತಿ ಇತ್ತು..ನಾವು ಅದಕ್ಕೆ ಮುಂದೆ..ಹೇಗಾದರೂ ಮಾಡಿ ಲೆಕ್ಕ ತಪ್ಪಿಸಿ ಒಂದೆರಡು ಪೊಟ್ಳೆ ಉಗ್ಗಿಸಿ ಕೊಟ್ಗೆ ಅಟ್ಟದ ಮೇಲೆ ಇಡುತ್ತಿದ್ದೆವು.ಮರುದಿನ ಶಾಲೆಗೆ ಹೋಗುವಾಗ ಪಾಟಿಚೀಲದಲ್ಲಿ ಹಾಕಿ ಹೋಗುತ್ತಿದ್ದೆವು..ಕೊಟ್ಟಿಗೆ ಅಟ್ಟಕ್ಕಿಟ್ಟ ಪೊಟ್ಳೆ ಇಲಿ ಹೊತ್ತ ದಿನವೂ ಇದೆ..ಆಗ ಕಾಗದ ಕಡಿಮೆ..ಬಾಳೆಕೀಳೆ ಒಡೆದು ಪಾಟಿಚೀಲಕ್ಕೆ ಯರು ಬಂದು ಕಳ್ಳರು ಸಿಕ್ಕಿಬಿದ್ದಿದ್ದು ಇದೆ..ಮಾಸ್ತರಿಗೆ ಮರುದಿನ ಪೊಟ್ಳೆ ನಾವೇ ತೆಗೆದುಕೊಂಡು ಹೋಗುತ್ತಿದ್ದೆವು..ಒಂದು ಸಲವೂ ಮಾಸ್ತರ್ರಿಗೆ ಕೊಟ್ಟಿದ್ದಿಲ್ಲ..ಹಿಂಡಿನಲ್ಲಿಟ್ಟು..ಒಂದಕ್ಕೆ ಬಿಟ್ಟಾಗ ತಿಂದಿದ್ದೇ..

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಇಂದು..ನೂರಾರು ಲಾಡು ಡಬ್ಬಿಯಲ್ಲಿದ್ದರೂ..ತಿನ್ನದ ಮಕ್ಕಳು..ಹಸಿವಿರದ..ಮಕ್ಕಳಿಗೆ ಅಹಾರದ ಸುಖವೇ ಗೊತ್ತಿಲ್ಲ..ಹಾಗಾಗಿ ಹೇಗೆ ಸುಖ ಅನುಭವಿಸಿಯಾರು ನಮ್ಮಂತೆ..
ನಮಸ್ಕಾರ..ತಿಂದ ಲಾಡು ನೆನಪಿಸಿಕೊಳ್ಳಿ..