ನಮಸ್ಕಾರ ನನ್ನವರಿಗೆ..ತಡವಾಗಿ ವಂದಿಸುತ್ತಿದ್ದೇನೆ..ಹಾಗೇ ನಿಮ್ಮವನೆಂದು ಕ್ಷಮಿಸಿ..ನನ್ನೊಡನೆ ನಿಮ್ಮ ಬಾಲ್ಯದೆಡೆ ನಡೆಯೋಣ ಬನ್ನಿ..

ಮಂದಗತ್ತಲಿನ ದೀಪಾವಳಿ..ನಮಗೆ ಎಷ್ಟು ಖುಷಿ ಕೊಡುತ್ತಿತ್ತೆಂದರೆ..ಹೇಳತೀರದು.ದೀಪಾವಳಿಯಲ್ಲಿ..ಹೊಟ್ಟದ ಪಟಾಕಿಯನ್ನೆಲ್ಲ ಹೆಕ್ಕಿ..ಅದರಲ್ಲಿಯ ಮದ್ದು ಉದುರಿಸಿ..ಪೊಟ್ಳೆಮಾಡಿ..ಇಡುತ್ತಿದ್ದೆವು..ಕಾಗದದ ಸುರುಳಿಮಾಡಿ ಅದರೊಳಗೆ ತುಂಬಿ..ಉದ್ದದ ಸಪೂರ ಸುರ್ ಬತ್ತಿ ಮಾಡುತ್ತಿದ್ದೆವು..ಕಾಗದದಲ್ಲಿ ಕಲ್ಲಗುಂಡು ಹಾಕಿ ಮದ್ದುಹಾಕಿ ನೆಲಗುಮ್ಮ ಮಾಡಿ ಕಂಡಕಂಡ ಕಲ್ಲಿಗೆ ಹೊಡೆದದ್ದು ನೆನಪಿದೆ..ಮಳ್ಶಿಕೇರಿ ಶಾಲೆಗೆ ಹೋಗುವಾಗ..ಒಂದು ಜೈನ ಶಾಸನದ ಕಲ್ಲು ನಿಲ್ಲಿಸಿತ್ತು..ಈಗಲು ಇದೆ.ಅದಕ್ಕೆ ನೆಲಗುಮ್ಮ ಹೊಡೆದು..ಯಾಕೋ ಹೆದರಿ ರಾತ್ರಿ ಹಸೆಯಲ್ಲಿ ಉಚ್ಚಿಹೊಯ್ದು..ಕೋಟನ ಗಣೇಶಜ್ಜನ ಅಕ್ಕಿ ಮಂತ್ರಿಸಿಕೊಂಡು ಬಂದದ್ದು ನೆನಪಿದೆ.ಆಗ ಕೇಪು ಹೊಡೆಯುವುದು ದೊಡ್ಡ ಸಾಹಸ…ಹೊಳ್ಳಿಕಟ್ಟೆ ತುದಿಗೆ ಇಟ್ಟು ಕವಳಕುಟ್ಟು ಗುಂಡಿನಿಂದ ಜಪ್ಪಿ ಹೊಟ್ಟೊಸಿ ಬಯ್ಸಿಕೊಂಡ ನೆನಪಿದೆ..ಆರಾಮಕುರ್ಚೆಯ..ನಟ್ ..ಬೋಲ್ಟ ತೆಗೆದು..ಅದರ ಮದ್ಯದಲ್ಲು ವಾಯ್ಸರ್ ಹಾಕಿ ಅದರ ಮದ್ಯದಲ್ಲಿ ಕೇಪ್ ಸಿಕ್ಕಿಸಿ ಬಿಗಿಮಾಡಿ..ಕಲ್ಲಿಗೆ ಹೊಡೆದರೆ ಅದರ ಮಜವೇ ಬೇರೆ..ಎದುರುಮನೆ ದೊಡ್ಡಪ್ಪ..ಕೇಪ್ ಹೊಡೆಯಲು ಪಿಸ್ತೂಲು ತಂದಿದ್ದ..ಅದರಲ್ಲಿ ಕೈಬೆರಳು ಹಾಕಿ ಅಡಚಿಕೊಂಡ ನೋವು ಈಗಲೂ ನೆಪಾಗುತ್ತದೆ.ಒಂದು ಕೇಪಿನ ಸಣ್ಣ ರಟ್ಟಿನ ಡಬ್ಬಿ..ಪಾಟಿಚೀಲದಲ್ಲಿ ಕಾಯಮ್.ಹಾಗೆ ಹೀಗೆ ತೊಳಸಿಹಬ್ಬ ಹತ್ತಿರವಾಗುತ್ತಿತ್ತು..ಚಡ್ಡಿಕಿಸೆಯಲ್ಲಿಟ್ಟ ಕೇಪು ನೆನಕಟೆ ಆಗಿಬಿಡುತ್ತಿತ್ತು..ತೊಳಸಿ ಹಬ್ಬ ಇದ್ದದ್ದರಲ್ಲಿ ಚೆಂದ..ದೊಡ್ಡಪ್ಪನ ಮನೆಯಲ್ಲಿ ಕರೆಂಟಿತ್ತು..ನಮ್ಮನೆಲಿ ಇರಲಿಲ್ಲ..ನಮಗೆಲ್ಲರಿಗೂ ಒಂದೇ ತೊಳಸಿಕಟ್ಟೆ..ನನ್ನಪ್ಪನದೇ ಪೂಜೆ..ನಾಲ್ಕರು ಕಬ್ಬಿನ ತುಂಡನ್ನು ಯಾರಾದರು ತಂದು ನಿಲ್ಲಿಸುತ್ತಿದ್ದರು..ಮಾಯ್ನತುಂಕೆ ತೋರಣ..ಶೆಮೆಬೆದರು ಶಿಗಿದು ಅದರಿಂದ ತೊಳಸಿಗೆ ಮಂಟಪ..ಕಬ್ಬು..ಅಡಕೆಹುಸಿ..ಎಲ್ಲದನ್ನು ಮಂಟಪಕ್ಕೆ ಕಟ್ಟಿದ್ದು ನೆನಪಿದೆ..ಆದಿನ ಹಬ್ಬ ಸಂಜೆನಂತರವಾದರೂ..ಶಾಲೆಗೆ ಯಾರೂ ಹೋಗಿದ್ದು ಕಡಿಮೆ.ಹಬ್ಬದ ಹೆಳೆ..ನಾವು ಶಾಲೆಗೆ ಬಿಲ್ಕುಲ್ ಹೋಗುತ್ತಿರಲಿಲ್ಲ.ತುಳಸಿ ಹಬ್ಬಕ್ಕೆ ಮಾಡುವ ಕಜ್ಜಾಯ ಕೇಳಿದರೆ ಕಂಗಾಲಾಗುತ್ತೀರಿ..ಅವಲಕ್ಕಿ ಕಮ್ಮಯ್ಯ..ಒಂದೇ ತೊಳಸಿಕಟ್ಟೆ..ನಾಲ್ಕು ಮನೆ..ಅವಲಕ್ಕಿ ನೈವೇದ್ಯ..ಒಂದೇ ಅಂಗಳದಲ್ಲಿ..ನೆಲಚಕ್ರ..ಕೋಡು..ಮದ್ದನಸಾಮಾನು ಹಚ್ಚುವುದು..ನಮ್ಮನೆಲಿ ಸಣ್ಣ ಸುರುಸುರುಕಡ್ಡಿ..ಪಾಕೀಟು…ಎರಡು ನೆಲಚಕ್ರ..ಎರಡು ಸಣ್ಣ ಕೋಡು..ಎರಡು ಹಗಲಬತ್ತಿ ಪೆಟ್ಟಿಗೆ..ಎರಡು ಹಾವಿನ ಗುಳಿಗೆ..ಐದೈದು ವಾಲೆಪಟಾಕಿ..ಒಂದು ಲಕ್ಷ್ಮಿ ಪಟಾಕಿ..ಒಂದು ಹುಲಿ ಚಿತ್ರದ ಧಡಾಕಿ..ದೀಪಾವಳಿಗೆ ತಂದು ಉಳಿದ ಅರ್ದ ಪೆಕೆಟ್ ಮೇಣದಬತ್ತಿ..ಇದರಿಂದಲೇ ನಮ್ಮನೆ ತೊಳಸಿ ಹಬ್ಬ .‌ಅದರಲ್ಲಿಯೂ ನಮಗೆ ಬೇಕಾದರೆ ಉಳಿಸಿಕೊಂಡರೆ ಗಂಟಿಹಬ್ಬಕ್ಕೆ..ಇದ್ದರೆ ಮದ್ದಿನಸಾಬ…ಇಲ್ಲಾ ಖಾಲೀ ಜಮಟೆವಾದಕರೇ..ಶಣ್ಣಜ್ಜನ ಮನೆಯ ತಳಿಗೆ ತುಂಬ ಮೇಣದಬತ್ತಿ ಹಚ್ಚುತ್ತಿದ್ದರು.ನಮಗಮನೆಯಲ್ಲಿ ಅಪ್ಪ ಲೆಕ್ಕಮಾಡಿ ಒಬ್ಬೊಬ್ಬರಿಗೆ ನಾಲ್ಕು ಮೇಣದಬತ್ತಿ ಕೊಡುತ್ತಿದ್ದ..ಅದರಲ್ಲಿಯೇ ಕಂಜೂಷಿಮಾಡಿ ಕೈಯಲ್ಲೊಂದು ಹಿಡಿದು ಆಡುತ್ತಿದ್ದೆವು..ಯವತ್ತುಸಲ ನಂದಿಸಿ..ಹಚ್ಚಿ..ಸುಮ್ಮನೇ ಕರಗಿಹೋಗುತ್ತಿತ್ತು..ಅಂಗಳದಲ್ಲಿ..ಪೂಜೆಗೆ ತಾಸು ಇರುವಾಗಲೇ..ನಮ್ಮ ಹಠ ಶುರು..ಅಪ್ಪ ನಮಗೆ ಹೀರೋ..ಅವ ಮಡಿ ಉಟ್ಟಮೇಲೆ ಕಪಾಟಿನಿಂದ ಮದ್ದನಸಾಮಾನು ತೆಗೆದು ಪಾಲುಮಾಡಿ ಕೊಡುವುದು.
ಅಷ್ಟರಲ್ಲಿ ತೀಡೀ..ಬಡದೀ..ಎಲ್ಲಾ ಆಗಿ..ಆಯಿ..”ಆ ಪೊಟ್ಳೆ ಮಕ್ಳ ತಲೆಮೇಲೆ ಜರಿರಿ..” ಎಂದು ಬೈದರೂ ಅದು ನಮಗೆ ಖುಷಿಯೇ..ಏಕೆಂದರೆ ಅಪ್ಪ ಬೇಗ ಕೊಡುತ್ತಿದ್ದ..ತಳಿಗೆ ಮೇಣದಬತ್ತಿ ಹಚ್ಚುವಾಗ ಮತ್ತೊಂದು ನಂಬ್ರ..ನೀ ಮೊದಲು ಹಚ್ಚು ಎಂದು..ಏಕೆಂದರೆ ಒಂದು ಮೇಣದಬತ್ತಿ ಉಳಿಸುವ ಉಪಾಯ ನಮ್ಮದು.ಆಗೆಲ್ಲ ಗ್ಯಾಸ ಇಲ್ಲ..ಅಡಿಗೆ ಕಟ್ಟೆ ಇಲ್ಲ..ಒಲೆಕಟ್ಟೆಮೇಲೆ ಮದ್ದನ ಸಾಮಾನು..ಇಟ್ಟು ಬಿಸಿಮಾಡಿಕೊಳ್ಳುತ್ತಿದ್ದೆವು.ಅದೂ ಅಪ್ಪಕೊಟ್ಟಮೇಲೆ.

RELATED ARTICLES  ಬೇಲಿಯಂತೆ ಕಟ್ಟು ಪಾಡಿನ ಜೀವನ

ಇಡುವಲ್ಲಿ ಹೆಚ್ಚುಕಮ್ಮಿಯಾಗಿ ಒಮ್ಮೆ ಹಾವಿನ ಗುಳಿಗೆ ಹೊಡಚಿ ಒಲೆಗೆ ಬಿದ್ದದ್ದಿದೆ..ಒಬ್ಬರದು ಒಂದು ಬಿದ್ದರೆ..ಇನ್ನೊಬ್ಬರು ಒಂದೇ ಹಚ್ಚಬೇಕು..ಇಲ್ಲವಾದರೆ ಮತ್ತೆ ನಂಬ್ರ.ಗೊತ್ತಾಗದೇ ಆಯಿ ಒಂದು ಹಗಲಬತ್ತಿ ಗೀರಿ ದೇವರದೀಪ ಹಚ್ಚಿದ್ದಕ್ಕೆ ಹೊಸಾ ಪೆಟ್ಟಿಗೆ ತಂದುಕೊಟ್ಟದ್ದು..ಈಗಲೂ ಹೇಳುತ್ತಾರೆ..ನಾನು ನಂಬ್ರದ ಕೋಳಿ..ಎಲ್ಲದಕೂ..ಜಗಳವೇ.ಅಂಗಳದಲ್ಲಿ ಅಪ್ಪ ಒಳಗಿಂದ ಗೆಂಟೆಬಾರಿಸುತ್ತ..ಹೊರಗೆ ಬಂದಕೂಡಲೆ ಹಬ್ಬ ಶುರು.ಅಂಗಳದ ತುದಿಗೆ ಹೋಗಿ ಒಂದು ಧಡಾಕಿಸರ ಹೊಡೆಯುತ್ತಿದ್ದ..ಶಣ್ಣಜ್ಜನ ಮನೆ ಆಳು.ಅದು ಪೂಜೆಗಾಯಿತು ಎನ್ನುವ ಸೂಚನೆ.ಮನೆಹಿತ್ಲ ಹಳ್ಳಸ ಸಂಕದ ಹತ್ತಿರ ಹೋಗಿ ಕೂ…..ಹಾಕಿದರೆ ಗೌಡರಕೇರಿಗೆ ಕರ್ಯ..ಕೊಟ್ಗೆ ಗೊಬ್ಬರಕುಳಿ ಹತ್ತಿರ ಹೋಗಿ ಕೂ….ಹಾಕಿದರೆ ಹಸ್ಲಕೇರಿಗೆ ಕರ್ಯ..ಬಹುತೇಕ ಎಲ್ಲರೂ ಓಡಿ ಬರುತ್ತಿದ್ದರು ಪೂಜೆಗೆ..ಒಡೆಯನ ಮನೆ ಪೂಜೆ..ನಾವು ಹೊಡೆದ ಪಟಾಕಿಯ ಸಪ್ಪಳವೇ ಅವರಿಗೆ ಹಬ್ಬದ ಖುಷಿ ಕೊಡುತ್ತಿತ್ತು.ಕೋಡು ಹಚ್ಚಿದಾಗ ದೂರನಿಂತು ನೋಡುತ್ತಿರುವ ಅವರ ಮುಖಗಳಮೇಲೆ ಬಿದ್ದ ಬಣ್ಣಬಣ್ಣದ ಬೆಳಕಿನಿಂದ ಅರಳಿದ ಕಣ್ಣುಗಳಲ್ಲಿಯ ಹಬ್ಬದ ಸಂತಸ ಈಗಲೂ ಅಳುವಂತೆ ಮಾಡಿ ಹಬ್ಬಕ್ಕಿಂತ ಹಬ್ಬದ ನೆನಪೇ ಖುಷಿಕೊಡುತ್ತದೆ…ನಮಗೆ ನೈವೇದ್ಯದ ಅವಲಕ್ಕಿಯ ಮೇಲೇ ಕಣ್ಣು..ನಾಲ್ಕುಮನೆಯ ಅವಲಕ್ಕಿಯಲ್ಲಿ..ಅವತ್ತಿನ ಊಟ ಇರುತ್ತಿರಲಿಲ್ಲ.ಪಾಪ ಇತರೆಜನರ ಮಕ್ಕಳೆಲ್ಲ ಬರುವಾಗ..ಬಾಳೆಕೀಳೆ ತರುತ್ತಿದ್ದರು..ಅವರ ಮನೆಗೆ ಬಂದ ನೆಂಟರನ್ನೂ ಕರೆದುಕೊಂಡು ಬರುತ್ತಿದ್ದರು..ಅವರಿಗೂ ಅದೇ ಊಟ…ನಮ್ಮನೆ ಅಂಗಳದಲ್ಲಿಯ ಹಬ್ಬದ ಸುದ್ದಿ..ಊರೆಲ್ಲ ಹರಡುವವರು ಒಕ್ಕಲಮಕ್ಕಳೇ..ಅವರಿಗೆ ಅದು ತಮ್ಮಮನೆಯ ಹಬ್ಬ ಎನಿಸುತ್ತಿತ್ತು….

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ

ಬೆಳಿಗ್ಗೆ ಎದ್ದು ತಳಿಮೇಲಿನ ಮೇಣ ಕೆರೆಸಿ ಒಟ್ಟಮಾಡುವುದು..ಹೊಟ್ಟದ ಪಟಾಕಿ..ಸುರ್ ಕಡ್ಡಿಯ ಸರಿಗೆ..ಇವೆಲ್ಲ ನಮ್ಮ ಪಾಟಿಚೀಲ ಸೇರುತ್ತಿತ್ತು..
ಇಂದು……..ಟೈಲ್ಸನ ನಡುವೆ ಹೊಳೆವ ತುಳಸಿಕಟ್ಟೆ..ಸಾವಿರ ದುಡ್ಡಿನ ಪಟಾಕಿ..ಬಲ್ಬಿನ‌ಸರ..ಆದರೆ..ಖುಷಿ.ಕತ್ತಲುಸೇರಿದೆ..ಯಾಕೆಂದರೆ ಆಡಿಕುಣಿವ ಮಕ್ಕಳೆಲ್ಲ..ಹಾಸ್ಟೆಲ್ನಲ್ಲಿ..ಜೈಲು..ಊಟ ಉಣ್ಣುತ್ತಿದ್ದಾರೆ..

ನಮಸ್ಕಾರ ಅಂದು ನೋವಿಗೆ ಸಂತಸದ ಹಬ್ಬ..ಇಂದು ಸಂತಸದ ನೋವಿನ ಹಬ್ಬ.

ತಿಗಣೇಶ ಮಾಗೋಡು.