ನಮ್ಮ ಸ್ವರೂಪದ ಒಂದು ಕ್ಷಣದ ಪ್ರಮಾದವೂ ಕೂಡಾ ಭಯಂಕರ ಹಾನಿಕಾರಕವಾಗುತ್ತದೆ. ಸ್ವರೂಪಸ್ಥಿತಿಯಲ್ಲಿ ಒಂದು ಮಿಥ್ಯಾ – ಕಾಲ್ಪನಿಕ ಬಹಿರ್ಮುಖತೆಯ ಯಾವ ಆಭಾಸವಾಗುತ್ತದೆಯೋ, ಅದು ಜೀವಭಾವದ ಮೂಲಕಾರಣವಾಗಿದೆ ಎಂಬುದನ್ನು ಲಕ್ಷದಲ್ಲಿಡಬೇಕು.
(ಮಾತೋಶ್ರೀ ಸಾವಿತ್ರಿ ಭಾಗವತ, ವಾರಣಾಸಿ, ಇವರಿಗೆ ಬರೆದ ಪತ್ರದ ಮುಂದುವರಿದ ಭಾಗ)
— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
ಸ್ಫೂರ್ತಿ, ಸ್ಮೃತಿ ಮುಂತಾದ ರೂಪದಿಂದಾಗಿ, ಯಾವುದು ‘ದೇಹೋಹಮ್’ ಸುಳಿವಿನಲ್ಲಿ ಕುಣಿಯುತ್ತಿದೆಯೋ, ಆ ಚಂಚಲ ಮಾಯೆಯ ಆಭಾಸ ಇಲ್ಲವಾದ ಮೇಲೆ ಅಥವಾ ಆಭಾಸವಿದ್ದರೂ ಯಾವುದು ನಿನ್ನ ನಿತ್ಯ, ನಿಜ, ನಿರಾಭಾಸ, ನಿರ್ವಿಕಲ್ಪ ಸ್ವರೂಪವಿದೆಯೋ ಅದು, ಹೇಗಿದೆಯೋ ಹಾಗೇ ಇರುತ್ತದೆ.
ಮಗಳೇ! ಜನ್ಮ-ಮರಣ, ಶೋಕ-ಮೋಹ, ಆಧಿ-ವ್ಯಾಧಿ ಮುಂತಾದ ಮಾಯಾಪ್ರಪಂಚ ನಿನ್ನಲ್ಲಿ ಇಲ್ಲ. ಸ್ವಪ್ನದಲ್ಲಿಯ ದೃಶ್ಯ ಎಚ್ಚೆತ್ತ ಮೇಲೆ ಹೇಗೆ ಮಿಥ್ಯೆಯೆಂದಾಗುವದೋ, ಅದೇ ರೀತಿ ಇಲ್ಲಿಯ ಎಲ್ಲ ವ್ಯವಹಾರ ಮಿಥ್ಯೆಯಾಗಿದೆ. ಅಷ್ಟೇ ಅಲ್ಲದೇ ಉಪಾಸನೆ-ಉಪಾಸಕ, ಗುರು-ಶಿಷ್ಯ, ಬಂಧ-ಮೋಕ್ಷ ಮುಂತಾದೆಲ್ಲವೂ ಸ್ವಪ್ನದಲ್ಲಿಯ ದೃಶ್ಯದಂತೆಯೇ ಇದೆ ಎನ್ನುವವರೆಗೂ ಮಿಥ್ಯತ್ವದ ಸೀಮೆಯಿದೆ. ನಿತ್ಯ ಸಚ್ಚಿತ್ಸುಖ ಸ್ವರೂಪದ ಜ್ಞಾನಮಯ ಜ್ಯೋತಿ ನಿನ್ನ ಹೃದಯದಲ್ಲಿ ಪ್ರಜ್ವಲಿತವಾಗಿರಬೇಕು. ಕೆಲ ಜನರಿಗೆ ಜ್ಞಾನಪ್ರಾಪ್ತಿಯಾದರೂ ಉಪಾಸನೆ ಮತ್ತು ಗುರುಸೇವೆಯ ವಾಸನೆ ಉಳಿದೇ ಇರುತ್ತದೆ. ಉಪಾಸ್ಯ ಮತ್ತು ಗುರು ಇವು ನಮ್ಮ ಆತ್ಮದಿಂದ ಅಭಿನ್ನವಾಗಿದೆಯೆಂಬ ದೃಢನಿಶ್ಚಯ ಆದಮೇಲೆ ಅದು ಬಾಧಕವಾಗುವದಿಲ್ಲ.
ನಮ್ಮ ಹೃದಯದಲ್ಲಿ ನಿರಂತರ ಅಭೇದದ ಜ್ಞಾನ ಹೊಳೆಯುತ್ತಿರಬೇಕು. ಆತ್ಮಸಾಕ್ಷಾತ್ಕಾರ ಈ ಅಂತರ್ವೃತ್ತಿಯ ಮೂಲಕವೇ ಆಗುತ್ತಿರುತ್ತದೆ. ಹಾಗಾಗಿ, ಹೃದಯದಲ್ಲಿ ಉದ್ಭವಿಸುವ ವೃತ್ತಿ ಹೃದಯದಲ್ಲೇ ನಿಗ್ರಹಿಸಿ, ಅಡಿಗಡಿಗೆ ಆ ವೃತ್ತಿಯ ಲಯವನ್ನು ಆತ್ಮದಲ್ಲಿ ಮಾಡುವ ಅಭ್ಯಾಸ ನಿರಂತರ ಮಾಡಬೇಕು. ನಮ್ಮ ಸ್ವರೂಪದ ಒಂದ ಕ್ಷಣದ ಪ್ರಮಾದವೂ ಕೂಡಾ ಭಯಂಕರ ಹಾನಿಕಾರಕವಾಗುತ್ತದೆ. ಸ್ವರೂಪಸ್ಥಿತಿಯಲ್ಲಿ ಒಂದು ಮಿಥ್ಯಾ – ಕಾಲ್ಪನಿಕ ಬಹಿರ್ಮುಖತೆಯ ಯಾವ ಆಭಾಸವಾಗುತ್ತದೆಯೋ, ಅದು ಜೀವಭಾವದ ಮೂಲಕಾರಣವಾಗಿದೆ ಎಂಬುದನ್ನು ಲಕ್ಷದಲ್ಲಿಡಬೇಕು. ವೃತ್ತಿ, ಬಾಹ್ಯಪದಾರ್ಥದ ಆಸಕ್ತಿಗಳನ್ನು ಹಿಡಿಯುವದರಿಂದ ಚಿಜ್ಜಡ ಮೇಲೇಳುತ್ತದೆ. ಅದನ್ನೇ ಚಿಜ್ಜಡಗ್ರಂಥಿ ಎಂದೆನ್ನುತ್ತಾರೆ.
ನಿನ್ನದೇ ಪ್ರಿಯ ಆತ್ಮ
ಶ್ರೀಧರ