ತಿಗಣೇಶ ಮಾಗೋಡು

ನಮಸ್ಕಾರ ನನ್ನವರೇ..ಮತ್ತೆ ಬಂದೆ ತಿಗಣೇಶ.ನನ್ನೊಳಗಿನ ನೆನಪುಗಳನ್ನು ಹೊತ್ತು..

ತೊಳಸಿ ಹಬ್ಬದ ಅವಲಕ್ಕಿ..ಬಹುತೇಕ ಎಲ್ಲರ ಒಂದುಹೊತ್ತಿನ ಊಟ ತಪ್ಪಿಸುತ್ತಿತ್ತು..ಮರುದಿನ ನಮ್ಮ ಕೇರಿಯಲ್ಲಿ ಒಬ್ಬಿಬ್ಬರಿಗಾದರೂ..ಉಚ್ಚಾಟ.ಬಾಟ್ಳೆ ಹಿಡಿದು ಹೈಗುಂದ ಡಾಕ್ಟರ ಮನೆಗೆ..ಹೋಗೋದೇ ಆಗಿತ್ತು.ಆಗ ಔಷಧ ಅಂದರೆ‌ ಕೆಂಪಿ ನೀರು..ಬಾಟ್ಳೆಗೆ ಕಾಗದ ಕತ್ತರಿಸಿ ಹಚ್ಚಿ ಅಳತೆಯಂತೆ ಕೊಡುವ ಗುರುತು ಮಾಡುತ್ತಿದ್ದರು..ಕೆಲವರಿಗೆ ನೆನಪಿರಬಹುದು..ಹುಳು ಔಷಧಿ..ಅಂದರೆ ಒಂದ ನಮನಿ ಹುಡಿ..ರಾತ್ರೆ ಕುಡಿದು ಮಲಗಿದರೆ..ಮರುದಿನ ಹುಳ..ಕೆಲವು..ಗುಡ್ಡೆಗೆ ಹೋದಾಗ ಬಿದ್ದರೆ..ಕೆಲವು ಶಾಲೆಗೆ ಹೋದಾಗ ಅಲ್ಲಿಯೇ ಚಡ್ಡಿಯಲ್ಲಿ ಹಿಂದಿನಿಂದ ತೆವಳುತ್ತ ಹೊರಗೆ ಬಂದಿದ್ದಿದೆ….ಹಾವು ಎಂದು ಕೆಲವರು ಕೋಲು ತಂದು ಹೊಡೆದು..ಅಡಿಗ ಮಾಸ್ತರು..ಕಂಡು ಈರ..ಜಟ್ಟಿಗೆ..ಹೊಡೆದದ್ದು ನೆನಪಿದೆ.ಈಗೆಲ್ಲ ಕರಗಿ ಹೋಗುತ್ತವೆಯಂತೆ.ಇರಲಿ..ನಾಲ್ಕನೇ ದಿನಕ್ಕೆ ಗಂಟಿಹಬ್ಬ. ಮುಂಚಿನ ದಿನ..ಅಂಗಳದಿಂದ ಕೊಟ್ಗೆವರೆಗೆ ಕೊಳಚು ಬರೆವುದು ವಾಡಿಕೆ..ಬಾಳೆಕೈ..ಸೊಗೆದು ತಂದು ಅದರಲ್ಲಿ ಅಡಿಕೆ ಹುಸಿ.ವನಮಾಲೆ ಹೂವು..ಎಲೆ..ಶಿಂಗಾರ..ಚಪ್ಪೆ ದೋಸೆ ಚಾಟಿ..ಹಾಕಿ ಕಟ್ಟಿಮಾಲೆ ಮಾಡುತ್ತಿದ್ದರು. ಗಂಟಿ ಹಬ್ಬದ ದಿನ..ಎಲ್ಲರಿಗಿಂತ ಮೊದಲು ಎದ್ದು ತೊಳಸಿಕಟ್ಟೆಗೆ ನಿಲ್ಲಿಸಿದ ಕಬ್ಬು ತೆಗೆಯುವದು..ಒಂದು ಹೋರಾಟ. ಬೆಳಗಾಮುಂಚೆ..ಕೊಟ್ಟಿಗೆಗೆ ಹತ್ತುಸಲ ಓಡಾಡುತ್ತಿದ್ದೆವು..ಮಣೆ..ಪೂಜೆಸಾಮಾನು..ದೀಪ ಇಟ್ಟ ಕೊಳಗ..ಎಲ್ಲ ಸಾಗಿಸುವುದು ನಾವೆ..ಪೂಜೆಗೆ ಶುರುವಾಗುತ್ತಿದ್ದಂತೆ..ಗೊಬ್ಬರಕುಳಿ ಬುಡದಲ್ಲಿ ಧಡಾಕಿ ಹೊಡೆದು ಎಲ್ಲರನ್ನು ಕರೆಯುತ್ತಿದ್ದರು..ಕೊಳಚಿಗೆ ನೀರು ಹಾಕಿ..ಚಂದ್ರಕಾಯಿ..ಶೇಡಿ ಕರಡಿ ಮಾಡಿದ ಸಿದ್ದೆಯಲ್ಲಿ ಹುಬ್ಬ ಹಾಕಿ..ಕೋಡಿಗೆ ಶೇಡಿ ಬಡಿದು ದನಕರುಗಳನ್ನು ಸಿಂಗರಿಸುವುದು..ಗೆರಸಿಯಲ್ಲಿಟ್ಟ..ವನಮಾಲೆಯನ್ನು ಎಲ್ಲ ಗಂಟಿಗೆ ಕಟ್ಟುತ್ತಿದ್ದರು.ಹೊರ್ಕಲಿ ಗಂಟಿಗೆ ಹೆಚ್ಚಿಗೆ ಅಡಿಕೆ ಸರ..ಹಿರಿಯ ದನುವಿಗೆ ಕಾಯಿಕಡಿ ಕಟ್ಟುತ್ತಿದ್ದರು..ನಾಗು ಗಂಟಿಕಾಯುವವ..ಕಾಯಿಕಡಿ ಅವನಿಗೆ ಸಲ್ಲುತ್ತಿತ್ತು..ಪೂಜೆ ಮಾಡಿ ಗೋಗ್ರಾಸ ಕೊಟ್ಟು ಗಂಟಿ ಬೆಚ್ಚುವುದು ಪದ್ದತಿ.ಎಲ್ಲ ಗಂಟಿಯ ಕಣ್ಣಿ ಕಳಚಿ..ಕೊಟ್ಟಿಗೆ ಒಳಗೆ ಹೋಗಿ ಜವಟೆ ಬಾರಿಸುತ್ತಿದ್ದೆವು..ಆಗ ಹೊರಬೀಳುವ ಗಂಟಿ ಕೊರಳಿಗೆ ಇದ್ದ ಅಡಿಕೆ ಸರ ಹರಿಯುತ್ತಿದ್ದರು..ಎಲ್ಲ ಆಳುಗಳೂ ಬಿಡುತ್ತಿರಲಿಲ್ಲ.ಬೆರಸಿಕೊಂಡು ಹೋಗಿ ಹರಿಯುತ್ತಿದ್ದರು..ಗಂಟಿ ಬರುವಾಗ ಬಾಗಿಲಿಗೆ ಅಡ್ಡಲಾಗಿ..ಒನಕೆ..ಅಥವಾ ಹಾರೆ ಹೊತಾಕಿಡುತ್ತಿದ್ದರು.ಯಾಕೆಂದರೆ ಯಾವುದೇ ಕೀಳು ದೆವ್ವ ಕೊಟ್ಟಿಗೆಗೆ ಬರಬಾರದೆಂದು.

RELATED ARTICLES  ಉದಾಸೀನವೆಂಬ ಮದ್ದು

ಮನೆಯಲ್ಲಿ ಗೋಗ್ರಾಸವೇ ಆ ದಿನದ ಕಜ್ಜಾಯ.ಅನ್ನ ಬೆಲ್ಲ ಕಾಯ್ಸುಳಿ..ದೋಸೆಚೂರು..ತುಪ್ಪ ಹಾಕಿ ಕಾಸಿ ಮಾಡಿದ ಗೋಗ್ರಾಸ ಈಗಲೂ ನಮಗೆ ಹಳೆಯ ದಿನ ನೆನಪಿಸುತ್ತದೆ.
ಅಳಿದುಳಿದ ಪಟಾಕಿ..ಹೊಡೆದು..ಆ ವರ್ಷದ ದೀಪಾವಳಿ ಮುಗಿಯುತ್ತಿತ್ತು.. ಆದಿನ ಗಂಟಿಕಾಯುವ ಪೋರ್ಗಳಿಗೆ ವಿಶೇಷ ಊಟ.ಆಗ..ಬಾಲಕ್ಕೆ ನಾಲ್ಕಾಣೆ ಇತ್ತು ತಿಂಗಳಿಗೆ..
ಒಂದೊಂದು ತಿಂಗಳು ಒಬ್ಬೊಬ್ಬರ ಮನೆಯಲ್ಲಿ ಆಸರಿ..ಒಂದು ಕಂಬಳಿ..ಇಷ್ಟು ಅವನ ಪಗಾರು….ಮರುದಿನ ಅದೇ ಶಾಲೆ. ಆದಿನ ಯಾರ್ಯಾರು ಎಷ್ಟೆಷ್ಟು ಅಡಿಕೆ ವಟ್ಟುಮಾಡಿದರು ಎಂಬುದೇ ಸುದ್ದಿ..ಯಾರಿಗೂ ದಂಡೆ ಹುಸಿಯಲು ಕೊಡದೆ ರಾತ್ರೆ ಮನೆಗೂ ಬರದ..ದನಗಳನ್ನು..ನಾವು ಬೆರಸಿ ಮಾಲೆ ಹುಸಿಯುತ್ತಿದ್ದೆವು..ನಾವು ಎಂದರೆ..ಶಾಲೆ ಮಕ್ಕಳು..ಹೇಗೋ ಹತ್ತಿಪ್ಪತ್ತು ಅಡಿಕೆ ಅಗುತ್ತಿತ್ತು..ಅದನ್ನೇ ದಾಸಪೈ ಅಂಗಡಿಗೆ ಹೋಗಿ ಅವರು ಕೊಟ್ಟಷ್ಟು ಪೇಪರಮೆಂಟು..ತಂದು ತಿನ್ನುವುದು..ಆ ಪೇಪರಮೆಂಟ ಈಗೆಲ್ಲಿ..ಆ ತಿಂಗಳಲ್ಲಿ ದೀಪಾರಾಧನೆ ದೇವಸ್ಥಾನದಲ್ಲಿ ಆಗುತ್ತಿತ್ತು..ಸಂಜೆ..ಮಡ್ಳಸೂಡಿ..ಚಿಮಣಿ ಗ್ಯಾಸಲೈಟ್..ಹಚ್ಚಿ ಎಲ್ಲರೂ ಹೋಗುವುದು.ಅಲ್ಲಿ ದೊಡ್ಡಕಡ್ಳೆ ಪನವಾರ..ಭಜನೆ..ಬಾಳೆಹಣ್ಣು..ಭಟ್ರಮನೆ ಹಿತ್ತಾಳಿ ಚಂಬಿನ ನೀರು..ಸುಬ್ಬಣ್ಣ ಮಕ್ಕಳಿಗೆ ಹಂಚುವ ಎರಡು ಸುರ್ಸುರ್ಕಡ್ಡಿ..ಒಂದು ಮೇಣದಬತ್ತಿ..ಎಲ್ಲ ಸವಿನೆನಪು.ಬಂಬಾಳಗೂಡು..ಇಂದೆಲ್ಲಿ..ಎಲ್ಲ ಕಡೆ ಕತ್ತಲಿರುವಾಗ..ಹಣತೆಹಚ್ಚಿ ದೀಪಾವಳಿ ಸಂಭ್ರಮ ಇಂದಿಲ್ಲ..ಇಂದು ರಾತ್ರೆಯಾಗುವುದೇ ಇಲ್ಲ..ಎಲ್ಲೆಲ್ಲು ಬೆಳಕೇ..ಕಣ್ಣುಕುಕ್ಕುವ ಬೆಳಕಿನ ರಾತ್ರೆಯಲ್ಲಿ..ದೀಪಾವಳಿಗೆ ಹಚ್ಚುವ ಹಣತೆ..ನಮ್ಮ ಹಬ್ಬವನ್ನು ಅಣಕಿಸುತ್ತದೆ..ಆದರೂ ಹಬ್ಬವಿದೆ..ಆಚರಣೆ ಮೂಢವೆಂದು..ನಾವೇ ಜರೆದುಕೊಂಡು..ನಾವೇ ಆಚರಿಸುತ್ತಿದ್ದೇವೆ..ಆಡಂಬರದ..ಶೋಕಿಯ..ಒಣಭಕ್ತಿಯ..ಸಪ್ಪೆ ಹಬ್ಬ..ನಮಸ್ಕಾರ.

RELATED ARTICLES  'ಶ್ರುತ್ಯಾನುಸಾರ ಸೃಷ್ಟಿಯುತ್ಪತ್ತಿಕ್ರಮ" (‘ಶ್ರೀಧರಾಮೃತ ವಚನಮಾಲೆ’).