ಪಂಚಭೌತಿಕ ಎಲುಬು – ಮಾಂಸದ ಈ ಗೊಂಬೆ ಬೇಕಾದರೆ ದೀರ್ಘಕಾಲವೇ ಇರಲಿ, ಅಥವಾ ಇಂದೇ ನಾಶಹೊಂದಲಿ, ನಮಗೆ ಅದರಿಂದೇನು ಪ್ರಯೋಜನ?
(ಮಾತೋಶ್ರೀ ಸಾವಿತ್ರಿ ಭಾಗವತ, ವಾರಣಾಸಿ, ಇವರಿಗೆ ಬರೆದ ಪತ್ರ)
— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

|| ಶ್ರೀರಾಮ ಸಮರ್ಥ ||
ಮಗಾ!
ನೀನು ಗುರುಚರಣದಲ್ಲಿ ಏಕರೂಪವಾದಿಯೆಂದರೆ ಭಿನ್ನಭಾವನೆ ಇರುವದೇ ಇಲ್ಲ. ಜೀವೇಶ, ಮಾಯೆ, ಅವಿದ್ಯೆಗಳ ಪರಂಪರೆಯ ಸಂಪೂರ್ಣ ಪ್ರಪಂಚ, ಗುರುವಿನ ಸ್ಥಾನದಲ್ಲಿ ಇಲ್ಲದೇ ಇರುವಾಗ, ಅಲ್ಲಿ, ಅಹಂಸ್ಫೂರ್ತಿರಹಿತ ಆನಂದಘನ, ಅದ್ವಿತೀಯ ಪರಮತತ್ವವೊಂದರಲ್ಲೇ ಏಕರೂಪವಾಗಿರಬೇಕು.

ಮಗಳೇ! ಗುರುವಿನ ಹೊರತು ಈ ರೀತಿಯ ಬೋಧದಾತ ಮತ್ತಾರೂ ಇಲ್ಲ. ಪಂಚಭೌತಿಕ ಎಲುಬು – ಮಾಂಸದ ಈ ಗೊಂಬೆ ಬೇಕಾದರೆ ದೀರ್ಘಕಾಲವೇ ಇರಲಿ ಅಥವಾ, ಇಂದೇ ನಾಶಹೊಂದಲಿ, ನಮಗೆ ಅದರಿಂದೇನು ಪ್ರಯೋಜನ? ಪ್ರತಿಯೊಂದು ಕ್ಷಣಕ್ಷಣವೂ ಆತ್ಮನಿಷ್ಟೆ ಹೆಚ್ಚಿಸುತ್ತಾ ಹೋಗು. ಇದಕ್ಕೆ, ನಿನ್ನ ಮೇಲೆ ನನ್ನ ಅನುಗ್ರಹ ಪೂರ್ಣವಾಗಿದೆ. ನಾಮರೂಪ ದೃಷ್ಟಿಯಿಂದ ಗುರು ಶಿಷ್ಯನ ಮೇಲೆ ಮೋಹ – ಮಮತೆ ಮಾಡುವದಿಲ್ಲ. ಕೇವಲ ಅವರ ಕಲ್ಯಾಣದ್ದೇ ಧ್ಯೇಯವಿಟ್ಟಿಕೊಂಡಿರುತ್ತಾರೆ. ಅವರು ತಮ್ಮ ಆತ್ಮದೃಷ್ಟಿಯಿಂದಲೇ ಪ್ರಾಣಿಮಾತ್ರರನ್ನು ನೋಡುತ್ತಾರೆ.

RELATED ARTICLES  ಕಳೆದುಹೋದ ಎಳೆಯ ದಿನಗಳು (ಭಾಗ೧)

ಅಖಂಡ ಆತ್ಮಸ್ಥಿತಿಯೇ ಗುರುಚರಣದಲ್ಲಿ ಐಕ್ಯ ಎಂದುಹೇಳಲ್ಪಡುತ್ತದೆ. ಗುರುಚರಣದಲ್ಲಿ ತಾದಾತ್ಮ್ಯತೆ ಮುಟ್ಟುವದೇ ಗುರುಭಕ್ತಿಯ ಪರಿಣಾಮವು. ಆಗ ಅಲ್ಲಿ, ಹೇಗೆ ನದಿಯಲ್ಲಿ ಅಲೆಗಳು ಶಾಂತವಾದ ಮೇಲೆ, ನದಿ ನಿಶ್ಚಲವಾಗುತ್ತದೆಯೋ ಮತ್ತು ಅಲ್ಲಿ ಕೇವಲ ನೀರು ಮಾತ್ರ ಅಖಂಡವಾಗಿರುತ್ತದೆಯೋ, ಅದೇ ರೀತಿ ನಾನಾಪ್ರಕಾರದ ಭಿನ್ನ-ಭಿನ್ನ ಭಾವನೆಗಳು ನಷ್ಟವಾಗಿ, ಕೇವಲ ಚೇತನಸ್ವರೂಪ ಆತ್ಮತತ್ವ ಮಾತ್ರ ಉಳಿಯುತ್ತದೆ. ಆ ಸ್ಥಳದಲ್ಲಿ ಶೂನ್ಯ, ಅಜ್ಞಾನ ಇತ್ಯಾದಿಗಳ ಕಲ್ಪನೆಯೂ ಇರಲಿಕ್ಕೆ ಶಕ್ಯವಿಲ್ಲ. ಅಲ್ಲಿ ಶೂನ್ಯ, ಅಜ್ಞಾನ ಮುಂತಾದ ಶಬ್ದಗಳ ಪ್ರಯೋಜನದ ಅಭಾವವೇ ಪ್ರಕಟವಾಗುತ್ತದೆ. ಅಹಂಸ್ಫೂರ್ತಿ ಲಯವಾದ ಮೇಲೆ ಸ್ಫೂರ್ತಿರಹಿತ ಕೇವಲ ‘ನಾನು’ ಮಾತ್ರ ಉಳಿಯುತ್ತದೆ. ಅಲ್ಲಿ ಆಗ ಶೂನ್ಯತೆ ಅಥವಾ ಅಜ್ಞಾನ ಇವುಗಳ ಕಲ್ಪನೆಯ ಸಂಭವವೇ ಇರುವದಿಲ್ಲ. ಸ್ವರೂಪದ ವರ್ಣನೆ ಇಷ್ಟು ಸ್ಪಷ್ಟವಿರುವಾಗ ಶೂನ್ಯ, ಅಜ್ಞಾನ ಇತ್ಯಾದಿ ಶಬ್ದಗಳ ಅರ್ಥವೇ ನಿರರ್ಥಕವಾಗುತ್ತದೆ. ಏಕಮೇವ ಬ್ರಹ್ಮಾಭಿನ್ನ ಆತ್ಮಸ್ವರೂಪವೇ ಅನುಭವಗಮ್ಯವೆಂದು ಸ್ವತಃಸಿದ್ಧವೇ ಆಗಿದೆ.
(ಈ ಪತ್ರದ ಎರಡನೆಯ ಭಾಗ ಮುಂದುವರಿಯುವದು)

RELATED ARTICLES  ಬಿಜೆಪಿಗರನ್ನು ಆಡಿಸುತ್ತಿರುವ ಮೇಲಿನವ !