ಶ್ರೀಗುರು, ದೇವ-ದೇವತಾ ಮತ್ತು ಪಿತೃತುಲ್ಯ ವ್ಯಕ್ತಿಗಳ ಆಶೀರ್ವಾದದಿಂದ ನಿಮ್ಮೆಲ್ಲರ ಜೀವನ ದಿವ್ಯವಾಗಲಿ! ಆ ಜೀವನ ಉಳಿದವರಿಗೆಲ್ಲ ಆದರ್ಶವಾಗಲಿ!
(ಎಲ್ಲ ಶಿಷ್ಯರಿಗೆ – ಭಕ್ತರಿಗೆ ಸ್ವಾಮಿಗಳ ಪತ್ರ)
— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
||ಶ್ರೀರಾಮ ಸಮರ್ಥ||
ಮಹಾಬಳೇಶ್ವರ
ವೈ.ಶು.೨, ಸೋಮವಾರ
ಆಶೀರ್ವಾದ,
ಮಕ್ಕಳೇ! ನಿರೂಪಿಸಿದ ಜಪ ಮಾಡುತ್ತಿದ್ದೀರಲ್ಲವೇ? ಮನೋಭೂಮಿಕೆ ಉನ್ನತವಾಗಹತ್ತಿದೆಯಲ್ಲಾ? ನಿಮ್ಮ ಆಚಾರ-ವಿಚಾರ ಉಚ್ಚಕೋಟಿಯದಾಗಿದೆಯಲ್ಲಾ? ನಿಮ್ಮ ಸಾನಿಧ್ಯದಲ್ಲಿಯ ಜನರೂ ನಿಮಗೆ ಈಗ ಮೊದಲಿಗಿಂತ ಹೆಚ್ಚು ಮನಃಪೂರ್ವಕ ಶ್ಲಾಘನೆ ಮಾಡುತ್ತಿದ್ದಾರಲ್ಲಾ? ನಿಮ್ಮ ನಿತ್ಯದ ಆಚರಣೆಯಿಂದ ಉಳಿದವರಿಗೆ ದಿವ್ಯ ಜೀವನದ ಪಾಠ ಸಿಗುತ್ತಿದೆಯಲ್ಲಾ? ನಿಮ್ಮ ನಡೆ-ನುಡಿ ಎಲ್ಲ ಆಚರಣೆ ಸವಿಯಾಗಿರುವದಲ್ಲಾ? ಪವಿತ್ರ ಆಚರಣೆ ಮತ್ತು ಮಧುರ ಸ್ವಭಾವ ಇವೇ ಆದರ್ಶ ಮನುಷ್ಯ ಜೀವನದ ನಿಜ ಓರೆಗಲ್ಲು.
ತಾಯಿ -ತಂದೆ – ಕುಲಪುರೋಹಿತ – ಸದ್ಗುರು – ಗೋ – ಬ್ರಾಹ್ಮಣ – ಕುಲಧರ್ಮ – ಕುಲಾಚಾರ – ದೇವ ದೇವತಾ – ಮಾನ್ಯ ವ್ಯಕ್ತಿ ಈ ಎಲ್ಲ ಸ್ಥಾನಗಳಲ್ಲಿ ಆದರವಿಡುವದು ಅಭ್ಯುದಯದ ಲಕ್ಷಣವಾಗಿದೆ. ತಾಯಿ-ತಂದೆ ಮೊದಲಾದ ಜ್ಯೇಷ್ಟ ವ್ಯಕ್ತಿಗಳನ್ನು ನಮ್ಮ ಸೇವೆಯಿಂದ ಸಂತುಷ್ಟವಾಗಿಟ್ಟು, ಅವರ ಆಶೀರ್ವಾದಕ್ಕೆ ಪಾತ್ರರಾಗಬೇಕು. ಅವರ ಆಶೀರ್ವಾದದಿಂದ ಮನುಷ್ಯನಿಗೆ ಸರ್ವೋತ್ಕ್ರಷ್ಟ ಜೀವನದ ಪ್ರಾಪ್ತಿಯಾಗುತ್ತದೆ. ಮಡಿ ಪಾವಿತ್ರ್ಯದ್ಯೋತಕವಾಗಿದೆ. ಶ್ರೀಸದ್ಗುರು ಉಪಾಸನೆ ಮತ್ತು ಹಿರಿಯ ವ್ಯಕ್ತಿಗಳ ಸೇವೆಯಲ್ಲಿ ಇರುವಾಗ ಪಾವಿತ್ರ್ಯದಲ್ಲಿದ್ದಾಗ ಅವರಿಗೆ ಹೆಚ್ಚಿನ ಮೆಚ್ಚುಗೆಯಾಗುತ್ತದೆ.
ಶ್ರೀಗುರು, ದೇವ-ದೇವತಾ ಮತ್ತು ಹಿರಿಯ ವ್ಯಕ್ತಿಗಳ ಆಶೀರ್ವಾದದಿಂದ ನಿಮ್ಮೆಲ್ಲರ ಜೀವನ ದಿವ್ಯವಾಗಲಿ. ಆ ನಿಮ್ಮ ಜೀವನ ಉಳಿದವರಿಗೆಲ್ಲ ಆದರ್ಶವಾಗಲಿ.
||ಸರ್ವೇ ಜನಾಃ ಸುಖಿನೋ ಭವಂತು||
ಇತಿ ಶಮ್
ಶ್ರೀಧರ ಸ್ವಾಮಿ