ಸಾಧಕರು ತಮ್ಮ ಗುರುದೇವ ರುಷ್ಟರಾಗಿದ್ದಾರೆ, ಕ್ರೋಧಿಷ್ಟರಾಗಿದ್ದಾರೆ, ನಿರ್ಲಕ್ಷಿಸುತ್ತಿದ್ದಾರೆ ಅಥವಾ ತಮ್ಮ ಮೇಲೆ ಸಿಟ್ಟು ಮಾಡುತ್ತಾರೆ ಎಂಬಂತ ಕ್ಷುದ್ರ ಭಾವನೆ ಎಂದೆಂದಿಗೂ ಮಾಡಲೇಬಾರದು.

(ಮಾತೋಶ್ರೀ ಸಾವಿತ್ರಿ ಭಾಗವತ, ವಾರಣಾಸಿ, ಇವರಿಗೆ ಬರೆದ ಪತ್ರ)
— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

|| ಶ್ರೀರಾಮ ಸಮರ್ಥ ||
ಮಗಾ!
ಶ್ರೀಗುರುರಾಯರಿಗೆ ಕ್ರೋಧಾದಿಗಳು ಸ್ಪರ್ಷವನ್ನೂ ಮಾಡಲಿಕ್ಕೆ ಶಕ್ಯವಿಲ್ಲ. ಯಾವುದೇ ಪ್ರಾಣಿಮಾತ್ರಗಳ ಮೇಲೆ ಅವರ ಪ್ರೇಮ ಹೆಚ್ಚು-ಕಡಿಮೆ ಅಥವಾ ಯಾರ ಮೇಲಾದರೂ ಉದಾಸೀನತೆ ಇತ್ಯಾದಿಗಳು ಇರುವದೇ ಇಲ್ಲ. ಒಂದಾನುವೇಳೆ ಅವರು ಶಿಷ್ಯನಿಗೆ ಕೆಲವೊಮ್ಮೆ ಹೆದರಿಸಿ-ಬೆದರಿಸಿ ಏನಾದರೂ ಮಾತನಾಡಿದರೂ, ಅದು ಅವರ ಎಲ್ಲ ವಿಘ್ನ-ಆಪತ್ತು-ದೌರ್ಬಲ್ಯ ಮೊದಲಾದವುಗಳನ್ನು ನಷ್ಟ ಮಾಡಲಿಕ್ಕೇ ಆ ರೀತಿ ಮಾತನಾಡುತ್ತಿರುತ್ತಾರೆ. ತಮ್ಮೊಂದಿಗೆ ಶ್ರೀಗುರುದೇವರು ಉದಾಸೀನರಾಗಿ ಕಂಡುಬಂದರೆ, ನಮ್ಮ ದುರ್ಗುಣ ತೊಲಗಿಸಲೆಂದೇ ಇರುತ್ತದೆ. ಹೇಗೆ ಅಕ್ಕಸಾಲಿಗ ಬಂಗಾರದಲ್ಲಿಯ ಕಲಬೆರಕೆಯನ್ನು ಹೊರತೆಗೆದು ಬಂಗಾರವನ್ನು ಶುದ್ಧ ಮಾಡುತ್ತಾನೋ, ಅದೇ ರೀತಿ ಶ್ರೀಗುರುದೇವರು ಜೀವಿಯ ಅಂತರ್ಗತವಾಗಿರುವ ಎಲ್ಲ ಕಲ್ಮಷಗಳನ್ನು ಸರಿಸಿ, ತೊಲಗಿಸಿ, ಜೀವಿಗೆ ಜೀವಭಾವದಿಂದ ಹೊರತೆಗೆದು ಬ್ರಹ್ಮರೂಪ ಮಾಡುತ್ತಾರೆ. ಸಾಧಕರು ತಮ್ಮ ಗುರುದೇವ ರುಷ್ಟರಾಗಿದ್ದಾರೆ, ಕ್ರೋಧಿಷ್ಟರಾಗಿದ್ದಾರೆ, ನಿರ್ಲಕ್ಷಿಸುತ್ತಿದ್ದಾರೆ ಅಥವಾ ತಮ್ಮ ಮೇಲೆ ಸಿಟ್ಟು ಮಾಡುತ್ತಾರೆ ಎಂಬಂತ ಕ್ಷುದ್ರ ಭಾವನೆ ಎಂದೆಂದಿಗೂ ಮಾಡಲೇಬಾರದು. ಸಾಧಕರ ನಿತ್ಯ, ನಿರ್ವಿಕಾರ, ಪರಮಶಾಂತಿರೂಪ, ಸಚ್ಚಿದಾನಂದಘನ, ಮಂಗಲಮಯ ಆತ್ಮರೂಪವೇ ಸದ್ಗುರುವಾಗಿದ್ದಾರೆ.

RELATED ARTICLES  ಸರಳತೆಯಲ್ಲಿ ಸೌಂದರ್ಯ

ಮಗಳೇ! ದೇಹದ ಅನಾರೋಗ್ಯ ಮತ್ತು ಮನಸ್ಸಿನ ಅಸ್ವಾಸ್ಥ್ಯ ಇವೆರಡೂ ಆತ್ಮಸ್ಥಿತಿಯಲ್ಲಿ ದೋಷ ಉತ್ಪನ್ನ ಮಾಡುತ್ತವೆ. ಮಹಾಭಯಾನಕ ಜನ್ಮ-ಮೃತ್ಯುರೂಪಿ ಸಂಸಾರದಿಂದ ಮುಕ್ತವಾಗಲಿಕ್ಕೆ ‘ನೀನೇ ಆನಂದರೂಪ ಪರಮತತ್ವವಿರುವೆ’, ಎಂದು ನಾನೇನು ಉಪದೇಶ ಮಾಡಿದ್ದೆನೋ, ಅದರ ಮೇಲೆ ನಿಷ್ಠೆಯಿಟ್ಟು ತತ್ಪರಾಯಣನಾಗಿರು. ಅದರಿಂದ ಎಲ್ಲ ಪ್ರಕಾರದ ದುಃಖ, ಶೋಕ, ದೌರ್ಬಲ್ಯ ಇತ್ಯಾದಿಗಳ ನಿವೃತ್ತಿಯಾಗುತ್ತದೆ ಮತ್ತು ನೀನು ಆನಂದರೂಪದಿಂದ ಥಳಥಳಿಸುತ್ತೀಯೆ. ಈ ರೋಗ, ಆ ರೋಗ ಮುಂತಾದವುಗಳು ಸಂಪೂರ್ಣವಾಗಿ ಅಷ್ಟೇಕೆ ಭವರೋಗವೇ ನಷ್ಟವಾಗುತ್ತದೆ.

RELATED ARTICLES  ಅಂತರ್ಬಾಹ್ಯ ದೃಶ್ಯ ತ್ರಿಕಾಲದಲ್ಲಿಯೂ ಉತ್ಪನ್ನವಾಗಿಲ್ಲ.

ಮಗಳೇ! ನೀನು ಆನಂದಘನ ಪರಬ್ರಹ್ಮರೂಪದಲ್ಲಿರು. ವಿಚಾರ ಮಾಡಿ ನೋಡು! ದೈವ-ಪ್ರಾರಬ್ಧ ಇವೆಲ್ಲಾ ಅಜ್ಞಾನದ ಕಲ್ಪನೆಗಳೇ ಆಗಿವೆ. ಜ್ಞಾನದೃಷ್ಟಿಯಿಂದ ದ್ವೈತದ ಕಲ್ಪನೆಯೂ ಆಗದೇ ನೀನು ಅವಿಕಾರ, ಅಂತರ್ಬಾಹ್ಯ ಏಕಾಕಾರ ನಮ್ಮದೇ ಸ್ವರೂಪವಿದ್ದು ಇದರ ಹೊರತು ಮತ್ತೆ ಬೇರೆ ಇನ್ನೇನೂ ಆಗುವದಿಲ್ಲ.
ಇತಿ!
ನಿನ್ನದೇ ಆತ್ಮ
ಶ್ರೀಧರ